Home ಬ್ರೇಕಿಂಗ್ ಸುದ್ದಿ ಹಾಸನ ಅಕ್ರಮ ಗಾಂಜಾ ಸಾಗಾಟ ವೇಳೆ ಪೊಲೀಸರ ದಾಳಿ – ಮಹಿಳೆಯ ಬಂಧನ

ಹಾಸನ ಅಕ್ರಮ ಗಾಂಜಾ ಸಾಗಾಟ ವೇಳೆ ಪೊಲೀಸರ ದಾಳಿ – ಮಹಿಳೆಯ ಬಂಧನ

ಹಾಸನ:  ಹೊಳೆನರಸೀಪುರ ತಾಲ್ಲೂಕಿನ ಕಬ್ಬೂರು ಗ್ರಾಮದ ಬಳಿ ಕಳೆದ ರಾತ್ರಿ ದಂಧೆಕೋರರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಹಳ್ಳಿಮೈಸೂರು ಠಾಣೆ ಪೊಲೀಸರು ಸಿನಿಮೀಯ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಓರ್ವ ಮಹಿಳೆಯನ್ನು ಬಂಧಿಸಲಾಗಿದ್ದು, 7 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ.

​ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಮೇಲೂರು ಗ್ರಾಮದ ಶೀಲಾ ಬಂಧಿತ ಮಹಿಳೆ. ಅದೇ ಗ್ರಾಮದ ಜಬೀ ಎಂಬಾತ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾದ ಆರೋಪಿ.

ಘಟನೆಯ ವಿವರ:

ಶೀಲಾ ಹಾಗೂ ಜಬೀ ಮರೆಮಂಟಿ ಕಾಡು ಬಳಿಯ ನಿರ್ಜನ ಪ್ರದೇಶದಲ್ಲಿ ಗಾಂಜಾ ತಂದು ಮಾರಾಟ ಮಾಡಲು ಸ್ಕೆಚ್ ಹಾಕಿದ್ದರು. ಶೀಲಾ KA-04-LC-7204 ನಂಬರ್‌ನ ಸ್ಕೂಟಿಯಲ್ಲಿ ಸ್ಥಳಕ್ಕೆ ಬಂದಿದ್ದರೆ, ಜಬೀ KA-11-M-8783 ಕಾರಿನಲ್ಲಿ ಗಾಂಜಾ ಸಮೇತ ಆಗಮಿಸಿದ್ದನು. ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಹಳ್ಳಿಮೈಸೂರು ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ.

​ಪೊಲೀಸರು ದಿಢೀರ್ ದಾಳಿ ಮಾಡುತ್ತಿದ್ದಂತೆ ಎಚ್ಚೆತ್ತ ಆರೋಪಿ ಜಬೀ, ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಶೀಲಾಳನ್ನು ವಶಕ್ಕೆ ಪಡೆದ ಪೊಲೀಸರು, 7 ಕೆಜಿ ಗಾಂಜಾ, ಒಂದು ಸ್ಕೂಟಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹಳ್ಳಿಮೈಸೂರು ಪೊಲೀಸ್ ಠಾಣೆಯ ಪಿಎಸ್‌ಐ ನವ್ಯಾ, ಸಿಬ್ಬಂದಿಗಳಾದ ರಂಗಸ್ವಾಮಿ, ನವೀನ್ ಹಾಗೂ ಅರುಣ ಅವರು ಭಾಗಿಯಾಗಿದ್ದರು. ಪರಾರಿಯಾಗಿರುವ ಆರೋಪಿ ಜಬೀಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

You cannot copy content of this page

Exit mobile version