Home ವಿಶೇಷ ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಜೈಲರ್ 2 (Jailer 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಆ್ಯಕ್ಷನ್ ಎಂಟರ್‌ಟೈನರ್, ನಾಲ್ಕನೇ ದಿನವಾದ ಭಾನುವಾರ ದಾಖಲೆಯ ಗಳಿಕೆ ದಾಖಲಿಸಿದೆ. ವಿಶ್ವಾದ್ಯಂತ ಈಗಾಗಲೇ 424.25 ಕೋಟಿ ರೂಪಾಯಿ ಒಟ್ಟು ಮೊತ್ತವನ್ನು ಬಾಚಿಕೊಂಡಿರುವ ಚಿತ್ರವು, ಕೆಲವೇ ದಿನಗಳಲ್ಲಿ 500 ಕೋಟಿ ರೂಪಾಯಿ ಮೈಲಿಗಲ್ಲನ್ನು ದಾಟುವ ನಿರೀಕ್ಷೆಯಲ್ಲಿದೆ.

ಭಾರತದ ಒಟ್ಟು ಕಲೆಕ್ಷನ್ ವಿವರ

ನಾಲ್ಕನೇ ದಿನವಾದ ಭಾನುವಾರ ಭಾರತದಾದ್ಯಂತ ಸಿನಿಮಾ ಒಟ್ಟು 55.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 199.90 ಕೋಟಿ ರೂಪಾಯಿಗೆ ತಲುಪಿದೆ. ಶನಿವಾರದ ಗಳಿಕೆಗೆ (47.25 ಕೋಟಿ ರೂ.) ಹೋಲಿಸಿದರೆ ಭಾನುವಾರ ಬರೋಬ್ಬರಿ 18.2% ರಷ್ಟು ಏರಿಕೆ ಕಂಡುಬಂದಿದೆ. ದೇಶಾದ್ಯಂತ ಒಟ್ಟು 15,473 ಪ್ರದರ್ಶನಗಳಲ್ಲಿ ಶೇಕಡಾ 62 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 234.25 ಕೋಟಿ ರೂಪಾಯಿಗಳನ್ನು ತಲುಪಿದ್ದು, ಭಾನುವಾರ ಒಂದೇ ದಿನ ಬರೋಬ್ಬರಿ 36.87 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ನಾಲ್ಕು ದಿನಗಳಲ್ಲಿ ಒಟ್ಟು 1.30 ಕೋಟಿಗೂ ಅಧಿಕ ಮಂದಿ ಚಿತ್ರ ವೀಕ್ಷಿಸಿದ್ದಾರೆ.

ಮೊದಲ ನಾಲ್ಕು ದಿನಗಳ ಬಾಕ್ಸ್ ಆಫೀಸ್ ಪಯಣ

ಗುರುವಾರ ಅಕ್ಟೋಬರ್ 15 ರಂದು ಅದ್ಧೂರಿಯಾಗಿ ಬಿಡುಗಡೆಯಾದ ‘ಜೈಲರ್ 2’, ಮೊದಲ ದಿನ ಭಾರತದಲ್ಲಿ 59.70 ಕೋಟಿ ರೂಪಾಯಿ ನೆಟ್ ಗಳಿಕೆಯೊಂದಿಗೆ ಶುಭಾರಂಭ ಕಂಡಿತ್ತು. ಎರಡನೇ ದಿನವಾದ ಶುಕ್ರವಾರ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡುಬಂದು 37.10 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಆದರೆ ವಾರಾಂತ್ಯ ಆರಂಭವಾಗುತ್ತಿದ್ದಂತೆ ಚಿತ್ರ ಮತ್ತೆ ವೇಗ ಪಡೆದುಕೊಂಡಿತು. ಶನಿವಾರದಂದು 47.25 ಕೋಟಿ ರೂಪಾಯಿ ಗಳಿಸಿದರೆ, ಭಾನುವಾರ 55.85 ಕೋಟಿ ರೂಪಾಯಿ ಬಾಚಿಕೊಂಡಿತು. ಮೊದಲ ನಾಲ್ಕು ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಚಿತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ.

ಭಾಷಾವಾರು ಗಳಿಕೆಯ ಅಂಕಿಅಂಶ

ಭಾರತದ ಒಟ್ಟಾರೆ ಗಳಿಕೆಯಲ್ಲಿ ತಮಿಳು ಆವೃತ್ತಿಯು ಅಗ್ರಸ್ಥಾನದಲ್ಲಿದೆ. ಭಾನುವಾರ ತಮಿಳು ಆವೃತ್ತಿಯೊಂದೇ 8,173 ಪ್ರದರ್ಶನಗಳಿಂದ 39.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ಶೇಕಡಾ 80 ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ತೆಲುಗು ಆವೃತ್ತಿಯು 2,234 ಪ್ರದರ್ಶನಗಳಿಂದ 9.50 ಕೋಟಿ ರೂಪಾಯಿ ಗಳಿಸಿದರೆ, ಹಿಂದಿ ಆವೃತ್ತಿಯು 4,902 ಪ್ರದರ್ಶನಗಳಿಂದ 5.75 ಕೋಟಿ ರೂಪಾಯಿ ಸಂಗ್ರಹಿಸಿದೆ. ಕನ್ನಡ ಆವೃತ್ತಿಯು 164 ಪ್ರದರ್ಶನಗಳಿಂದ 65 ಲಕ್ಷ ರೂಪಾಯಿ ಗಳಿಸಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಅಬ್ಬರ ಜೋರಾಗಿದ್ದು, ಭಾನುವಾರ ಒಂದೇ ದಿನ 40 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಒಟ್ಟು ವಿದೇಶಿ ಗ್ರಾಸ್ ಗಳಿಕೆ 190 ಕೋಟಿ ರೂಪಾಯಿಗೆ ತಲುಪಿದೆ.

You cannot copy content of this page

Exit mobile version