ಸರ್ವ ಜನಾಂಗದ ಶಾಂತಿಯ ತೋಟದ ಅಸ್ತಿತ್ವಕ್ಕೇ ಅಪಾಯ ಬಂದಿದೆ. ರಾಜಕೀಯ ಕಾರಣಕ್ಕಾಗಿ ಹರಡಲಾದ ದ್ವೇಷದಿಂದ ಭಾರತ ಆಳವಾಗಿ ಗಾಯಗೊಂಡಿದೆ. ಅದಕ್ಕೆ ಪ್ರೀತಿಯ ಮುಲಾಮು ಹಚ್ಚುವುದು ಇಂದಿನ ತುರ್ತು. ಭಾರತ ಐಕ್ಯತಾ ಯಾತ್ರೆ ನಿಜ ಅರ್ಥದಲ್ಲಿ ದ್ವೇಷದ ವಿರುದ್ಧ ಪ್ರೀತಿಯ ಸಂದೇಶ ರವಾನಿಸಿದೆ. ಇದೇ ಜನವರಿ ೩೦ ಕ್ಕೆ ರಾಹುಲ್ ಗಾಂಧಿಯ ಭಾರತ ಯಾತ್ರೆ ಸಂಪನ್ನ ಗೊಳ್ಳುತ್ತಿದ್ದು ಯಾತ್ರೆಯ ಪುಟ್ಟ ಅವಲೋಕನ ಇಂದಿನ ಶ್ರೀನಿ ಕಾಲಂ ನಲ್ಲಿ.
“ಆ ರಾಹುಲ್ ಗಾಂಧಿ ಇದ್ದಾನಲ್ಲ, ಅವನ ಮೈ ಇಡೀ ಡ್ರಗ್ಸ್… ಗೊತ್ತುಂಟಾ?” ರಾಹುಲ್ ಗಾಂಧಿಯ ಆಪ್ತನಾಗಿದ್ದು, ಆತನ ಖಾಸಗಿ ಬದುಕಿನ ಬಗ್ಗೆಯೂ ಎಲ್ಲ ಮಾಹಿತಿ ಇರುವ ಧಾಟಿಯಲ್ಲಿ ಮತ್ತು ಆತ್ಮವಿಶ್ವಾಸದಲ್ಲಿ ಗೆಳೆಯ ಸುಧೀರ ಹೇಳಿದ. ಈತ ಹೇಳಿಕೇಳಿ ದೀರ್ಘಕಾಲ ಎಡಪಂಥೀಯ ಸಂಘಟನೆಯೊಂದರಲ್ಲಿ ಇದ್ದವ!
“ಅದು ನಿನಗೆ ಹೇಗೆ ಗೊತ್ತು?… ರಾಹುಲ್ ಇರುವುದು ದಿಲ್ಲಿಯಲ್ಲಿ, ನೀನಿರುವುದು ಮಂಗಳೂರಿನಲ್ಲಿ… ಆತನ ವೈಯಕ್ತಿಕ ಮಾಹಿತಿ ನಿನಗೆ ಗೊತ್ತಿರುವುದು ಹೇಗೆ ಸಾಧ್ಯ ಮಾರಾಯ?…” ಎಂದು ನಗುತ್ತ ಪ್ರಶ್ನಿಸಿದೆ.
“ಅಯ್ಯೋ!… ನಿನಗೆ ಗೊತ್ತಿಲ್ವಾ?! ವಾಟ್ಸಪ್ ನಲ್ಲಿ ಅದು ಯಾವತ್ತೋ ಬಂದಿತ್ತು… ಆತ ಯಾವಾಗಲೂ ಡ್ರಗ್ಸ್ ನಲ್ಲಿಯೇ ತೇಲಾಡುತ್ತಿರುತ್ತಾನಂತೆ…” ಆತ ಉತ್ತರಿಸಿದ. ಆತನ ಮಾತಿನಲ್ಲಿ “ನಿನಗೆ ಏನೂ ಗೊತ್ತಿಲ್ಲ, ನೀನು ಪೆದ್ದ, ನಮಗೆ ಎಲ್ಲವೂ ಗೊತ್ತಿದೆ, ನಿನ್ನ ಅರಿವನ್ನು ಅಪ್ ಡೇಟ್ ಮಾಡಿಕೋ” ಎಂಬ ದಾರ್ಷ್ಟ್ಯ ಇತ್ತು.
