ಬೆಂಗಳೂರು ಪೊಲೀಸರು 12 ಕೋಟಿ ಮೌಲ್ಯದ 1,500 ಕೇಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಶನಿವಾರ ತಿಳಿಸಿದ್ದಾರೆ.
ಈ ಸಂಬಂಧ, ವಿಶಾಖಪಟ್ಟಣದಲ್ಲಿ ಮೂರು ವಾರಗಳ ನಿರಂತರ ಕಾರ್ಯಾಚರಣೆಯ ನಂತರ ಅಂತರರಾಜ್ಯ ಮಾದಕವಸ್ತು ಕಳ್ಳಸಾಗಣೆದಾರರ ಗ್ಯಾಂಗನ್ನು ಭೇದಿಸಿ ಮೂವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
ಕಳ್ಳಸಾಗಣೆದಾರರು ಪೊಲೀಸರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಸರಕು ಸಾಗಣೆ ವಾಹನೊದಳಗೆ ಚೇಂಬರ್ ತಯಾರಿಸಿ ಅದರಲ್ಲಿ ಸಾಗಿಸುತ್ತಿದ್ದರು.
ಇದರ ಕಿಂಗ್ ಪಿನ್ ರಾಜಸ್ಥಾನ ಮೂಲದವನಾಗಿದ್ದು, ಅವನು ಎಮ್‌ಬಿಎ ಪದವಿ ಮಾಡಿದ್ದಾನೆ. ಇನ್ನೊಬ್ಬನು ವಿಶಾಕಪಟ್ಟಣ ಮೂಲದವನಾಗಿದ್ದು ಅವನು ಕಲಾ ವಿಭಾಗದಲ್ಲಿ ಪದವಿ ಹೊಂದಿದ್ದಾನೆ. ಮೂರನೇ ವ್ಯಕ್ತಿಯು ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಎಂದು ಅವರು ಹೇಳಿದ್ದಾರೆ.
ಈ ಗ್ಯಾಂಗ್ ವಿಶಾಖಪಟ್ಟಣಂ ಸುತ್ತಮುತ್ತಲಿನ ಗ್ರಾಮಾಂತರ ಮತ್ತು ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಕೃಷಿ ಮಾಡುತ್ತಿತ್ತು.
ಅವರು ಅದನ್ನು ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಮುಂತಾದ ಇತರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇದರಲ್ಲಿ ದೊಡ್ಡ ಪಾಲು ಬೆಂಗಳೂರಿಗೆ ಬರುತ್ತಿತ್ತು ಎಂದು ಅವರು ಹೇಳಿದರು.