ಭಾರತದಲ್ಲಿ ಹಿಂದೂತ್ವವಾದಿ ಫ್ಯಾಸಿಸಂ ಗಟ್ಟಿಯಾಗಿ ನೆಲೆಯೂರಿ ಸಂಪೂರ್ಣ ಅಧಿಕಾರವನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ಹೊತ್ತಿನಲ್ಲಿ ಪತ್ರಿಪಕ್ಷಗಳ, ಅದರಲ್ಲೂ ಮುಖ್ಯವಾಗಿ ಎಡ ಮತ್ತು ಪ್ರಗತಿಪರ ಶಕ್ತಿಗಳ ಒಗ್ಗಟ್ಟು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿನ್ನೆಲೆಯಲ್ಲಿ ರಷ್ಯನ್ ಕ್ರಾಂತಿಯ ಆರಂಭದ ದಿನಗಳಲ್ಲಿ ಲೆನಿನ್ 1920ರಲ್ಲಿ ಅವರು ಎಡಪಂಥದ ಬಾಲಗ್ರಹ ಪೀಡೆಗಳ ಬಗ್ಗೆ ಏನು ಬರೆದಿದ್ದಾರೆ ಎಂದು ಪರಿಶೀಲಿಸಿದರೆ, ಅವರು ಅಲ್ಲಿ ಮುಖ್ಯವಾಗಿ ರಾಜಕೀಯ ಹೊಂದಾಣಿಕೆಯ ಅಗತ್ಯ ಮತ್ತು ಸಂದರ್ಭಗಳನ್ನು ವಿವರಿಸಿದ್ದಾರೆ ಎಂಬುದು ತಿಳಿದುಬರುತ್ತದೆ.
ಕ್ರಾಂತಿಕಾರಿ ಭಗತ್ ಸಿಂಗ್ ಅವರು ಈ ಕೃತಿಯ ಕುರಿತು ಬರೆದಿರುವುದನ್ನು ಓದಿದರೆ, ನಮ್ಮ ಇಂದಿನ ಸಂದರ್ಭದಲ್ಲಿ ಕೆಲವು ಹೊಂದಾಣಿಕೆಗಳು ಅತ್ಯಗತ್ಯ ಮತ್ತು ಸೂಕ್ಷ್ಮ ತಾತ್ವಿಕ ವಿಚಾರಗಳ ಬಗ್ಗೆ ಕೂದಲು ಸೀಳುವ ಕೆಲಸವು ನಿಷ್ಪ್ರಯೋಜಕ ಮತ್ತು ಫ್ಯಾಸಿಸಂ ವಿರುದ್ಧದ ಹೋರಾಟಕ್ಕೆ ಮಾರಕ ಎಂಬುದು ತಿಳಿಯುತ್ತದೆ.
ಮೊದಲಿಗೆ ಕ್ರಾಂತಿಕಾರಿ ಭಗತ್ ಸಿಂಗ್ ಅವರು ಫೆಬ್ರವರಿ 2, 1932ರಲ್ಲಿ ಬರೆದ “ಯುವ ರಾಜಕೀಯ ಕಾರ್ಯಕರ್ತರಿಗೆ” ಎಂಬ ಬರಹದಲ್ಲಿ ಹೇಳಿರುವ ಅಂಶಗಳನ್ನು ಇಲ್ಲಿ ಚುಟುಕಾಗಿ ಉಲ್ಲೇಖಿಸುತ್ತಿದ್ದೇನೆ. ರಾಜಕೀಯ ಸಂದರ್ಭಗಳಲ್ಲಿ ಮಾಡಿಕೊಳ್ಳಬಹುದಾದ ಮತ್ತು ಮಾಡಿಕೊಳ್ಳಬಾರದ ರಾಜಿ ಅಥವಾ ಹೊಂದಾಣಿಕೆಗಳ ಬಗ್ಗೆ ಹೀಗೆ ಬರೆಯುತ್ತಾರೆ: “ನಾವು ಸಾಮಾನ್ಯವಾಗಿ ಯೋಚಿಸುವಂತೆ ರಾಜಿ ಅಥವಾ ಹೊಂದಾಣಿಕೆಯು ಅಂತಹ ಒಂದು ಅವಿವೇಕದ ಅಥವಾ ಖಂಡನೀಯ ವಿಷಯವೇನಲ್ಲ. ಬದಲಾಗಿ ಅದು ರಾಜಕೀಯ ಕಾರ್ಯತಂತ್ರದ ಅವಿಭಾಜ್ಯ ಅಂಶವಾಗಿದೆ. ಶೋಷಕರ ವಿರುದ್ಧ ಕಾದಾಡುವ ಯಾವುದೇ ದೇಶವು ಆರಂಭದಲ್ಲಿ ವಿಫಲವಾಗುವುದು ಮತ್ತು ತನ್ನ ಸಂಘರ್ಷದ ಮಧ್ಯದ ಅವಧಿಯಲ್ಲಿ ರಾಜಿ (ಹೊಂದಾಣಿಕೆ) ಮೂಲಕ ಭಾಗಶ: ಬೆಳವಣಿಗೆ ಹೊಂದುವುದು ಅನಿವಾರ್ಯ”. ಇದರ ಅರ್ಥವೆಂದರೆ, ಈಗ ನಮ್ಮ ದೇಶದಲ್ಲಿ ಇರುವ ಪರಿಸ್ಥಿತಿಯಂತೆ ಶತ್ರು ತೀರಾ ಪ್ರಬಲನಾಗಿದ್ದು, ನಾವು ದುರ್ಬಲರಾಗಿದ್ದಾಗ, ನಾವು ಶತ್ರುವಿನ ವಿರುದ್ಧ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು. ಇದು ಇಂದಿಗೆ ಅತ್ಯಂತ ಪ್ರಸ್ತುತವಾದ ಮಾತು. ಪ್ರತಿಪಕ್ಷಗಳು ಇದರಿಂದ ಕಲಿಯ ಬೇಕಾಗಿದೆ.
ಇದಕ್ಕಾಗಿ ಭಗತ್ ಸಿಂಗ್, 1905ರಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಗೊಂಡ ರಷ್ಯನ್ ಕ್ರಾಂತಿಕಾರಿ ಚಳವಳಿಯ ಉದಾಹರಣೆಯನ್ನು ನೀಡುತ್ತಾ, ಆ ಹೊತ್ತಿಗೆ ರಷ್ಯಾಕ್ಕೆ ಮರಳಿದ ಲೆನಿನ್ ಹಿಂಸಾತ್ಮಕ ಹೋರಾಟಕ್ಕೆ ಬೆಂಬಲ ನೀಡಿದ ಬಳಿಕವೂ, ನಂತರದ ದಿನಗಳಲ್ಲಿ ಡ್ಯುಮಾ (ಸಂಸತ್ತು) ಆರಂಭವಾದ ನಂತರದ ದಿನಗಳಲ್ಲಿ ಅದರಲ್ಲಿ ಭಾಗವಹಿಸುವುದರ ಪರವಾಗಿದ್ದರು ಎಂದು ಹೇಳುತ್ತಾರೆ.
1906ರ ಮೊದಲ ಡ್ಯುಮಾದಲ್ಲಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಲೆನಿನ್, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 1907ರಲ್ಲಿ ಅದರಲ್ಲಿ ಭಾಗವಹಿಸುವುದರ ಪರವಾಗಿದ್ದರು ಎಂದು ಭಗತ್ ಸಿಂಗ್ ಹೇಳುತ್ತಾರೆ. “ಸಮಾಜವಾದದ ವಿಚಾರಗಳನ್ನು ಚರ್ಚಿಸುವುದಕ್ಕೆ ಡ್ಯುಮಾ ಒಂದು ವೇದಿಕೆಯಾಗಬೇಕೆಂದು ಲೆನಿನ್ ಬಯಸಿದ್ದರು” ಎಂದು ಭಗತ್ ಸಿಂಗ್ ವಿವರಿಸುತ್ತಾರೆ.