ಹೀಗೆ ವಾಟ್ಸಪ್ ಮೂಲಕ ಜ್ಞಾನಿಗಳಾದವರು ನಮ್ಮಲ್ಲಿ ಅನೇಕರು. ‘ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರ ದಿಲ್ಲಿಯ ಪ್ರತಿಷ್ಠಿತ ಬೈಕ್ ಶೋ ರೂಮ್ ನಿಂದ ತಮಗೆ ಬೇಕಾದ ಬೈಕ್ ಸೀದಾ ಮನೆಗೆ ತೆಗೆದುಕೊಂಡು ಹೋಗುವುದಂತೆ, ಹಣ ಕೊಡುವುದಿಲ್ಲವಂತೆ ಗೊತ್ತಾ?’ ಎಂದು ಹೇಳುವುದನ್ನು ನನ್ನ ಕಿವಿಯಾರೆ ಕೇಳಿದ್ದೇನೆ. ‘ರಾಹುಲ್ ಗಾಂಧಿ ಜನ ಒಳ್ಳೆಯವನು, ಆದರೆ ಪ್ರಧಾನಿಯಾಗಲು ಯೋಗ್ಯ ಅಲ್ಲ’ ಎಂದು ಹೇಳುವುದನ್ನೂ ಕೇಳಿದ್ದೇನೆ.
ಇವರೆಲ್ಲ ಸಾಕಷ್ಟು ಓದಿದವರು, ತಿಳಿವಳಿಕಸ್ಥರು; ಮೂಲತಃ ಕೆಟ್ಟವರಲ್ಲ. ಆದರೆ ಬಿಜೆಪಿಯು ತನ್ನ ಐಟಿ ಸೆಲ್ ಮತ್ತು ಗೋದಿ ಮೀಡಿಯಾದ ನೆರವಿನೊಂದಿಗೆ ಕಳೆದ ಒಂದು ದಶಕದಿಂದ ಮಾಡಿದ ಅತ್ಯಂತ ಪರಿಣಾಮಕಾರಿ ಅಪಪ್ರಚಾರ ಅಭಿಯಾನಕ್ಕೆ ತಮಗರಿವಿಲ್ಲದೆಯೇ ಬಲಿಯಾದವರು.
ರಾಹುಲ್ ಗಾಂಧಿ ಪಪ್ಪು, ಆತ ವಿದೇಶೀ ಮೂಲದವನು, ಆತನ ಮುತ್ತಜ್ಜ ಮುಸ್ಲಿಂ, ಆತ ಅತ್ಯಾಚಾರ ಮಾಡಿದ್ದಾನೆ ಎಂದೆಲ್ಲ ಬಿಂಬಿಸಿ ಆತನ ತೇಜೋವಧೆ ಮಾಡಿ ಆತನನ್ನು ಸಾರ್ವಜನಿಕ ಕ್ಷೇತ್ರಕ್ಕೆ ನಾಲಾಯಕ್, ನಾಯಕತ್ವಕ್ಕಂತೂ ಆತ ಒಂದು ಆಯ್ಕೆ ಅಲ್ಲವೇ ಅಲ್ಲ ಎಂದು ಬಿಂಬಿಸಲು ಬಿಜೆಪಿಯು ಕೋಟಿಗಟ್ಟಲೆ ಖರ್ಚು ಮಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಗೆರೆಯೊಂದನ್ನು ದೊಡ್ಡದಾಗಿಸಲು ಅದರ ಬಳಿಯಲ್ಲಿ ಚಿಕ್ಕ ಗೆರೆಯೊಂದನ್ನು ಎಳೆಯುವ ಜಾಣ (ಕು)ತಂತ್ರದ ಭಾಗ ಇದು.
ರಾಹುಲ್ ಯಾಕೆ ಇವರೆಲ್ಲರ ಟಾರ್ಗೆಟ್?
ಯಾಕೆ ಇವರಿಗೆಲ್ಲ ರಾಹುಲ್ ಗಾಂಧಿ ಒಂದು ದೊಡ್ಡ ಟಾರ್ಗೆಟ್? ಯಾಕೆಂದರೆ ಭಯ. ಹಣ್ಣು ಇರುವ ಮರಕ್ಕೆ ಮಾತ್ರ ಕಲ್ಲು ಹೊಡೆಯುವುದಲ್ಲವೇ? ರಾಹುಲ್ ಗೆ ತನ್ನ ಆಲೋಚನೆಗಳಲ್ಲಿ ಸ್ಪಷ್ಟತೆ ಇದೆ, ಆರ್ ಎಸ್ ಎಸ್ ಮತ್ತು ಬಿಜೆಪಿಯ ವಿಭಜನಕಾರಿ ಸಿದ್ಧಾಂತದ ಅಪಾಯದ ಬಗ್ಗೆ ಆತ ದಿಟ್ಟವಾಗಿ ಮತ್ತು ನಿರಂತರ ಮಾತನಾಡುತ್ತಿದ್ದಾನೆ, ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧ ಇರದ ಮತ್ತು ‘ನಾನು ಆರ್ ಎಸ್ ಎಸ್ ಕಚೇರಿಗೆ ಹೋಗಬೇಕಾದರೆ ನೀವು ನನ್ನ ಕತ್ತು ಕತ್ತರಿಸಬೇಕು ಅಷ್ಟೇ’ ಎನ್ನುವ ರಾಹುಲ್ ಭವಿಷ್ಯದಲ್ಲಿ ತಮಗೊಂದು ಬೆದರಿಕೆ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿ ಬಿಡಬೇಕು. ಆತನ ಬಗ್ಗೆ ಅಪಪ್ರಚಾರ ಮಾಡಿ ಸಾರ್ವಜನಿಕರ ಮನಸಿನಲ್ಲಿ ಆತ ಒಬ್ಬ ‘ವ್ಯರ್ಥ’ ಎಂಬ ಭಾವನೆ ಬರುವಂತೆ ಮಾಡಬೇಕು, ಆಗ ಆತನನ್ನು ಜನ ತಿರಸ್ಕರಿಸುತ್ತಾರೆ. ಇದು ತಂತ್ರ.
ಆದರೆ ಕುಟುಂಬದೊಳಗಿನ ದುರಂತ, ಕೊಲೆ, ವಿರೋಧಿಗಳಿಂದ ವ್ಯವಸ್ಥಿತ ದ್ವೇಷ, ನಿಂದನೆ, ಚಾರಿತ್ರ್ಯಹರಣ, ಸಾಲು ಸಾಲು ಚುನಾವಣಾ ಸೋಲು ಯಾವುದರಿಂದಲೂ ರಾಹುಲ್ ವಿಚಲಿತನಾಗಿಲ್ಲ. ಶಾಂತಿ, ಪ್ರೀತಿ, ಬಹುತ್ವ ಮತ್ತು ಸೌಹಾರ್ದ ಭಾರತದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ. ಸಂಸತ್ ನ ಒಳಗಡೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಗಿ ಬಿಗಿದಪ್ಪಿದ ಪ್ರೇಮಮಯಿ ಮನುಷ್ಯ ಈತ.
ಬೇರೆ ಯಾರೋ ಆಗಿದ್ದರೆ ಈ ಪರಿಯ ಅಪಪ್ರಚಾರ ಬಿಡಿ, ಇದರ ಒಂದು ಸಣ್ಣ ಭಾಗದಷ್ಟು ದಾಳಿಯನ್ನು ಸಹಿಸಿಕೊಂಡು ಬದುಕುಳಿಯುತ್ತಿದ್ದರೋ ಇಲ್ಲವೋ ಹೇಳುವುದು ಕಷ್ಟ. ಆದರೆ ರಾಹುಲ್ ಈ ಎಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಿದ್ದಾನೆ. ‘ನಕಾರಾತ್ಮಕ ಪ್ರಚಾರದಿಂದ ನನಗೆ ಲಾಭವಿದೆ, ನಾವು ಸರಿಯಾದ ಮಾರ್ಗದಲ್ಲಿ ಸಾಗಲು ಅದರಿಂದ ಅನುಕೂಲವಾಗುತ್ತದೆ’ ಎಂದೇ ಆತ ಹೇಳುತ್ತಾನೆ. ನಾಯಿಗಳು ಬೊಗಳುವಾಗ ಅಂಜದೆ ಅಳುಕದೆ ಬೀದಿಯಲ್ಲಿ ಗಾಂಭೀರ್ಯದಿಂದ ನಡೆದು ಹೋಗುವ ಆನೆಯಂತೆ ರಾಹುಲ್ ತನ್ನ ಕೆಲಸ ಮಾಡುತ್ತಲೇ ಇದ್ದಾನೆ.
ಅಂಗರಕ್ಷಕರ ಗುಂಡಿನ ಸುರಿಮಳೆಗೆ ದಾರುಣವಾಗಿ ಬಲಿಯಾದ ತನ್ನ ಪ್ರೀತಿಯ ಅಜ್ಜಿ ಇಂದಿರಾಗಾಂಧಿಯ ರಕ್ತಸಿಕ್ತ ದೇಹವನ್ನು, ಮಾನವ ಬಾಂಬ್ ನಿಂದ ಸಿಡಿದು ಚೂರು ಚೂರಾದ ತನ್ನ ಪ್ರೀತಿಯ ತಂದೆ ರಾಜೀವ್ ಗಾಂಧಿಯ ಮೃತ ದೇಹವನ್ನು, ಆಕಾಶದಿಂದ ವಿಮಾನದೊಂದಿಗೆ ಉದುರಿದ ತನ್ನ ಚಿಕ್ಕಪ್ಪ ಸಂಜಯ್ ಗಾಂಧಿಯ ಪುಡಿಪುಡಿಯಾದ ಶರೀರ ಕಂಡವನು ರಾಹುಲ್. ಬಾಲ್ಯದ ತುಂಬಾ ಆತ ಕಂಡುದು ಇಂಥ ಸಾವು ನೋವುಗಳನ್ನೇ. ವಿರೋಧಿಗಳಿಂದ ತನ್ನ ತಾಯಿ, ಸಹೋದರಿಯ ನಿರಂತರ ಚಾರಿತ್ರ್ಯ ಹರಣ ನೋಡುತ್ತ ಬಂದವನು ರಾಹುಲ್. ಇಂತಹ ವ್ಯಕ್ತಿ ದ್ವೇಷ ಪ್ರತೀಕಾರದ ಬಗ್ಗೆ ಮಾತನಾಡದೆ ಶಾಂತಿ ಮತ್ತು ಪ್ರೀತಿಯ ಬಗ್ಗೆ ಅದು ಹೇಗೆ ಮಾತನಾಡುತ್ತಾನೆ? ತನ್ನ ತಂದೆಯನ್ನು ಕೊಂದವರ ಬಗ್ಗೆ ನನಗೆ ಸಿಟ್ಟಿಲ್ಲ, ದ್ವೇಷವಿಲ್ಲ, ಅವರನ್ನು ನಾನು ಕ್ಷಮಿಸಿದ್ದೇನೆ, ಅವರನ್ನು ಜೈಲಿನಿಂದ ಬಿಟ್ಟುಬಿಡಿ ಎಂದು ಆತ ಹೇಗೆ ಹೇಳುತ್ತಾನೆ? ಅಥವಾ ಇಂತಹ ದುರಂತ ದೃಶ್ಯಗಳೇ ಅತನಲ್ಲಿ ಈ ತೆರನ ಮಾನವೀಯ ಸಂವೇದನೆಯನ್ನು ಜಾಗೃತಗೊಳಿಸಿತೇ?
