Home ದೆಹಲಿ 56 ಇಂಚಿನ ಎದೆಗೆ ಏನಾಯಿತು?: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ

56 ಇಂಚಿನ ಎದೆಗೆ ಏನಾಯಿತು?: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ

0

ದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ನರವಣೆ ಅವರ ಇನ್ನೂ ಪ್ರಕಟವಾಗದ ಪುಸ್ತಕ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣ ಸೋಮವಾರ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಭಾರತದ ಗಡಿಯ ಡೋಕ್ಲಾಮ್ ಸಮೀಪಕ್ಕೆ ಚೀನಾ ಯುದ್ಧ ಟ್ಯಾಂಕ್‌ಗಳು ಪ್ರವೇಶಿಸಿವೆ ಎಂಬ ರಾಹುಲ್ ಅವರ ಹೇಳಿಕೆಗಳು ವಿವಾದ ಸೃಷ್ಟಿಸಿದವು. ಚೀನಾ ನಮ್ಮೊಂದಿಗೆ ಸಂಘರ್ಷಕ್ಕೆ ಇಳಿದಾಗ 56 ಇಂಚಿನ ಎದೆ ಏನಾಯಿತು? ಎಂದು ರಾಹುಲ್ ಪ್ರಶ್ನಿಸಿದ್ದಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದವು.

ರಾಹುಲ್ ಭಾಷಣಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಂತರ ಗೃಹ ಸಚಿವ ಅಮಿತ್ ಶಾ ಅಡ್ಡಿಪಡಿಸಿದರು. ಸಂಸದೀಯ ನಿಯಮಗಳನ್ನು ಉಲ್ಲೇಖಿಸಿ ಸ್ಪೀಕರ್ ಓಂ ಬಿರ್ಲಾ ಕೂಡ ರಾಹುಲ್ ಅವರನ್ನು ತಡೆದರು. ತಮ್ಮನ್ನು ಮಾತನಾಡದಂತೆ ತಡೆಯಲಾಗುತ್ತಿದೆ ಎಂದು ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು. “ಸತ್ಯ ಹೊರಬರುತ್ತದೆ ಎಂದು ಅವರು (ಸರ್ಕಾರ) ಹೆದರುತ್ತಿದ್ದಾರೆ. ಮೋದಿ ಮತ್ತು ರಾಜನಾಥ್ ಅವರ ಬಗೆಗಿನ ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸುತ್ತೇವೆ,” ಎಂದು ಹೇಳಿದರು.

ಚೀನಾ ನಮ್ಮೊಂದಿಗೆ ಸಂಘರ್ಷಕ್ಕೆ ಇಳಿಯಲು ಮುನ್ನುಗ್ಗುತ್ತಿದ್ದರೆ 56 ಇಂಚಿನ ಎದೆಗೆ ಏನಾಯಿತು? ಎಂದು ರಾಹುಲ್ ಲೇವಡಿ ಮಾಡಿದರು. ಪ್ರಧಾನಿ ಮೋದಿ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ನೋಡುತ್ತಿದ್ದಾರೆ, ಲೋಕಸಭೆಯಲ್ಲಿನ ಚರ್ಚೆಗೆ ಅವರೇ ನೇತೃತ್ವ ವಹಿಸಬೇಕು ಎಂದು ರಾಹುಲ್ ಒತ್ತಾಯಿಸಿದರು. ಸುಮಾರು 46 ನಿಮಿಷಗಳ ಕಾಲ ರಾಹುಲ್ ನರವಣೆ ಅವರ ಪುಸ್ತಕದ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ, ಸ್ಪೀಕರ್ ಅಡ್ಡಿಪಡಿಸಿ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಸದನವು ಪುನರಾರಂಭಗೊಂಡ ನಂತರ ರಾಹುಲ್ ಮತ್ತೆ ಮಾತನಾಡಲು ಮುಂದಾದಾಗ, ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಹೀಗಾಗಿ ಸ್ಪೀಕರ್ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

You cannot copy content of this page

Exit mobile version