ನಾಳೆ (ನ.10) ಅಡಿಲೇಡ್ ನ ಓವಲ್ ಮೈದಾನದಲ್ಲಿ ಟಿ೨೦ ವಿಶ್ವಕಪ್ 2022 ಸೆಮಿಫೈನಲ್ ನಡೆಯಲಿದೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್, ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನ್ ಸೂರ್ಯಕುಮಾರ್ ಯಾದವ್ ಆಟಕ್ಕೆ ಮನ ಸೋಲದವರಿಲ್ಲ. ಸೂರ್ಯ ಮತ್ತಷ್ಟು ಮಗದಷ್ಟು ಮಿಂಚಿ ಬೆಳಕಾಗಲಿ ಎಂಬ ಹಾರೈಕೆ ಹಿರಿಯ ಪತ್ರಕರ್ತ ದಿನೇಶ್ ಕುಮಾರ್ ಎಸ್ ಸಿ ಅವರದು.
“ಆತ ಎಲ್ಲಿ ಹೊಡೆಯುತ್ತಾನೆ ಎಂಬುದು ಬೌಲರ್ ಗೆ ಗೊತ್ತಿರುತ್ತದೆ. ಆತ ಎಲ್ಲಿ ಹೊಡೆಯುತ್ತಾನೆ ಎಂಬುದು ಫೀಲ್ಡರ್ ಗಳಿಗೂ ಗೊತ್ತಿರುತ್ತದೆ. ಆತ ಎಲ್ಲಿ ಹೊಡೆಯುತ್ತಾನೆ ಎಂಬುದು ಪ್ರೇಕ್ಷಕರಿಗೂ, ಅಂಪೈರ್ ಗೂ ಗೊತ್ತಿರುತ್ತದೆ. ಇಷ್ಟೆಲ್ಲ ಆದ ಮೇಲೂ ಆತ ಅಲ್ಲೇ ಹೊಡೆದು ಸಿಕ್ಸರ್, ಬೌಂಡರಿ ಹೊಡೆಯುತ್ತಾನೆ…”
ಇದು ಭಾರತ ಕ್ರಿಕೆಟ್ ತಂಡದ ಹೊಸ ಸೆನ್ಸೇಷನ್ ಸೂರ್ಯ ಕುಮಾರ್ ಯಾದವ್ ಬಗ್ಗೆ ಟ್ವಿಟರ್ ನಲ್ಲಿ ಕಂಡ ಮಾತುಗಳು.
ಸೂರ್ಯನನ್ನು ಈಗೀಗ ಸ್ಕೈ ಎಂದು ಕರೆಯುತ್ತಾರೆ. ಸ್ಕೈ ಎಂದರೆ ಸೂರ್ಯ ಕುಮಾರ್ ಯಾದವ್ ಎಂಬ ಮೂರು ಪದಗಳ ಮೊದಲ ಅಕ್ಷರಗಳು. ಸ್ಕೈ ಈಸ್ ದಿ ಲಿಮಿಟ್ ಎಂದು ಸೂರ್ಯನ ಪ್ರಚಂಡ ಪ್ರದರ್ಶನವನ್ನು ಕರೆಯಲಾಗುತ್ತದೆ. ಮಿಸ್ಟರ್ 360 ಡಿಗ್ರಿ ಎಂಬುದೂ ಈತನಿಗೆ ಒಲಿದು ಬಂದ ಬಿರುದು.
ನಿಮಗೆ ದಕ್ಷಿಣ ಆಫ್ರಿಕಾದ ಅದ್ಭುತ ಆಟಗಾರ ಎಬಿ ಡಿವಿಲಿಯರ್ಸ್ ಗೊತ್ತು. ಕ್ರೀಡಾಂಗಣದ ಎಲ್ಲ ದಿಕ್ಕುಗಳಲ್ಲೂ ರನ್ ಹೊಳೆ ಹರಿಸಬಲ್ಲ ಆಟಗಾರ ಎಬಿಡಿ. ಈಗ ಅದೇ ರೀತಿ ಆಡುವ ಆಟಗಾರನಾಗಿ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಬೆರಗು ಮೂಡಿಸುತ್ತಿರುವ ಹುಡುಗ ಸೂರ್ಯ ಕುಮಾರ್ ಯಾದವ್.
