Home ಜನ-ಗಣ-ಮನ ದಲಿತ ನೋಟ ಕೋರೇಗಾಂವ್ – ಅಸ್ಪೃಶ್ಯರ ಮೊದಲ ಸ್ವಾತಂತ್ರ್ಯ ಸಂಗ್ರಾಮ

ಕೋರೇಗಾಂವ್ – ಅಸ್ಪೃಶ್ಯರ ಮೊದಲ ಸ್ವಾತಂತ್ರ್ಯ ಸಂಗ್ರಾಮ

0

ಮನುಷ್ಯರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ದೇಶದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಶೋಷಣೆಯನ್ನು ಎದುರಿಸಿ ನಿಲ್ಲಲು ನಿರ್ಧರಿಸಿದ ಧೀರ ಮಹಾರ್‌ ಸಮುದಾಯದ ನಾಯಕ ಸಿದ್ಧನಾಕ ಮತ್ತವರ ಸಂಗಡಿಗರನ್ನು ಮಹಾರ್‌ ಯುದ್ಧದ ವಿಜಯದ ದಿನವಾದ ಜನವರಿ ಒಂದರಂದು ಹೆಮ್ಮೆಯಿಂದ ಸ್ಮರಿಸಲಾಗುತ್ತದೆ. ಆ ದಿನದ ನೆನಪಿಗಾಗಿ ಆಯೇಷಾ ಝಬಿಯವರು ಬರೆದಿರುವ ಲೇಖನ

ಜನವರಿ ಒಂದನೇ ತಾರೀಕು ಶೋಷಿತರ ಪಾಲಿಗೆ ಕೇವಲ ಹೊಸ ವರ್ಷದ ಸಂಭ್ರಮ ಅಷ್ಟೇ ಅಲ್ಲ. ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದು ಮಹಾರ್ ಸೈನಿಕರು ಸಾಧಿಸಿದ ವಿಜಯದ ದಿನವೂ ಆಗಿದೆ. ಇತಿಹಾಸದಲ್ಲಿ ನಡೆದ ಎಷ್ಟೊ ಯುದ್ಧಗಳಲ್ಲಿ ಭೀಮ ಕೋರೇಗಾಂವ್ ಕದನ ಕೂಡ ಒಂದು ಎಂದು ಮೇಲ್ನೋಟಕ್ಕೆ ಅನಿಸಿದರೂ ಈ ಯುದ್ಧದ ಹಿಂದೆ ಇದ್ದದ್ದು ಅಸ್ಪೃಶ್ಯತೆ ಆಚರಣೆ ವಿರುದ್ಧದ ಕಿಚ್ಚು. ನಿರಂತರ ಶೋಷಣೆಯಿಂದ ನೊಂದಿದ್ದ ಮಹಾರ್‌ ಸಮುದಾಯದ ಪಾಲಿಗೆ ಆ ಯುದ್ಧ ಕೇವಲ ರಾಜ್ಯಗಳ ಮೇಲಿನ ಹಿಡಿತಕ್ಕಾಗಿ ನಡೆದದ್ದಷ್ಟೇ ಆಗಿರಲಿಲ್ಲ. ಅದು ಅಸ್ಪೃಶ್ಯತೆ ಆಚರಣೆಯ ಸಂಕೋಲೆಯಿಂದ ಬಿಡುಗಡೆಯ ಕ್ರಾಂತಿಯಾಗಿತ್ತು. ಬೃಹತ್ ಸೈನ್ಯದ ಎದುರು ಸಣ್ಣ ಸಂಖ್ಯೆಯ ಸೈನಿಕರು ಸಾಧಿಸಿದ ಜಯ, ಅಸ್ಪೃಶ್ಯತೆ ವಿರುದ್ಧ ಸಾಧಿಸಿದ ವಿಜಯವೂ ಆಗಿತ್ತು.

ಎರಡನೇ ಬಾಜಿರಾಯನ ಆಡಳಿತದ ಅವಧಿಯಲ್ಲಿ ಅಸ್ಪೃಶ್ಯತೆ ಆಚರಣೆ ತುತ್ತ ತುದಿ ತಲುಪಿತ್ತು. ಮನು ಸ್ಮೃತಿಯಲ್ಲಿ ಉಲ್ಲೇಖಿಸಿದ್ದ ಎಲ್ಲಾ ರೀತಿಯ ಆಚರಣೆಗಳು ಅಂದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದ್ದವು. ಸವರ್ಣೀಯರ ಮೇಲೆ ಅಸ್ಪೃಶ್ಯರ ನೆರಳು ಕೂಡ ಬೀಳುವಂತಿರಲಿಲ್ಲ. ಸೂರ್ಯ ನೆತ್ತಿ ಮೇಲೆ ಬಂದಾಗ ಅಷ್ಟೇ ಅವರು ಹೊರಗೆ ಬರಬೇಕಿತ್ತು. ತಾವು ನಡೆದುಕೊಂಡು ಹೋಗುವ ದಾರಿಯಲ್ಲಿ ಹೆಜ್ಜೆ ಗುರುತುಗಳು ಕಾಣದಂತೆ ಗುಡಿಸಿಕೊಂಡು ಹೋಗಲು ಸೊಂಟದ ಹಿಂಭಾಗಕ್ಕೆ ಪೊರಕೆ ಹಾಗೂ ಉಗುಳಲು ಕುತ್ತಿಗೆಗೆ ಒಂದು ಕುಡಿಕೆ ಕಟ್ಟಿಕೊಂಡಿರಬೇಕಿತ್ತು. ಪೆಶ್ವೇಗಳ ದೌರ್ಜನ್ಯ ದಬ್ಬಾಳಿಕೆಗಳಿಂದ ರೋಸಿ ಹೋಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯ ಯುವಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಕೋರಿಕೊಂಡರು. ತಮ್ಮಗಳ ಕಷ್ಟಗಳ ಪರಿಹಾರಕ್ಕಾಗಿ ಒದಗಿ ಬರುವ ಸುವರ್ಣ ಅವಕಾಶಕ್ಕಾಗಿ ಕಾಯುತ್ತಿದ್ದರು. ಪೆಶ್ವೇ ಎರಡನೆಯ ಬಾಲಾಜಿ ಬಾಜಿರಾಯನು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಸೋತು ಪುಣೆಯ ಅರ್ಧ ಭಾಗವನ್ನು ಬಿಟ್ಟು ಕೊಟ್ಟನು. ಆಗ ಮಹರ್ ವೀರ ನಾಯಕ ಸಿದ್ದನಾಕ ಪೇಶ್ವೆಗೆ ನಾವು ಮತ್ತು ನೀವು ಭಾರತ ದೇಶದವರು, ಬ್ರಿಟಿಷರು ಪರಿಕೀಯರು, ನಾವಿಬ್ಬರು ಕೂಡಿ ಅವರನ್ನು ಎದುರಿಸೋಣ ಆದರೆ ಯುದ್ಧ ಗೆದ್ದ ಮೇಲೆ ನೀವು ನಮ್ಮನ್ನು ಅಸ್ಪೃಶ್ಯರಂತೆ ಕಾಣದೆ ನಮಗೂ ಸಮಾನತೆ ನೀಡಬೇಕು ಎಂದು ಮಾತನಾಡಿದರು. ಪ್ರತ್ಯುತ್ತರವಾಗಿ ಎರಡನೇ ಬಾಜಿರಾಯನು, ‘ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ಮತ್ತು ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖ ಪಡಿಸಲಿಕ್ಕಾಗಿ ಎಂದು ನುಡಿದ ಪರಿಣಾಮವಾಗಿ ಗಾಯಗೊಂಡ ವ್ಯಾಘ್ರಗಳಂತಾದ ಮಹರ್ ಪಡೆಯು ಸೇಡು ತೀರಿಸಿಕೊಳ್ಳಲು ಸಮಯ ಕಾಯ ತೊಡಗಿದರು ಎನ್ನಲಾಗುತ್ತದೆ.

 ಈ ಯುದ್ಧ ನಡೆದದ್ದು ಜನವರಿ 1,1818ರಲ್ಲಿ.  ಕೋರೇಗಾಂವ್ ಇಂದಿನ ಪುಣೆಯ ಬಳಿ ಇದೆ. ಭೀಮಾ ನದಿಯ ದಂಡೆಯ ಸಮೀಪ. ಬಾಂಬೆ ಲೈಟ್ ವೆಯಿಟ್ ಇನ್ಫೆಂಟ್ರಿ ಮೊದಲನೇ ರೆಜಿಮೆಂಟ್, ಎರಡನೇ ಬೆಟಾಲಿಯನ್ 500 ಮಹಾರ್ ಸೈನಿಕರು ಹಾಗೂ ಪೇಶ್ವೆಗಳ ಸಾವಿರ ಸಾವಿರ  ಸಂಖ್ಯೆಯ ಸೈನಿಕರ ಮಧ್ಯೆ ಕದನ ನಡೆಯಿತು. ಪೇಶ್ವೆಗಳದ್ದು ಬ್ರಾಹ್ಮಣರ ಸೈನಿಕರ ಹೆಚ್ಚಿನ 28,000 ಸಂಖ್ಯೆಯ ಸೈನ್ಯ. 500 ಮಂದಿ ಇದ್ದ ಅಸ್ಪೃಶ್ಯ ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂತಹ ಸನ್ನಿವೇಶ. ಶಿರೂರಿನಿಂದ 27 ಮೈಲು ಭೀಮಾ ಕೋರೆಗಾವ್ ವರೆಗೆ ನಡೆದುಕೊಂಡೆ ಬಂದ ಮಹಾ ಸೈನಿಕರಿಗೆ ಆಹಾರ ನೀರು ಕೂಡ ಇರಲಿಲ್ಲ. ಯುದ್ಧ ಆರಂಭವಾಗುತ್ತದೆ. ಸತತ 12 ತಾಸು ನಡೆದ ಈ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು 22 ಮಹರ್ ಸೈನಿಕರು ಹುತಾತ್ಮರಾಗುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಪ್ರಚಂಡ ಜಯ ಸಾಧಿಸಿ ಅಸ್ಪೃಶ್ಯ ಯೋಧರ ಪಡೆಯ ನಾಯಕನಾಗಿದ್ದ ಸಿದ್ಧನಾಕನು ಸಹ ವೀರ ಮರಣವನ್ನಪ್ಪುತ್ತಾನೆ. ಅಸ್ಪೃಶ್ಯ ಯೋಧರಿಗಿಂತ ಹೆಚ್ಚು ಇದ್ದ ಪೇಶ್ವೆಗಳ ರಣಹೇಡಿ ಸೈನ್ಯ ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗುತ್ತಾರೆ.

 ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪೃಶ್ಯ ಯೋಧರ ನೆನಪಿಗಾಗಿ ಬ್ರಿಟಿಷರು 1921 ಮಾರ್ಚ್ 21ರ ಯುದ್ಧ ನಡೆದ ಸ್ಥಳದಲ್ಲಿ 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ ಆ ಸ್ತಂಭದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು. ಆ ಭವ್ಯ ವಿಜಯಸ್ತಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟಿಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಿದರು. ಈ ವಿಜಯಸ್ತಂಬದ ಮೇಲೆ ಬ್ರಿಟಿಷರು “One of the proudest Truimphs of the British Army in the East” (ಪೂರ್ವ ಭಾರತದಲ್ಲಿ ಬ್ರಿಟಿಷ್ ಸೇನೆ ಸಾಧಿಸಿದ ಗೆಲುವುಗಳಲ್ಲಿ ಅತ್ಯಂತ ಹೆಮ್ಮೆಯ ವಿಜಯ) ಎಂದು ಸಹ ಕೆತ್ತಿಸಿದರು. ಶೋಷಣೆ ಎಂಬ ಅಸ್ಪೃಶ್ಯರ ಅಜ್ಞಾನದ ಮುಸುಕನ್ನು ಕೋರೆಗಾವ್ ಚರಿತ್ರೆ ಬಹುಮಟ್ಟಿಗೆ ಅಳಿಸಿತು.