“ನಾನು ಸೂಚಿಸಬಯಸಿದ ಒಂದು ಅಂಶವೆಂದರೆ, ರಾಜಿ ಅಥವಾ ಹೊಂದಾಣಿಕೆಯು ಹೋರಾಟವು ಬೆಳೆಯುತ್ತಿರುವಂತೆ ಆಗಾಗ ಎತ್ತಿಕೊಳ್ಳಬೇಕಾದ ಒಂದು ಅತ್ಯಗತ್ಯ ಆಯುಧವಾಗಿದೆ. ಆದರೆ, ಯಾವತ್ತೂ ನಮ್ಮ ಮುಂದೆ ಚಳವಳಿಯ ವಿಚಾರವನ್ನು ಮುಂದಿಟ್ಟುಕೊಡಿರಬೇಕು ಮತ್ತು ನಾವು ಸಾಧಿಸಲು ಹೋರಾಡುತ್ತಿರುವ ಗುರಿಯ ಕುರಿತು ಯಾವತ್ತೂ ಸ್ಪಷ್ಟತೆಯನ್ನು ಕಾಯ್ದುಕೊಳ್ಳಬೇಕು…” ಎಂದು ಭಗತ್ ಸಿಂಗ್ ಅವರು ಯುವಜನರಿಗೆ ನೀಡಿದ ಈ ಸಂದೇಶದಲ್ಲಿ ಬರೆದಿದ್ದಾರೆ.
ಇಲ್ಲಿ ಭಗತ್ ಸಿಂಗ್ ಅವರ ಈ ವಿಚಾರಗಳನ್ನು ಉಲ್ಲೇಖಿಸುತ್ತಿರುವ ಕಾರಣವೆಂದರೆ, ಅವರು ಈ ಬರಹದಲ್ಲಿ- ಲೆನಿನ್ ಆವರು “ಎಡ ಪಂಥದ” ಕಮ್ಯುನಿಸಂನ ಬಾಲಗ್ರಹ ಪೀಡೆಗಳ ಬಗ್ಗೆ ಬರೆದಿರುವುದರಲ್ಲಿ “ರಾಜಿ, ಹೊಂದಾಣಿಕೆ ವಿಷಯದಲ್ಲಿ ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ” ಎಂದು ಹೇಳಿರುವುದು ಮತ್ತು ಈ ಬರಹಕ್ಕೆ ಈ ವಿಚಾರಗಳೇ ಮೂಲಾಧಾರವಾಗಿರುವಂತೆ ಕಂಡುಬರುತ್ತಿರುವುದು.
ನಮ್ಮ ಪ್ರತಿಪಕ್ಷಗಳಿಗೆ ಹಲವಾರು ವರ್ಷಗಳ ವಯಸ್ಸಾಗಿದ್ದರೂ, ಬಾಲಗ್ರಹ ಪೀಡೆ ಇನ್ನೂ ಬಿಟ್ಟಹಾಗಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ದೇಶದ ಸಂವಿಧಾನವನ್ನೇ ಬದಲಿಸಿ ಮನುವಾದವನ್ನು ಹೇಗಾದರೂ ಹೇರಲು ಬಯಸುತ್ತಿರುವಾಗ, ಸರಕಾರಿ ತನಿಖಾ ಸಂಸ್ಥೆಗಳನ್ನು ಬಳಸಿ ಪ್ರತಿಪಕ್ಷಗಳನ್ನು ಬಗ್ಗುಬಡಿಯಲು ಹವಣಿಸುತ್ತಿರುವಾಗ, ನ್ಯಾಯಾಂಗ ಮಾತ್ರವಲ್ಲ, ಎಲ್ಲಾ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವಾಗ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ದಮನಿಸುತ್ತಿರುವಾಗ, ಒಟ್ಟಿನಲ್ಲಿ ಸರ್ವಾಧಿಕಾರದ ಕಡೆಗೆ ದಾಪುಗಾಲು ಇಡುತ್ತಿರುವಾಗ ಪ್ರತಿಪಕ್ಷಗಳ ಒಗ್ಗಟ್ಟೇ ನಿರ್ಣಾಯಕ. ಚುನಾವಣೆ ಹತ್ತಿರ ಬರುತ್ತಿರುವಾಗಲೂ ಹೊಂದಾಣಿಕೆಗೆ ಹಿಂಜರಿಯುತ್ತಿರುವ ಪ್ರತಿಪಕ್ಷಗಳು, ಭಗತ್ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿಯಾದರೂ ಹೊಂದಾಣಿಕೆಯ ಕುರಿತು ಅವರೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲಿ.
-ನಿಖಿಲ್ ಕೋಲ್ಪೆ