ಭಾರತ ಐಕ್ಯತಾ ಯಾತ್ರೆ
ರಾಹುಲ್ ಒಬ್ಬ ನಾಲಾಯಕ್ ರಾಜಕಾರಣಿ ಎಂದು ಎಂದಿನಂತೆ ಬಿಜೆಪಿಯ ಐಟಿ ಸೆಲ್ಲು, ಅದರ ಲಕ್ಷೋಪ ಲಕ್ಷ ಉರಿ ನಾಲಗೆಗಳು, ಸಾಲದೆಂಬಂತೆ ಮಾರಿಕೊಂಡ ಮಾಧ‍್ಯಮಗಳು, ಸರಕಾರದ ಪದತಲದಲ್ಲಿ ತಮ್ಮ ಮಿದುಳನ್ನು ಇರಿಸಿರುವ ಅದರ ಪತ್ರಕರ್ತರು ರಾಹುಲ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಂತೆಯೇ 2022 ರ ಒಂದು ದಿನ ರಾಹುಲ್, ಐದು ತಿಂಗಳ ಕಾಲದ, ಕನ್ಯಾಕುಮಾರಿಯಿಂದ ಕಾಶ್ಮೀರವರೆಗಿನ ಮೂರೂವರೆ ಸಾವಿರ ಕಿಲೋಮೀಟರ್ ನಡಿಗೆಯ ತಮ್ಮ ‘ಭಾರತ ಐಕ್ಯತಾ ಯಾತ್ರೆ’ ಘೋಷಿಸುತ್ತಾರೆ.
ಮತ್ತೆ ಎಂದಿನಂತೆ ಇದರ ಬಗ್ಗೆ ಕುಹಕದ ಮಾತುಗಳು ಕೇಳಿಬರುತ್ತವೆ. ‘ಇದೆಲ್ಲ ಆಗಲಿಕ್ಕೆ ಹೋಗಲಿಕ್ಕೆ ಉಂಟಾ, ನಾಲ್ಕು ದಿನಗಳಿಗೆ ಒಮ್ಮೆ ವಿದೇಶಕ್ಕೆ ಹೋಗುವ ರಾಹುಲ್ ಐದು ತಿಂಗಳ ಕಾಲ ಒಂದು ಕಾರ್ಯಕ್ರಮದಲ್ಲಿ ನಿರಂತರ ತೊಡಗಲಿಕ್ಕೆ ಉಂಟಾ’ ಎಂಬೆಲ್ಲ ವ್ಯಂಗ್ಯದ ಬಾಣಗಳು ತೂರಿ ಬರುತ್ತವೆ. ಇವರಿಗೆ ಮಾತಿನಲ್ಲಿ ಉತ್ತರ ನೀಡುವುದಿಲ್ಲ; ಕೃತಿಯ ಮೂಲಕ ನೀಡುತ್ತಾರೆ ರಾಹುಲ್. ಪ್ರೀತಿಯನ್ನು ಹಂಚುವ, ಶಾಂತಿಯನ್ನು ನೆಲೆಯೂರಿಸುವ, ಐಕ್ಯತೆಯನ್ನು ಗಟ್ಟಿಗೊಳಿಸುವ, ಎಲ್ಲರನ್ನೂ ಒಟ್ಟಿಗೆ ಒಯ್ಯುವ ‘ಒಳಗೊಳಿಸುವ’ ಭಾರತವನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಭಾರತ ಐಕ್ಯತಾ ಯಾತ್ರೆ 2022 ರ ಸೆಪ್ಟಂಬರ್ 7 ರಂದು ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಶುರುವಾಗಿಯೇ ಬಿಡುತ್ತದೆ. ಈಗ 2023 ರ ಜನವರಿ ಕೊನೆಯ ದಿನಗಳು. ಸರಿಸುಮಾರು 3,500 ಕಿಲೋಮೀಟರ್ ಗಳ ಯಾತ್ರೆ ಇನ್ನೇನು ಮುಗಿಯಲಿದೆ. ಜನವರಿ 30 ರಂದು ಉತ್ತರದ ತುದಿ ಶ್ರೀನಗರದಲ್ಲಿ ತ್ರಿವರ್ಣ ಧ‍್ವಜಾರೋಹಣದೊಂದಿಗೆ ಯಾತ್ರೆಯ ಸಮಾರೋಪ ನಡೆಯಲಿದೆ.