 ಈ ಯುದ್ಧದ ಇತಿಹಾಸವನ್ನು ಮುನ್ನಲೆಗೆ ತಂದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಬ್ರಿಟನ್ ಸ್ಕೂಲ್ ಆಫ್ ಎಕನಾಮಿಕ್ಸ್ ಬಾರ್ -ಅಟ್- ಲಾ ವ್ಯಾಸಂಗ ಮಾಡುತ್ತಿರುವಾಗ ಸಂಶೋಧನೆಗೆ ಸಾಹಿತ್ಯ ಪರಾಮರ್ಶೆಯ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಆಳ್ವಿಕೆಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳು ಕುರಿತು ಲಂಡನ್ ಮ್ಯೂಸಿಯಂ ಲೈಬ್ರರಿಯಲ್ಲಿನ ಮೂಲಾಧಾರಗಳನ್ನು ಅನ್ವೇಶಿಸುವ ಸನ್ನಿವೇಶದಲ್ಲಿ ಈ ಭೀಮ ಕೋರೇಗಾಂವ್ ಕಥನದ ಬಗ್ಗೆ ಮಾಹಿತಿ ಪಡೆದು ಈ ಮಾಹಿತಿಯನ್ನು ಕೂಲಂಕುಶವಾಗಿ ಅಧ್ಯಯನಿಸಿ ನಂತರ ಭಾರತಕ್ಕೆ ಮರಳಿ ಯುದ್ಧ ನಡೆದ ಸ್ಥಳವಾದ ಕೋರೇಗಾಂವ್ ಭೇಟಿ ನೀಡಿ ಭವ್ಯ ವಿಜಯ ಸ್ತಂಭವನ್ನು ವೀಕ್ಷಿಸಿ ಅಲ್ಲಿನ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಿದ ನಂತರ ಕೋರೇಗಾಂವ್ ಕದನದ ಇತಿಹಾಸ ಹೊರಬರುತ್ತದೆ. ಅಂಬೇಡ್ಕರ್ ಅವರು ಕೋರೇಗಾಂವ್ ಸ್ಮಾರಕಕ್ಕೆ ಭೇಟಿ ನೀಡಿದಾಗಿನಿಂದ ಈ ಸ್ಥಳ ಶೋಷಿತ ಸಮುದಾಯಗಳ ಪಾಲಿಗೆ ವಿಜಯ ಯಾತ್ರಾಸ್ಥಳವಾಗಿದೆ. ಪ್ರತಿ ವರ್ಷ ಜನವರಿ ಒಂದನೇ ತಾರೀಖಿನಂದು ಲಕ್ಷಾಂತರ ಮಂದಿ ಕೋರೇಗಾಂವ್ ಗ್ರಾಮಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಾರೆ.

 ಬದುಕುವ ಸವಲತ್ತುಗಳನ್ನು ಕೊಡದ ಒಂದು ವರ್ಗ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಾಮ್ರಾಜ್ಯವನ್ನು ನೆಲೆಸಮ ಮಾಡಿದ್ದ ಇತಿಹಾಸವು ಎಲ್ಲೆಡೆ  ಪರಿಚಯವಾಗಲಿ. ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವ ಪ್ರಜಾ ಸತ್ತಾತ್ಮಕ ಮತ್ತು ಸಾಮಾಜಿಕ ನ್ಯಾಯವನ್ನು  ಅಳವಡಿಸಿಕೊಂಡ ಭಾರತದ ಸಂವಿಧಾನದ ಆಶಯಗಳಿಗೆ ಮಂಕು ಬೂದಿಯನ್ನು ಎರಚುತ್ತಾ ಮನುವಾದಿಗಳು ತಳ ಸಮುದಾಯದ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಮೀಸಲಾತಿ ಕ್ರಮವನ್ನು ಅವೈಜ್ಞಾನಿಕವಾಗಿ ಖಂಡಿಸುತ್ತಿದ್ದಾರೆ, ಜಾತಿ ಧರ್ಮಗಳ ಮಧ್ಯೆ ಜಗಳ ಹುಟ್ಟಿಸಿ ಕುತಂತ್ರದಿಂದ ಮರಳಿ ಮನುವಿನ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಮತ್ತೊಂದು ಭೀಮ ಕೋರೇಗಾಂವ್ ಯುದ್ಧವೇ ನಡೆದರೆ ಅಚ್ಚರಿಪಡಬೇಕಾಗಿಲ್ಲಾ.

ಆಯೇಷಾ ಝಬಿ ಮೈಸೂರು

ಲೇಖಕಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರು

You cannot copy content of this page

Exit mobile version