Home ಬ್ರೇಕಿಂಗ್ ಸುದ್ದಿ ರಾಜ್ಯದಲ್ಲಿ ಎಸ್‌ಐಆರ್ ಕ್ಲೈಮ್ಯಾಕ್ಸ್, ಅಕ್ಟೋಬರ್ 27ಕ್ಕೆ – ಅಂತಿಮ ಪಟ್ಟಿ ಪ್ರಕಟ

ರಾಜ್ಯದಲ್ಲಿ ಎಸ್‌ಐಆರ್ ಕ್ಲೈಮ್ಯಾಕ್ಸ್, ಅಕ್ಟೋಬರ್ 27ಕ್ಕೆ – ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಅಂತಿಮ ಹಂತ ತಲುಪಿದ್ದು, ಒಟ್ಟು 43.82 ಲಕ್ಷ ನೋಟೀಸ್‌ಗಳ ಪೈಕಿ 19,365 ನೋಟೀಸ್‌ಗಳ ಪರಿಶೀಲನೆ ಮಾತ್ರ ಬಾಕಿ ಉಳಿದಿದೆ.  ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ನೋಟೀಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಒಟ್ಟು 24,46,803 ಅರ್ಜಿ ನಮೂನೆಗಳು ಸ್ವೀಕೃತವಾಗಿವೆ.  ನಮೂನೆ-6 (ಹೊಸ ಮತದಾರರ ಹೆಸರು ಸೇರ್ಪಡೆ): 10,07,392 ಅರ್ಜಿಗಳು, ನಮೂನೆ-6ಎ (ಅನಿವಾಸಿ ಭಾರತೀಯ ಮತದಾರರ ನೋಂದಣಿ): 4,777 ಅರ್ಜಿಗಳು, ನಮೂನೆ-7 (ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು): 1,55,109 ಅರ್ಜಿಗಳು, ನಮೂನೆ-8 (ವಿಳಾಸ ಬದಲಾವಣೆ ಹಾಗೂ ವಿವರ ತಿದ್ದುಪಡಿ): 12,79,525 ಅರ್ಜಿಗಳು ಈ ಪೈಕಿ ನಮೂನೆ-8ರ ಅರ್ಜಿಗಳ ಸಂಖ್ಯೆ ಅತಿ ಹೆಚ್ಚಿದೆ. ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ನಮೂನೆ-6ರ ಅರ್ಜಿಗಳ ಸಂಖ್ಯೆಯೂ ಗಮನಾರ್ಹವಾಗಿದೆ.

ಸಾಮೂಹಿಕ ಅರ್ಜಿಗಳ ಸಲ್ಲಿಕೆಗೆ ನಿರ್ಬಂಧ:
ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು ನಮೂನೆ-7 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅರ್ಜಿ ಸಲ್ಲಿಕೆಯ ನಿಯಮಗಳನ್ನು ಸ್ಪಷ್ಟಪಡಿಸಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟರು, ಕರಡು ಮತದಾರರ ಪಟ್ಟಿ ಪ್ರಕಟಿಸುವ ಮೊದಲು ಬೂತ್‌ ಮಟ್ಟದ ಅಧಿಕಾರಿಗಳಿಗೆ ದಿನಕ್ಕೆ ಗರಿಷ್ಠ 50 ಅರ್ಜಿಗಳನ್ನು ಸಲ್ಲಿಸಬಹುದು. ಕರಡು ಪಟ್ಟಿ ಪ್ರಕಟವಾದ ನಂತರ ಈ ಮಿತಿ ದಿನಕ್ಕೆ 10 ಅರ್ಜಿಗಳಾಗಿರುತ್ತದೆ. ವೈಯಕ್ತಿಕ ಮತದಾರರು ಸಲ್ಲಿಸುವ ನಮೂನೆ-7 ಅರ್ಜಿಗಳಿಗೂ ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ವಿಧಾನಗಳಲ್ಲಿ ಮಿತಿ ನಿಗದಿಪಡಿಸಲಾಗಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಒಬ್ಬ ಮತದಾರರು ಗರಿಷ್ಠ 10 ಅರ್ಜಿಗಳನ್ನು ಸಲ್ಲಿಸಬಹುದು. ನಿರಂತರ ಮತದಾರರ ಪಟ್ಟಿ ನವೀಕರಣದ ಅವಧಿಯಲ್ಲಿ ತಿಂಗಳಿಗೆ ಗರಿಷ್ಠ 5 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಈ ಕ್ರಮವು ಆಧಾರರಹಿತ ಅಥವಾ ಪುನರಾವರ್ತಿತ ಆಕ್ಷೇಪಣೆಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿದ್ದರೂ, ನಿಜವಾದ ದೂರುಗಳನ್ನು ಸಲ್ಲಿಸುವ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ.

ಅ. 27ರಂದು ಎಸ್‌ಐಆರ್ ಅಂತಿಮ ರಿಸಲ್ಟ್

ಮತದಾರರ ನೋಂದಣಿ ನಿಯಮಗಳು, 1960ರ ಪ್ರಕಾರ, ನಮೂನೆ-7ರಲ್ಲಿ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸುವ ಜವಾಬ್ದಾರಿ ಚುನಾವಣಾ ನೋಂದಣಿ ಅಧಿಕಾರಿಗಳ ಮೇಲಿದೆ. ಅರ್ಜಿಯಲ್ಲಿ ಅಗತ್ಯ ವಿವರಗಳಿವೆಯೇ, ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯ ಸಹಿ ಇದೆಯೇ ಹಾಗೂ ನೀಡಿರುವ ಮಾಹಿತಿಯು ಮತದಾರರ ಪಟ್ಟಿಯಲ್ಲಿರುವ ವಿವರಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ನಿಯಮಾನುಸಾರ ಇತ್ಯರ್ಥಪಡಿಸಲಾಗದ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ಹೇಳಿಕೆಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು.

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ದೇಶದ ವಿವಿಧ ಭಾಗಗಳಲ್ಲಿಯೂ ಮತದಾರರ ಹಕ್ಕುಗಳು, ದಾಖಲೆಗಳ ಪರಿಶೀಲನೆ, ಹೆಸರುಗಳ ಸೇರ್ಪಡೆ ಮತ್ತು ಅಳಿಸುವಿಕೆ ಹಾಗೂ ಚುನಾವಣಾ ಪಟ್ಟಿಗಳ ವಿಶ್ವಾಸಾರ್ಹತೆಯ ಕುರಿತು ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆಯಲ್ಲ, ಅದು ಅರ್ಹ ನಾಗರಿಕರ ಮತದಾನದ ಹಕ್ಕನ್ನು ಖಚಿತಪಡಿಸುವ ಪ್ರಮುಖ ಆಧಾರವಾಗಿದೆ.

You cannot copy content of this page

Exit mobile version