“..ಕಂಬಳವು ಕೇವಲ ಕೋಣಗಳ ಓಟವಲ್ಲ. ಅದು ತುಳುನಾಡಿನ ದೈವಾರಾಧನೆ, ಕೃಷಿ ಸಂಸ್ಕೃತಿ ಮತ್ತು ಜನಪದ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಆಚರಣೆ. ಮಹಿಷನ ಸಂಕೇತವಾಗಿರುವ ಕೋಣವನ್ನು ವಿಜೃಂಭಿಸುವ ಕಂಬಳವನ್ನು ದಸರೆಯ ಭಾಗವಾಗಿಸುವುದು ಧಾರ್ಮಿಕವಾಗಿಯೂ ಪ್ರಶ್ನಾರ್ಹವಾಗುತ್ತದೆ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ
ಮೈಸೂರು ದಸರಾದ ಅಂಗವಾಗಿ ಕಂಬಳ ಸ್ಪರ್ಧೆ ಆಯೋಜಿಸುವುದನ್ನು ಕೆಲವರು ಕೇವಲ ಸಾಂಸ್ಕೃತಿಕ ವಿನಿಮಯ ಎಂದು ನೋಡುತ್ತಾರೆ. ಆದರೆ ಕಂಬಳದ ಇತಿಹಾಸ, ಕರಾವಳಿಯ ದೈವಾರಾಧನೆ ಮತ್ತು ಮೈಸೂರು ದಸರೆಯ ಧಾರ್ಮಿಕ ಹಿನ್ನೆಲೆಯನ್ನು ಒಟ್ಟಿಗೆ ಪರಿಶೀಲಿಸಿದರೆ, ಈ ಕಾರ್ಯಕ್ರಮವು ಧಾರ್ಮಿಕವಾಗಿಯೂ ವೈರುಧ್ಯವನ್ನು ಸೃಷ್ಟಿಸುತ್ತದೆ.
ಕಂಬಳವು ಕೇವಲ ಕೋಣಗಳ ಓಟವಲ್ಲ. ಅದು ತುಳುನಾಡಿನ ದೈವಾರಾಧನೆ, ಕೃಷಿ ಸಂಸ್ಕೃತಿ ಮತ್ತು ಜನಪದ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಆಚರಣೆ. ಅದೇ ವೇಳೆ ಮೈಸೂರು ದಸರೆಯ ಕೇಂದ್ರಬಿಂದುವೇ ಮಹಿಷಾಸುರನನ್ನು ಸಂಹರಿಸಿದ ಚಾಮುಂಡೇಶ್ವರಿಯ ವಿಜಯೋತ್ಸವ. ಹೀಗಿರುವಾಗ, ಮಹಿಷನ ಸಂಕೇತವಾಗಿರುವ ಕೋಣವನ್ನು ವಿಜೃಂಭಿಸುವ ಕಂಬಳವನ್ನು ದಸರೆಯ ಭಾಗವಾಗಿಸುವುದು ಧಾರ್ಮಿಕವಾಗಿಯೂ ಪ್ರಶ್ನಾರ್ಹವಾಗುತ್ತದೆ.
ಮಹಿಷಾಸುರ ಎಂದರೆ ಕೋಣದ ರೂಪದಲ್ಲಿದ್ದ ರಾಕ್ಷಸ ಎಂಬುದು ಪುರಾಣದ ಚಿತ್ರಣ. ಆದರೆ ಹಲವು ಜನಪದ ಅಧ್ಯಯನಗಳು ಮಹಿಷಾಸುರ ಎಂಬುದು ಒಬ್ಬ ದೊರೆ ಅಥವಾ ಸಮುದಾಯದ ನಾಯಕನ ಹೆಸರಾಗಿದ್ದು, ಕೋಣವು ಅವನ ಆಡಳಿತದ ಚಿನ್ಹೆ/ಸಂಕೇತವಾಗಿರಬಹುದು ಎಂಬ ವ್ಯಾಖ್ಯಾನವನ್ನು ದಾಖಲಿಸಿವೆ.