ಸೂರ್ಯ ತನ್ನ ಬ್ಯಾಟಿಗೆ ಮಾತು ಕಲಿಸಿಬಿಟ್ಟಿದ್ದಾನೆ. ಒಮ್ಮೊಮ್ಮೆ ಅನಿಸುತ್ತದೆ, ಸೂರ್ಯನ ಬ್ಯಾಟಿಗೂ ಕಣ್ಣು, ಕಿವಿ ಇರಬಹುದಾ ಎಂದು. ಸ್ಕೂಪ್ ಶಾಟ್ ಹೊಡೆಯುವುದರಲ್ಲಿ ಸೂರ್ಯ ರುಸ್ತುಮ. ಚೆಂಡು ಎಲ್ಲಿ ಎಸೆಯುತ್ತೀರೋ ಎಸೆಯಿರಿ, ನಾನು ಸ್ಕೂಪ್ ಶಾಟ್ ಹೊಡೆಯುತ್ತೇನೆ ಎನ್ನುತ್ತಾನೆ ಆತ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಫ್ ಸ್ಟಂಪ್ ನಿಂದ ಆಚೆ ಹೆಚ್ಚು ಕಡಿಮೆ ವೈಡ್ ಆಗುತ್ತಿದ್ದ ಚೆಂಡನ್ನು ಒಂದು ಹೆಜ್ಜೆ ಮುಂದೆ ಚಾಚಿ ಎತ್ತಿ ಲೆಗ್ ಸೈಡ್ ನಲ್ಲಿ ಸಿಕ್ಸರ್ ಸಿಡಿಸಿಬಿಟ್ಟ ಸೂರ್ಯ. ಕಮೆಂಟರಿ ಮಾಡುತ್ತಿದ್ದ ಹಿರಿಯ ಆಟಗಾರರು ಬೆರಗಾಗಿ ಹೋದರು. ಇದು ಅಸಾಧ್ಯವಾದ ಶಾಟ್. ಆತ ಹೇಗೆ ಹೊಡೆದನೆಂಬುದೇ ಅರ್ಥವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡರು. ಜಿಂಬಾಬ್ವೆಯ ಬೌಲರ್ ನಾನು ಎಸೆದಿದ್ದೆಲ್ಲಿ, ನೀನು ಹೊಡೆದಿದ್ದೆಲ್ಲಿ ಎಂಬ ಆಶ್ಚರ್ಯದಿಂದಲೇ ನೋಡುತ್ತಿದ್ದ.
ಸೂರ್ಯ ಹಾಗೆನೇ. ಆತನ ಆಟವೂ ಹಾಗೆಯೇ. ಒಂದೇ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್ ಮಾದರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಆಡುತ್ತಿದ್ದಾನೆ ಸೂರ್ಯ. ಜಾಗತಿಕ ಕ್ರಿಕೆಟ್ ನಲ್ಲಿ ಸದ್ಯಕ್ಕೆ ಈ ಸಾಧನೆ ಮಾಡಿರುವುದು ಪಾಕಿಸ್ತಾನದ ರಿಜ್ವಾನ್ ಮಾತ್ರ. ಒಂದೇ ವರ್ಷ ಒಂದು ಸಾವಿರ ರನ್ ದಾಟಿದ ವಿಶ್ವದ ಎರಡನೇ ಆಟಗಾರ ಮತ್ತು ಭಾರತದ ಮೊದಲನೇ ಆಟಗಾರ ಸೂರ್ಯ ಕುಮಾರ್ ಯಾದವ್.
