Tuesday, May 7, 2024

ಸತ್ಯ | ನ್ಯಾಯ |ಧರ್ಮ

ಭಾರತೀಯ ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ: ರಾಹುಲ್ ಗಾಂಧಿ

ನವದೆಹಲಿ: ಪ್ರತಿಪಕ್ಷ ನಾಯಕರ ವಿರುದ್ಧ ಎಲ್ಲ ಕೇಂದ್ರೀಯ ಸಂಸ್ಥೆಗಳನ್ನು ನರೇಂದ್ರ ಮೋದಿ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ರೀತಿಯು ಭಾರತದಲ್ಲಿ ಆರಂಭಗೊಂಡಿರುವ ಸರ್ವಾಧಿಕಾರದ ಯುಗವನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ದಶಕಗಳಲ್ಲಿ ಹಂತಹಂತವಾಗಿ ಕಾಂಗ್ರೆಸ್ ಪಕ್ಷವು ಕಟ್ಟಿದ ಪ್ರಜಾಪ್ರಭುತ್ವದ ಸ್ಥಂಭವನ್ನು ಕೇವಲ ಐದು ವರ್ಷಗಳಲ್ಲಿ ನಾಶಪಡಿಸಲಾಗಿದೆ. ನಾವು ಈಗ ಭಾರತೀಯ ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ. ಈ ಸರ್ಕಾರದ ಏಕೈಕ ಅಜೆಂಡಾ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವುದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಏರುತ್ತಿರುವ ಬೆಲೆಗಳು, ನಿರುದ್ಯೋಗ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್ಟಿ ದರ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ಪಕ್ಷದ ನಾಯಕರು ದೆಹಲಿಯ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ, ಅದೇ ರೀತಿ ಕಾಂಗ್ರೆಸ್‌ನ ರಾಜ್ಯ ಘಟಕಗಳು ದೇಶಾದ್ಯಂತ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ಈ ಸರ್ಕಾರದ ವಿರುದ್ಧ ಮಾತನಾಡುವ ಯಾರಾದರೂ ಕೆಟ್ಟದಾಗಿ ದಾಳಿ ಮಾಡುತ್ತಾರೆ. ಜೈಲಿಗೆ ಹಾಕುತ್ತಾರೆ. ಜನರ ಸಮಸ್ಯೆಗಳನ್ನು ಎತ್ತಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ನಾಲ್ಕು ಜನರ ಸರ್ವಾಧಿಕಾರವಿದೆ ಎಂದು ಕಿಡಿಕಾರಿದರಲ್ಲದೆ, ಉಭಯ ಸದನಗಳ ಸ್ಪೀಕರ್‌ಗಳು ವಿರೋಧಪಕ್ಷದ ಧ್ವನಿಯನ್ನು ಹತ್ತಿಕ್ಕುತ್ತಿರುವುದು ವಿಷಾಧನೀಯ ಎಂದರು.

ರಾಹುಲ್ ಗಾಂಧಿ ಮತ್ತು ಅವರ ತಾಯಿ ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಜೂನ್‌ನಲ್ಲಿ ಆಪಾದಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಐದು ದಿನಗಳ ಕಾಲ ಸುಮಾರು 50 ಗಂಟೆಗಳ ಕಾಲ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿತ್ತು, ನಂತರ ಸೋನಿಯಾ ಗಾಂಧಿಯವರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು