ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಇಪ್ಪತ್ತೆಂಟನೆಯ ಲೇಖನ
ಅಪ್ಪಟ ಸಮಾಜವಾದಿ, ನಿಜವಾದ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ, ಅನುಭವಿ ಸಂಸದ ಹೀಗೆ ಏನು ಬೇಕಾದರೂ ದಂಡಾವತೆಯವರನ್ನು ಕರೆಯಬಹುದು. ಆದರೆ ಅವರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುವ ಒಂದೇ ಹಣೆಪಟ್ಟಿ ಕಟ್ಟಲು ಮಾತ್ರ ಬಲು ಕಷ್ಟ.
1940 ರ ದಶಕದಲ್ಲಿ ಆಗಿನ ಬಾಂಬೆಯಲ್ಲಿದ್ದ ಸಿದ್ಧಾರ್ಥ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಪ್ರತಿಭಾನ್ವಿತ ಉಪನ್ಯಾಸಕರೊಬ್ಬರ ಹುಡುಕಾಟದಲ್ಲಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ, ಅದೃಷ್ಟವಶಾತ್ ಒಬ್ಬರು ಭೌತಶಾಸ್ತ್ರಜ್ಞರು ದೊರೆಯುತ್ತಾರೆ. ಆ ಭೌತಶಾಸ್ತ್ರಜ್ಞ ತನ್ನ ಸ್ನಾತಕೋತ್ತರ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ಪದವಿಯನ್ನು ಪ್ರಥಮ ದರ್ಜೆಯಲ್ಲಿ ಗಳಿಸಿಕೊಂಡಿದ್ದವರು.
ಆದರೆ ಆ ಭೌತಶಾಸ್ತ್ರಜ್ಞ ಕೊನೆಗೆ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡುತ್ತಾರೆ. ತನ್ನ ಈ ಹೊಸ ಬದುಕಿನಲ್ಲಿ ಅವರು ಮಾಡಿದ ಬಹಳ ಮುಖ್ಯ ಕೆಲಸವೆಂದರೆ, ರೈಲು ಸೀಟುಗಳ ಆಸನಗಳ ಬದಲಾವಣೆ. ಆ ಮೂಲಕ ಲೆಕ್ಕವಿಲ್ಲದಷ್ಟು ಜನರ ರೈಲು ಪ್ರಯಾಣವನ್ನು ಆರಾಮದಾಯಕ ಮಾಡಿದವರು.
ಅಪ್ಪಟ ಸಮಾಜವಾದಿ, ನಿಜವಾದ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ, ಅನುಭವಿ ಸಂಸದ ಹೀಗೆ ಏನು ಬೇಕಾದರೂ ಪ್ರೊ. ಮಧು ದಂಡಾವತೆಯವರನ್ನು ಕರೆಯಬಹುದು. ಆದರೆ ಅವರ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುವ ಒಂದೇ ಹಣೆಪಟ್ಟಿ ಕಟ್ಟಲು ಮಾತ್ರ ಬಲು ಕಷ್ಟ. ಒಟ್ಟೊ ವಾನ್ ಬಿಸ್ಮಾರ್ಕ್ ಅವರ ಮಾತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. “ಒಬ್ಬ ನಿಜವಾದ ಮಹಾನ್ ವ್ಯಕ್ತಿಯನ್ನು ಗುರುತಿಸಲು ಮೂರು ಲಕ್ಷಣಗಳಿವೆ. ಉದಾರವಾದ ಯೋಜನೆ, ಕಾರ್ಯಗತಗೊಳಿಸುವಾಗ ಮಾನವೀಯತೆ, ಯಶಸ್ಸಿನಲ್ಲಿ ಸಮತೋಲನ.” ಈ ಮಾತನ್ನು ಹೇಳುವಾಗ ಬಹುಷ ಬಿಸ್ಮಾರ್ಕ್ ತನ್ನ ಮನಸ್ಸಿನಲ್ಲಿ ದಂಡಾವತೆಯವರಂತಹ ಒಬ್ಬ ಮನುಷ್ಯನನ್ನು ಕಲ್ಪಸಿಕೊಂಡಿರಬೇಕು.
ದಂಡಾವತೆ ತನ್ನ ಸಾರ್ವಜನಿಕ ಬದುಕಿನುದ್ದಕ್ಕೂ ಸಮಾಜವಾದಿ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದರು. ದೇಶದಲ್ಲಿ ಒಂದು ಏಕೀಕೃತ ಸಮಾಜವಾದಿ ಚಳುವಳಿಗೆ ಅಡಿಪಾಯ ಹಾಕಲು ಅವರು ಶ್ರದ್ಧೆಯಿಂದ ಶ್ರಮಿಸಿದರು. ತನ್ನ 18 ನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 1942 ರ ಕ್ವಿಟ್ ಇಂಡಿಯಾ ಹೋರಾಟದಲ್ಲಿ ಭಾಗವಹಿಸಿದರು. ನಾಲ್ಕು ವರ್ಷಗಳ ನಂತರ ಅವರು ರಾಯಲ್ ನೇವಿ ದಂಗೆಗೆ ತನ್ನ ಬೆಂಬಲವನ್ನು ನೀಡಿದ್ದರು. 1955ರಲ್ಲಿ ಗೋವಾದಲ್ಲಿ ಪೋರ್ಚುಗೀಸ್ ವಾಸಾಹತುಶಾಹಿಯ ವಿರುದ್ಧ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರಿಗೆ ತೀವ್ರವಾಗಿ ಹೊಡೆದರು. ಅದರಿಂದ ಉಂಟಾದ ಸೊಂಟದ ನೋವು ಅವರಿಗೆ ಜೀವನಪೂರ್ತಿ ತೊಂದರೆ ನೀಡಿತು. ಆದರೆ ಈ ಸತ್ಯಾಗ್ರಹದಿಂದಾಗಿ 1961 ರಲ್ಲಿ ಭಾರತ ಸರ್ಕಾರವು ಗೋವಾವನ್ನು ಪೋರ್ಚುಗೀಸ್ ವಶದಿಂದ ಮುಕ್ತಗೊಳಿಸಲು ಸೈನಿಕ ಕ್ರಮ ಕೈಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು.
ದಂಡಾವತೆ ಅವರು 1924ರ ಜನವರಿ 21ರಂದು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮುನ್ಸಿಪಾಲ್ ಶಾಲೆಯಲ್ಲಿ ಮುಗಿಸಿ, ಅಹಮದ್‌ನಗರ ಎಜುಕೇಶನ್ ಸೊಸೈಟಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು.
ಕಾಲೇಜು ಶಿಕ್ಷಣಕ್ಕಾಗಿ ಅವರನ್ನು ಮುಂಬೈಗೆ ಕಳಿಸಲಾಗುತ್ತದೆ. ಇಂಟರ್‌ಮೀಡಿಯೇಟ್ ನಂತರ ಅಂದಿನ ಖ್ಯಾತ ವಿದ್ಯಾ ಸಂಸ್ಥೆಯಾಗಿದ್ದ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರುತ್ತಾರೆ. ಅಲ್ಲಿ ಅವರು ಬಿಎಸ್ಸಿ ಭೌತಶಾಸ್ತ್ರದಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ಪಡೆಯುವುದು. 1946 ರಲ್ಲಿ ಅದೇ ಸಂಸ್ಥೆಯಲ್ಲಿ ಎಂಎಸ್ಸಿ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ. ನಂತರ ಡಾ. ಅಂಬೇಡ್ಕರ್ ಅವರ ಹುಡುಕಾಟದ ಕಾರಣಕ್ಕೆ ಆಕಸ್ಮಿಕವಾಗಿ ಸಿದ್ಧಾರ್ಥ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವಂತಾಗುತ್ತದೆ. ನಂತರ ಅದೇ ಕಾಲೇಜಿನಲ್ಲಿ ಮತ್ತು 1971 ರ ತನಕ ಬಾಂಬೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಮಾಣು ಭೌತಶಾಸ್ತ್ರವನ್ನು ಬೋಧಿಸುತ್ತಾರೆ.
ಒಬ್ಬ ಸಮಾಜವಾದಿ
ದಂಡಾವತೆ ಅವರು ಮಹಾತ್ಮಾ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರ ದೃಷ್ಟಿಕೋನಗಳಷ್ಟೇ ಪ್ರಸ್ತುತತೆಯನ್ನು ಮಾರ್ಕ್ಸ್‌ವಾದದಲ್ಲಿ ಕಂಡುಕೊಂಡಿದ್ದರು. ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರುಗಳು ಜಂಟಿಯಾಗಿ ಬರೆದಿದ್ದ ಕಮ್ಯುನಿಸ್ಟ್ ಪ್ರಣಾಳಿಕೆ ಮತ್ತು ದಾಸ್ ಕ್ಯಾಪಿಟಲ್ ಕೃತಿಗಳನ್ನು ಹಾಗೂ ಮಾರ್ಕ್ಸ್ ಬರೆದಿದ್ದ ಸಿವಿಲ್ ವಾರ್ ಇನ್ ಫ್ರಾನ್ಸ್ ಪುಸ್ತಕವನ್ನು ಓದಿಕೊಂಡಿದ್ದರು. ಅದೇ ಹೊತ್ತು ನ್ಯಾಯಯುತ ಮತ್ತು ಸಮಸಮಾಜದ ನಿರ್ಮಾಣದಲ್ಲಿ ಗಾಂಧೀಜಿಯ ತತ್ವ ಮತ್ತು ರಾಜಕಾರಣದಲ್ಲೂ ಅವರು ಪ್ರಸ್ತುತೆಯನ್ನು ಕಂಡುಕೊಂಡಿದ್ದರು. ಸಮಾಜದ ಸುಸ್ಥಿರ ಬದಲಾವಣೆಗಾಗಿ ಸಮಾಜವಾದವು ಗಾಂಧೀಜಿಯ ಚಿಂತನೆಗಳನ್ನು ಒಳಗೊಳ್ಳಬೇಕೆಂಬುದು ದಂಡಾವತೆ ಅವರ ಯೋಚನೆಯಾಗಿತ್ತು.
1948 ರಿಂದ ದಂಡಾವತೆ ಅವರು ಸಮಾಜವಾದಿ ಪಕ್ಷದ ಸದಸ್ಯರಾಗಿದ್ದರು. ನಂತರ ಅವರು ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ, ಸಂಯುಕ್ತ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷವನ್ನು ಸೇರಿಕೊಳ್ಳುತ್ತಾರೆ. 1969 ರ ಭೂ ವಿಮೋಚನಾ ಹೋರಾಟದಲ್ಲಿ ಅವರು ಸಕ್ರಿಯ ನಾಯಕತ್ವ ವಹಿಸಿದ್ದರು. 1975-77ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಬಂಧನಕ್ಕೊಳಗಾಗಿದ್ದ ದಂಡಾವತೆ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದರು.
ದಂಡಾವತೆ ಒಬ್ಬ ಲೇಖಕರೂ ಆಗಿದ್ದರು. ಅವರು ಸಂಸದೀಯ ವ್ಯವಹಾರಗಳು, ಯೋಜನೆ, ಜಾತ್ಯಾತೀತತೆ ಕುರಿತು ಪುಸ್ತಕಗಳನ್ನು ಬರೆದಿದ್ದರು. ಜೊತೆಗೆ ಗಾಂಧಿ, ಮಾರ್ಕ್ಸ್ ಮತ್ತು ಜಯಪ್ರಕಾಶ್ ನಾರಾಯಣ್ ಮೊದಲಾದವರ ವ್ಯಕ್ತಿಚಿತ್ರಗಳನ್ನೂ ಬರೆದಿದ್ದಾರೆ.
ಸಂಸದ
1970-71 ರ ಅವಧಿಯಲ್ಲಿ ದಂಡಾವತೆ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1971 ರಿಂದ 1991 ರವರೆಗೆ ಸತತ ಐದು ಬಾರಿ ಅವರು ಮಹಾರಾಷ್ಟ್ರದ ಕೊಂಕಣದ ರಾಜಾಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರುಗಳು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ದಂಡಾವತೆ ವಿರೋಧ ಪಕ್ಷದ ನಾಯಕರಲ್ಲಿ ಪ್ರಮುಖರಾಗಿದ್ದರು. ಮೊರಾರ್ಜಿ ದೇಸಾಯಿ ಸರಕಾರದಲ್ಲಿ (1977-79) ರೈಲ್ವೇ ಸಚಿವರಾಗಿ ಮತ್ತು ವಿ.ಪಿ. ಸಿಂಗ್ ಸರಕಾರದಲ್ಲಿ (1989-90) ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1996 ರಿಂದ 1998 ರವರೆಗೆ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
ಜಾತ್ಯತೀತ ಮೌಲ್ಯಗಳು
ದಂಡಾವತೆ ಸಹಿಷ್ಣುತೆಯಲ್ಲಿ ಅಪಾರ ನಂಬಿಕೆಯಿಟ್ಟಿದ್ದರು. ಅವರ ಪ್ರಕಾರ “ಕೋಮುವಾದಿಗಳು ತಮ್ಮ ದಿಕ್ಕು ತಪ್ಪಿಸುವ ತಂತ್ರಗಳ ಮೂಲಕ ಸಮಾಜದ ವಂಚಿತ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಹೋರಾಟಗಳನ್ನು ದುರ್ಬಲಗೊಳಿಸುತ್ತಾರೆ”. ಜಾತ್ಯತೀತತೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ, ಅವರು ನವೆಂಬರ್ 7, 1990 ರಂದು ಲೋಕಸಭೆಯಲ್ಲಿ ಹೀಗೆ ಹೇಳಿದರು. “ಭಾರತದ ಸಂದರ್ಭದಲ್ಲಿ ಜಾತ್ಯಾತೀತತೆಯ ಪರಿಕಲ್ಪನೆಯು ಧಾರ್ಮಿಕ ವಿರೋಧಿಯೋ ಧಾರ್ಮಿಕೇತರವೋ ಅಲ್ಲ. ಭಾರತದ ಸಂದರ್ಭದಲ್ಲಿ ಜಾತ್ಯಾತೀತತೆಯೆಂದರೆ ಸರ್ವ ಧರ್ಮ ಸಂಭವ . ಅಂದರೆ, ವಿವಿಧ ಧರ್ಮಗಳ ಜನರು ಸಾಮರಸ್ಯದಿಂದಲೂ ಶಾಂತಿಯಿಂದಲೂ ಸಹಬಾಳ್ವೆ ನಡೆಸುವುದು.”
ಕುರ್ಚಿಗೆ ಕುಶನ್ ಹಾಕಿದವರು
ದಂಡಾವತೆ ರೈಲ್ವೇ ಸಚಿವರಾಗಿದ್ದಾಗ ದೇಶದ ರೈಲ್ವೇ ಮೂಲಸೌಕರ್ಯದಲ್ಲಿ ಹಲವಾರು ಗಣನೀಯ ಸುಧಾರಣೆಗಳಿಗೆ ನಾಂದಿ ಹಾಡಿದ್ದರು. ರೈಲ್ವೇ ಟಿಕೆಟ್ ಕಾದಿರಿಸುವಿಕೆಯ ಕಂಪ್ಯೂಟರೀಕರಣ, 1978-79 ರ ಅವಧಿಯಲ್ಲಿ ಕೊಂಕಣ ರೈಲ್ವೇಯ ಮೊದಲ ಹಂತದ ಮಂಜೂರಾತಿ, ಸುಮಾರು 5000 ಕಿಲೋಮೀಟರುಗಳಷ್ಟು ಹಳೆಯ ಮತ್ತು ಸವೆದ ಹಳಿಗಳ ದುರಸ್ತಿ, ಬದಲಾವಣೆ ಮೊದಲಾದವು ಅವರು ಕೈಗೊಂಡ ಕೆಲಸಗಳು.
ಇವುಗಳಲ್ಲಿ ಅತ್ಯಂತ ಗಮನಾರ್ಹ ಕೆಲಸವೆಂದರೆ, ಎರಡನೇ ದರ್ಜೆ ಸ್ಲೀಪರ್ ಕೋಚ್‌ಗಳಲ್ಲಿ ಮರದ ಬೆಂಚುಗಳಿಗೆ ಬದಲಾಗಿ ಮೆತ್ತನೆಯ ಹಾಸಿಗೆಗಳನ್ನು ಪರಿಚಯಿಸುವುದು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ಇಂಡಿಯಾ ಆಫ್ಟರ್ ಗಾಂಧಿ ಎಂಬ ಪುಸ್ತಕದಲ್ಲಿ ದಂಡಾವತೆ ಅವರ ಈ ಕೆಲಸವನ್ನು ಒತ್ತಿ ಹೇಳುತ್ತಾರೆ. ಗುಹಾ ಹೀಗೆ ಬರೆಯುತ್ತಾರೆ. “ದೇಶದ ಜನರಿಗೆ ಆ ಎರಡಿಂಚಿನಷ್ಟು ದಪ್ಪದ ಮೆತ್ತೆ ಮಾಡಿದಷ್ಟು ಉಪಕಾರವನ್ನು ದೇಶದ ಯಾವ ರಾಜಕಾರಣಿಯೂ ಮಾಡಿರಲಾರ.” ತನ್ನ ಜನರ ಜೀವನ ಮಟ್ಟವನ್ನು ಅಮೂಲಾಗ್ರವಾಗಿ ಮರುರೂಪಿಸಿದ ಕೆಲಸಗಳನ್ನು ಕಾರ್ಯಗತಗೊಳಿಸಿದ್ದಕ್ಕಾಗಿ ಸ್ಮರಿಸಲೇಬೇಕಾದ ಕೆಲವೇ ಕೆಲವು ಮಂತ್ರಿಗಳ ಪಟ್ಟಿಯಲ್ಲಿ ದಂಡಾವತೆಯವರನ್ನು ಗುಹಾ ಹೆಸರಿಸುತ್ತಾರೆ.
ಅವರ ವಾಸ್ತವಿಕವಾದವನ್ನು ಎತ್ತಿ ತೋರಿಸಲೆಂದು ಗುಹಾ ಹೀಗೆ ಬರೆಯುತ್ತಾರೆ. “ಅವರ ಸಮಾಜವಾದವು ಶ್ರೀಮಂತರ ವಿರುದ್ಧ ವಾಗ್ದಾಳಿಯನ್ನು ನಡೆಸುವುದರ ಬದಲಾಗಿ ಬಡವರ ಪರವಾದ ನೀತಿಗಳನ್ನೇ ನೆಚ್ಚಿಕೊಂಡಿತ್ತು.” ದಂಡಾವತೆ ಅವರೇ ಹೇಳಿಕೊಳ್ಳುವುದು ಹೀಗಿದೆ. “ನಾನು ಮಾಡಲು ಬಯಸುವ ಕಾರ್ಯವೆಂದರೆ ಮೇಲ್ವರ್ಗದ ಜನರನ್ನು ಕೀಳಾಗಿ ಕಾಣುವುದಲ್ಲ, ಬದಲಿಗೆ ಕೆಳವರ್ಗದ ಜನರನ್ನು ಮೇಲಕ್ಕೆತ್ತುವುದು.”
ಹಣಕಾಸು ಮಂತ್ರಿ
ಕೇಂದ್ರ ಹಣಕಾಸು ಸಚಿವರಾಗಿ ದಂಡಾವತೆ ಅವರು ಗೋಲ್ಡ್ ಕಂಟ್ರೋಲ್ ಆಕ್ಟ್ ಎಂಬ ಕಾನೂನನ್ನು ರದ್ದುಗೊಳಿಸಿದರು. ಆ ಮೂಲಕ ಅಮೂಲ್ಯ ಲೋಹದ ಮಾಲೀಕತ್ವ, ಉತ್ಪಾದನೆ ಮತ್ತು ವ್ಯಾಪಾರದ ಮೇಲಿದ್ದ ನಿರ್ಬಂಧವನ್ನು ತೊಡೆದು ಹಾಕುತ್ತಾರೆ. ಅವರ ಬಜೆಟ್ ಸಮಾಜವಾದಿ ಸ್ಪರ್ಶವನ್ನು ಹೊಂದಿತ್ತು. ಸಣ್ಣ ರೈತರು, ಕುಶಲಕರ್ಮಿಗಳು ಮೊದಲಾದವರಿಗೆ ಸಾಲ ಮನ್ನಾ, ಡೀಸೆಲ್ ಮೇಲಿನ ಅಬಕಾರಿ ಸುಂಕದ ಹೆಚ್ಚಳವನ್ನು ಹಿಂಪಡೆಯುವಿಕೆ ಮೊದಲಾದವು ಅದನ್ನು ಸ್ಪಷ್ಟಪಡಿಸುತ್ತವೆ.
ವಿಕೇಂದ್ರೀಕರಣದ ಪ್ರತಿಪಾದಕರಾಗಿದ್ದ ಅವರು, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಶೇಕಡಾ 90 ರಷ್ಟು ಭಾಗವನ್ನು ರಾಜ್ಯಗಳಿಗೆ ವರ್ಗಾಯಿಸಲ್ಪಡುವಂತೆ ನೋಡಿಕೊಂಡಿದ್ದರು. ಹಣಕಾಸು ಸಂಸ್ಥೆಗಳ ಕಾರ್ನಿರ್ವಹಣೆಯನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೂಡ ಅವರು ಪರಿಚಯಿಸಿದ್ದರು. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಪ್ರಸ್ತಾಪವನ್ನು ಕೂಡ ದಂಡಾವತೆ ಮುಂದಿಟ್ಟಿದ್ದರು. ಆದರೆ 1990 ರ ಡಿಸೆಂಬರ್ ತಿಂಗಳಲ್ಲಿ ವಿ.ಪಿ. ಸಿಂಗ್ ಸರಕಾರ ಪತನಗೊಂಡ ಕಾರಣಕ್ಕೆ ಅದು ಯಶಸ್ವಿಯಾಗುವುದಿಲ್ಲ.
ದಂಡಾವತೆ ಅವರ 1990-91 ರ ನಜೆಟ್ ಭಾಷಣವದಲ್ಲಿ ಆರ್ಥಿಕ ಸ್ಥಿರತೆಯನ್ನು ಸಮತೋಲನಗೊಳಿಸುವ ಬಗ್ಗೆ ಒತ್ತು ನೀಡಿದ್ದರು. ಬಡಬಗ್ಗರ ಏಳಿಗೆಗಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಅದರಲ್ಲಿ ಒತ್ತಿ ಹೇಳಿದ್ದರು. “… ತಳ ಮಟ್ಟದಲ್ಲಿರುವ ಬಡವರು ತಮ್ಮ ಕಡೆಗೆ ಹರಿದು ಬರುವ ಪ್ರಗತಿಯ ಪ್ರಯೋಜನ ಪಡೆಯಲಾರದೆ ಮೌನವಾಗಿ ಬಳಲುತ್ತಿದ್ದರೆ, ಇತ್ತ ಮೇಲು ಸ್ತರದಲ್ಲಿರುವ ಶ್ರೀಮಂತರು ಆರ್ಥಿಕ ಪ್ರಗತಿಯ ಎಲ್ಲ ಪ್ರಯೋಜನಗಳನ್ನು ಪಡೆದುಕೊಂಡು ತಮ್ಮದೇ ಲೋಕದಲ್ಲಿ ಬದುಕುತ್ತಿದ್ದಾರೆ. ನಮ್ಮ ಹೊಸ ಸರಕಾರವು ಈ ಸಿದ್ಧಾಂತವನ್ನು ತಿರಸ್ಕರಿಸುತ್ತದೆ. ಬದಲಿಗೆ ನಾವು ಸಮಾನತೆಯೊಂದಿಗಿನ ಪ್ರಗತಿಗಾಗಿ ಕೆಲಸ ಮಾಡುತ್ತೇವೆ. ಅದನ್ನು ಉದ್ಯೋಗ ಆಧಾರಿತ ಯೋಜನೆಗಳ ಮೂಲಕ ಖಚಿತ ಪಡಿಸುತ್ತೇವೆ. ಇದಕ್ಕಾಗಿ ಗ್ರಾಮ, ಜಿಲ್ಲೆ, ಪ್ರಾಂತ್ಯ ಮತ್ತು ಕೇಂದ್ರಗಳೆಂಬ ರಾಜ್ಯಗಳ ನಾಲ್ಕು ಸ್ತಂಭಗಳ ವಿಕೇಂದ್ರಿತ ಸಂಸ್ಥೆಗಳನ್ನು, ರಾಮ ಮನೋಹರ ಲೋಹಿಯಾ ಅವರು ಹೇಳಿದ ಹಾಗೆ “ಚೌಕಂಭ ರಾಜ್” ಬಹಳ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಆಡಳಿತವನ್ನು ಇನ್ನಷ್ಟು ಸುಧಾರಿಸಲು ರಾಜ್ಯ ಮತ್ತು ಕೇಂದ್ರಗಳೆಂಬ ಎರಡು ಸ್ತಂಭಗಳಿಂದ ನಾಲ್ಕು ಸ್ತಂಭಗಳಿಗೆ ವಿಕೇಂದ್ರೀಕರಣ ಮಾಡುವುದು ಚೌಕಂಭ ರಾಜ್.
ಸಂಸದರಾಗಿ ದಂಡಾವತೆ ಅವರ ಗಮನಾರ್ಹ ಕೆಸವೆಂದು ಪರಿಗಣಿತವಾಗಿರುವುದು, 1985 ರ ಪಕ್ಷಾಂತರ ತಡೆ ಮಸೂದೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವ ಸುರಕ್ಷತಾ ನಿಯಮವನ್ನು ಸೇರಿಸುವುದು. 1991 ರ ಚುನಾವಣೆಯಲ್ಲಿ ಸೋತ ಬಂತರ ಅವರು ತಮ್ಮ ಸಂಸದೀಯ ಜೀವನವನ್ನು ಕೊನೆಗೊಳಿಸುತ್ತಾರೆ. ನಂತರ ಸಕ್ರಿಯ ರಾಷ್ಟ್ರ ರಾಜಕಾರಣದಿಂದಲೂ ಹಿಂದಕ್ಕೆ ಸರಿಯುತ್ತಾರೆ.
ವೈಜ್ಞಾನಿಕ ಮನೋಧರ್ಮದ ಜೊತೆಗೆ ದಂಡಾವತೆ ಅವರು ಸಾಹಿತ್ಯ, ಕಾವ್ಯ ಮತ್ತು ಶಾಸ್ತ್ರೀಯ ಸಂಗೀತದಲ್ಲಿ (ಭಾರತೀಯ ಮತ್ತು ಪಾಶ್ಚಾತ್ಯ) ಒಲವು ಹೊಂದಿದ್ದರು. ಬೇರೆ ಬೇರೆ ಭಾಷೆಗಳ ಕಲಾತ್ಮಕ ಚಲನಚಿತ್ರಗಳನ್ನು ಮತ್ತು ನಾಟಕಗಳನ್ನು ನೋಡುವುದು ಅವರ ಇಷ್ಟದ ಹವ್ಯಾಸವಾಗಿತ್ತು. ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಲೋಕಸಭಾ ಕ್ರಿಕೆಟ್ ತಂಡದ ನಾಯಕನಾಗಿ ರಾಷ್ಟ್ರಪತಿಗಳಿಂದ ಬೆಳ್ಳಿ ಪದಕವನ್ನು ಸ್ವೀಕರಿಸಿದ ನೆನಪನ್ನು ಅವರು ಸದಾ ಮೆಲುಕು ಹಾಕುತ್ತಿದ್ದರು.
