ಬಿಜೆಪಿ ಹಾಲಿ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ತೇಜಸ್ವಿನಿ ಗೌಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಸಧ್ಯ ಮೈಸೂರು ಕೊಡಗು ಲೋಕಸಭಾ ಟಿಕೆಟ್ ಕೈತಪ್ಪಿ, ಯದುವೀರ್ ಒಡೆಯರ್ ಅವರಿಗೆ ಸಿಕ್ಕ ಹಿನ್ನೆಲೆಯಲ್ಲಿ ತೇಜಸ್ವಿನಿ ಗೌಡ ಬಿಜೆಪಿ ಪಕ್ಷದವರ ಮೇಲೆ ಅಸಮಾಧಾನ ಹೊಂದಿದ್ದು, ಸಧ್ಯ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈಗಾಗಲೇ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಇರುವಾಗ ತೇಜಸ್ವಿನಿ ಗೌಡ ಅವರ ರಾಜೀನಾಮೆ ಬಿಜೆಪಿ ಪಕ್ಷಕ್ಕೆ ನೇರ ಆಘಾತವಾಗಿದೆ. ಅಷ್ಟೆ ಅಲ್ಲದೆ ಹಾಲಿ ಪರಿಷತ್ ಸದಸ್ಯತ್ವ ಕೂಡಾ ಬಿಜೆಪಿ ಕೈ ತಪ್ಪಲಿದೆ.
ಈ ಹಿಂದೆ ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಕನಕಪುರ ಲೋಕಸಭಾ ಕ್ಷೇತ್ರ (ಈಗಿನ ಬೆಂಗಳೂರು ಗ್ರಾಮಾಂತರ) ದಲ್ಲಿ ಮೊದಲ ಬಾರಿಗೆ ಸೋಲುಣಿಸಿದ್ದ ಖ್ಯಾತಿ ತೇಜಸ್ವಿನಿ ಗೌಡ ಅವರದ್ದಾಗಿದೆ.