Home ಇನ್ನಷ್ಟು ಪ್ರವಾಸ ಕಥನ ತಿರುಗಾಡಿ ಬಂದೊ-10

ತಿರುಗಾಡಿ ಬಂದೊ-10

0
ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಮೂಡಿ ಬರುತ್ತಿದ್ದ ತಿರುಗಾಡಿ ಬಂದೋ ಅಂಕಣ ತನ್ನ ಕೊನೆಯ ಅಂಕಕ್ಕೆ ತಲುಪಿದೆ. ತಮ್ಮೆಲ್ಲ ಕೆಲಸಗಳ ನಡುವೆಯೂ ನಮಗಾಗಿ ವಾರ-ವಾರವೂ ತಪ್ಪದೆ ಲೇಖನ ಬರೆದುಕೊಟ್ಟ ರೋಹಿತ್‌ ಅಗಸರಹಳ್ಳಿಯವರಿಗೆ ಪೀಪಲ್‌ ಮೀಡಿಯಾ ಕೃತಜ್ಞ. ಇನ್ನಷ್ಟು ಪ್ರವಾಸ ಕಥನಗಳಿಗಾಗಿ ನಮ್ಮ ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ. ಈ ಬಾರಿಯ ತಮ್ಮ ಅಂಕಣದಲ್ಲಿ ರೋಹಿತ್‌ ನಮ್ಮೆಲ್ಲರನ್ನು ಪುಷ್ಕರ್‌ ಮತ್ತು ಆಜ್ಮೈರ್‌ಗಳಿಗೆ ಕರೆದೊಯ್ಯಲಿದ್ದಾರೆ. ಬನ್ನಿ ತಿರುಗಾಡಿ ಬರೋಣ

ನಮ್ಮ ಪ್ರವಾಸದ ಕಡೇ ದಿನ ಅಜ್ಮೇರ್ ಮತ್ತು ಪುಷ್ಕರ್ ನೋಡುವುದಾಗಿತ್ತು. ವಾಸ್ತವದಲ್ಲಿ ಪ್ರವಾಸ ಹೊರಡೋ ಮುನ್ನ ಅಜ್ಮೇರ್ ಬದಲಿಗೆ ಉದಯಪುರ ಮತ್ತು ಜೈಸಲ್ಮೇರ್ ಗಳು ಚರ್ಚೆಗೆ ಬಂದವು; ಆದರೆ ಅವೆರಡೂ ಜೈಪುರದಿಂದ ದೂರ ಎಂಬ ಕಾರಣಕ್ಕೆ ಡ್ರಾಪ್ ಮಾಡಿದ್ದೆವು. ಅಜ್ಮೇರ್ ಪಟ್ಟಿಗೆ ಸೇರಿದ್ದಷ್ಟೇ ಅಲ್ಲ, ಅಲ್ಲಿಯೇ ಎರಡು ದಿನ ಉಳಿದು ಸುತ್ತಾಡಬೇಕೆಂದು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಊರಿಗೆ ವಾಪಾಸು ಬಂದಮೇಲೆ ಗೊತ್ತಾದ ಸಂಗತಿ ಎಂದರೆ ನಮ್ಮ ಅರಸೀಕೆರೆಯಿಂದ (ಮಾರ್ಗ) ಅಜ್ಮೇರ್ ಗೆ ನೇರ ಟ್ರೈನ್ ಇದೆಯಂತೆ.

ಹಿಂದಿನ ದಿನವೇ ತೀರ್ಮಾನಿಸಿದ್ದಂತೆ ಡ್ರೈವರ್ ಗೆ ಮುಂಜಾನೆ ಆರಕ್ಕೆ ಬರಲು ಹೇಳಿದ್ದೆವು. ಆತ ಬಂದ ಕೂಡ. ಹೊರಡುತ್ತಲೇ ಅವನಿಗೇ ಕೇಳಿದೆವು ಪುಷ್ಕರ್ ಮತ್ತು ಅಜ್ಮೇರ್ ಎರಡರಲ್ಲಿ ಮೊದಲು ಎಲ್ಲಿಗೆ ಹೋಗುವುದೆಂದು. ವಾತಾವರಣ ಹಿಂದಿನ ದಿನದಂತೇ ತಂಪಾಗಿತ್ತು, ತುಂತುರು ಮಳೆಯೊಂದಿಗೆ. ಆತ ಹೇಳಿದ ಮೊದಲು ಪುಷ್ಕರ್ ಗೆ ಹೋಗಿ ಬಂದುಬಿಡಬಹುದು, ಆಮೇಲೆ ದರ್ಗಾ ನೋಡಿ ಹೊರಡಬಹುದು ಎಂದು. ಜೈ ಎಂದೆವು. ದಿನೇಶ್ ಜೈಸಲ್ಮೇರ್ ಗೆ ಹೋಗಿ ಥಾರ್ ಮರುಭೂಮಿಯಲ್ಲಿ ಬೆಳದಿಂಗಳ ರಾತ್ರಿಯೊಂದನ್ನು ಆಕಾಶ ನೋಡುತ್ತ ಕಳೆಯಬೇಕು ಎಂದು ಹೇಳುತ್ತಿದ್ದರೂ ಅದು ಸಾಧ್ಯವಾಗದ ಕಾರಣ, ಪುಷ್ಕರಿನಲ್ಲಿ ಒಂಟೆ ಸವಾರಿ ಮಾಡಿ ಜೈಸಲ್ಮೇರ್ ಕೊರತೆಯನ್ನು ತುಂಬಿಸಿಕೊಳ್ಳುವ ಹವಣಿಕೆಯಲ್ಲಿದ್ದರು.

ಪುಷ್ಕರ್ ಅಜ್ಮೇರ್ ಗೆ ಹೊಂದಿಕೊಂಡಂತೇ ಇರುವ ಊರು. ಪುಷ್ಕರ್ ಎಂಬ ಹೆಸರೇ ಸರೋವರದ ಕಾರಣಕ್ಕಾಗಿ ಬಂದಿರಬಹುದು. ಪುಷ್ಕರಿಣಿ ಎಂದರೆ ಕೊಳ ಅಲ್ಲವೆ? ಸರೋವರದ ಬಳಿ ಗುಡ್ಡದಂಥಾ ಜಾಗದಲ್ಲಿ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಿದ ದೇವಾಲಯವಿದೆ. ಅದು ಬ್ರಹ್ಮ ದೇವಾಲಯ. ಪುರಾಣದ ಕತೆಯೊಂದರ ಪ್ರಕಾರ ಶಿವ ಬ್ರಹ್ಮನಿಗೆ ಎಂದೋ ಶಾಪ ಕೊಟ್ಟನಂತೆ, ನಿನ್ನನ್ನು ಭೂಲೋಕದಲ್ಲಿ ಜನ ಗುಡಿ ಕಟ್ಟಿ ಪೂಜಿಸದಿರಲೆಂದು. ಹಾಗಾಗಿ ತ್ರಿಮೂರ್ತಿಗಳಲ್ಲಿ ಒಬ್ಬನೂ, ಚತುರ್ಮುಖನೂ ಆದ ಬ್ರಹ್ಮನಿಗೆ ಭೂಲೋಕದಲ್ಲಿ ಎಲ್ಲೂ ದೇವಾಲಯಗಳು ಇಲ್ಲವಂತೆ. ಎಲ್ಲೆಲ್ಲಿ ಬ್ರಹ್ಮ ದೇವಾಲಯಗಳು ಇವೆಯೋ ಅಲ್ಲೆಲ್ಲಾ ಈ ಕತೆಯೂ ಇದೆ. ನಾನು ಕೊಡಗಿನಲ್ಲಿ ಇದ್ದಾಗ ಅಲ್ಲಿ ನೋಡಿದ ಬ್ರಹ್ಮ ದೇವಾಲಯದಲ್ಲಿ ಕೂಡ ಈ ಕತೆಯನ್ನು ಕೇಳಿದ್ದೆ. ಹಾಗೆಯೇ ಕೊಡಗಿನಲ್ಲಿ ನಮ್ಮ ಪ್ರಿನ್ಸಿಪಾಲರಾಗಿದ್ದ ಕೆಂಚಪ್ಪ ಅವರು ಪ್ರತೀ ವರ್ಷ ಟೂರ್ ಮಾಡೊವ್ರು. ಅವರೇ ಒಮ್ಮೆ ಅಜ್ಮೇರ್ ದರ್ಗಾ ಬಗ್ಗೆ ಹೇಳಿದ್ದರು. ಭಾರೀ ನೂಕುನುಗ್ಗಲು ಅಲ್ಲಿ ಎಂದಿದ್ದರು.

ಬಹುತೇಕ ದೇವಾಲಯಗಳಂತೆ ಇಲ್ಲೂ ಚಪ್ಪಲಿ ಸ್ಟ್ಯಾಂಡು, ಪೂಜೆಯ ಬುಟ್ಟಿ ಬಾಡಿಗೆ ಕೊಡುವವರ ನಡುವೆ ಸ್ಪರ್ಧೆ ನಡೆಯುತ್ತಿದ್ದವು.‌ ಒಂದೆಡೆ ಚಪ್ಪಲಿ ಕಳಚಿಟ್ಟು ಬುಟ್ಟಿ ಪಡೆಯದೆ ಹೊರಡಲನುವಾದ ಕಾರಣ ಚಪ್ಪಲಿ ಕಾಯಲು ನಿರಾಕರಿಸಿದ. ಆಮೇಲೆ ಸುಮ್ಮನೆ ಖಾಲಿ ಜಾಗದಲ್ಲಿ ರಾಶಿ ಚಪ್ಪಲಿಗಳ ನಡುವೆ ಬಿಟ್ಟು ಮುಂದೆ ಹೋದೆವು. ದೇವಾಲಯ ನಮ್ಮನ್ನೇನೂ ಹೆಚ್ಚು ಹೊತ್ತು ಹಿಡಿದಿಡಲಿಲ್ಲ. ಅಲ್ಲಿಂದ ಇಳಿದುಬಂದು ಪುಷ್ಕರ್ ಸರೋವರ ನೋಡಲು ತೆರಳಿದೆವು. ನಮ್ಮ ಮೇಲುಕೋಟೆಯ ಪುಷ್ಕರಿಣಿಗಿಂತ ಕೊಂಚ ದೊಡ್ಡದಾದ ಸರೋವರ. ಮೂರು ಕಡೆ ವಿಸ್ತಾರವಾದ ಮೆಟ್ಟಿಲು ಇದ್ದವು.ನಮ್ಮ ಜನ ಪವಿತ್ರವೆಂದು ಭಾವಿಸಿದ ಮೇಲೆ ಎಷ್ಟು ಗಲೀಜಿರಬೇಕಿತ್ತೊ ಅಷ್ಟೂ ಇತ್ತು.‌ ಮರಳುಗಾಡಿಗೆ ಹೊಂದಿಕೊಂಡಂತೆ ಇದ್ದ ಕಾರಣ ಬೇರೇನೂ ನೀರಿನ ಮೂಲಗಳು ಆ ಪ್ರದೇಶದಲ್ಲಿ ಇದ್ದಿರಲಾರದು ಎಂದುಕೊಂಡೆ.  ಓಡಾಡಿ ಸುಸ್ತಾಗಿದ್ದ ಸುಜಾತ ಲಸ್ಸಿ ಕೊಡಿಸುತ್ತೇನೆಂದು ನಿಲ್ಲಿಸಿದಳು. ಅಜ್ಮೇರಲ್ಲಿ ಎಲ್ಲ ಕಡೆ ಲಸ್ಸಿ ಫೇಮಸ್ಸು. ಅಲ್ಲಿಯ ಹವಾಮಾನದ ಪ್ರಕಾರ ವರ್ಷದ 12 ತಿಂಗಳು ಮಾತ್ರವೇ ಬಿಸಿಲಂತೆ! ಮಳೆಯಂತೂ ವರ್ಷಕ್ಕೆ ಬರೋಬ್ಬರಿ 20 ಇಂಚಂತೆ. ನಾವೆಷ್ಟು ಅದೃಷ್ಟವಂತರೆಂದರೆ ಅಲ್ಲಿ ಉರಿಯೋದೇವರ (ಸೂರ್ಯ) ಮುಖ‌ ನೋಡಿದ್ದು ಅಪರೂಪವೆ. ಅಲ್ಲಿ ಲಸ್ಸಿ ಎಂದರೆ ಬರೇ ಮೊಸರು ಸಕ್ಕರೆ ಮಿಶ್ರಣವಾಗಿರಲಿಲ್ಲ, ಜೊತೆಗೆ ಗುಲ್ಕಂದ್( ಗುಲ್ಕನ್) ಕೂಡ ಬೆರೆಸಿದ್ದರು. ಬಹಳ ರುಚಿಯಾಗಿತ್ತು.

ಒಂಟೆ ಸವಾರಿ….