ಅಡಚಣೆಯ ಯತ್ನಗಳು
ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಹೊರತು ಪಡಿಸಿದರೆ ರಾಹುಲ್ ನೇತೃತ್ವದ ಯಾತ್ರೆ ಸಾಗಿದ ಬಹುತೇಕ ರಾಜ್ಯಗಳು ಕಾಂಗ್ರೆಸೇತರ ಪಕ್ಷಗಳ ಸರಕಾರವನ್ನು ಹೊಂದಿರುವ ರಾಜ್ಯಗಳು. ಅವುಗಳಲ್ಲಿ ಅನೇಕ ರಾಜ್ಯಗಳ ಸರಕಾರಗಳು ಮತ್ತು ಅದನ್ನು ಬೆಂಬಲಿಸುವವರು ತಮ್ಮದೇ ಆದ ರೀತಿಯಲ್ಲಿ ಯಾತ್ರೆಗೆ ಅಡಚಣೆ ಮಾಡಲು ಇನ್ನಿಲ್ಲದ ಯತ್ನ ನಡೆಸಿದರು. ಕೇರಳದ ಎಡಪಕ್ಷದ ಬೆಂಬಲಿಗರು ‘ರಾಹುಲ್ ಕೇರಳದಲ್ಲಿ ಯಾಕೆ ಅಷ್ಟು ದಿನ ನಡೆಯಬೇಕು’ ಎಂದು ಪ್ರಶ್ನಿಸಿದರೆ, ಕರ್ನಾಟಕದಲ್ಲಿ ಯಾತ್ರೆಯ ಹಾದಿಯಲ್ಲಿ ಸಾವರ್ಕರ್ ಬ್ಯಾನರ್ ಹಾಕಿ ಅವಮಾನಿಸುವ ಯತ್ನ ನಡೆಯಿತು. ಮಹಾರಾಷ್ಟ್ರದಲ್ಲಿ ಸಾವರ್ಕರ್ ವಿಷಯ ಎತ್ತಿಕೊಂಡು ಅವರ ಮೇಲೆ ಮಾತಿನ ದಾಳಿ ನಡೆಯಿತು. ಆಂಧ್ರದಲ್ಲಿ ಪೊಲೀಸರನ್ನು ಬಳಸಿಕೊಂಡು ಅಲ್ಲಿನ ಸರಕಾರ ಯಾತ್ರೆಗೆ ಜನ ಹೋಗದಂತೆ ತಡೆಯಲು ಯತ್ನಿಸಿತು. ಮಧ್ಯಪ್ರದೇಶದಲ್ಲಿ ರಾಹುಲ್ ಯಾತ್ರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂದು ಅಪಪ್ರಚಾರ ಮಾಡಲಾಯಿತು. ದೆಹಲಿ ತಲಪಿದಾಗ ಮತ್ತೆ ಕೋವಿಡ್ ಬಂದಿದೆ ಎಂಬ ಸುಳ್ಳು ಪ್ರಚಾರದ ಮೂಲಕ ಯಾತ್ರೆ ನಿಲ್ಲಿಸುವ ಯತ್ನ ಮಾಡಲಾಯಿತು. ಸರಕಾರದ ಮಂತ್ರಿಯೇ ಈ ಬಗ್ಗೆ ರಾಹುಲ್ ಗಾಂಧಿಗೆ ಪತ್ರ ಬರೆದರು.
ಯಾತ್ರೆ ತಮಿಳುನಾಡಿನಿಂದ ಹೊರಟ ಸೆಪ್ಟಂಬರ್ ತಿಂಗಳು ಎಂದರೆ ದಕ್ಷಿಣದಲ್ಲಿ ಮಳೆಗಾಲ ಇನ್ನೂ ಪೂರ್ತಿ ಮುಗಿದಿರದ ದಿನಗಳು. ಕೇರಳ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಮಳೆಯ ನಡುವೆ ಯಾತ್ರೆ ನಡೆಯ ಬೇಕಾಯಿತು. ಉತ್ತರಕ್ಕೆ ಚಲಿಸುತ್ತಿದ್ದಂತೆ ಡಿಸೆಂಬರ್ ತಿಂಗಳಾದುದರಿಂದ ಚಳಿ ಆರಂಭವಾಯಿತು. ಕೆಲವೊಮ್ಮೆ ತಾಪಮಾನ ಸೊನ್ನೆ ಡಿಗ್ರಿ ಸೆಲ್ಶೀಯಸ್. ಆದರೆ ರಾಹುಲ್ ಒಂದು ಟಿ ಶರ್ಟ್ ನೊಂದಿಗೆ ಅದನ್ನೆಲ್ಲ ಎದುರಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದರು. ಜಮ್ಮು ಕಾಶ್ಮೀರದಲ್ಲಿ ಜನವರಿ ತಿಂಗಳ ಉತ್ತರಭಾಗ ಎಂದರೆ ಹೇಗಿರಬಹುದು ನೀವೇ ಊಹಿಸಿ.
