ಬೆಂಗಳೂರು: ಶಾಂತಿನಗರದ ಬಾಡಿಗೆ ಮನೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 60 ವರ್ಷದ ಮನೆ ಮಾಲೀಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಬಾಕಿ ಇರುವ ದುರಸ್ತಿ ಕಾರ್ಯಗಳನ್ನು ಪರಿಶೀಲಿಸುವ ನೆಪದಲ್ಲಿ ಆರೋಪಿ ಕಮಲೇಶ್ ಕುಮಾರ್ ಶನಿವಾರ ಸಂಜೆ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಸಂಜೆ 6:25ರ ಸುಮಾರಿಗೆ ದುರಸ್ತಿ ಕೆಲಸಗಳನ್ನು ಪರಿಶೀಲಿಸಲು ಫ್ಲ್ಯಾಟ್‌ಗೆ ಪ್ರವೇಶಿಸಿದ ಕಮಲೇಶ್, ವಿದ್ಯಾರ್ಥಿನಿಯೊಂದಿಗೆ ಆಕೆಯ ಕಾಲೇಜಿನ ಬಗ್ಗೆ ಮಾತನಾಡಲಾರಂಭಿಸಿದ್ದಾನೆ. ನಂತರ ಆಕೆಯ ಕೈಯಲ್ಲಿದ್ದ ಮೆಹೆಂದಿಯನ್ನು ನೋಡುವ ನೆಪದಲ್ಲಿ ಕೈ ಹಿಡಿದು ತನ್ನತ್ತ ಎಳೆದುಕೊಂಡಿದ್ದಾನೆ. ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಆಕೆಯ ಮೇಲೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೆ, ತನ್ನನ್ನು ಖಾಸಗಿಯಾಗಿ ಮತ್ತೊಮ್ಮೆ ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ.
ಲಿಖಿತ ದೂರಿನ ಆಧಾರದ ಮೇಲೆ ಅಶೋಕನಗರ ಪೊಲೀಸರು ಭಾನುವಾರ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 74 ಮತ್ತು 75(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