ಮಕ್ಕಳಿಬ್ಬರಿಗೂ ಕಳೆದೊಂದು ವಾರದಿಂದ ಹೇಳಿ ಹೇಳಿ ನಿರೀಕ್ಷೆ ಹೆಚ್ಚಿಸಿದ್ದ ಒಂಟೆ ಸವಾರಿ ಬಂದೇ ಬಿಟ್ಟಿತು.‌ ಒಂಟೆ ಸ್ಟ್ಯಾಂಡಿಗೆ ನಮ್ಮ ಕಾರು ನಿಲ್ಲುವ ಹೊತ್ತಿಗೆ ಯಾವ ಪ್ರವಾಸಿ ತಂಡಗಳೂ ಅಲ್ಲಿರಲಿಲ್ಲ. ಇದ್ದಿದ್ದರೆ‌ ನಮ್ಮ ಒಂದೆರಡು ಸಾವಿರ ರೊಕ್ಕ ಉಳಿದಿರುತ್ತಿತ್ತೇನೊ. ನಾವು ವಿಶಾಲ ಮರಳುಗಾಡನ್ನು ನಿರೀಕ್ಷಿಸಿದ್ದೆವು ಆದರದು ಅರೆಮರಳುಗಾಡು ಪ್ರದೇಶವಾಗಿತ್ತು. ಅಲ್ಲಲ್ಲೇ ಗಿಡಮರಗಳೂ, ಕುರುಚಲು ಕಾಡೂ, ಊರೂ, ಬೆಟ್ಟಸಾಲೂ (ಅರಾವಳಿ ರೇಂಜ್) ಎಲ್ಲವೂ ಕಾಣುತ್ತಿದ್ದವು. ಓಡಾಟಕ್ಕೆ ಎರಡು ಮೋಡುಗಳಿವೆಯೆಂದೂ, ಒಂದು ಒಂಟೆ ಎಳೆಯುವ ಗಾಡಿ. ಓಡಾಟದ ದೂರ ಐದು ಕಿ.ಮೀ., ಮತ್ತೊಂದು ಓಪನ್ ಜೀಪಿನಲ್ಲಿ ಇಪ್ಪತ್ತೈದು ಕಿ.ಮೀ. ಓಡಾಟಕ್ಕೆ ಅಂದಾಜು ಐದು ಸಾವಿರವೆಂದೂ ಹೇಳಿದರು. ಎಲ್ಲರಿಗೂ ರಾಜಸ್ತಾನಿ ಪಟ್ಗಾ (ರುಮಾಲಿನಿಂದ ಮಾಡಿದ ಪೇಟ) ಕೂಡ ನೀಡಿದರು. ಕೆಲವೇ ಹೊತ್ತಿನಲ್ಲಿ ನಮಗೆ ಟೋಪಿ ಹಾಕಿದ್ದಾರೆನ್ನುವುದು ಗೊತ್ತಾಯ್ತು!

ನಿಧಾನ ಗತಿಯ ಒಂಟೆ ಬಿಟ್ಟು ವೇಗದ ಜೀಪನ್ನೇ ಆಯ್ಕೆ ಮಾಡಿಕೊಂಡೆವು. ಜೀಪ್ ಓಡಿಸುವ ಅಣ್ಣ ಎಲ್ಲರೂ ಬಿಗಿಯಾಗಿ ಜೀಪಿನ ಕಂಬಿಗಳನ್ನು ಹಿಡಿದು ಕೂರಲು ಹೇಳಿ ಸಾಹಸಕ್ರೀಡೆಗೆ ಮುಂದಾದ. ಮುಂಜಾನೆ ಜೈಪುರ- ಅಜ್ಮೇರ್ ದಾರಿಯಲ್ಲಿ ತಿಂದಿದ್ದ ಬತ್ತೂರ- ಬಟಾಣಿ ಜೀರ್ಣವಾಗಿದ್ದ ಕಾರಣಕ್ಕೆ ಅವನ ಜೀಪು ಸ್ವಚ್ಛವಾಗುಳಿಯಿತು; ಇಲ್ಲದಿದ್ದರೆ‌ ಅಲ್ಲೊಂದು ಸ್ವಚ್ಛ ಭಾರತ್ ಅಭಿಯಾನವೇ ಜರುಗಬೇಕಿತ್ತು. ಮಕ್ಕಳು ಹೋ ಎಂದು ಕೂಗಿ ಜೀಪಿನ ವೇಗದ ಏರಿಳಿತವನ್ನು ಎಂಜಾಯ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಿಗುತ್ತಿದ್ದ ಮರಳ ಗುಡ್ಡಗಳನ್ನು ಏರಿಸಿ ರೊಯ್ಯನೆ ಇಳಿಸುತ್ತಿದ್ದ. ಕುಂತ ನಮಗೆ ಬಿದ್ದೇ ಬಿಡುತ್ತೇವೇನೊ ಎನಿಸುತ್ತಿತ್ತು. ಮುಂದೆ ಡ್ರೈವರ್ ಸೀಟ್ ಪಕ್ಕ ಸೇಫ್ ಜಾಗದಲ್ಲಿ ಕುಳಿತಿದ್ದ ಸುಜಾತಾಳ ಗಲಾಟೆಯೇ ಅಧಿಕ! ತಾನು ಇಳಿದೇ ಬಿಡುವುದಾಗಿ ಧಮ್ಕಿ ಕೊಡುತ್ತಿದ್ದಳು; ಆದರೆ ಯಾರೂ ಕ್ಯಾರೇ ಅನ್ನದ ಕಾರಣ ಸುಮ್ಮನಾದಳು. ಒಂದೈದಾರು ಕಿ.ಮೀ. ಹೀಗೆ ಗುಡ್ಡ ಏರಿಸಿ ಇಳಿಸಿ ಒಂದೆಡೆ ನಿಲ್ಲಿಸಿದ‌. ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ಒಂದು ಸಣ್ಣ ರೌಂಡು ಬರಲು ಒಂಟೆ ಬಾಡಿಗೆಗೆ ದೊರೆಯುತ್ತವೆ. ಈಗಾಗಲೆ ಜೀಪಿನ ವಿಷಯದಲ್ಲಿ ಟೋಪಿ ಇಕ್ಕಿಸಿಕೊಂಡಿದ್ದ ನಾವು ಒಂಟೆ ಸವಾರಿ ವಿಷಯದಲ್ಲಿ ಜಾಗರೂಕರಾದೆವು. 1600 ಹೇಳಿ ಕಡೆಗೆ ಇನ್ನೋರೋ ಮುನ್ನೂರೋ ಕೊಡಿ ಎಂದರು. ಶಾಲೆಗೆ ಹೋಗುವ ಚಿಕ್ಕ ವಯಸ್ಸಿನ ಮಕ್ಕಳು ರಾಜಾಸ್ತಾನಿ ಟೋಪಿ ಬಾಡಿಗೆಗೆ ಕೊಡುವ ಕೆಲಸ ಮಾಡುತ್ತಿದ್ದವು.

