ಬೆಂಗಳೂರು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai) ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವ್ಯಕ್ತಿಗೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಬಿಜೆಪಿ ನಾಯಕ ಹಾಗೂ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ವಿವಾದಕ್ಕೆ ಸಿಲುಕಿದ್ದಾರೆ. ಈ ಹೇಳಿಕೆಯು ವ್ಯಾಪಕ ಟೀಕೆಗೆ ಗುರಿಯಾದ ಕೆಲವೇ ನಿಮಿಷಗಳಲ್ಲಿ, ಅವರು ತಮ್ಮ ಸಾಮಾಜಿಕ ಮಾಧ್ಯಮ (X) ಸಂದೇಶವನ್ನು ಅಳಿಸಿಹಾಕಿದ್ದಾರೆ.
ಭಾಸ್ಕರ್ ರಾವ್ ಅವರು ತಮ್ಮ ಸಂದೇಶದಲ್ಲಿ, “ನಿಮ್ಮ ಧೈರ್ಯಕ್ಕೆ ಸಲಾಂ. ಈ ಕೆಚ್ಚೆದೆಯನ್ನು ಮೆಚ್ಚಿಕೊಳ್ಳಲೇಬೇಕು. ನೀವು ತೆಗೆದುಕೊಂಡಿರುವ ನಿಲುವು ಹಾಗೂ ಅದಕ್ಕಾಗಿ ನಿಮ್ಮ ಜೀವನವನ್ನು ಮೀಸಲಾಗಿಟ್ಟಿದ್ದೀರಾ?” ಎಂದು ಪ್ರಶ್ನಿಸುವ ಮೂಲಕ ವಕೀಲರ ಕ್ರಮವನ್ನು ಹಾಡಿ ಹೊಗಳಿದ್ದರು. “ಇದು ಕಾನೂನಾತ್ಮಕವಾಗಿ ಹಾಗೂ ಘೋರವಾಗಿ ಅಪರಾಧವಾಗಿದ್ದರೂ ಸಹ ನಿಮ್ಮ ಧೈರ್ಯ ಮಾತ್ರ ಮೆಚ್ಚುವಂಥದ್ದು,” ಎಂದು ಅವರು ಹೇಳಿದ್ದರು.
ಘಟನೆ ಹಿನ್ನೆಲೆ ಮತ್ತು ವಕೀಲರ ನಿಲುವು
ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದವರು 71 ವರ್ಷದ ವೃದ್ಧ ವಕೀಲ ರಾಕೇಶ್ ಕಿಶೋರ್. ಮಧ್ಯಪ್ರದೇಶದ ಜವಾರಿ ದೇಗುಲದಲ್ಲಿ ವಿಷ್ಣುಮೂರ್ತಿಯ ಸ್ಥಾಪನೆ ಕುರಿತ ಅರ್ಜಿಯನ್ನು ನಿರಾಕರಿಸಿದ್ದ ನ್ಯಾಯಮೂರ್ತಿ ಗವಾಯಿ, “ಬೇಕಿದ್ದರೆ ಹೋಗಿ ದೇವರನ್ನೇ ಕೇಳಿಕೊಳ್ಳಿ” ಎಂದು ಛೇಡಿಸಿದ್ದರು. ಇದರಿಂದ ಕುಪಿತಗೊಂಡ ರಾಕೇಶ್ ಕಿಶೋರ್ ಈ ಕೃತ್ಯ ಎಸಗಿದ್ದರು ಎನ್ನಲಾಗಿದೆ. ಘಟನೆಯ ನಂತರ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅವರ ವಕೀಲರ ಪರವಾನಗಿಯನ್ನು ವಜಾ ಮಾಡಿತ್ತು. ತಮ್ಮ ಕೃತ್ಯಕ್ಕೆ ತಾನು ಪಶ್ಚಾತ್ತಾಪವಿಲ್ಲ ಮತ್ತು ಕ್ಷಮೆಯನ್ನೂ ಸಹ ಕೇಳುವುದಿಲ್ಲ ಎಂದು ರಾಕೇಶ್ ಕಿಶೋರ್ ಪ್ರತಿಕ್ರಿಯಿಸಿದ್ದರು. “ಈ ಕೃತ್ಯವನ್ನು ನಾನು ಮಾಡಲಿಲ್ಲ, ದೇವರೇ ನನ್ನ ಕೈಯಿಂದ ಮಾಡಿಸಿದ್ದಾನೆ,” ಎಂದು ಅವರು ಹೇಳಿದ್ದರು.
ಕಾಂಗ್ರೆಸ್ ನಾಯಕರಿಂದ ತೀವ್ರ ಖಂಡನೆ
ಭಾಸ್ಕರ್ ರಾವ್ ಅವರ ಹೇಳಿಕೆಯ ಕುರಿತು ಕಾಂಗ್ರೆಸ್ ನಾಯಕ ಮನ್ಸೂರ್ ಖಾನ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇದು ಕಾನೂನಾತ್ಮಕವಾಗಿ, ಘೋರ ಅಪರಾಧವಾಗಿದ್ದರೂ ಸಹ ನೀವು ಅವರ ಧೈರ್ಯವನ್ನು ಪ್ರಶಂಸಿಸುತ್ತಿದ್ದೀರಾ? ಇದು ಒಬ್ಬ ಮಾಜಿ ಪೊಲೀಸ್ ಕಮಿಷನರ್‌ನ ಹೇಳಿಕೆಯಾಗಿರುವುದು ನಾಚಿಕೆಗೇಡು. ಒಂದು ಕಾಲದಲ್ಲಿ ನೀವು ಕಾನೂನನ್ನು ಎತ್ತಿ ಹಿಡಿದಿದ್ದಿರಿ. ಈಗ ನೀವು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಅಪಮಾನಿಸಿದ ವ್ಯಕ್ತಿಯ ಜೊತೆಗೆ ನಿಂತಿದ್ದೀರಾ. ಎಂಥಾ ಪತನ!” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಮುಖ್ಯ ರಾಜಕಾರಣಿಗಳು ಪಕ್ಷಾತೀತವಾಗಿ ಖಂಡಿಸಿದ್ದರು. ಆದರೆ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಈ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.