ಪ್ರಮೀಳಾ ಜೊತೆಗಿನ ಬದುಕು
ದಂಡಾವತೆ ಅವರು ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಪ್ರಮೀಳಾ ದಂಡಾವತೆಯರನ್ನು ವಿವಾಹವಾಗಿದ್ದರು. ಪ್ರಮೀಳಾ ಅವರು ದಂಡಾವತೆ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಬಲು ದೊಡ್ಡ ಬೆಂಬಲ ಮತ್ತು ಸ್ಪೂರ್ತಿಯ ಸೆಲೆಯಾಗಿದ್ದರು. ಇಬ್ಬರೂ ತಮ್ಮ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ಪರಸ್ಪರ ಸಹಕಾರದಿಂದ ನಡೆದುಕೊಳ್ಳುತ್ತಿದ್ದರು. ಪ್ರಮೀಳಾ ಅವರು ಲಿಂಗತ್ವ ನ್ಯಾಯ ಮತ್ತು ಮಹಿಳೆಯ ಸಬಲೀಕರಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದರು. ತನ್ನ ಸಾಮಾಜಿಕ ಕಳಕಳಿಯ ಕಾರಣದಿಂದಲೇ ಅವರು ಮುಂಬೈಯ ಉತ್ತರ ಕೇಂದ್ರ ಕ್ಷೇತ್ರದಿಂದ ಏಳನೇ ಲೋಕಸಭೆಗೆ ಆಯ್ಕೆಯಾಗಿದ್ದರು. (1980-84)
ತುರ್ತು ಪರಿಸ್ಥಿತಿಯ ಕಾಲದಲ್ಲಿ, ಮಧು ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮತ್ತು ಪ್ರಮೀಳಾ ಅವರನ್ನು ಪುಣೆಯ ಯೆರವಡಾ ಜೈಲಿನಲ್ಲಿ 18 ತಿಂಗಳುಗಳ ಕಾಲ ಬಂಧಿಸಿರಿಸಲಾಗಿತ್ತು. ಅವರಿಬ್ಬರು ಈ ಅವಧಿಯಲ್ಲಿ ಪರಸ್ಪರ 200 ಪತ್ರಗಳನ್ನು ಬರೆದುಕೊಂಡಿದ್ದು. ಅದರಲ್ಲಿ ಸಂಗೀತ, ಪುಸ್ತಕಗಳು, ತತ್ವಶಾಸ್ತ್ರ ಮತ್ತು ಪ್ರೇಮದ ಬಗ್ಗೆ ಚರ್ಚಿಸುತ್ತಿದ್ದರು.
ಕ್ಯಾನ್ಸರ್ ಜೊತೆಗಿನ ದೀರ್ಘ ಹೋರಾಟದ ನಂತರ, 2005 ನವೆಂಬರ್ 12 ರಂದು ಮಧು ದಂಡಾವತೆ ಮುಂಬೈಯ ಜಸ್ಲೋಕ್ ಆಸ್ಪತ್ರೆಯಲ್ಲಿ ತನ್ನ 81 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಆಶಯದಂತೆ, ಅವರ ದೇಹವನ್ನು ನಗರದ ಜೆಜೆ ಆಸ್ಪತ್ರೆಗೆ ದಾನ ಮಾಡಲಾಯಿತು.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