ಒಂಟೆಯನ್ನು ಬಹುತೇಕ ಟಿ.ವಿ. , ಸಿನೆಮಾದಲ್ಲಿ ಮಾತ್ರವೇ ನೋಡಿದ್ದ ನಮಗೆ‌ ಹತ್ತಿರದಿಂದ ನೋಡುವ ಸವಾರಿ ಮಾಡುವ ಅವಕಾಶ ಸಿಕ್ಕಿತ್ತು. ಅದರ ಬೆನ್ನೇರಿದ ಮೇಲೆ ಅನಿಸಿದ್ದು ತಾವೆಲ್ಲೋ ಫರ್ಸ್ಟ್ ಫ್ಲೋರಿನಲ್ಲಿ ಇದ್ದೇವೆಂಬ ಭಾವನೆ. ಒಂಟೆ ಏರೋದು ಸುಲಭ, ಇಳಿಯೋದು ಕೊಂಚ ಕಷ್ಟ. ಮೊದಲು ತನ್ನ ಮುಂದಿನೆರಡು ಕಾಳುಗಳ ಮಡಚಿ‌ ಅದು ಕೆಳ ಕೂರುವುದರಿಂದ ಒಮ್ಮಲೇ ಐದಾರು ಅಡಿ ಕುಸಿದಂತಾಗಿ‌ ಬ್ಯಾಲೆನ್ಸ್ ಸಿಕ್ಕದು. ಕೊಂಚ ಹಿಂದಕ್ಕೆ ಒರಗಿದಂತೆ‌ ಕೂರಬೇಕು.

ಒಂದಷ್ಟು ಫೋಟೋ ಕ್ಲಿಕ್ಕಿಸಿ ಫೋಟೋಗ್ರಾಫರನೊಂದಿಗೆ ಚೌಕಾಶಿ ಮುಗಿಸುವ ಹೊತ್ತಿಗೆ, ಮತ್ತೆ ಶುರುವಾಯ್ತು ಜೀಪ್ ಸವಾರಿ. ಈಗ ಕೊಂಚ ಮಟ್ಟಸವಾದ ದಾರಿ. ಒಂದೆರಡು ಹಳ್ಳಿ, ಒಂದಷ್ಟು ನೇರಳೆ ಮತ್ತು ನೆಲ್ಲಿಕಾಯಿ‌ ತೋಟಗಳನ್ನು ತೋರಿಸಿದ. ಆ ಪ್ರದೇಶದ ನೇರಳೆ ಫೇಮಸ್ಸಂತೆ. ಪುಟ್ಟಂಪೂರ ಮರಳುಗಾಡು ಎಂದು ಭಾವಿಸಿಕೊಂಡಿದ್ದ ನಮಗೆ ಆ ಸಮೃದ್ಧ ತೋಟಗಳನ್ನು ನೋಡಿ ಅಚ್ಚರಿಯಾಯ್ತು. ಸುಜಾತ ಮುಂದೆ ಕೂತು ಡ್ರೈವರಣ್ಣಂಗೆ ಏನೇನೊ‌ ಕೇಳುತ್ತಿದ್ದಳು. ಅದರ ಸಾರಾಂಶದಂತೆ ನಡುವೆ ಸಿಕ್ಕ ಹಳ್ಳಿಯ ಜನ ಮೊದಲು ಉಪ್ಪು ತಯಾರಿಸುತ್ತಿದ್ದರಂತೆ (ನಮ್ಮ ಉಪ್ಪಾರರಂತೆ) ಈಗ ಪ್ಯಾಕೆಟ್ ಉಪ್ಪಿನ ಕಾರಣಕ್ಕೆ ಅವರೆಲ್ಲ ಉದ್ಯೋಗವಿಲ್ಲದೆ ಬೇರೆ ಏನೇನೊ ವೃತ್ತಿಗಳನ್ನು ಮಾಡುತ್ತಿರುವರಂತೆ. ನೇರಳೆ ತೋಟಗಳನ್ನು ಹಾಯ್ದು ಮೇನ್ ರೋಡಿಗೆ ಬರೋ ಹೊತ್ತಿಗೆ ಡ್ರೈವರ್ ಗೆ ನಾಕಾರು ಫೋನು ಬಂದವು. ನಮ್ಮ ಬಳಿ ಕೊಂಚ ಹೆಚ್ಚೇ ಕಾಸು ಪಡೆದಿದ್ದ ಅಪರಾಧಿ ಭಾವಕ್ಕೋ ಏನೊ ನಿಧಾನವಾಗಿ‌ ಅಲ್ಲಿನ ಕೃಷಿ, ಜನಜೀವನ, ಭಾಷೆ, ಸಂಸ್ಕೃತಿ ಬಗ್ಗೆ ವಿಸ್ತಾರ ವಿವರಣೆ ನೀಡುತ್ತಿದ್ದ.

ಅಜ್ಮೇರ್ ದರ್ಗಾ….