ಸೂರ್ಯ ಮೂಲತಃ ಉತ್ತರಪ್ರದೇಶದವರು. ಅವರ ತಂದೆ ಮುಂಬೈನ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಉದ್ಯೋಗಿ. ಹೀಗಾಗಿ ಅವರು ಗಾಜೀಪುರದಿಂದ ಮುಂಬೈಗೆ ವಲಸೆ ಬಂದರು. ಈ ಕಾರಣಕ್ಕೇ ಸೂರ್ಯ ಹುಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲೇ. ಅಲ್ಲಿನ ಪ್ರತಿಷ್ಠಿತ ಜಿಮ್ಖಾನಾ ಕ್ಲಬ್ ಗಾಗಿ ಆಡುತ್ತಿದ್ದ ಸೂರ್ಯ ಮುಂಬೈ ಪರ 2010ರಲ್ಲಿ ರಣಜಿ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಟ್ಟ. ಮೊದಲ ಪಂದ್ಯದಲ್ಲೇ 73 ರನ್ ಗಳು. ಸೂರ್ಯನ ಕೆರಿಯರ್ ಒಂದು ಬಗೆಯಲ್ಲಿ ಹಾವು ಏಣಿ ಆಟದಂತಿತ್ತು. 2014ರಲ್ಲಿ ಮುಂಬೈ ರಣಜಿ ತಂಡದ ಕ್ಯಾಪ್ಟನ್ ಆದ. ಅದೇ ವರ್ಷ ಆತನನ್ನು ಕ್ಯಾಪ್ಟನ್ ಪಟ್ಟದಿಂದ ಕಿತ್ತುಹಾಕಲಾಯಿತು. 2018ರಲ್ಲಿ ಸೂರ್ಯನನ್ನು ಮುಂಬೈ ತಂಡದಿಂದಲೇ ಹೊರಗೆ ಹಾಕಲಾಯಿತು. ಅಚ್ಚರಿಯೆಂದರೆ 2019-20ರ ರಣಜಿ ಸೀಜನ್ ಗೆ ಮತ್ತೆ ಸೂರ್ಯ ಕುಮಾರನನ್ನು ಕರೆತಂದು ತಂಡದ ಕ್ಯಾಪ್ಟನ್ ಮಾಡಲಾಯಿತು!
ಐಪಿಎಲ್ ನಲ್ಲೂ ಸೂರ್ಯಕುಮಾರ್ ಯಾದವ್ ಹೇಳಿಕೊಳ್ಳುವಂಥ ಹೆಸರನ್ನೇನೂ ಮಾಡಿರಲಿಲ್ಲ. 2012ರಲ್ಲೇ ಐಪಿಎಲ್ ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಯಾದವ್ ಗೆ ಆಡಲು ಅವಕಾಶ ಸಿಕ್ಕಿದ್ದು ಒಂದೇ ಪಂದ್ಯ! ಆ ಪಂದ್ಯದಲ್ಲೂ ಸೂರ್ಯ ಸೊನ್ನೆ ಸುತ್ತಿ ಬಂದ! 2014ರ ಐಪಿಎಲ್ ಆಕ್ಷನ್ ನಲ್ಲಿ ಸೂರ್ಯ ಕುಮಾರ್ ಯಾದವ್ ಕೋಲ್ಕತಾ ನೈಟ್ ರೈಡರ್ಸ್ ಪಾಲಾದ. ಅದಾದ ಮರುವರ್ಷ 2015ರಲ್ಲಿ ಸೂರ್ಯ ಹೆಡ್ ಲೈನ್ ನಲ್ಲಿ ಮಿಂಚಿದ. ತನ್ನ ಮಾಜಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 46 ರನ್ ಚೆಚ್ಚಿ ಬಿಸಾಡಿದ ಸೂರ್ಯ ಐದು ಭರ್ಜರಿ ಸಿಕ್ಸರ್ ಸಿಡಿಸಿ ಎದುರಾಳಿಗಳ ಎದೆ ನಡುಗಿಸಿದ್ದ. ಆ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಸೂರ್ಯನನ್ನು ಕೋಲ್ಕತಾ ತಂಡದ ಉಪನಾಯಕನನ್ನಾಗಿ ಮಾಡಲಾಯಿತು. 2018ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೂರ್ಯನನ್ನು ಹರಾಜಿನಲ್ಲಿ 3.2 ಕೋಟಿ ರುಪಾಯಿಗಳಿಗೆ ಕೊಂಡುಕೊಂಡಿತು. ಐಪಿಎಲ್ ನಲ್ಲಿ ತನ್ನ ಬಿರುಸಿನ ಆಟದಿಂದ ಪದೇಪದೇ ಸದ್ದು ಮಾಡಿದ ಸೂರ್ಯನನ್ನು 2022ರ ಆಕ್ಷನ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೀಟೇನ್ ಮಾಡಿಕೊಂಡಿತು.
