ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಹೈ-ಪ್ರೊಫೈಲ್ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ 17,371 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಆರಂಭಿಕ ಹಂತದ ಏರಿಳಿತಗಳ ನಂತರ, ಮಮತಾ ಅವರು ತಮ್ಮ ಹಿಡಿತವನ್ನು ಬಲಪಡಿಸಿಕೊಂಡಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಏಳನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಮಮತಾ ಬ್ಯಾನರ್ಜಿ ಅವರು 32,822 ಮತಗಳನ್ನು ಪಡೆದಿದ್ದರೆ, ಸುವೇಂದು ಅಧಿಕಾರಿ ಅವರು 15,451 ಮತಗಳನ್ನು ಗಳಿಸಿದ್ದಾರೆ.
ಈ ಸ್ಪರ್ಧೆಯು ಆರಂಭಿಕ ಸುತ್ತುಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಮೊದಲ ಸುತ್ತಿನಲ್ಲಿ ಮಮತಾ ಬ್ಯಾನರ್ಜಿ ಅವರು 3,666 ಮತಗಳನ್ನು ಪಡೆಯುವ ಮೂಲಕ 1,996 ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿದ ಸುವೇಂದು ಅಧಿಕಾರಿ ಅವರು 1,558 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಮೂರನೇ ಸುತ್ತಿನಲ್ಲಿ ಮತ್ತೆ ಪುಟಿದೆದ್ದ ಮಮತಾ ಅವರು 898 ಮತಗಳ ಮುನ್ನಡೆ ಸಾಧಿಸಿದರೆ, ನಾಲ್ಕನೇ ಸುತ್ತಿನ ಅಂತ್ಯಕ್ಕೆ ಈ ಅಂತರವು 8,482 ಮತಗಳಿಗೆ ಏರಿಕೆಯಾಗಿತ್ತು.
ಭವಾನಿಪುರ ಕ್ಷೇತ್ರದಲ್ಲಿ ಫಲಿತಾಂಶ ಘೋಷಣೆಯಾಗುವ ಮೊದಲು ಒಟ್ಟು 20 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದ ಒಟ್ಟು 293 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಬಿಗಿ ಭದ್ರತೆಯ ನಡುವೆ ನಡೆಯುತ್ತಿದೆ. ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಪ್ರಬಲ ಸವಾಲೊಡ್ಡಿರುವುದರಿಂದ ಈ ಸ್ಪರ್ಧೆಯು ರಾಜ್ಯದ ಅತ್ಯಂತ ಪ್ರತಿಷ್ಠಿತ ಹೋರಾಟವಾಗಿ ಮಾರ್ಪಟ್ಟಿದೆ. ಇನ್ನೂ ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇರುವುದರಿಂದ, ಮುಂದಿನ ಹಂತಗಳಲ್ಲಿ ಪ್ರವೃತ್ತಿಗಳು ಮತ್ತಷ್ಟು ಬದಲಾಗುವ ನಿರೀಕ್ಷೆಯಿದೆ.