ಅಜ್ಮೇರ್ ಪ್ರವಾಸ ಹೋಗುವವರ ಮೊದಲ ಆಕರ್ಷಣೆ ಅಜ್ಮೇರ್ ದರ್ಗಾವೇ ಆಗಿರುತ್ತದೆ. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಸಮಾಧಿಯೇ ಈ ಅಜ್ಮೇರ್ ದರ್ಗಾ. ಇಸ್ಲಾಮಿನ ನಂಬಿಕೆ ಪ್ರಕಾರ ಜೀವಂತ ಮನುಷ್ಯರಾಗಲಿ, ಸಮಾಧಿಗಳಾಗಲಿ ಪೂಜನೀಯರಲ್ಲವಂತೆ; ಆದರೆ ಸೂಫಿಗಳ ದರ್ಗಾಗಳು ಎಲ್ಲ ಧರ್ಮೀಯರು ಹೋಗಬಹುದಾದ, ಪ್ರಾರ್ಥಿಸಬಹುದಾದ ಸ್ಥಳಗಳು. ಹದಿಮೂರನೇ ಶತಮಾನದ ಈ ಸಂತನ ದರ್ಗಾ ದಿನಕ್ಕೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ನಮ್ಮ ಉತ್ತರ ಕರ್ನಾಟಕದ ಬಹುತೇಕ ಊರುಗಳಲ್ಲಿ ದರ್ಗಾಗಳಲ್ಲಿ ಸಕ್ಕರೆ ಓದಿಸುವ ಇಸ್ಲಾಮೇತರರ ಶ್ರದ್ಧೆ ರೂಢಿಯಲ್ಲಿದೆ. ಕೆಲವು ದರ್ಗಾಗಳಲ್ಲಿ  ಮಹಿಳೆಯರಿಗೆ ಪ್ರವೇಶವಿಲ್ಲ; ಆದರೆ ಅಜ್ಮೇರ್ ದರ್ಗಾದಲ್ಲಿ ಈ ಷರತ್ತಿಲ್ಲ. 13 ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಹಲವು ದೊರೆಗಳ ಕಾಲಘಟ್ಟಗಳಲ್ಲಿ ಈ ದರ್ಗಾ, ಮಸೀದಿ ಇತ್ಯಾದಿಗಳ ಕಟ್ಟೋಣಿಕೆ ನಡೆದಿದೆ. ದೆಹಲಿ ಸುಲ್ತಾನೇಟಿನ ಇಲ್ತಮಶ್ ಕಾಲದಲ್ಲಿ ಮೊದಲ ನಿರ್ಮಾಣ ಜರುಗಿತಂತೆ. ನಂತರ ಅಕ್ಬರ್, ಜಹಾಂಗೀರ್, ಷಹಜಹಾನ್ ಮತ್ತು ರಜಪೂತ ದೊರೆಗಳು ಕೈಜೋಡಿಸಿದ್ದಾರೆ. ಅಕ್ಬರ್ ತನ್ನ ಆಳ್ವಿಕೆಯ ಕಾಲದಲ್ಲಿ ಸುಮಾರು 14 ಸಾರ್ತಿ ಆಗ್ರಾದಿಂದ ಆಜ್ಮೇರ್ ಗೆ ಬರಿಗಾಲಲ್ಲಿ ನಡೆದು ಬಂದು ಪ್ರಾರ್ಥಿಸಿದ್ದನಂತೆ. ಆಗ ದೊರೆಯ ಬರವಿಗೆಂದೇ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಲಾಗಿತ್ತಂತೆ. ಅಕ್ಬರ್ ಕಾಲದಲ್ಲಿ ದರ್ಗಾಗೆ ಕೊಡುಗೆಯಾಗಿ ನೀಡಲ್ಪಟ್ಟ ದೊಡ್ಡ ಬೋಗುಣಿಗಳಿವೆ. ಅದರಲ್ಲಿ ಒಂದಂತೂ ಇಪ್ಪತ್ತು ಅಡಿ ಸುತ್ತಳತೆ ಮತ್ತು ಸುಮಾರು ಹದಿನೈದು ಅಡಿ ಆಳವಿದೆ. ಈ ಬೋಗುಣಿಯ ಬಳಿ ನಿಂತು ನಾನು- ದಿನೇಶ್ ಚರ್ಚಿಸುವಾಗ ಕನ್ನಡದ ದನಿಯೊಂದು ಕಿವಿಗೆ ಬಿತ್ತು. ಇವತ್ತು ಹಬ್ಬ ಸಾರ್.. ಅಂತ. ಆತ ಬೆಂಗಳೂರಿನಿಂದ ಅಂದಿನ ವಿಶೇಷ ಪ್ರಾರ್ಥನೆಗೆ ಬಂದ ಹುಡುಗ. ನಾವಿಬ್ಬರೂ ಕನ್ನಡದಲ್ಲಿ ಮಾತನಾಡುತ್ತಿದ್ದುದು ಕೇಳಿ ಅವನೂ ಮಾತಿಗೆ ಸೇರಿದ್ದ. ಅಂದು ಮಳೆ ಸುರಿಯುತ್ತಲೇ ಇತ್ತು. ಜನ ತುಂಬಿ ಕೋಡಿ ಬಿದ್ದಿತ್ತು. ದರ್ಗಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮಸೀದಿ ತುಂಬಿ ತುಳುಕುತ್ತಿತ್ತು. ಆಗ ಮದ್ಯಾಹ್ನದ ವಿಶೇಷ ನಮಾಝ್ ಅಂತೆ. ಅದೂ ಅಲ್ಲದೆ ಅಂದು ಪೈಗಂಬರರ ಜನ್ಮದಿನವೂ ಅಂತೆ. ಇವೆಲ್ಲವುಗಳ ಜತೆಗೆ ಬೆಟ್ಟದ ತಪ್ಪಲಲ್ಲಿರುವ ಆ ದರ್ಗಾಗೆ ಮಾಡಿದ ರಸ್ತೆಗಳೆಲ್ಲ ಐದು ಶತಮಾನ ಹಿಂದಿನವು. ಅವೆಲ್ಲ ಈಗ ಕಿಷ್ಕಿಂದೆಯಾಗಿವೆ.

ಅಜ್ಮೇರ್ ತಲುಪುತ್ತಿದಂತೆಯೇ ನಮ್ಮ ಡ್ರೈವರಣ್ಣ ಹೇಳಿಬಿಟ್ಟ‌. ಇಂದು ಪೂರ ರಶ್ಯು, ಇಲ್ಲಿಂದ ಒಂದು ಆಟೋ ಹಿಡಿದರೆ ಸೀದ ದರ್ಗಾ ಹತ್ತಿರ ಒಯ್ಯುತ್ತಾನೆ. ನಡೆದೇ ಹೋದರೆ ತಡವಾಗಬಹುದು ಎಂದು.ಹಾಗೇ ಮಾಡಿದೆವು. ಆಟೋವಾಲ ನಾವು ಇಳಿಯೋಹೊತ್ತಿಗೆ ಹತ್ತು ಸಾರ್ತಿ ಹೇಳಿದ ಪರ್ಸು ಹುಷಾರು ಎಂದು. ಅಲ್ಲಿ ಕಾಲಿಡಲೂ ತೆರಪಿಲ್ಲದಂತೆ ಜನವಿದ್ದುದೇನೊ ನಿಜವೇ ಆಗಿತ್ತು. ದರ್ಗಾದ ಎದುರು ರಸ್ತೆಯಲ್ಲಿ ಹಲವು ಅಂಗವಿಕಲರು ಭಕ್ತಾದಿಗಳಲ್ಲಿ ಕರುಣೆ ಹುಟ್ಟಿಸಿ ಭಿಕ್ಷೆ ಪಡೆಯಲು ಆ ಮಳೆಯಲ್ಲೇ ಹೊರಳುತ್ತಿದ್ದುದು ಸೋನೆಮಳೆಯ ಗಲೀಜೂ ಸೇರಿ ರೇಜಿಗೆ ಹುಟ್ಟಿಸುತ್ತಿತ್ತು. ಅಕ್ಬರ್ ಕೊಡುಗೆಯಾಗಿ ನೀಡಿರುವ ಬೋಗುಣಿ‌ ಏಳು ಲೋಹಗಳಿಂದ ಮಾಡಿದ್ದಂತೆ. ಅದರಲ್ಲಿ ಕನಿಷ್ಟ ಐವತ್ತು ಸಾವಿರ ಜನರಿಗೆ ನೀಡಬಹುದಾದಷ್ಟು ಪ್ರಸಾದವನ್ನು ಒಮ್ಮೆಲೇ ತಯಾರಿಸುವರಂತೆ. ಕಳೆದ ಐನೂರು ವರ್ಷಗಳಿಂದ ಇರುವ ಅದಿನ್ನೂ ವರ್ಕಿಂಗ್ ಕಂಡೀಷನ್ನಿನಲ್ಲಿದೆ. ಅದನ್ನು ಶ್ರೀಲಂಕಾದಿಂದ ಮೂರು ತುಂಡುಗಳಂತೆ ಪ್ರತ್ಯೇಕವಾಗಿ ತರಿಸಿ, ಬೆಸೆಯಲಾಯ್ತೆಂದು ಹೇಳಲಾಗುತ್ತದೆ.

