ಬೆಳಗಾವಿ: ʼಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದ್ದು, ಅಶ್ಲೀಲ ಅರ್ಥದಲ್ಲಿ ಬಳಕೆಯಾಗಿರುವ ಕುರಿತು ದಾಖಲೆಗಳಿವೆ, ಈ ಕುರಿತು ಚರ್ಚೆಯಾಗಲಿ ಎಂದು ಹೇಳಿದ್ದ ಮಾಜಿ ಸಚಿವರೂ, ಕಾಂಗ್ರೆಸ್ ಮುಖಂಡರೂ ಆದ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸತೀಶ್ ಜಾರಕಿಹೊಳಿ ಅವರು “ನಾನು ಆಡಿದ ಒಂದು ಮಾತು ವಿವಾದಕ್ಕೀಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರಗೊಳಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಮತ್ತು ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ” ಎಂದು ಬರೆದಿದ್ದಾರೆ.
ತನಿಖಾ ಸಮಿತಿ ರಚಿಸಲು ಒತ್ತಾಯ
ಇದೇ ಪತ್ರದಲ್ಲಿ ಸತೀಶ್ ಜಾರಕಿಹೊಳಿ ಅವರು, ʼಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆʼ ಎಂದಿದ್ದಾರೆ. ಮುಂದುವರೆದು, ʼಇದನ್ನು ನಾನು ವಿಕಿಪಿಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿವುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಠಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆʼ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.