ದೆಹಲಿ : ದೆಹಲಿಯ ವಾಯು ಗುಣಮಟ್ಟ (Delhi AQI) ಸಂಪೂರ್ಣವಾಗಿ ಕುಸಿದಿದ್ದು, ಇದೀಗ ಇದರ ಪಟ್ಟಿಗೆ ರಾಜ್ಯ ರಾಜದಾನಿ ಬೆಂಗಳೂರು (Bengaluru) ಕೂಡ ಸೇರಿಕೊಳ್ಳುತ್ತಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ವಾತಾವರಣ ಬದಲಾಗುತ್ತಲೇ ಇದ್ದು, ಸದ್ಯ 170–200 ರ ಮಟ್ಟದಲ್ಲಿ ಮಾಲಿನ್ಯ ದಟ್ಟವಾಗಿದೆ. ಇದು ದಿನಕ್ಕೆ ಸುಮಾರು 3.2 ಸಿಗರೇಟು ಸೇವನೆಯಷ್ಟು ಹಾನಿಯನ್ನುಂಟುಮಾಡುತ್ತಿದೆ ಎಂದು ವಾಯು ಗುಣಮಟ್ಟ ಸೂಚಕ (AQI) ತಿಳಿಸಿದೆ.
ಕಳೆದ ಒಂದು ವಾರದಿಂದ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ. ಈ ಅವಧಿಯಲ್ಲಿ ನಗರದಲ್ಲಿ ಕನಿಷ್ಠ AQI 78 ಆಗಿದ್ದರೆ, ಗರಿಷ್ಠ 200 ರ ಮಟ್ಟವನ್ನು ತಲುಪಿತ್ತು, ಇದು ಬೆಂಗಳೂರಿನ ಇತಿಹಾಸದಲ್ಲಿ ಮೊದಲು ಕಂಡ ಪ್ರಕರಣವಾಗಿದೆ. ಇಂದಿನ ದಿನಕ್ಕೆ ಗುಣಮಟ್ಟ 173 ಆಗಿದ್ದರೂ ಸ್ವಲ್ಪ ಸುಧಾರಣೆ ಕಂಡುಬಂದರೂ, ತಜ್ಞರು ಎಚ್ಚರಿಸಿರುವಂತೆ, ಹೀಗೆ ಮುಂದುವರೆದರೆ ಬೆಂಗಳೂರು ದೆಹಲಿಯಂತಹ ತೀವ್ರ ವಾಯು ಮಾಲಿನ್ಯವನ್ನು ಎದುರಿಸಬಹುದು. ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲ, ಇತರ ನಗರಗಳೂ ಕಳಪೆ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಿಸುತ್ತಿವೆ. ಉದಾಹರಣೆಗೆ, ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ 224 ರ ಮಟ್ಟಕ್ಕೆ ಏರಿತು, ಮತ್ತು ಇಂದೂ 197 ರಂತೆ ಇದ್ದು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾಗುತ್ತಿರುವ ಶೀತದಲೆಯಿಂದ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟ ಸಂಬಂಧಿ ಸಮಸ್ಯೆಗಳು ಎದುರಾಗುತ್ತಿವೆ. ತಜ್ಞರು ಎಚ್ಚರಿಸುತ್ತಾರೆ, ಗಾಳಿಯ ಮಾಲಿನ್ಯ ಮತ್ತು ದುರ್ಬಲ ಗುಣಮಟ್ಟ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಇಂದಿಗೂ ಬೆಂಗಳೂರಿನಲ್ಲಿ PM2.5 ಪ್ರಮಾಣ 87ಕ್ಕೆ ಮತ್ತು PM10 ಪ್ರಮಾಣ 113ಕ್ಕೆ ದಾಖಲಾಗಿದೆ. ಈ ಮಟ್ಟಗಳು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿಸುತ್ತಿದ್ದು, ಜನರಿಗೆ WHO ಮಾರ್ಗಸೂಚಿಯನ್ನು ಅನುಸರಿಸುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