ಸೂರ್ಯ ಐಪಿಎಲ್ ತಾರೆಯಾಗಿ ಕಂಗೊಳಿಸ ತೊಡಗಿದ ಮೇಲೆ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ. ಆತ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು ಒಂದೂವರೆ ವರ್ಷದ ಹಿಂದೆ, 2021ರ ಮಾರ್ಚ್ ನಲ್ಲಿ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದ ಸೂರ್ಯ ಕುಮಾರ್ ಅವರಿಗೆ ಬ್ಯಾಟ್ ಮಾಡುವ ಅವಕಾಶ ದೊರೆತಿದ್ದು ನಾಲ್ಕನೇ ಪಂದ್ಯದಲ್ಲಿ. ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆದುಹೋಯಿತು. ಮಾರ್ಚ್ 18ರಂದು ನಡೆದ ಈ ಪಂದ್ಯದಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಬ್ಯಾಟ್ ಮಾಡಲು ಬಂದ ಸೂರ್ಯ, ತಾನು ಎದುರಿಸಿದ ಮೊದಲನೇ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿಬಿಟ್ಟ. ಸಾಧಾರಣವಾಗಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಟಗಾರರು ಸಹಜವಾಗಿಯೇ ಒತ್ತಡದಲ್ಲಿರುತ್ತಾರೆ. ಮೊದಲ ಎಸೆತಗಳನ್ನು ರಕ್ಷಣಾತ್ಮಕವಾಗಿಯೇ ಆಡುವುದು ವಾಡಿಕೆ. ಆದರೆ ಸೂರ್ಯ ಯಾವ ಭೀತಿಯೂ ಇಲ್ಲದೆ ಮೊದಲ ಎಸೆತವನ್ನೇ ಬೌಂಡರಿ ರೇಖೆಯಿಂದಾಚೆ ದಾಟಿಸಿದ್ದ. ಆ ಪಂದ್ಯದಲ್ಲಿ ಸೂರ್ಯ ಅರ್ಧ ಶತಕವನ್ನೂ ಗಳಿಸಿದ. ಅಲ್ಲಿಂದೀಚಿಗೆ ಸೂರ್ಯ ಭಾರತ ಟಿ20 ಮತ್ತು ಏಕದಿನ ತಂಡದ ಪ್ರಮುಖ ಆಟಗಾರನಾಗಿಹೋದ. ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲೇ ನಡೆದ ಟಿ20 ಪಂದ್ಯವೊಂದರಲ್ಲಿ ಕೇವಲ 55 ಎಸೆತಗಳಲ್ಲಿ 117 ರನ್ ಗಳಿಸಿದ.
ಸೂರ್ಯ ಬ್ಯಾಟ್ ಮಾಡಲು ಬಂದ ಕೂಡಲೇ ಬೌಲರ್ ಗಳು ಒತ್ತಡಕ್ಕೆ ಸಿಲುಕಿ ಬಿಡುತ್ತಾರೆ. ಯಾಕೆಂದರೆ ಎಲ್ಲಿ ಚೆಂಡು ಎಸೆದರೂ ಮೈದಾನದ ಯಾವುದಾದರೂ ಒಂದು ದಿಕ್ಕಿಗೆ ಹೊಡೆಯುವ ಶಕ್ತಿ ಆತನಿಗಿದೆ. ಬ್ಯಾಟಿಂಗ್ ಗೆ ಕಷ್ಟವೆನಿಸಿದ ಪಿಚ್ ನಲ್ಲೂ ಸೂರ್ಯ ಸರಾಗವಾಗಿ ಆಡಿಬಿಡುತ್ತಾನೆ. ಇತರ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದರೆ ಸೂರ್ಯ 200ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಿರುತ್ತಾನೆ. ವಿಕೆಟ್ ನ ಮುಂದೆ ಅಥವಾ ಹಿಂದೆ ಎಲ್ಲಿ ಚೆಂಡು ಎಸೆದರೂ ಸೂರ್ಯ ಅದನ್ನು ತನಗೆ ಬೇಕಾದ ರೀತಿ ಬಳಸಿಕೊಳ್ಳುವುದರಲ್ಲಿ ನಿಷ್ಣಾತ. ಅವನ ಫುಟ್ ವರ್ಕ್ ಅಮೋಘ. ಯಾರ್ಕರ್ ಆಗಬಹುದಾದ ಎಸೆತವನ್ನು ಫುಲ್ ಟಾಸ್ ಮಾಡಿಕೊಳ್ಳುವ ಕಲೆ ಆತನಿಗೆ ಸಿದ್ಧಿಸಿದೆ. ಸ್ಕ್ವೇರ್ ಆಫ್ ದಿ ವಿಕೆಟ್ ಅವನ ಅಚ್ಚುಮೆಚ್ಚಿನ ಜಾಗ. ಸ್ಕ್ವೇರ್ ಲೆಗ್, ಫೈನ್ ಲೆಗ್ ನಲ್ಲಿ ನೀವು ಎಷ್ಟು ಜನ ಫೀಲ್ಡರ್ ನಿಲ್ಲಿಸಿದರೂ ಅಲ್ಲೇ ಹೊಡೆದು ಸಿಕ್ಸರ್, ಬೌಂಡರಿ ಗಳಿಸುವ ಶಕ್ತಿ ಆತನಿಗಿದೆ. ಹೀಗಾಗಿ ಸೂರ್ಯ ಆಡುತ್ತಿದ್ದರೆ ಫೀಲ್ಡ್ ಸೆಟ್ ಮಾಡುವುದೇ ಕಷ್ಟ.
