Home ರಾಜ್ಯ ಚಾಮರಾಜನಗರ ಭಾರತ ಐಕ್ಯತಾ ಯಾತ್ರೆ ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆ: ಪ್ರಿಯಾಂಕ್ ಖರ್ಗೆ

ಭಾರತ ಐಕ್ಯತಾ ಯಾತ್ರೆ ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆ: ಪ್ರಿಯಾಂಕ್ ಖರ್ಗೆ

0

ಚಾಮರಾಜನಗರ: ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಸಾಗುತ್ತಿರುವ ಭಾರತ ಐಕ್ಯತಾ ಯಾತ್ರೆಯು ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆಯಾಗಲಿದೆ ಎಂದು  ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಹುಲ್ ಗಾಂಧಿ ಅವರು ಇಂದು ಎರಡು ಸಂವಾಧ ಕಾರ್ಯಕ್ರಮ ಮಾಡಿದ್ದು, ಒಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಜತೆ ನಡೆಯಿತು. ಇಲ್ಲಿ ಸದಸ್ಯರು ರಾಹುಲ್ ಗಾಂಧಿ ಅವರ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಪ್ರಮುಖ ಬೇಡಿಕೆಗಳೆಂದರೆ, ಸೋಲಿಗ ಸಮಾಜದವರು ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಶೋಷಿತ ಆದಿವಾಸಿಗಳ ಪಟ್ಟಿಯಲ್ಲಿ ಇರಬೇಕು ಎಂದು ಹಲವು ವರ್ಷಗಳ ಬೇಡಿಕೆ ಹೊಂದಿದ್ದಾರೆ. ಮೋದಿ ಸರ್ಕಾರ ಆಸ್ವಾಸನೆ ನೀಡಿದ್ದರೂ ಇದುವರೆಗೂ ಮಾಡಿಲ್ಲ, ಇದನ್ನು ಸಂಸತ್ ಅಧಿವೇಶನದಲ್ಲಿ ತರಬೇಕು. ಅರಣ್ಯ ಸಂರಕ್ಷಣಾ ಕಾಯ್ದೆ ಅಢಿಯಲ್ಲಿ ಬಿ.ಆರ್ ಹಿಲ್ಸ್, ಸೇರಿದಂತೆ ಇತರೆ ಹುಲಿಸಂರಕ್ಷಿತ ಪ್ರದೇಶಗಳಲ್ಲಿ ಸಣ್ಣ ಅರಣ್ಯ ಉತ್ಪನ್ನ ಮಾಡಲು ಅವಕಾಶ ನೀಡಲಾಗಿತ್ತು. ಬಂಡಿಪುರ ಹೊರತಾಗಿ ಬೇರೆ ಕಡೆಗಳಲ್ಲಿ ಅನುಮತಿ ನೀಡಿದ್ದು, ಅಲ್ಲಿಯೂ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಣಾ ವಲಯ ಮಾಡುವ ಪ್ರಸ್ತಾವ ನೀಡಿದ್ದು, ಇದನ್ನು ಕೈಬಿಡಬೇಕು. ಈ ಪ್ರದೇಶದಲ್ಲಿ 15-20 ಸಾವಿರ ಸೋಲಿಗ ಸಮುದಾಯದವರು ವ್ಯವಸಾಯ ಮಾಡುತ್ತಿದ್ದಾರೆ. ಅರಣ್ಯವನ್ನೆ ಅವರು ಅವಲಂಬಿಸಿದ್ದಾರೆ.ಈ ಸಮಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಕೇಳಿದಾಗ ಅದರ ಆಶ್ವಾಸನೆ ನೀಡಲಾಗಿದೆ. ಯುಪಿಎ ಸರ್ಕಾರದಲ್ಲಿ ಐಸಿಡಿಎಸ್ ಯೋಜನೆ ಮೂಲಕ ಈ ಭಾಗದ ಮಕ್ಕಳಿಗೆ ನೀಡಲಾದಗುತ್ತಿರುವ 6 ತಿಂಗಳ ಪೌಷ್ಠಿಕ ಆಹಾರವನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದು, ಈಗ ಆ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ವಿಚಾರವಾಗಿ ಹೋರಾಟ ಮಾಡುವುದಾಗಿ ತಿಳಿಸಿದೆ ಎಂದು ಹೇಳಿದರು.