ದರ್ಗಾ ಒಳಗೆ ಹೋಗಿ ಬರುವ ಶಾಸ್ತ್ರ ಮಾಡಿದೆವಾದರೂ ರಾಕ್ ಸ್ಟಾರ್ ಸಿನೆಮಾದಲ್ಲಿ ತೋರಿಸಿದಷ್ಟು ಆಕರ್ಷಕವಾಗಿ ಆ ಜಾಗ ಗೋಚರಿಸಲಿಲ್ಲ‌. ಇನ್ನೊಮ್ಮೆ ಎಂದಾದರೂ ಜನಬಾಹುಳ್ಯ ಕಡಮೆ ಇದ್ದಾಗ ನೋಡಬೇಕು ಎಂದುಕೊಂಡು ಹೊರಬಂದು ಕಾರು ಹೊಕ್ಕೆವು.

ಅಕ್ಬರ್ ಸೆಕ್ಯುಲರ್ರೇ ಮತ್ತು ಡ್ರೈವರಣ್ಣಂಗೆ ಭಾಷಾ ವಿಜ್ಞಾನದ ಪಾಠ!

ನಾವು ತಿರುಗಾಡಿದ ಏಳೆಂಟು ದಿನಗಳು ಬಹುತೇಕ ಉತ್ತರ ಭಾರತದ ದಿಲ್ಲಿ ಸುಲ್ತಾನರ ಮತ್ತು ಮುಘಲ್ ದೊರೆಗಳ ಆಳ್ವಿಕೆಯ ಪ್ರದೇಶ ಮತ್ತು ಸ್ಥಳ, ಕೋಟೆ, ಅರಮನೆ, ಗೋರಿ ಇತ್ಯಾದಿಗಳೇ ಆಗಿದ್ದರಿಂದ ಮತ್ತೆ ಮತ್ತೆ ಚರಿತ್ರೆಯ ವಿಚಾರಗಳು ನನ್ನ ಮತ್ತು ದಿನೇಶ್ ಅವರ ಮಾತುಕತೆಯಲ್ಲಿ ಪ್ರಸ್ತಾಪವಾಗುತ್ತಲೇ ಇದ್ದವು.

ಅಂದು ಅಜ್ಮೇರಿನಿಂದ ಜೈಪುರಕ್ಕೆ ಹೊರಟ ಮೂರು- ಮೂರೂವರೆ ತಾಸು ಚರ್ಚೆಗೀಡಾದ ಸಂಗತಿ ಅಕ್ಬರ್ನ ಸೆಕ್ಯುಲರಿಸಂ ಮತ್ತು ಔರಂಗಝೇಬನ ಕಮ್ಯೂನಲಿಸಂ. ದಿನೇಶ್ ಹಲವು ಸಾರ್ತಿ ಮಾತಿನ ನಡುವೆ ಅಕ್ಬರ್ ಸೆಕ್ಯುಲರ್ ಆದರೆ ಔರಂಗಝೇಬ್ ಕಮ್ಯೂನಲ್ ಎಂದು ಹೇಳುತ್ತಲೇ ಇದ್ದರು. ಈಗ ಸಮಯ ಸಿಕ್ಕ ಕಾರಣಕ್ಕೋ ಏನೊ ಮೊದಲ ಬಾರಿ ಪ್ರತಿಕ್ರಿಯಿಸಿದೆ. ಚರಿತ್ರಕಾರರ ಪ್ರಕಾರ ಅಕ್ಬರ್ ಸೆಕ್ಯುಲರ್ರೂ ಅಲ್ಲ ಔರಂಗಝೇಬ ಕಮ್ಯೂನಲ್ಲೂ ಅಲ್ಲ; ಅವರಿಬ್ಬರೂ ಭಾರತದ ಮಧ್ಯಕಾಲೀನ ದೊರೆಗಳಷ್ಟೇ.

ಈ ಸೆಕ್ಯುಲರ್ ಕಮ್ಯೂನಲ್ ಚರ್ಚೆ ಭಾರತದ ಚರಿತ್ರೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾ ಬಂದಿದೆ.  ಅದೂ ಅಲ್ಲದೆ ಈ ‘ಭೂತ’ ವರ್ತಮಾನವನ್ನೂ ನಿರ್ದೇಶಿಸುತ್ತಿದೆ. ಅಂದರೆ ಕೆಲವು ಭೂತ ಕಾಲದ ದೊರೆಗಳ ಆಳ್ವಿಕೆಯನ್ನು ಅಥವಾ ಹಳವಂಡಗಳನ್ನು ಇಂದಿನ ಅದೇ ಧರ್ಮಶ್ರದ್ಧೆಯ ಜನರ ಮೇಲೆ ಹೇರಲಾಗುತ್ತಿದೆ. ಎಲ್ಲಿಯವರೆಗೆಂದರೆ ಯಾರೊ ನಟಿ ತನ್ನ ಮಗನಿಗೆ ತೈಮೂರ ಎಂದು ಹೆಸರಿಟ್ಟರೆ, ಅದೇ ಹೆಸರಿನ ಒಬ್ಬ ಹಿಂದೆ ಭಾರತದ ಮೇಲೆ ಧಾಳಿ ಮಾಡಿದ್ದ ಎಂದು ಹೇಳುವಷ್ಟರ ಮಟ್ಟಿಗೆ. ರೊಮಿಲಾ ಥಾಪರ್ ಅವರು ತಮ್ಮ ಲೇಖನವೊಂದರಲ್ಲಿ ಈ ಇತಿಹಾಸ ರಚನಾಕ್ರಮದ ವೈಚಿತ್ರ್ಯವನ್ನು ಕುರಿತು ಚರ್ಚಿಸಿದ್ದಾರೆ. ಅವರು ಹೇಳುವುದಿಷ್ಟು. ಅಕ್ಬರನನ್ನು ಉದಾರವಾದಿ ಎಂದು ಚಿತ್ರಿಸಿದಷ್ಟೂ ಔರಂಗಝೇಬನನ್ನು ಅನುದಾರವಾದಿ ಅಥವಾ ಕಟ್ಟರ್ ಎಂದು ಚಿತ್ರಿಸಲು ಇಂಬು ದೊರೆಯುತ್ತದೆ ಎಂಬುದು. ಅಷ್ಟಕ್ಕೂ ಕಳೆದ ಸಾವಿರ ವರ್ಷಗಳಿಂದ ಇಲ್ಲಿನ ಬಹುತೇಕ ಪ್ರದೇಶವನ್ನು ಆಳ್ವಿಕೆ ಮಾಡಿದವರು ಎಂದೂ ಬಹುಸಂಖ್ಯಾತರಾಗಿರಲಿಲ್ಲ‌. ತನ್ನ ಧಾರ್ಮಿಕ ಶ್ರದ್ಧೆಯ ವಿಚಾರವನ್ನು ಉಳಿದೆಲ್ಲರ ಮೇಲೆ ಹೇರುವುದು ಅಷ್ಟು ಸರಳವಾಗಿರಲಿಲ್ಲ. ಸಾಧ್ಯವೂ ಇರಲಿಲ್ಲ. ಇದಕ್ಕೆ ಅವರು ದೆಹಲಿ ಸುಲ್ತಾನನೊಬ್ಬನ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ನನ್ನ ಕಣ್ಣ ಮುಂದೆಯೇ ತನ್ನ ಶ್ರದ್ಧೆಗೆ ವಿರುದ್ಧವಾದ ಆಚರಣೆಗಳನ್ನು ಮಾಡುವುದನ್ನು ತಾನು ತಡೆಯಲಾರದವನಾಗಿರುವೆ‌ ಎಂಬ ಅರ್ಥದ್ದು. ಅದಕ್ಕೆ ಕಾರಣ ಸರಳ. ಆಡಳಿತದ ನೂರಾರು ಹಂತ, ವಿಭಾಗ, ಪ್ರಜೆಗಳಲ್ಲಿ ಇದ್ದವರೆಲ್ಲ ಬಹುತೇಕ ದೊರೆ ಪ್ರತಿನಿಧಿಸುತ್ತಿದ್ದ ಸಾಂಸ್ಥಿಕ ಧರ್ಮಕ್ಕೆ ಸೇರಿದವರಾಗಿರಲಿಲ್ಲ. ಆದರೆ ಅವರೆಲ್ಲದ ಸಹಕಾರವಿಲ್ಲದೆ ದೊರೆ ಉಸಿರಾಡಲೂ ಸಾಧ್ಯವಿರಲಿಲ್ಲ. ಈ ಲೆಕ್ಖದಲ್ಲಿ ಅಕ್ಬರ್ ನ ಕೆಲವು ನೀತಿಗಳು ಉದಾರವಾಗಿ ಗೋಚರಿಸುತ್ತವೆ. ಔರಂಗಜೇಬ್ ನ ನೀತಿಗಳು ಕಟುವಾಗಿ ಗೋಚರಿಸುತ್ತವೆ. ಈತ ಹಲವು ಹಿಂದೂ ಮಂದಿರಗಳನ್ನು ನಾಶ ಮಾಡಿದನೆಂದು ಹೇಳುವ ವಿಚಾರದ ಕುರಿತು ಪುಸ್ತಕವೊಂದಿದೆ( ಔರಂಗಝೇಬನ ಆದೇಶಗಳು ಮತ್ತು ಹಿಂದೂ ಮಂದಿರಗಳು ಎಂದೇನೊ ಅದರ ಶೀರ್ಷಿಕೆ. ಲೋಹಿಯಾ ಪ್ರಕಾಶನ ,ಬಳ್ಳಾರಿ) ಅದರ ಪ್ರಕಾರ ಆತ ಸಾವಿರಾರು ಸಂಖ್ಯೆಯ ಪ್ರಾರ್ಥನಾಲಯಗಳನ್ನು ಒಡೆಸಿಹಾಕಿದ ಎಂದು ಹೇಳುವುದು ನಿಜವಂತೆ; ಆದರೆ ಹಾಗೆ ಒಡೆಸಿ ಹಾಕಿದವಲ್ಲಿ ಅನಧಿಕೃತ ಎಂದು ಪರಿಗಣಿಸಲ್ಪಟ್ಟ ಮಸೀದಿ, ದರ್ಗಾ, ಬಸದಿ, ಮಂದಿರ ಎಲ್ಲವೂ ಇದ್ದವಂತೆ. ಅಂದರೆ ಈ ಮಂದಿರ ನಾಶದ ಥಿಯರಿ ಆಡಳಿತಾತ್ಮಕ ಸಂಗತಿಯೇ ಹೊರತು ಆತನ ಧಾರ್ಮಿಕ ನೀತಿಯ ಭಾಗವಲ್ಲ. ಹೀಗೆ ಸಾಗುತ್ತಿದ್ದ ಚರ್ಚೆ ಒಂದೇ ಏಟಿಗೆ ಅಜ್ಮೇರಿನಿಂದ ಬಿಜಾಪುರಕ್ಕೆ ಶಿಫ್ಟ್ ಆಗಿಬಿಡಬೇಕೆ!

ದಿನೇಶ್ ಈ ವಿಚಾರ ಹಿಡಿದು ಧರ್ಮಗಳಿಗೂ ರಾಜಪ್ರಭುತ್ವಗಳ ನಡುವಿನ ಯುದ್ಧಗಳಿಗೂ ಸಂಬಂಧವಿಲ್ಲವೆ ಎಂದು ರಕ್ಕಸ ತಂಗಡಗಿಗೆ ಜಂಪ್ ಮಾಡಿದರು. ಖಂಡಿತ ಸಂಬಂಧವಿದೆ; ಆದರೆ ರಕ್ಕಸ ತಂಗಡಗಿ ಯುದ್ಧಕ್ಕೆ ಧರ್ಮ ಅನ್ನೋದು ಪ್ರಾಥಮಿಕ ಕಾರಣವಾಗಿರಲಿಲ್ಲ ಎಂದೆ. ಹೇಗೆಂದರೆ ಚರಿತ್ರೆಯ ಪ್ರಕಾರ ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳೆರಡೂ ಹದಿನಾಲ್ಕನೇ ಶತಮಾನದಲ್ಲಿ ರೂಪುಗೊಂಡವು. ಈ ಎರಡೂ ಸಾಮ್ರಾಜ್ಯಗಳ‌ ನಡುವೆ ಹಲವು ಯುದ್ಧಗಳು ಸಂಭವಿಸಿವೆ, ಅದು ಸಹಜ ಕೂಡ. ಆ ಎಲ್ಲ ಸಂಘರ್ಷಕ್ಕೆ ಯಾವುದೇ ಎರಡು ಸಾಮ್ರಾಜ್ಯಗಳ ನಡುವಿನ ವಿಸ್ತರಣೆಯ ಉದ್ದೇಶವಿದೆಯೇ ಹೊರತು ಧರ್ಮ ಕಾರಣವಾಗಿರಲಿಲ್ಲ ಎಂಬುದಕ್ಕೆ ಸಾವಿರ ಸಾಕ್ಷಿಗಳಿವೆ. ಆಗ ವಿಜಯನಗರದಲ್ಲಿ ಮುಸ್ಲಿಂ, ಸೈನಿಕರು, ಪ್ರಜೆಗಳೂ, ಮಂತ್ರಿಗಳೂ , ಸೇನಾಪತಿಗಳೂ ಇದ್ದಹಾಗೆ ಬಹಮನಿ ಶಾಹಿ ರಾಜ್ಯಗಳಲ್ಲಿಯೂ ಮುಸ್ಲಿಮೇತರ (ಆಗ ಹಿಂದೂ ಟರ್ಮ್ ಬಳಕೆಯಲ್ಲಿರಲಿಲ್ಲ) ಪ್ರಜೆಗಳು, ಸೈನಿಕರು, ಮಂತ್ರಿ, ಸೇನಾಪತಿಗಳೂ ಇದ್ದರು.‌