ಪ್ರೀತಿಯ ಸಿಂಚನ
ಬದಲಾವಣೆ ಕ್ಷಿಪ್ರವಾಗಿ ಸಂಭವಿಸಿತು. ಈ ಯಾತ್ರೆ ಯಾತಕ್ಕಾಗಿ ಎಂದು ಕಟಕಿಯಾಡಿದವರು ‘ನಾವು ಯಾತ್ರೆಯನ್ನು ಎಲ್ಲಿ ಸೇರಿಕೊಳ್ಳಬಹುದು’ ಎಂದು ಕೇಳಲಾರಂಭಿಸಿದರು. ಯಾತ್ರೆಯ ಹಾದಿಯ ಇಕ್ಕೆಲದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆದು ಜನರು ಶುಭ ಹಾರೈಸಿದರು. ಮಕ್ಕಳು, ಮಹಿಳೆಯರು, ವೃದ್ಧರು, ಬಡವರು, ಧನಿಕರು, ವಿದ್ಯಾರ್ಥಿಗಳು, ಕಾರ್ಮಿಕರು, ಹೋರಾಟಗಾರರು, ಕ್ರೀಡಾಳುಗಳು, ಅಂಗವಿಕಲರು, ನಿವೃತ್ತ ಸೇನಾಧಿಕಾರಿಗಳು, ಇತಿಹಾಸಕಾರರು, ವಿಪಕ್ಷ ನಾಯಕರು, ಸಿನಿಮಾ ತಾರೆಯರು ಹೀಗೆ ಅಬಾಲವೃದ್ಧರಾಗಿ ಎಲ್ಲರೂ ರಾಹುಲ್ ಕೈ ಹಿಡಿದು ಹೆಜ್ಜೆ ಹಾಕಿದರು. ಬಳಿಗೆ ಬಂದವರನ್ನೆಲ್ಲ ಬಿಗಿದಪ್ಪಿ ಅವರಿಗೆ ಪ್ರೀತಿ ಮತ್ತು ಭದ್ರತೆಯ ಬೆಚ್ಚನೆಯ ಭಾವ ನೀಡಿದರು ರಾಹುಲ್. ದಾರಿಯಲ್ಲಿ ‘ಜೈ ಮೋದಿ, ಜೈ ಬಿಜೆಪಿ’ ಎಂದವರಿಗೂ ಫ್ಲೈಯಿಂಗ್ ಕಿಸ್ ಕಳಿಸುತ್ತ ನಿಜ ಅರ್ಥದಲ್ಲಿ ದ್ವೇಷದ ವಿರುದ್ಧ ಪ್ರೀತಿಯ, ಆಕ್ರೋಶದ ವಿರುದ್ಧ ತಾಳ್ಮೆಯ ಸಂದೇಶ ರವಾನಿಸಿದರು.
ಯಾತ್ರೆಯಿಂದ ಏನು ಲಾಭ?
ಯಾತ್ರೆಯ ಹಾದಿಯಲ್ಲಿ ಕುಶಲ ಕರ್ಮಿಗಳನ್ನು, ರೈತರನ್ನು ಭೇಟಿಯಾದರು ರಾಹುಲ್. ಬದನವಾಳುವಿನಂತ ಖಾದಿ ತಯಾರಿಕಾ ಸಂಘಗಳಿಗೆ, ಬಳ್ಳಾರಿಯ ಜೀನ್ಸ್ ಉತ್ಪಾದನಾ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಸಂಕಷ್ಟ ಅರಿಯುವ ಪ್ರಯತ್ನ ಮಾಡಿದರು. ನಿರುದ್ಯೋಗಿ ವಿದ್ಯಾವಂತರ ಅಳಲು ಆಲಿಸಿದರು. ಸಾರ್ವಜನಿಕ ಸಭೆಗಳನ್ನು, ಮುಖಾಮುಖಿ ಸಭೆಗಳನ್ನು ನಡೆಸಿ ಶಾಂತಿ ಸೌಹಾರ್ದದ ಅಗತ್ಯವನ್ನು ಒತ್ತಿ ಹೇಳಿದರು. ಸಮಾಜದ ನಾನಾ ವಲಯಗಳ ಜನರೊಂದಿಗೆ ಸಂವಾದ ನಡೆಸಿದರು. ಪತ್ರಿಕಾಗೋಷ್ಠಿಗಳನ್ನು ನಡೆಸಿ ಪತ್ರಕರ್ತರ ಎಲ್ಲ ತೆರನ ಪ್ರಶ್ನೆಗಳನ್ನು ನಗುಮೊಗದಿಂದಲೇ ಉತ್ತರಿಸಿದರು.