 ಇನ್ನು ಜೇನು ಕುರುಬ ಸಮುದಾಯದವರು ಕಾಡಿನಿಂದ ಜೇನು ತಂದು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಎರಡನೇ ಸಂವಾದದಲ್ಲಿ ಈ ಸರ್ಕಾರದ ನಿರ್ಲಕ್ಷ್ಯ ಹಾಗೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಕುಟುಂಬ ಸದಸ್ಯರ ಜತೆ ಮಾತನಾಡಿ ಅವರ ನೋವು ಹಂಚಿಕೊಂಡರು. ಅವರು ಮೂರು ಬೇಡಿಕೆ ಇಟ್ಟಿದ್ದು, ಈ ಸರ್ಕಾರ ಇವರ ನಿರ್ಲಕ್ಷ್ಯದಿಂದ ಯಾರು ಸತ್ತಿಲ್ಲ ಎಂದು ಸತ್ಯವನ್ನು ಮರೆಮಾಚುತ್ತಿದ್ದಾರೆ. ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಕೇಳಿದ್ದು, ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಇವರ ನೆರವಿಗೆ ಬಾರದಿದ್ದಾಗ ನಮ್ಮ ಅಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ಹೋಗಿ ಅವರ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ತಮ್ಮ ಕುಟುಂಬದ ಆಧಾರಸ್ತಂಭ ಕಳೆದುಕೊಂಡಿದ್ದು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆ ಇಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕೆಲಸ ಮಾಡಲಾಗುವುದು ಎಂದು ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಸಂವಾದ ನಂತರ ಮುಂದೆ ಬುಡಕಟ್ಟು ಜನರಿಗೆ ಯಾವ ರೀತಿಯ ನೆರವು ನೀಡಬೇಕು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಮೂಲಸೌಕರ್ಯ ಕಲ್ಪಿಸಬೇಕು ಎಂಬ ವಿಚಾರ ಗಮನಕ್ಕೆ ಬಂದಿದೆ. ನಮ್ಮ ನಾಯಕರ ಪರವಾಗಿ ಈ ತಂಡಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಾನು ಯಾವುದೇ ವ್ಯಕ್ತಿಗಳ ಕುರಿತು ಮಾತನಾಡುವುದಿಲ್ಲ. ವೈಯಕ್ತಿಕ ವಿಚಾರಗಳು ಅಸಂಬದ್ಧ. ಇಲ್ಲಿ ಕೇವಲ ಭಾರತ ಐಕ್ಯತಾ ಯಾತ್ರೆಯಷ್ಟೇ ಮುಖ್ಯ. ಇದು ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆಯಾಗಿದ್ದು, ಪಕ್ಷಕ್ಕೆ ಒಂದು ರೂಪಾಂತರ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸುತ್ತದೆ. ಕಾಂಗ್ರೆಸ್ ಪಕ್ಷ ಮಾತ್ರ ಚುನಾಯಿತ ಅಧ್ಯಕ್ಷರನ್ನು ಹೊಂದಿದೆ. ಭಾರತ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಮಹತ್ವದ ಕೊಡುಗೆ ಎಂದರೆ ಅಭಿಪ್ರಾಯ ಸಂಗ್ರಹಿಸುವುದು. ನಾವು ಅಭಿಪ್ರಾಯ ಸಂಗ್ರಹಿಸುತ್ತೇವೆ. ಇದನ್ನೇ ಕಾಮರಾಜ್ ಅವರು 66ರಲ್ಲಿ ಬಳಸಿದ್ದರು. ಒಮ್ಮತ ಅಭಿಪ್ರಾಯ ಇರದಿದ್ದರೆ ಚುನಾವಣೆ ಮಾಡುತ್ತೇವೆ. ಈ ಚುನಾವಣೆಯಲ್ಲಿ ಪ್ರತಿ ಮತದಾರ ಕ್ಯೂರ್ ಕೋಡ್ ಇರುವ ಮತದಾರ ಗುರುತಿನ ಚೀಟಿ ಹೊಂದಿರುತ್ತಾನೆ. ಸುಮಾರು 9 ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಈ ಗುರುತಿನ ಚೀಟಿ ಮೂಲಕ ಮತ ಹಾಕುತ್ತಾರೆ. ಚುನಾವಣೆ ಪ್ರಜಾಪ್ರಭುತ್ಯ ವ್ಯವಸ್ಥೆ ಮಾದರಿಯಲ್ಲಿ ನಡೆಯಲಿದೆ. ಇಂದು ರಾಜ್ಯದ ನಾಯಕರು ದೆಹಲಿಯಲ್ಲಿ ಏನಾಗುತ್ತಿದೆ ಎಂಬುದಕ್ಕಿಂತ ಭಾರತ ಐಕ್ಯತಾ ಯಾತ್ರೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ ಎಂದರು.

You cannot copy content of this page

Exit mobile version