Home ಬೆಂಗಳೂರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 3 ತಿಂಗಳಲ್ಲಿ 2 ಬಾರಿ – ಟೋಲ್ ಹೆಚ್ಚಳ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 3 ತಿಂಗಳಲ್ಲಿ 2 ಬಾರಿ – ಟೋಲ್ ಹೆಚ್ಚಳ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು (Mysuru-Bengaluru Highway) ನಡುವೆ ಸಂಚರಿಸುವ (Toll Price Hike) ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಂದು ಭಾರಿ ಶಾಕ್ (Shocking) ನೀಡಿದೆ. ಕಳೆದ ಏಪ್ರಿಲ್ 1 ರಂದಷ್ಟೇ ವಾರ್ಷಿಕ ಟೋಲ್ ದರವನ್ನು ಹೆಚ್ಚಿಸಿದ್ದ ಪ್ರಾಧಿಕಾರ, ಇದೀಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದಿಢೀರ್ ದರ ಜಾರಿಗೊಳಿಸಿದೆ. ಈ ಅನಿರೀಕ್ಷಿತ ಬೆಲೆ ಏರಿಕೆಯು ಹೆದ್ದಾರಿ ಬಳಕೆದಾರರು ಹಾಗೂ ವಾಣಿಜ್ಯ ವಾಹನ ಮಾಲೀಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು-ನಿಡಘಟ್ಟ ನಡುವಿನ ಆರು ಪಥಗಳ ಎಕ್ಸ್‌ಪ್ರೆಸ್‌ವೇನಲ್ಲಿ ಓಡಾಡುವ ವಾಹನಗಳಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದ್ದು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಕಣಿಮಿಣಿಕೆ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ನೂತನ ಶುಲ್ಕ ಜಾರಿಗೆ ಬಂದಿದೆ.

ಕಾರು ಸವಾರರಿಗೆ ಇನ್ನು ₹185 ಶುಲ್ಕ
ಏಪ್ರಿಲ್‌ನಲ್ಲಿ ನಡೆದಿದ್ದ ಪರಿಷ್ಕರಣೆಯಲ್ಲಿ ಕಾರುಗಳ ಟೋಲ್ ದರವನ್ನು ₹175 ರಿಂದ ₹180 ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಈಗ ಕೇವಲ 90 ದಿನಗಳ ಅಂತರದಲ್ಲಿ ಮತ್ತೊಮ್ಮೆ ₹5 ಏರಿಕೆ ಮಾಡಲಾಗಿದ್ದು, ಕಾರು, ಜೀಪ್ ಮತ್ತು ವ್ಯಾನ್‌ಗಳ ಒಂದು ಬಾರಿಯ ಸಂಚಾರಕ್ಕೆ ₹185 ನಿಗದಿಪಡಿಸಲಾಗಿದೆ. ಇನ್ನು ಅದೇ ದಿನದ ಮರು ಪ್ರಯಾಣದ (ರಿಟರ್ನ್ ಜರ್ನಿ) ಒಟ್ಟು ದರವನ್ನು ₹275 ಕ್ಕೆ ಹೆಚ್ಚಿಸಲಾಗಿದೆ.

ದುಬಾರಿಯಾದ ಮಾಸಿಕ ಪಾಸ್; ಸ್ಥಳೀಯರಿಗೆ ಸಮಾಧಾನ
ಪ್ರತಿ ತಿಂಗಳು 50 ಬಾರಿ ಸಂಚರಿಸಬಹುದಾದ ರೆಗ್ಯುಲರ್ ಮಾಸಿಕ ಪಾಸ್ ದರವನ್ನು ₹5,940 ರಿಂದ ₹6,100 ಕ್ಕೆ ಭಾರಿ ಪ್ರಮಾಣದಲ್ಲಿ ಏರಿಸಲಾಗಿದೆ. ಆದರೆ, ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ನೀಡಲಾಗುವ ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸ್ಥಳೀಯರು ಎಂದಿನಂತೆ ₹360 ಪಾವತಿಸಿ ಪಾಸ್ ಪಡೆಯಬಹುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ವಾಣಿಜ್ಯ ವಾಹನಗಳ ಹೊಸ ದರ ಪಟ್ಟಿ (ಒಂದು ಬಾರಿಯ ಪ್ರಯಾಣಕ್ಕೆ):

  • ಮಿನಿ ಬಸ್, ಲಘು ಸರಕು ವಾಹನಗಳು (LCV): ₹295
  • ಸಾಮಾನ್ಯ ಬಸ್ ಮತ್ತು ಟ್ರಕ್‌ಗಳು (ಡಬಲ್ ಆಕ್ಸಲ್): ₹620
  • ಮೂರು ಆಕ್ಸಲ್ ವಾಣಿಜ್ಯ ವಾಹನಗಳು: ₹675
  • ಭಾರಿ ನಿರ್ಮಾಣ ಯಂತ್ರೋಪಕರಣಗಳು (4 ರಿಂದ 6 ಆಕ್ಸಲ್): ₹970
  • ಅತಿ ದೊಡ್ಡ ವಾಹನಗಳು (7 ಪ್ಲಸ್ ಆಕ್ಸಲ್): ₹1,180

ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಾತ್ರ ಟೋಲ್ ದರಗಳನ್ನು ಪರಿಷ್ಕರಿಸುವುದು ನಿಯಮ. ಆದರೆ ನಿಯಮ ಮೀರಿ ಕೇವಲ ಮೂರು ತಿಂಗಳಲ್ಲಿ ಎರಡನೇ ಬಾರಿ ಹೆದ್ದಾರಿ ದರ ಹೆಚ್ಚಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ. ಈ ಹಠಾತ್ ನಿರ್ಧಾರದಿಂದಾಗಿ ಸರಕು ಸಾಗಣೆ ವೆಚ್ಚ ದುಬಾರಿಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

You cannot copy content of this page

Exit mobile version