ಜಗ್ಗಿ ವಾಸುದೇವ ಎಂಬ ಯೋಗ ಗುರುವಿನ ಈಶಾ ಫೌಂಡೇಶನ್‌ನ ಇಶಾ ಯೋಗ ಕೇಂದ್ರದಿಂದ 2016 ರಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಮಿಳುನಾಡು ಪೊಲೀಸರು ಮಾರ್ಚ್ 22, ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ನಾಪತ್ತೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಶಾ ಫೌಂಡೇಶನ್ ತಮಿಳುನಾಡಿನ ಕೊಯಮತ್ತೂರಿನ ಬಳಿ 1992 ರಲ್ಲಿ ಜಗ್ಗಿ ವಾಸುದೇವ ಸ್ಥಾಪಿಸಿದ “ಲಾಭರಹಿತ, ಆಧ್ಯಾತ್ಮಿಕ ಸಂಸ್ಥೆ”. ಈ ಪ್ರತಿಷ್ಠಾನವು ಈಶಾ ಯೋಗ ಕೇಂದ್ರವನ್ನು ನಡೆಸುತ್ತದೆ. ಇದು ಸ್ವಯಂಸೇವಕರಿಂದ “ಬಹುತೇಕ ಸಂಪೂರ್ಣವಾಗಿ” ನಡೆಸಲ್ಪಡುವ ಸಂಸ್ಥೆ.
ನ್ಯಾಯಮೂರ್ತಿ ಎಂಎಸ್ ರಮೇಶ್ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ಪೀಠದ ಮುಂದೆ ಈ ಸಲ್ಲಿಕೆಗಳನ್ನು ಮಾಡಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ. ತಿರುನಲ್ವೇಲಿ ಜಿಲ್ಲೆಯ ತಿರುಮಲೈ ಎಂಬವರು ತಮ್ಮ ಸಹೋದರ ಗಣೇಶನ್ ಅವರ ಮೃತದೇಹವನ್ನು ಹಾಜರುಪಡಿಸಲು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿದೆ.
ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಈ ತನಿಖೆಯ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ತಮಿಳುನಾಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಾಪತ್ತೆಯಾದವರಲ್ಲಿ ಕೆಲವರು ಈಗಾಗಲೇ ಹಿಂದಿರುಗಿರಬಹುದು, ಆದರೆ ನಿರ್ದಿಷ್ಟ ವಿವರಗಳು ಅಸ್ಪಷ್ಟವಾಗಿ ಉಳಿದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಏಪ್ರಿಲ್ 8ರೊಳಗೆ ನ್ಯಾಯಾಲಯಕ್ಕೆ ಪೊಲೀಸರು ಸ್ಟೇಟಸ್ ರಿಪೋರ್ಟ್ ಸಲ್ಲಿಸಬೇಕಾಗಿದೆ.
ಮಾರ್ಚ್ 2023 ರಲ್ಲಿ ತನ್ನ ಸಹೋದರ ಗಣೇಶನ್ ಕಣ್ಮರೆಯಾದಾಗ ತಿರುಮಲೈ ಎಂಬ ರೈತರೊಬ್ಬರು ಕಾನೂನಿನ ಮೊರೆಹೋಗಿದ್ದರು. ಗಣೇಶನ್ ಅವರು ಜಗ್ಗಿಯ ಈಶ ಯೋಗ ಕೇಂದ್ರದಲ್ಲಿ ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ಬಹಿರಂಗಪಡಿಸಿದ್ದರು.
2 ಮಾರ್ಚ್ 2023 ರಂದು, ತಿರುಮಲೈ ತನ್ನ ಸಹೋದರನ ಬಗ್ಗೆ ವಿಚಾರಿಸಲು ಯೋಗ ಕೇಂದ್ರವನ್ನು ಸಂಪರ್ಕಿಸಿದಾಗ, ಗಣೇಶನ್ ಎರಡು ದಿನಗಳಿಂದ ಅಲ್ಲಿ ಇರಲಿಲ್ಲ ಎಂದು ತಿಳಿಯಿತು.
ಯೋಗ ಕೇಂದ್ರದ ಪ್ರಭಾರಿ ದಿನೇಶ್ ಅವರ ದೂರಿನ ಆಧಾರದ ಮೇಲೆ ಪೊಲೀಸ್ ದೂರು ದಾಖಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ತಿರುಮಲೈ ಹೇಳಿದರು. ಪೊಲೀಸರು ನಿರಾಸಕ್ತಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ, ತಿರುಮಲೈ ಅವರು ಹೇಬಿಯಸ್ ಕಾರ್ಪಸ್ ಮನವಿಯೊಂದಿಗೆ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದರು.
ಹೇಬಿಯಸ್ ಕಾರ್ಪಸ್ ಮನವಿಯು ಒಬ್ಬ ವ್ಯಕ್ತಿಯನ್ನು ಕಾನೂನುಬದ್ಧವಾಗಿ ಬಂಧಿಸಲಾಗಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಸಲು ನೀಡುವ ಕಾನೂನು ಆದೇಶ.