ಅಳಿಯ ರಾಮರಾಯನ ಕಾಲಕ್ಕೆ ಐದು ಶಾಹಿ ರಾಜ್ಯಗಳೊಂದಿಗೆ ಪ್ರತ್ಯೇಕ ವಾಗಿ ಹಲವು ಯುದ್ಧಗಳನ್ನು ಮಾಡಿದ್ದ ರಾಮರಾಯ ಪ್ರತೀ ಬಾರಿಯೂ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ವಿಭಜಿಸಿ ಆಳುವ ನೀತಿ ಅನುಸರಿಸಿದ್ದ. ಇದನ್ನು ಒಂದು ಹಂತದಲ್ಲಿ ಅರ್ಥೈಸಿಕೊಂಡ ಐದೂ ಶಾಹಿ ರಾಜ್ಯಗಳ ದೊರೆಗಳೂ ಒಟ್ಟಾಗಿ ವಿಜಯನಗರದ ಎದುರು ಸೆಣಸಿದರು. ಅದರ ಪರಿಣಾಮವೇ ವಿಜಯನಗರದ ಪತನ‌. ಈ ಯುದ್ಧದಲ್ಲಿ ವಿಜಯನಗರದ ಕೆಲವು ಸೇನಾಪತಿಗಳು ತಮ್ಮ ಮಾತೃಸೈನ್ಯಕ್ಕೆ ದ್ರೋಹವೆಸಗಿದ್ದಕ್ಕೆ ದಾಖಲೆ ಸಿಗುತ್ತದೆ ಅದೂ ಕೂಡ ಅಂದಿನ ಕಾಲದ ಒಂದು ಫೆನೋಮೆನಾವೇ ಹೊರತು ಧರ್ಮ ಅದಕ್ಕೆ ಕಾರಣವಲ್ಲ. ಹೀಗಾಗಿ ಚರಿತ್ರೆಯ ಸಂಗತಿಗಳನ್ನು ಇಂದಿನ ರಾಜನೀತಿಯ ಹಿನ್ನೆಲೆಯಲ್ಲಿ ನೋಡಹೋಗುವುದು ಸಮಸ್ಯಾತ್ಮಕ ಎಂದೂ ಥಾಪರ್ ಅವರ ಪುಸ್ತಕ ಹುಡುಕಿ ಕೊಡುವೆ, ಓದಿನೋಡಿ ಎಂದೆ.

“ಅಪ್ಪ ರೆಸ್ಟ್ ಗೆ ಹೋಗ್ಬೇಕು” ಎಂದ ಪ್ರಣತಿಯ ಡೈಲಾಗ್ ಬಹುಶಃ ನಮ್ಮ ಈ ಚರ್ಚೆಗೆ ಬ್ರೇಕು ಹಾಕಿರಬೇಕು. ಸುಜಾತ ಮತ್ತು ರೋಹಿಣಿ ಮೇಡಂ ಇಬ್ಬರಿಗೂ ಈ ಚರ್ಚೆ ಬೇಡವಾಗಿತ್ತು. ಕಾರಿನಲ್ಲಿ ಮೊದಲ ಸೀಟಲ್ಲಿ ದಿನೇಶೂ, ಕಡೇ ಸೀಟಲ್ಲಿ ನಾನೂ ಇದ್ದ ಕಾರಣ ನಮ್ಮೀ ಚರ್ಚೆಯ ಧಾಳಿಯಿಂದ ಯಾರೂ ತಪ್ಪಿಸಿಕೊಳ್ಳುವಂತಿರಲಿಲ್ಲ!

ಇಷ್ಟೇಲ್ಲಾ ಆಗುವ ಹೊತ್ತಿಗೆ ಡ್ರೈವರ್ ಕಡೆ ತಿರುಗಿ ನಮ್ಮ ಮಾತುಗಳು ನಿಮಗೆ ಅರ್ಥವಾದುವ ಎಂದು ಕೇಳಿದೆವು. ಅದಕ್ಕೆ ಅವನೆಂದಾ, ಸಾರ್ ದೇಶದ ನಾನಾ ಕಡೆಯಿಂದ ಬಂದ ಜನರ ಮಾತುಗಳನ್ನ ಕೇಳಿದೀನಿ. ನಿಮ್ಮ ಮಾತು ಚೂರೂ ಅರ್ಥವಾಗಲ್ದು ಎಂದ. ಆಗ ನಾನು ದಿನೇಶ್ ಇಬ್ರೂ ಸೇರಿ ಇಂಡೋ ಆರ್ಯನ್, ದ್ರಾವಿಡ ಭಾಷೆಗಳ‌ ವ್ಯತ್ಯಾಸ ಮತ್ತು ಹಿಂದಿ, ಉರ್ದು ,ರಾಜಸ್ತಾನಿ ಭಾಷೆಗಳನ್ನು ಬಲ್ಲ ನಿಮಗೆ ಉತ್ತರ ಭಾರತದ ಭಾಷೆಗಳು ಏಕೆ ಅರ್ಥವಾಗುತ್ತವೆ ಮತ್ತು ದಕ್ಷಿಣದ ಭಾಷೆಗಳು ಏಕೆ ಅರ್ಥವಾಗುವುದಿಲ್ಲ ಎಂಬುದನ್ನೆಲ್ಲಾ ಕೊರೆದೆವು.

ಹಾಗೇ ನಾವು ತ್ರಿಭಾಷಾ ಸೂತ್ರದ ಪ್ರಕಾರ ಮೂರು ಭಾಷೆ ಕಲಿತರೆ ನೀವು‌ ಮತ್ತು ನಿಮ್ಮ ಮಕ್ಕಳು ಹಿಂದಿ – ಇಂಗ್ಲಿಷ್ ಎರಡೇ‌ ಕಲಿತೀರಿ ಅದಕ್ಕೆ ನಮ್ಮ ಭಾಷೆ ನಿಮಗೆ ