Home ಬೆಂಗಳೂರು ಖಮೇನಿ ಪರ ಶೋಕಾಚರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಆರ್. ಅಶೋಕ ಆಗ್ರಹ

ಖಮೇನಿ ಪರ ಶೋಕಾಚರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಆರ್. ಅಶೋಕ ಆಗ್ರಹ

0

ಬೆಂಗಳೂರು: ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಪ್ರತಿ ವ್ಯಕ್ತಿಯ ಮೇಲೆ 1 ಲಕ್ಷ ರೂಪಾಯಿ ಸಾಲದ ಹೊರೆ ಬೀಳಲಿದೆ ಎಂದು ಆರೋಪಿಸಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ, ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರದ “ಲೋಪದೋಷಗಳು ಮತ್ತು ವೈಫಲ್ಯಗಳ” ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ಸೋಮವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಈ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಪ್ರತಿಯೊಂದು ಲೋಪದೋಷಗಳನ್ನು ಎತ್ತಿ ತೋರಿಸಲಾಗುವುದು. ರಾಜ್ಯದ ಆರ್ಥಿಕ ಸಂಕಷ್ಟದ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಒಂದು ಒಡೆದ ಮನೆಯಾಗಿದ್ದು, ಶಾಸಕರು ಬೀದಿಯಲ್ಲಿ ನಿಂತು ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆ,” ಎಂದು ಕಿಡಿಕಾರಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ, ಕೋಮಾದಲ್ಲಿ ಆಡಳಿತ: ಆರ್. ಅಶೋಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವುದನ್ನೂ ಈವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿದ ಅಶೋಕ, ಗುತ್ತಿಗೆದಾರರಿಗೆ ಸುಮಾರು 37,000 ಕೋಟಿ ರೂಪಾಯಿಗಳ ಬಾಕಿ ಹಣ ಪಾವತಿಸುವುದು ಬಾಕಿ ಇದೆ ಎಂದು ಗಮನ ಸೆಳೆದರು.

‘ಖಮೇನಿ ಪರ ಶೋಕಾಚರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ’ ಅಮೆರಿಕ ಮತ್ತು ಇಸ್ರೇಲ್‌ನ ಸರಣಿ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಅವರ ಸಾವಿಗೆ ಸಂತಾಪ ಸೂಚಿಸಿ ನಡೆಸುತ್ತಿರುವ ಮೆರವಣಿಗೆಗಳನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದರು.

ಈ ಬಗ್ಗೆ ಮಾತನಾಡಿದ ಅಶೋಕ, “ಖಮೇನಿ ಒಬ್ಬ ಸರ್ವಾಧಿಕಾರಿಯಾಗಿದ್ದರು ಮತ್ತು ಅವರ ವಿರುದ್ಧವೇ ಅಲ್ಲಿ ಆಂತರಿಕ ದಂಗೆ ನಡೆದಿತ್ತು. ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿತ್ತು ಮತ್ತು ಸಾವಿರಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ಭಾರತದ ಹಲವು ಕಡೆ ಮುಸ್ಲಿಮರು ಖಮೇನಿ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ…” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು, “ಸರ್ವಾಧಿಕಾರಿ ಖಮೇನಿ ಪರವಾಗಿ ಮೆರವಣಿಗೆಗಳನ್ನು ನಡೆಸಬಾರದು. ಕಾನೂನನ್ನು ಕೈಗೆತ್ತಿಕೊಂಡು ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಚೆನ್ನಾಗಿದೆ. ಭಾರತ ಯಾವುದೇ ದೇಶದ ವಿರುದ್ಧವಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಯುದ್ಧ ನಡೆಯಬಾರದು ಮತ್ತು ಕೇಂದ್ರ ಸರ್ಕಾರ ಎಂದಿಗೂ ಯುದ್ಧವನ್ನು ಬೆಂಬಲಿಸಿಲ್ಲ,” ಎಂದು ಸ್ಪಷ್ಟಪಡಿಸಿದರು.


You cannot copy content of this page

Exit mobile version