ರಾಯಚೂರು: ಕಾಂಗ್ರೆಸ್ ಪಕ್ಷದ ಭಾರತ ಐಕ್ಯತಾ ಯಾತ್ರೆಯು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅಧಿಕಾರದ ʼಪುನರಾರಂಭʼಕ್ಕೆ ಹೊರತು ದಲಿತರರಿಗೆ, ಸಾಮಾನ್ಯ ಜನರಿಗೆ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಯಚೂರು ತಾಲೂಕಿನ ಗಿಳೇಸೂಗೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ ಅವರು, ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಹೊರೆತು ಸಾಮಾನ್ಯ ಜನರಿಗಾಗಿ ನಡೆಸುತ್ತಿರುವ ಯಾತ್ರೆಯಲ್ಲ ಎಂದು ದೂರಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆ ಕೈಜೋಡಿಸಿರುವ ಕುರಿತು ಮಾತನಾಡಿದ ಬೊಮ್ಮಾಯಿಯವರು, ಸಿದ್ದರಾಮಯ್ಯ ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ದಿನವೇ ಸಮಾಜದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಚಿಕ್ಕ ಹುಡುಗನ ಕೈಕೆಳಗೆ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ, ಇದು ಸ್ವಾಭಿಮಾನದ ಸಂಕೇತವಲ್ಲ ಎಂದು ಬೊಮ್ಮಾಯಿ ಟೀಕಿಸಿದರು.
ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದತ್ತ ಜನರು ಗಮನ ಸೆಳೆಯಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಹಾಗಾಗಿ ಇದು ರಾಹುಲ್ ಗಾಂಧಿಯವರ ‘ಪುನಾರಂಭ’ ಹೊರತು ಬೇರೇನೂ ಅಲ್ಲ ಹಾಗೆಯೇ ಈ ಯಾತ್ರೆ ಸಾಮಾನ್ಯ ಜನರು, ದಲಿತರಿಗೆ ಅಲ್ಲ ಎಂದರು.
ಇಂತಹ ಯಾತ್ರೆಗೆ ಹಿಂದುಳಿದ ವರ್ಗಗಳು, ಸಿದ್ದರಾಮಯ್ಯನವರು ಜೊತೆಯಾಗಿದ್ದು, ನಿಮ್ಮ ಸ್ಥಿತಿ ಏನಾಗಿತ್ತು ಮತ್ತು ಈಗ ನೀವು ಎಲ್ಲಿದ್ದೀರಿ? ನೀವೇ ನೋಡಿ ಎಂದು ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹೊಂದಿದ್ದ ಎಷ್ಟೋ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಗಳಿಗೆ ಬರುತ್ತಿದ್ದಾರೆ ಎಂಬ ಸೂಚನೆಗಳು ಕಂಡುಬರುತ್ತಿದ್ದು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಬೊಮ್ಮಾಯಿ ಟೀಕಿಸಿದರು.
ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಕಾಂಗ್ರೆಸ್ ಎಂದಿಗೂ ಯೋಚಿಸಲಿಲ್ಲ ಎಂದು ಆರೋಪಿಸಿದ ಬೊಮ್ಮಾಯಿಯವರು, ಪಕ್ಷಕ್ಕೆ ʼಹಿಂದುಳಿದ ಸಮುದಾಯಗಳನ್ನು ಮೇಲಕ್ಕೆತ್ತುವ ಸಾಮಾನ್ಯ ಜ್ಞಾನ ಇಲ್ಲʼ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅನೇಕ ಭಾಗ್ಯಗಳನ್ನು ಜಾರಿತರುವ ಭರವಸೆ ನೀಡಿತ್ತು, ಆದರೆ ಅವರು ನೀಡಿದ್ದು ‘ದುರ್ಭಾಗ್ಯʼ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 3 ರಿಂದ ಶೇ 7 ಕ್ಕೆ ಮೀಸಲಾತಿ ಹೆಚ್ಚಿಸಲು ಕರ್ನಾಟಕ ಸಚಿವ ಸಂಪುಟ ಶನಿವಾರ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರ ಈ ಕುರಿತು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿ ಪರಿಗಣಿಸಲಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಮತ್ತು ಉದ್ಯೋಗದ ಅರಿವಿನಿಂದ ಜನರ ಆಕಾಂಕ್ಷೆ ಹೆಚ್ಚಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
“ಎಸ್‌ಸಿ/ಎಸ್‌ಟಿ ಕೋಟಾದ ಪಾದಯಾತ್ರೆಯ ಬಗ್ಗೆ ಯಾರೂ ನಕಾರಾತ್ಮಕವಾಗಿ ಮಾತನಾಡಬಾರದು, ಏಕೆಂದರೆ ಈ ಸಮುದಾಯಗಳು ಕಳೆದ 50-60 ವರ್ಷಗಳಲ್ಲಿ ನ್ಯಾಯ ನಿರಾಕರಣೆಯಿಂದ ಸಾಕಷ್ಟು ನಷ್ಟ ಅನುಭವಿಸಿವೆ ಹಾಗಾಗಿ ಇದರ ವಿರುದ್ಧ ಮಾತನಾಡುವವರು ಎಸ್‌ಸಿ/ಎಸ್‌ಟಿ ವಿರೋಧಿಗಳು ಎಂದು ಹೇಳಿದರು.
ಹಲವಾರು ಸಮುದಾಯಗಳು, ತಮ್ಮ ಸಮುದಾಯವನ್ನು ಎಸ್‌ಸಿ ಸಮುದಾಯಗಳಿಗೆ, ಇನ್ನು ಕೆಲವರು 3ಬಿ, 2ಎ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿಸಲು ಕೋರಿದ್ದು, ಅವರ ಎಲ್ಲಾ ಬೇಡಿಕೆಗಳನ್ನು ಕಾನೂನು ಆಯೋಗಗಳ ಶಿಫಾರಸ್ಸಿನಂತೆ ಅಧ್ಯಯನ ಮಾಡಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.