ಇದೇ ಮಹಿಷಾಸುರ ಕರಾವಳಿಯಲ್ಲಿ ದೈವವಾಗಿ ಆರಾಧನೆ ಪಡೆಯುತ್ತಾನೆ. ಕುಂಡೋದರ, ಮಹಿಸಂದಾಯ, ನಂದಿಕೋಣ ಮೊದಲಾದ ಹೆಸರುಗಳಲ್ಲಿ ಇಂದಿಗೂ ಅನೇಕ ಮನೆಗಳಲ್ಲಿ, ಗುತ್ತುಗಳಲ್ಲಿ ಹಾಗೂ ದೈವಸ್ಥಾನಗಳಲ್ಲಿ ವಾರ್ಷಿಕ ನೇಮ, ಕೋಲ ಮತ್ತು ಪೂಜೆಗಳು ನಡೆಯುತ್ತಿವೆ. ಅಂದರೆ, ಮೈಸೂರಿನಲ್ಲಿ ಸಂಹರಿಸಲ್ಪಟ್ಟ ಮಹಿಷಾಸುರನೇ ಕರಾವಳಿಯಲ್ಲಿ ಆರಾಧಿತ ದೈವ.
ಈ ಹಿನ್ನೆಲೆಯಲ್ಲಿ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದು ಎರಡು ಧಾರ್ಮಿಕ ಸಂಪ್ರದಾಯಗಳಿಗೂ ವಿರುದ್ಧವಾಗುತ್ತದೆ. ಚಾಮುಂಡೇಶ್ವರಿಯ ವಿಜಯೋತ್ಸವದಲ್ಲಿ ಮಹಿಷನ ಸಂಕೇತವನ್ನು ವೈಭವೀಕರಿಸುವುದು ಚಾಮುಂಡೇಶ್ವರಿ ಆರಾಧನೆಯ ತಾತ್ವಿಕ ನೆಲೆಯನ್ನೇ ದುರ್ಬಲಗೊಳಿಸುತ್ತದೆ. ಮತ್ತೊಂದೆಡೆ, ತನ್ನನ್ನು ಸಂಹರಿಸಿದ ಘಟನೆಯನ್ನು ಸಂಭ್ರಮಿಸುವ ಉತ್ಸವದಲ್ಲೇ ತನ್ನ ಸಂಕೇತವನ್ನು ಪ್ರದರ್ಶಿಸುವುದು ಮಹಿಸಂದಾಯ, ಕುಂಡೋದರ ಅಥವಾ ನಂದಿಕೋಣ ದೈವಾರಾಧನೆಯ ದೃಷ್ಟಿಯಿಂದಲೂ ಅಪಚಾರವಾಗುತ್ತದೆ.
ಕರಾವಳಿಯಲ್ಲಿ ಮಹಿಷಾಸುರ ಆರಾಧನೆಗೆ ದೀರ್ಘ ಇತಿಹಾಸವಿದೆ. ಭೂತಾರಾಧನೆ ಮತ್ತು ಮಾತೃಮೂಲಿಕ ಅಳಿಯ ಸಂತಾನ ಕಟ್ಟಿನೊಂದಿಗೆ ಈ ದೈವದ ಸಂಬಂಧವನ್ನು ಹಲವು ಸಂಶೋಧಕರು ದಾಖಲಿಸಿದ್ದಾರೆ.
ಗಣಪತಿ ರಾವ್ ಐಗಳರು 1923ರಲ್ಲಿ ಪ್ರಕಟಿಸಿದ “ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ” ಕೃತಿಯ (ಪುಟ 44) ಪ್ರಕಾರ, ಬಾರಕೂರಿನ ಅರಸವಂಶದಲ್ಲಿ ಉತ್ತರಾಧಿಕಾರಿಯಿಲ್ಲದಾಗ ದೇವಪಾಂಡ್ಯನ ಅಳಿಯನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ಆತನಿಗೆ “ಭೂತಾಳಪಾಂಡ್ಯ” ಎಂಬ ಹೆಸರು ನೀಡಲಾಗಿದ್ದು, ಈ ಕಾರ್ಯವೆಲ್ಲವೂ ಕುಂಡೋದರ ದೈವದ ಅನುಗ್ರಹದಿಂದ ನಡೆದಿದೆ ಎಂಬ ನಂಬಿಕೆಯನ್ನು ಅವರು ದಾಖಲಿಸುತ್ತಾರೆ. ಈ ಉಲ್ಲೇಖವು ಕುಂಡೋದರ ದೈವವು ಕೇವಲ ಗ್ರಾಮ ದೈವವಲ್ಲದೆ ರಾಜಕೀಯ-ಸಾಮಾಜಿಕ ವ್ಯವಸ್ಥೆಯೊಂದಿಗೂ ಸಂಬಂಧ ಹೊಂದಿದ್ದುದನ್ನು ಸೂಚಿಸುತ್ತದೆ.
