Home ದೇಶ ಎಪ್ಸ್ಟೀನ್‌ ಫೈಲ್ಸ್‌ ಹೊರಬಂದ ನಂತರ ಮೋದಿ ಕಂಗಾಲಾಗಿ ಟ್ರಂಪ್‌ ಎದುರು ಶರಣಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಎಪ್ಸ್ಟೀನ್‌ ಫೈಲ್ಸ್‌ ಹೊರಬಂದ ನಂತರ ಮೋದಿ ಕಂಗಾಲಾಗಿ ಟ್ರಂಪ್‌ ಎದುರು ಶರಣಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

0

ದೆಹಲಿ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಟೀಕೆಗಳ ಸುರಿಮಳೆಗೈದರು. ತಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಪ್ರಧಾನಿಗಿಲ್ಲ ಎಂದು ಅವರು ಹೇಳಿದರು.

ಸರ್ಕಾರವು ಸದನವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಲು ಬಯಸುತ್ತಿಲ್ಲ ಎಂದು ಅವರು ಆರೋಪಿಸಿದರು. ಪದೇ ಪದೇ ಸುಳ್ಳು ಹೇಳುವುದೇ ಮೋದಿಯವರ ಕೆಲಸ ಎಂದು ಟೀಕಿಸಿದರು.

“ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ತಮ್ಮ 97 ನಿಮಿಷಗಳ ಭಾಷಣದಲ್ಲಿ ಮೋದಿ ಒಂದೇ ಒಂದು ಪ್ರಮುಖ ಮತ್ತು ಅಗತ್ಯ ವಿಷಯವನ್ನು ಹೇಳಿಲ್ಲ. ಅವರು ಇನ್ನೂ 100, 75, 50 ವರ್ಷಗಳ ಹಿಂದಿನ ವಿಷಯಗಳನ್ನೇ ಮಾತನಾಡುತ್ತಿದ್ದಾರೆ,” ಎಂದು ಅವರು ಲೇವಡಿ ಮಾಡಿದರು.

“ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಮಾಜಿ ಸೇನಾ ಮುಖ್ಯಸ್ಥ ನರವಣೆ ಅವರ ಪುಸ್ತಕ ಇನ್ನೂ ಪ್ರಕಟವಾಗಿಲ್ಲ ಎಂದು ಆಡಳಿತ ಪಕ್ಷ ಸಂಸತ್ತಿನಲ್ಲಿ ಹೇಳುತ್ತಿದೆ. ನಾವು ಆ ಪುಸ್ತಕವನ್ನು ಬಹಿರಂಗವಾಗಿ ತೋರಿಸಿದರೂ ಅವರಿಗೆ ಅರ್ಥವಾಗುತ್ತಿಲ್ಲ. ಮೊದಲು ಸತ್ಯಾಂಶಗಳನ್ನು ಶ್ರದ್ಧೆಯಿಂದ ಆಲಿಸಿ, ನಂತರ ಉತ್ತರಿಸಬೇಕು,” ಎಂದು ಖರ್ಗೆ ಹೇಳಿದರು.

ರಾಹುಲ್ ಮತ್ತು ಕೇಂದ್ರ ಸಚಿವ ರವ್‌ನೀತ್ ಬಿಟ್ಟು ನಡುವಿನ ವಿವಾದದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ಸದನದ ಹೊರಗೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯನ್ನು ಸಿಖ್ಖರಿಗೆ ಮಾಡಿದ ಅವಮಾನ ಎಂದು ಬಿಂಬಿಸಲಾಗಿದೆ ಎಂದು ಅವರು ಕಿಡಿಕಾರಿದರು. “ಕಾಂಗ್ರೆಸ್ ಪಕ್ಷವು ಸಿಖ್ಖರನ್ನು ಅಪಾರವಾಗಿ ಗೌರವಿಸುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮನ್ಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಮತ್ತು ನಂತರ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದಾರೆ,” ಎಂದು ಅವರು ನೆನಪಿಸಿದರು.

ಸಿಖ್ಖರು, ದಲಿತರು ಮತ್ತು ಆದಿವಾಸಿಗಳನ್ನು ಗೌರವಿಸುವ ಅಭ್ಯಾಸವಿಲ್ಲದಿರುವುದು ಬಿಜೆಪಿಗೆ ಮಾತ್ರ ಎಂದು ಅವರು ಹೇಳಿದರು. ಇತರರನ್ನು ಹೇಗೆ ಕೀಳಾಗಿ ಕಾಣಬೇಕು (ಅವಮಾನಿಸಬೇಕು) ಎಂಬುದರ ಬಗ್ಗೆಯೇ ಮೋದಿ ಯೋಚಿಸುತ್ತಾರೆ ಎಂದು ಖರ್ಗೆ ಆರೋಪಿಸಿದರು. “ದೇಶದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಸ್ಥಾಪಿಸಿದ್ದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ಆದರೆ ಮೋದಿ ಮಾತ್ರ ಅವುಗಳನ್ನು ‘ದಿವಾಳಿ ತೆಗೆಯುವ ಕಾರ್ಖಾನೆಗಳು’ ಎಂದು ಕರೆಯುವ ಮೂಲಕ ನೆಹರು ಅವರನ್ನು ಟೀಕಿಸುತ್ತಿದ್ದಾರೆ. ದೇಶವನ್ನು ಮುನ್ನಡೆಸುವ ದಾರ್ಶನಿಕತೆ ಮೋದಿಯವರಿಗಿಲ್ಲ,” ಎಂದರು.

ರಾಹುಲ್ ಯಾವ ಪ್ರಶ್ನೆಗಳನ್ನು ಕೇಳುತ್ತಾರೋ, ಎಂತಹ ಸತ್ಯಗಳನ್ನು ಹೊರಹಾಕುತ್ತಾರೋ ಎಂದು ಮೋದಿ ಭಯಪಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು. “ಲೋಕಸಭೆಯಲ್ಲಿ ಮೋದಿಯವರ ಮೇಲೆ ದಾಳಿ ನಡೆಯಲಿದೆ ಎಂಬ ಗುಪ್ತಚರ ಮಾಹಿತಿ ಇದೆ ಎಂದು ಹೇಳುತ್ತಿದ್ದಾರೆ. ಅಂತಹ ಶ್ರೇಷ್ಠ ಗುಪ್ತಚರ ಇಲಾಖೆ ಪುಲ್ವಾಮಾದಂತಹ ಭಯೋತ್ಪಾದಕ ದಾಳಿಯ ಸಮಯದಲ್ಲಿ ಎಲ್ಲಿತ್ತು?” ಎಂದು ಖರ್ಗೆ ಪ್ರಶ್ನಿಸಿದರು.

“ಎಪ್ಸ್ಟೀನ್ ಫೈಲ್‌ಗಳು ಹೊರಬಂದ ನಂತರ ಮೋದಿ ಆತಂಕಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶರಣಾಗಿ ಆ ದೇಶದೊಂದಿಗೆ ಏಕಪಕ್ಷೀಯ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಮೂಲಕ ನಮ್ಮ ದೇಶದ ರೈತರನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

You cannot copy content of this page

Exit mobile version