ಇಂತಹ ಯಾತ್ರೆಯಿಂದ ಏನು ಲಾಭ? ಇದರಿಂದ ಚುನಾವಣೆಯಲ್ಲಿ ಓಟು ಸಿಗುತ್ತದೆಯೇ ಎಂದು ಕೇಳುವವರಿದ್ದಾರೆ. ಆದರೆ ಒಂದು ವಿಷಯ ಗಮನಿಸಬೇಕು. ಅಧಿಕಾರ ಗಳಿಸುವುದು, ಸರಕಾರ ರಚಿಸುವುದು ಮುಖ್ಯವಲ್ಲ. ಚುನಾವಣೆ ಬರುತ್ತದೆ ಹೋಗುತ್ತದೆ, ಹಾಗೆಯೇ ಅಧಿಕಾರವೂ. ಆದರೆ ದೇಶ ಉಳಿಯುವುದು ಮುಖ್ಯ. ದೇಶದಲ್ಲಿ ಶಾಂತಿ, ನೆಮ್ಮದಿ, ಜನರ ನಡುವೆ ಸೌಹಾರ್ದ ಇರುವುದು ಮುಖ್ಯ. ಅದು ಇದ್ದಾಗ ಮಾತ್ರ ಪ್ರಗತಿ ಸಾಧ್ಯ. ಸರ್ವ ಜನಾಂಗದ ಶಾಂತಿಯ ತೋಟದ ಅಸ್ತಿತ್ವಕ್ಕೇ ಅಪಾಯ ಬಂದಿದೆ. ರಾಜಕೀಯ ಕಾರಣಕ್ಕಾಗಿ ಹರಡಲಾದ ದ್ವೇಷದಿಂದ ಭಾರತ ಆಳವಾಗಿ ಗಾಯಗೊಂಡಿದೆ. ಅದಕ್ಕೆ ಪ್ರೀತಿಯ ಮುಲಾಮು ಹಚ್ಚುವುದು ಇಂದಿನ ತುರ್ತು.
ದೇಶವನ್ನು ಅರಿಯುವ ಬೇರೆ ಬೇರೆ ಭಾಷೆ, ಸಂಸ್ಕೃತಿಯ ಜನರೊಡನೆ ಒಡನಾಡುವುದು ಅತ್ಯಗತ್ಯ. ಪರಸ್ಪರರನ್ನು ಅರಿತಾಗ ಪರಸ್ಪರರನ್ನು ಪ್ರೀತಿಸಲೂ ಸಾಧ್ಯವಾಗುತ್ತದೆ. ಅಧಿಕಾರ ನಡೆಸುವವರೂ ಜನಸಾಮಾನ್ಯರನ್ನು ಭೇಟಿಯಾಗಿ ಅವರ ಅಳಲನ್ನು ಆಲಿಸಿದಾಗ ಸಮಾಜದ ಕಟ್ಟಕಡೆಯ ಮನುಷ್ಯನನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುವುದು ಸಾಧ‍್ಯವಾಗುತ್ತದೆ.
ರಾಹುಲ್ ಜತೆ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಹೆಜ್ಜೆ ಹಾಕಿದವರಲ್ಲಿ ಭಾರತದ ಪ್ರತಿಯೊಂದು ಮೂಲೆಯಿಂದ ಬಂದ ಉತ್ಸಾಹಿಗಳಿದ್ದರು. ಅವರಿಗೆಲ್ಲ ಭಾರತದ ಬಹುಭಾಗವನ್ನು ನಡೆದೇ ಅರಿಯುವ ಒಂದು ಸುವರ್ಣಾವಕಾಶ ಇದು. ಜನರಿಗೂ ಅವರನ್ನೆಲ್ಲ ಹತ್ತಿರದಿಂದ ನೋಡುವ, ಅವರೊಡನೆ ಮಾತನಾಡುವ ಒಂದು ಸುಂದರ ಅವಕಾಶ.
ನಾಯಕನೊಬ್ಬ ಹೇಗಿರಬೇಕು?
ರಾಹುಲ್ ಗಾಂಧಿ ಈ ದೇಶದ ನಾಯಕತ್ವ ವಹಿಸಲು ಯೋಗ್ಯ ಅಲ್ಲ ಎಂದು ಹೇಳುವವರಿದ್ದಾರೆ. ಈ ಬಗ್ಗೆ ಅನೇಕ ಅಭಿಪ್ರಾಯಗಳು ಇರಬಹುದು. ಆದರೆ ಈ ಯೋಗ್ಯತೆ ಎಂದರೆ ಏನು? ದೇಶದ ನಾಯಕತ್ವವನ್ನು ಯಾರೇ ಒಬ್ಬರು ವಹಿಸುವುದಲ್ಲ. ಅಲ್ಲೊಂದು ಸರಕಾರವಿರುತ್ತದೆ, ಕ್ಯಾಬಿನೆಟ್ ಇರುತ್ತದೆ, ಅಲ್ಲದೆ ಸಲಹೆ ನೀಡುವುದಕ್ಕೆ ಆಯಾ ಕ್ಷೇತ್ರದ ಪರಿಣತರು ಮತ್ತು ಅನುಭವಿಗಳು ಇರುತ್ತಾರೆ. ದೇಶದ ಬಗೆಗಿನ ತೀರ್ಮಾನಗಳನ್ನು ತಂಡವಾಗಿ ತೆಗೆದು ಕೊಳ್ಳಲಾಗುತ್ತದೆ. ಈ ಅರ್ಥದಲ್ಲಿ ದೇಶದ 140 ಕೋಟಿ ಜನರೂ ಯೋಗ್ಯರೇ ಆಗಿರುತ್ತಾರೆ.