ಡಾ. ಪಾದೂರು ಗುರುರಾಜ ಭಟ್ಟರು 1963ರಲ್ಲಿ ಪ್ರಕಟಿಸಿದ “ತುಳುನಾಡು” ಕೃತಿಯ (ಪುಟ 188) ಜೈನಧರ್ಮ ಅಧ್ಯಾಯದಲ್ಲಿ, ಅತ್ಯಂತ ಪ್ರಾಚೀನ ಕಾಲದಿಂದಲೂ ಮೈಸೂರು ಮತ್ತು ತುಳುನಾಡಿನ ನಡುವೆ ಪರಸ್ಪರ ಸಂಬಂಧವಿದ್ದುದನ್ನು ಉಲ್ಲೇಖಿಸುತ್ತಾರೆ. ಅದೇ ಕೃತಿಯಲ್ಲಿ ಅಳಿಯ ಸಂತಾನ ಕಟ್ಟಿನ ಅಧಿದೇವತೆಯಾಗಿ ಮಹಿಷಾಸುರನನ್ನು ಪರಿಗಣಿಸಿರುವುದನ್ನೂ ದಾಖಲಿಸಿದ್ದಾರೆ. ಕರಾವಳಿಯ ಅಳಿಯ ಕಟ್ಟಿನಲ್ಲಿ ಉಲ್ಲೇಖಿಸಲಾಗಿರುವ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿದರೆ, ಕತೆಯ ಹಲವು ಭಾಗಗಳು ಮೈಸೂರಿನಿಂದ ಕೊಂಡುದುದು ಎಂಬುದು ತಿಳಿಯುತ್ತದೆ. ಅದರಲ್ಲಿ ಮೊದಲನೆಯದ್ದು ‘ಅಳಿಯ ಸಂತಾನ ಕಟ್ಟಿಗೆ ಮಹಿಷಾಸುರನನ್ನು ಅಧಿದೇವತೆಯಾಗಿ ನೇಮಿಸಿದುದು’ ಎಂದು ಡಾ ಪಾದೂರು ಗುರುರಾಜ ಭಟ್ಟರ ‘ತುಳುನಾಡು’ ಪುಸ್ತಕದಲ್ಲಿ ಬರೆಯಲಾಗಿದೆ.
ಮಂಗಳೂರು ಜರ್ಮನ್ ಮಿಷನ್ ಪ್ರೆಸ್ ಪ್ರಕಟಿಸಿದ “ಭೂತಾಳ ಪಾಂಡ್ಯನ ಅಳಿಯ ಸಂತಾನ ಕಟ್ಟಲೆ” (1857) ಕೃತಿಯಲ್ಲಿ, ಕುಂಡೋದರನಿಗೆ ಬಿಂಬ ಪ್ರತಿಷ್ಠಾಪಿಸಿ “ಮಹಿಪಾಲಕನಾದ ಮಹಿಷಾಸುರ” ಎಂಬ ಹೆಸರಿಟ್ಟು ವಿಶೇಷ ಬಲಿ, ಪೂಜೆ ಹಾಗೂ ಆರಾಧನೆ ನಡೆಸಿದ ವಿವರಗಳಿವೆ. ಕುಂಡೋದರನು ಮೈಮೇಲೆ ಬಂದು ಅಳಿಯ ಸಂತಾನ ಕಟ್ಟನ್ನು ಪಾಲಿಸುವಂತೆ ಆಜ್ಞಾಪಿಸಿದನು, ಅದನ್ನು ಉಲ್ಲಂಘಿಸಿದವರಿಗೆ ಸಂತಾನ ನಾಶವಾಗುತ್ತದೆ ಎಂಬ ನಂಬಿಕೆಯೂ ದಾಖಲಿಸಲಾಗಿದೆ. ಅಲ್ಲದೆ ಅನಂತೇಶ್ವರ ದೇವಾಲಯಕ್ಕೆ ಮಹಿಷಾಸುರನು ಕ್ಷೇತ್ರಪಾಲನೆಂದು ಉಲ್ಲೇಖಿಸಲಾಗಿದೆ.
ಈ ನಂಬಿಕೆಗಳು ಇಂದಿಗೂ ಕರಾವಳಿಯ ಅನೇಕ ಭಾಗಗಳಲ್ಲಿ ಜೀವಂತವಾಗಿವೆ. ಕುಂಡೋದರ ಅಥವಾ ಮಹಿಷಾಸುರ ದೈವದ ಕಟ್ಟಲೆಗಳನ್ನು ಪಾಲಿಸದಿದ್ದರೆ ಸಂತಾನ ನಾಶವಾಗುತ್ತದೆ ಎಂಬ ನಂಬಿಕೆ ಈಗಲೂ ಪ್ರಚಲಿತದಲ್ಲಿದೆ.
ಕರಾವಳಿಯ ದೈವಾರಾಧನೆಯಲ್ಲಿ ಹತ್ಯೆಗೊಳಗಾದವರು ಅಥವಾ ಅನ್ಯಾಯಕ್ಕೊಳಗಾದವರು ನಂತರ ದೈವವಾಗಿ ಆರಾಧನೆ ಪಡೆಯುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿಯೇ ದುರ್ಗೆಯಿಂದ ಸಂಹರಿಸಲ್ಪಟ್ಟ ಮಹಿಷಾಸುರ ನಂತರ ಮಹಿಸಂದಾಯ ಅಥವಾ ಕುಂಡೋದರ ದೈವವಾಗಿ ಆರಾಧನೆಗೆ ಒಳಪಟ್ಟಿರಬಹುದು ಎಂಬ ಜನಪದ ಅಧ್ಯಯನದ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.
ಕಟೀಲು ಕ್ಷೇತ್ರದ ಸ್ಥಳೀಯ ಕತೆಯಲ್ಲಿಯೂ ದುರ್ಗಾಪರಮೇಶ್ವರಿ ಮಹಿಷಾಸುರನನ್ನು ಸಂಹರಿಸಿ ನಂದಿನಿ ನದಿಯ ಕಟಿಯಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ಚಾಮುಂಡಿ ಮತ್ತು ದುರ್ಗಾಪರಮೇಶ್ವರಿ ಇಬ್ಬರ ಕಥೆಗಳಲ್ಲಿಯೂ ಚಂಡ-ಮುಂಡರ ಸಂಹಾರ ಮೊದಲು ಬರುತ್ತದೆ.
1947ರಲ್ಲಿ ಶಂ. ಬಾ. ಜೋಶಿಯವರು ಪ್ರಕಟಿಸಿದ “ಎಡೆಗಳು ಹೇಳುವ ಕಂನಾಡ ಕತೆ” ಕೃತಿಯ “ಕಂನಾಡಿನ ಬೇರೆ ಕೆಲವು ಜನಗಳು” ಅಧ್ಯಾಯದ (ಪುಟ 111) ಪ್ರಕಾರ, ಸ್ಕಂದಪುರಾಣದಲ್ಲಿ ಉಲ್ಲೇಖವಾಗುವ ಚಂಡ-ಮುಂಡರು ಕೇವಲ ರಾಕ್ಷಸರಲ್ಲ, “ಕರ್ನಾಟ ರಕ್ಕಸರು” ಎಂದು ಕರೆಯಲ್ಪಟ್ಟ ಸ್ಥಳೀಯ ಜನಾಂಗಗಳ ಸಂಕೇತವಾಗಿರಬಹುದು ಎಂಬ ವ್ಯಾಖ್ಯಾನವನ್ನು ಅವರು ದಾಖಲಿಸುತ್ತಾರೆ. ಇದು ಪುರಾಣ ಕಥೆಗಳನ್ನು ಸಾಮಾಜಿಕ-ಐತಿಹಾಸಿಕ ನೆಲೆಯಲ್ಲಿ ಓದುವ ಒಂದು ಪ್ರಯತ್ನವಾಗಿದೆ.
ಕರಾವಳಿಯ ದನ-ಕರು ಸಂಸ್ಕೃತಿಯನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ತುಳುನಾಡಿನಲ್ಲಿ ದನದ ಆರಾಧನೆಗಿಂತ ಕೋಣದ ಸಂಕೇತಕ್ಕೆ ವಿಶೇಷ ಸ್ಥಾನವಿದೆ. ಮಹಿಷ ಕುಲ, ತುರುವ ಜನಾಂಗ, ಕೃಷಿ ಹಾಗೂ ನಾಗಾರಾಧನೆಗಳ ನಡುವಿನ ಸಂಬಂಧವನ್ನು ಹಲವು ಜನಪದ ಅಧ್ಯಯನಗಳು ಉಲ್ಲೇಖಿಸಿವೆ. ತುರುವರು ಎಂದರೆ ದನ ಸಾಕುವ ಕೃಷಿಕ ಸಮುದಾಯ. ತುಳುವರು ಎಂಬ ಪದವೂ ಇದೇ ಮೂಲದೊಂದಿಗೆ ಸಂಬಂಧ ಹೊಂದಿದೆ ಎಂಬ ಅಭಿಪ್ರಾಯಗಳಿವೆ.
