ಬೆಂಗಳೂರಿನಲ್ಲಿ ಇ-ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ಏಜೆಂಟ್ ಪಾರ್ಸೆಲ್ ಕೊಡುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮಗಾದ ಈ ಕೆಟ್ಟ ಅನುಭವವನ್ನು ಸಂತ್ರಸ್ತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ವೈರಲ್ ಆಗಿದೆ. ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲಾಟ್ ಒಂದಕ್ಕೆ ಪಾರ್ಸೆಲ್ ನೀಡಲು ಬಂದ ಡೆಲಿವರಿ ಬಾಯ್, ತನಗೆ ತುರ್ತಾಗಿ ಶೌಚಾಲಯ ಬಳಸಬೇಕಿದೆ ಎಂದು ಅನುಮತಿ ಕೇಳಿದ್ದಾನೆ. ಅಪರಿಚಿತ ವ್ಯಕ್ತಿಯನ್ನು ಒಳಗೆ ಬಿಡಲು ಒಪ್ಪದ ಮಹಿಳೆ, ನೆರವಿಗಾಗಿ ಪಕ್ಕದ ಮನೆಯ ಪುರುಷರನ್ನು ಸಂಪರ್ಕಿಸುವಂತೆ ತಿಳಿಸಿ ನಿರಾಕರಿಸಿದ್ದಾರೆ. ಆದರೆ ಆತ ಮಹಿಳೆಯ ಮಾತನ್ನು ಲೆಕ್ಕಿಸದೆ ಬಲವಂತವಾಗಿ ಪಾದರಕ್ಷೆ ಬಿಚ್ಚಿ ಫ್ಲಾಟ್‌ನ ಒಳಗೆ ನುಗ್ಗಿದ್ದಾನೆ.
ಶೌಚಾಲಯದಿಂದ ಹೊರಬಂದ ಬಳಿಕ ಆತ ಮಹಿಳೆಯ ಎದುರು ಅತ್ಯಂತ ಅಸಭ್ಯ ಹಾಗೂ ವಿಕೃತವಾಗಿ ವರ್ತಿಸಿದ್ದಾನೆ. ಇದರಿಂದ ಹೆದರಿದರೂ ಧೈರ್ಯ ತಂದುಕೊಂಡ ಮಹಿಳೆ ಆತನ ವರ್ತನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಪೊಲೀಸ್ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಆಗ ಆತ ಅಲ್ಲಿಂದ ಓಡಿಹೋಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಬೇಸರ ವ್ಯಕ್ತಪಡಿಸಿದೆ. ನಮ್ಮ ಸಿಬ್ಬಂದಿಯ ಇಂತಹ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಆಂತರಿಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರುದಾರೆ ನಿಲೂಫರ್ ಫಾತಿಮಾ ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊಕದ್ದಮೆ ಸಂಖ್ಯೆ: 345/2026) ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ, ಆರೋಪಿ ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್ ವಿಜಯ್ ಮಲ್ಲಿಕಾರ್ಜುನ ಕಾಮತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 75, 79 ಹಾಗೂ 329(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