ಒಬ್ಬ ನಾಯಕನಲ್ಲಿರಬೇಕಾದ ಮುಖ್ಯ ಗುಣವೇನು? ಆಕೆಗೆ/ ಆತನಿಗೆ ಬೇಕಿರುವುದು ದೊಡ್ಡ ತಲೆಯಲ್ಲ, ದೊಡ್ಡದೊಂದು ಹೃದಯ. ಸೋನಿಯಾ ಗಾಂಧಿ ಬಹಳ ಬುದ್ಧಿವಂತೆ ಆಗಿರದಿರಬಹುದು. ಆದರೆ ಅವರಲ್ಲೊಂದು ತಾಯಿ ಹೃದಯ ಇತ್ತು. ಅದಕ್ಕೆ ಬಡವರ ಮತ್ತು ದುರ್ಬಲರ ಕಷ್ಟಗಳ ಅರಿವಿತ್ತು, ಅವರ ಬಗ್ಗೆ ಅನುಕಂಪವಿತ್ತು. ಎಂದೇ ಅವರ ಕಾರಣವಾಗಿ ಬಡವರಿಗೆ ಅನುಕೂಲವಾಗುವ ನರೇಗಾ ಮತ್ತು ಆಹಾರ ಭದ್ರತಾ ಕಾಯಿದೆ ಬರುವುದು ಸಾಧ್ಯವಾಯಿತು.
ನಾಯಕ ಎನಿಸಿಕೊಂಡವನಲ್ಲಿ ಮುಖ್ಯವಾಗಿ ‘ಎನಗಿಂತ ಕಿರಿಯರಿಲ್ಲ’ ಎಂಬ ವಿನಯ ಇರಬೇಕು, ತನ್ನ ಅರಿವಿನ ಮಿತಿ ಗೊತ್ತಿದ್ದು ಸದಾ ಕಲಿಯುವ ಅಭ್ಯಾಸವಿರಬೇಕು. ‘ನಿನ್ನನ್ನು ಮುನ್ನಡೆಸಲಾರೆ, ನಿನ್ನನ್ನು ಹಿಂಬಾಲಿಸಲೂ ಆರೆ, ಬಾ ಜತೆಯಾಗಿ ನಡೆಯೋಣ’ ಎಂಬ ಸಮಾನತಾ ಭಾವ ಇರಬೇಕು. ಸ್ವಮೋಹದಿಂದ ದೂರ ನಿಂತು ಸರಳತೆಯನ್ನು ಮೈಗೂಡಿಸಿಕೊಂಡಿರಬೇಕು. ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಜನತಂತ್ರವಾದಿ ಮನಸಿರಬೇಕು. ಏಕಮುಖವಾಗಿ ಭಾಷಣ ಮಾಡುವ ಬದಲು ತಾಳ್ಮೆಯಿಂದ ಆಲಿಸುವ ಗುಣವಿರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಬಡವರ, ದುರ್ಬಲರ ಬಗ್ಗೆ ಸಹಾನುಭೂತಿ ಇರಬೇಕು.
ರಾಹುಲ್ ಗಾಂಧಿ ಮುಂದೆ ಏನಾಗುತ್ತಾನೋ, ದೇಶದ ನಾಯಕತ್ವ ವಹಿಸುತ್ತಾನೋ ಇಲ್ಲವೋ ಕಾಲವೇ ಹೇಳಬೇಕು. ಆದರೆ ಇಲ್ಲಿ ಹೇಳಿದ ಬಹುತೇಕ ಮಾನವೀಯ ಗುಣಗಳು ಆತನಲ್ಲಿವೆ. ನಿಸ್ಸಂಶಯವಾಗಿಯೂ ಆತ ಒಬ್ಬ ಒಳ್ಳೆಯ ಮನುಷ್ಯ ಮತ್ತು ಈ ಗುಣಗಳ ಕಾರಣವಾಗಿಯೇ ಈಗಣ ಕ್ಷುದ್ರ ರಾಜಕಾರಣದಲ್ಲಿ ಆತ ಸಲ್ಲದಂತೆ ಕಾಣುವ ಮನುಷ್ಯ ಕೂಡಾ
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.