Home ಬೆಂಗಳೂರು ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು, ವನ್ಯಜೀವಿ ಮಂಡಳಿ ಸಮ್ಮತಿ: ಈಶ್ವರ ಖಂಡ್ರೆ

ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು, ವನ್ಯಜೀವಿ ಮಂಡಳಿ ಸಮ್ಮತಿ: ಈಶ್ವರ ಖಂಡ್ರೆ

0

ಬೆಂಗಳೂರು, ಅ.7: ಬೆಂಗಳೂರು ನಗರದ ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.


ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಇಂದು ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದರು.


2021ರ ಜನವರಿ 19ರಂದು ನಡೆದಿದ್ದ 15ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ರಾಜ್ಯ ಹೈಕೋರ್ಟ್ ಈ ಕುರಿತು ಪುನರ್ ನಿರ್ಣಯ ಕೈಗೊಳ್ಳುವಂತೆ ಸೂಚಿಸಿತ್ತು. ಬೆಂಗಳೂರು ಕಾಂಕ್ರೀಟ್ ಕಾಡಾಗಿ ಮಾತ್ರ ಬೆಳೆಯದೆ, ಹಚ್ಚ ಹಸುರಿನ ತಾಣವಾಗಿಯೂ ಉಳಿಯಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.


ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬೈತಾ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1356 ಎಕರೆ ಮತ್ತು ಪಶುಸಂಗೋಪನಾ ಇಲಾಖೆಯವರ ಸ್ವಾಧೀನದಲ್ಲಿರುವ 2750 ಎಕರೆ ಸೇರಿ ಒಟ್ಟು. 5010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಸೆಕ್ಷನ್ 36ಎ ಪ್ರಕಾರ “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ”ವನ್ನಾಗಿ ಘೋಷಿಸಲು ಸಭೆ ಸಮ್ಮತಿಸಿದೆ ಎಂದು ವಿವರಿಸಿದರು.

You cannot copy content of this page

Exit mobile version