1969ರಲ್ಲಿ ಡಾ. ಮ. ಸ. ಅಚ್ಯುತ ಶರ್ಮ ಅವರು ಪ್ರಕಟಿಸಿದ “ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನೆಲೆ” ಕೃತಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭೂತರಾಜನ ಆರಾಧನಾ ಕ್ರಮವಿರುವುದನ್ನು ದಾಖಲಿಸಿದ್ದಾರೆ. ಕುಂಡೋದರನೇ ಭೂತರಾಜ ಎಂಬ ಜನಪದ ನಂಬಿಕೆಯ ಹಿನ್ನೆಲೆಯಲ್ಲಿ, ಇದು ಕರಾವಳಿಯ ದೈವಾರಾಧನೆಯ ವ್ಯಾಪ್ತಿಯನ್ನು ಸೂಚಿಸುವ ಒಂದು ಮಹತ್ವದ ಉಲ್ಲೇಖವಾಗಿದೆ.
ಹೀಗಾಗಿ ಕಂಬಳವನ್ನು ಕೇವಲ ಕ್ರೀಡೆಯಾಗಿ ಅಥವಾ ಪ್ರವಾಸೋದ್ಯಮದ ಆಕರ್ಷಣೆಯಾಗಿ ನೋಡುವುದು ಅದರ ಮೂಲ ಧಾರ್ಮಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ನಿರ್ಲಕ್ಷಿಸುವಂತಾಗುತ್ತದೆ. ಸಾಮಾಜಿಕವಾಗಿ ಕಂಬಳದೊಂದಿಗೆ ಊಳಿಗಮಾನ್ಯ ಪದ್ಧತಿ, ಜಾತಿ ಪ್ರಾಬಲ್ಯ ಹಾಗೂ ದಲಿತರ ಮೇಲಿನ ಶೋಷಣೆಯ ಇತಿಹಾಸದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಧಾರ್ಮಿಕ ದೃಷ್ಟಿಯಿಂದಲೂ ಮೈಸೂರು ದಸರಾ ಕಂಬಳವು ಒಂದು ಮೂಲಭೂತ ವೈರುಧ್ಯವನ್ನು ಹೊಂದಿದೆ.
ಮಹಿಷಾಸುರನನ್ನು ಸಂಹರಿಸಿದ ಚಾಮುಂಡೇಶ್ವರಿಯ ವಿಜಯೋತ್ಸವದಲ್ಲಿ ಮಹಿಷನ ಸಂಕೇತವನ್ನು ವೈಭವೀಕರಿಸುವುದು ಚಾಮುಂಡೇಶ್ವರಿ ಆರಾಧನೆಯ ತಾತ್ವಿಕ ನೆಲೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅದೇ ಸಮಯದಲ್ಲಿ, ಕರಾವಳಿಯಲ್ಲಿ ದೈವವಾಗಿ ಆರಾಧನೆ ಪಡೆಯುವ ಮಹಿಸಂದಾಯ, ಕುಂಡೋದರ ಅಥವಾ ನಂದಿಕೋಣನ ಸಂಕೇತವನ್ನು ತನ್ನದೇ ಹತ್ಯೆಯನ್ನು ಸಂಭ್ರಮಿಸುವ ಉತ್ಸವದ ಭಾಗವಾಗಿಸುವುದು ಕರಾವಳಿಯ ದೈವಾರಾಧನಾ ಸಂಪ್ರದಾಯಕ್ಕೂ ವಿರುದ್ಧವಾಗುತ್ತದೆ.
ಆದ್ದರಿಂದ ಮೈಸೂರು ದಸರಾ ಕಂಬಳವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಅದು ಎರಡು ವಿಭಿನ್ನ ಧಾರ್ಮಿಕ, ದೈವಾರಾಧನಾ ಸಂಪ್ರದಾಯಗಳ ಅರ್ಥವನ್ನೂ ಗೊಂದಲಗೊಳಿಸುವ ಸಾಂಸ್ಕೃತಿಕ ಹೇರಿಕೆಯಾಗಿ ಕಾಣಿಸುತ್ತದೆ.