ಭಾರತದ ಬ್ಯಾಟ್ಸ್ ಮನ್ ಗಳು ಹಿಂದೆ ಶಾರ್ಟ್ ಪಿಚ್ ಎಸೆತಗಳಿಗೆ ಕಂಗಾಲಾಗುತ್ತಿದ್ದರು. ಸಚಿನ್, ಸೆಹ್ವಾಗ್, ಯುವರಾಜ್ ಅವರಂತಹ ಆಟಗಾರರು ಬಂದನಂತರ ಶಾರ್ಟ್ ಪಿಚ್ ಎಸೆತಗಳನ್ನು ಆಡುವ ಕಲೆ ಸಿದ್ಧಿಸಿಕೊಂಡರು. ಸೂರ್ಯ ಅದೇ ಸಾಲಿನ ಆಟಗಾರ. ಎದೆಯಿಂದ ಮೇಲೆ ಬರುವ ಎಸೆತವನ್ನು ಹಾಗೇ ತಡೆದೋ, ಮೈಮೇಲೆ ಹಾಕಿಕೊಂಡೋ ಯಾಕೆ ಪರದಾಡಬೇಕು ಎನ್ನುವುದು ಸೂರ್ಯನ ಲೆಕ್ಕಾಚಾರ. ಇಂಥ ಎಸೆತ ಬಿದ್ದಾಗಲೆಲ್ಲ ಕೊಂಚ ಬಗ್ಗಿ ವಿಕೆಟ್ ಕೀಪರ್ ತಲೆ ಮೇಲೆ ಹೊಡೆದು ಬಿಡುತ್ತಾನೆ ಸೂರ್ಯ. ಚೆಂಡು ಮುಲಾಜಿಲ್ಲದೆ ಬೌಂಡರಿ ಲೈನ್ ದಾಟಿ ಬಿದ್ದಿರುತ್ತದೆ.
2022ರಲ್ಲಿ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಇದುವರೆಗೆ ಸೂರ್ಯ ಗಳಿಸಿರುವ ರನ್ ಗಳು ಎಷ್ಟು ಗೊತ್ತೇ? 1026 ರನ್ ಗಳು! ಅದೂ ಕೂಡ 186.54 ರನ್ ಸರಾಸರಿಯಲ್ಲಿ! ಜಗತ್ತಿನ ಯಾವ ಆಟಗಾರನೂ ಈ ಸರಾಸರಿಯಲ್ಲಿ ನಿಯಮಿತವಾಗಿ ಆಡಿದ್ದಿಲ್ಲ. ಒಂದೇ ವರ್ಷದಲ್ಲಿ ಸಾವಿರ ರನ್ ಗಳಿಸಿದ ದಾಖಲೆ ಹೊಂದಿರುವ ಪಾಕಿಸ್ತಾನದ ಮಹಮದ್ ರಿಜ್ವಾನ್ ಒಂದು ಸಾವಿರ ರನ್ ಗಳಿಸಲು 983 ಎಸೆತಗಳನ್ನು ಎದುರಿಸಿದ್ದ. ಆದರೆ ಸೂರ್ಯನಿಗೆ ಇಷ್ಟೇ ರನ್ ಗಳಿಸಲು ಬೇಕಾಗಿದ್ದು ಕೇವಲ 550 ಎಸೆತಗಳು ಮಾತ್ರ.
ಸೂರ್ಯ ಆಡಲು ಬಂದನೆಂದರೆ ಆಟದ ಸಮೀಕರಣವೇ ಬದಲಾಗಿ ಹೋಗುತ್ತದೆ. ಟಿ20 ವಿಶ್ವಕಪ್ ನ ಜಿಂಬಾಂಬ್ವೆ ವಿರುದ್ಧದ ಪಂದ್ಯದಲ್ಲಿ ಸೂರ್ಯ ಆಡಲು ಬಂದಾಗ ಭಾರತದ ಇನ್ನಿಂಗ್ಸ್ ಕುಂಟುತ್ತಾ ಸಾಗುತ್ತಿತ್ತು. ತಂಡ 140-150 ರನ್ ಗಳಿಸಿದರೆ ಅದೇ ಹೆಚ್ಚು ಎಂಬ ವಾತಾವರಣವಿತ್ತು. ಜಿಂಬಾಬ್ವೆ ಬೌಲರ್ ಗಳು ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಒಂದೊಂದು ರನ್ ಗೂ ಪರದಾಡುವಂತೆ ಮಾಡಿದ್ದರು. ಆಗ ಬಂದ ಸೂರ್ಯ ಕೇವಲ 25 ಎಸೆತಗಳಲ್ಲಿ 61 ಚೆಚ್ಚಿ ಬಿಸಾಡಿದ. ಭಾರತದ ಮೊತ್ತ 186 ರನ್ ಗೆ ಬೆಳೆದುನಿಂತಿತು. ಇಷ್ಟು ದೊಡ್ಡ ಮೊತ್ತ ಚೇಸ್ ಮಾಡಲಾಗದೇ ಜಿಂಬಾಬ್ವೆ ಮಂಡಿಯೂರಿ ಶರಣಾಯಿತು. ಒಂದು ಪಂದ್ಯದ ಗತಿಯನ್ನೇ ಬದಲಾಯಿಸುವ ಶಕ್ತಿ ಸೂರ್ಯನಿಗೆ ಇದೆ ಎಂಬುದಕ್ಕೆ ಈ ಇನ್ನಿಂಗ್ಸ್ ಸಾಕ್ಷಿ.
ಸೂರ್ಯ ಕುಮಾರ್ ಯಾದವ್ ತುಂಬ ತಡವಾಗಿ ಭಾರತ ತಂಡಕ್ಕೆ ಬಂದಿದ್ದಾನೆ. ಬಂದು ಇನ್ನೂ ಎರಡು ವರ್ಷ ಪೂರ್ಣವಾಗಿಲ್ಲ. ಅವನಿಗೆ ಈಗಾಗಲೇ 32 ವರ್ಷ. ವಿರಾಟ್ ಕೊಹ್ಲಿಗಿಂತ ಎರಡು ವರ್ಷ ಕಿರಿಯ ಅಷ್ಟೆ. ಭಾರತದ ದೊಡ್ಡ ದೊಡ್ಡ ಆಟಗಾರರಂತೆ ಹದಿಹರೆಯದಲ್ಲಿ ಭಾರತ ತಂಡಕ್ಕೆ ಬರಲಿಲ್ಲ ಈತ. ಈತನ ಮುಂದೆ ಇನ್ನೂ ನಾಲ್ಕೈದು ವರ್ಷಗಳ ಕೆರಿಯರ್ ಇರಬಹುದಷ್ಟೆ. ಏಕದಿನ, ಟಿ20 ಆಡುತ್ತಿರುವ ಸೂರ್ಯನಿಗೆ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೋ ಇಲ್ಲವೋ ಹೇಳಲು ಬರುವುದಿಲ್ಲ. ಆದರೆ ಸೂರ್ಯ ಭಾರತ ಕ್ರಿಕೆಟ್ ನ ಹೊಸ ಸೆನ್ಸೇಷನ್ ಎಂಬುದರಲ್ಲಿ ಎರಡು ಮಾತಿಲ್ಲ. ಈತನಷ್ಟು ವೇಗವಾಗಿ ರನ್ ಗಳಿಸುವ ಆಟಗಾರರು ಅಪರೂಪ. ನೀವು ನನ್ನನ್ನು ಯಾವ ಬ್ಯಾಟಿಂಗ್ ಆರ್ಡರ್ ನಲ್ಲಾದರೂ ಆಡಲು ಕಳಿಸಿ, ನಾನು ಆಡುತ್ತೇನೆ ಎಂದು ಹೇಳುವ ಸೂರ್ಯನಿಗೆ ನಾಲ್ಕನೇ ಸ್ಥಾನ ಈಗ ಪಕ್ಕಾ ಆಗಿದೆ.
ಸೂರ್ಯ ಮತ್ತಷ್ಟು ಮಗದಷ್ಟು ಮಿಂಚಿ ಬೆಳಕಾಗಲಿ ಎಂಬುದು ನನ್ನ ಹಾರೈಕೆ.
ದಿನೇಶ್ ಕುಮಾರ್ ಎಸ್ ಸಿ
ಹಿರಿಯ ಪತ್ರಕರ್ತರು.