ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಭಾರತೀಯ ಜನತಾ ಪಕ್ಷದವರಿಗೆ, ನಿದ್ದೆಗೆಡಿಸುವಂತೆ ಮಾಡಿದೆ ಎಂದರೆ ಅದೆಷ್ಟು ಭಯ ಹುಟ್ಟಿಸಿರಬಹುದು ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಭಾರತ ಐಕ್ಯತಾ ಯಾತ್ರೆಯುದ್ದಕ್ಕೂ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜಕೀಯ ಭಾಷಣ ಮಾಡಲಿಲ್ಲ, ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಲಿಲ್ಲ. ನಡಿಗೆ, ಮಂದಹಾಸ, ಸಂವಾದ, ಅಪ್ಪುಗೆ, ಸಾಂತ್ವನಗಳಷ್ಟೇ ಅವರಲ್ಲಿ ಕಂಡಿದ್ದು. ಬಿಜೆಪಿ ಪಕ್ಷದವರಿಗೆ ಇವುಗಳೇ ಭಯ ಹುಟ್ಟಿಸಿದೆ, ಭಾರತ ಒಗ್ಗೂಡುತ್ತಿರುವುದೇ ಬಿಜೆಪಿ ಆತಂಕಕ್ಕೆ ಕಾರಣ ಎಂಬುದು ಜಾಹಿರಾತು ಹೇಳುತ್ತಿದೆ! ಎಂದು ನಿಂದಿಸಿದೆ.
ರಾಜಕೀಯ ಪಕ್ಷಗಳು ಸಹಜವಾಗಿ ತಮ್ಮ ಸಾಧನೆ ಹೇಳಲು, ಸಕಾರಾತ್ಮಕ ಸಂದೇಶ ನೀಡಲು ಪತ್ರಿಕೆಗಳ ಮುಖಪುಟದ ಜಾಹೀರಾತು ನೀಡುವುದು ವಾಡಿಕೆ. ಆದರೆ ಬಿಜೆಪಿ ಕೋಟಿ ಕೋಟಿ ಖರ್ಚು ಮಾಡಿ ನಕಾರಾತ್ಮಕ ಜಾಹೀರಾತು ನೀಡಿದೆ ಎಂದರೆ ಅವರಲ್ಲಿ ಅದೆಷ್ಟು ಭಯ, ಆತಂಕ, ಅಭದ್ರತೆಯನ್ನು ಭಾರತ ಐಕ್ಯತಾ ಯಾತ್ರೆ ಮೂಡಿಸಿರಬಹುದೆಂದು ಊಹಿಸಬಹುದು ಎಂದು ವ್ಯಂಗಿಸಿದೆ.