ಅರವಿಂದ್ ಕೇಜ್ರಿವಾಲ್ ಅವರನ್ನು ಶಹೀದ್-ಎ-ಆಜಮ್ ಜೊತೆ ಹೋಲಿಸಿದ್ದಕ್ಕೆ ಭಗತ್ ಸಿಂಗ್ ಮೊಮ್ಮಗ ಯುದ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ತನಗೆ ಮತ್ತು ಭಗತ್ ಸಿಂಗ್ ಪ್ರೇಮಿಗಳಿಗೆ ತುಂಬಾ ಬೇಸರವಾಯಿತು ಎಂದು ಅವರು ಹೇಳಿದ್ದಾರೆ.
ಮುಂದೆ ಈ ರೀತಿ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷಕ್ಕೆ ಯುದ್ವಿಂದರ್ ಸಿಂಗ್ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಪತ್ರಿಕಾಗೋಷ್ಠಿಯಲ್ಲಿ, ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ನಡುವೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಚಿತ್ರ ಕಂಡುಬಂದಿದೆ.
ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಕೇಜ್ರಿವಾಲ್ ಅವರ ಚಿತ್ರ ಇಬ್ಬರು ಮಹಾನ್ ವ್ಯಕ್ತಿಗಳ ನಡುವೆ ಕಾಣಿಸಿದ ನಂತರ ಈ ವಿವಾದ ಉಂಟಾಗಿದೆ. ಭಾರತೀಯ ಜನತಾ ಪಕ್ಷವು ಆಮ್ ಆದ್ಮಿ ಪಕ್ಷದ ವಿರುದ್ಧ ಹೋರಾಟವನ್ನು ಆರಂಭಿಸಿದೆ. ಇದು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಅದೇ ಸಮಯದಲ್ಲಿ, ಕೇಜ್ರಿವಾಲ್ ಅವರು ಭಗತ್ ಸಿಂಗ್ ಅವರಂತೆ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅವರು ಜೈಲಿಗೆ ಹೋಗಿದ್ದಾರೆ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷವು ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಇದೀಗ ಈ ಹೋಲಿಕೆಗೆ ಭಗತ್ ಸಿಂಗ್ ಮೊಮ್ಮಗ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಯುದ್ವಿಂದರ್ ಸಿಂಗ್, ‘ಇದನ್ನು ನೋಡಿ ತುಂಬಾ ಬೇಸರವಾಯಿತು. ಆಮ್ ಆದ್ಮಿ ಪಕ್ಷ ಈ ರೀತಿ ಮಾಡಬಾರದು. ಯಾವುದೇ ರಾಜಕಾರಣಿ ತನ್ನನ್ನು ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಜೊತೆ ಹೋಲಿಸಿಕೊಳ್ಳಬಾರದು. ನಿಮ್ಮ ವೈಯಕ್ತಿಕ ರಾಜಕೀಯವನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಿ, ಆದರೆ ಈ ಮಹಾನ್ ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಬೇಡಿ. ಅವರು ತೋರಿಸಿದ ಮಾರ್ಗಗಳನ್ನು ಅನುಸರಿಸಲು ನಾವು ಪ್ರಯತ್ನಿಸಬಹುದು. ನನಗೆ ಭಾರತದಾದ್ಯಂತ ಪ್ರತಿಕ್ರಿಯೆಗಳು ಬರುತ್ತಿವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅವರ ಪ್ರೇಮಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಈ ಇಬ್ಬರು ಮಹಾನ್ ವ್ಯಕ್ತಿಗಳಿಗೆ ಹೋಲಿಸಿರುವುದು ತುಂಬಾ ಬೇಸರವಾಗಿದೆ ಎಂದಿದ್ದಾರೆ. ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷ ಇದನ್ನು ತಪ್ಪಿಸಬೇಕುʼ ಎಂದು ಅವರು ತಮ್ಮ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.