ಸಧ್ಯ ಬಾಲಿವುಡ್ ಅಂಗಳದಲ್ಲಿ ಪಠಾಣ್ ಚಿತ್ರದ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದೆ. ವಿಶೇಷವಾಗಿ ಎರಡು ದಿನಗಳ ಹಿಂದೆ ಬಿಡುಗಡೆಯಾದ ‘ಬೇಷರಮ್ ರಂಗ್’ ಹಾಡು ಈಗ ಭಾರತೀಯ ಬಲಪಂಥೀಯರ ನಿದ್ದೆಗೆಡಿಸಿದಂತಿದೆ. ಅದರ ಪರಿಣಾಮವೋ ಏನೋ ಈಗ ಪಠಾಣ್ ಚಿತ್ರದ ‘ಬೇಷರಮ್ ರಂಗ್’ ಹಾಡು ಯೂಟ್ಯೂಬ್ (YouTube) ನಂಬರ್ 1 ಟ್ರೆಂಡಿಂಗ್ ನಲ್ಲಿದೆ.
ಹೌದು. ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಚಿತ್ರೋದ್ಯಮದ ಹಲವಷ್ಟು ಸಿನೆಮಾಗಳು ಬಾಯ್ಕಾಟ್ (Boycott) ನ ಬಿಸಿಗೆ ಬೀಳೋದು ಸಾಮಾನ್ಯವಾಗಿದೆ. ವಿಶೇಷವಾಗಿ ಹಿಂದಿ ಚಿತ್ರರಂಗದ ಖಾನ್ ತ್ರಯರ (ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್) ಸಿನೆಮಾಗಳಿಗೆ ಬಿಡುಗಡೆಗೆ ಮುಂಚೆಯೇ ಬಾಯ್ಕಾಟ್ ಬಿಸಿ ತಟ್ಟುತ್ತಿದೆ.
ಸಧ್ಯ ಪಠಾಣ್ (Pathaan) ಸಿನೆಮಾಗೂ ಇಂತಹದ್ದೊಂದು ಬಿಸಿ ತಟ್ಟಬಹುದು ಎಂಬ ಸಂದರ್ಭದಲ್ಲೇ ಸರಿಯಾಗಿ ಆ ಸಿನೆಮಾದ ‘ಬೇಷರಮ್ ರಂಗ್’ ಹಾಡು ಈಗ ಯೂಟ್ಯೂಬ್ ನಲ್ಲಿ ನಂ 1 ಟ್ರೆಂಡಿಂಗ್ ಗೆ ಬಂದಿದೆ. ಹಾಗಾಗಿ ಇಲ್ಲಿ ಭಾರತೀಯ ಬಲಪಂಥೀಯರು ಕರೆ ಕೊಟ್ಟ ಬಾಯ್ಕಾಟ್ ಸಂಪೂರ್ಣ ಉಲ್ಟಾ ಹೊಡೆದಿದೆ.
ಅಂದಹಾಗೆ ಈ ಹಾಡಿನಲ್ಲಿ ಬಾಯ್ಕಾಟ್ ಮಾಡುವ ಅಂತಹ ಯಾವ ಅಂಶಗಳು ಇಲ್ಲ ಎಂಬುದು ಗಮನಾರ್ಹ. ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿಕೊಂಡ ಕಾರಣವನ್ನು ಬಾಯ್ಕಾಟ್ ಹೊರಡಿಸಿದವರು ಹೇಳುತ್ತಿದ್ದಾರೆ. ದೀಪಿಕಾ ಕೇವಲ ಕೇವಲ ಕೇಸರಿ ಬಟ್ಟೆ ಮಾತ್ರ ಧರಿಸಿಲ್ಲ ಎಂಬುದು ಕೂಡಾ ಉಲ್ಲೇಖಾರ್ಹ.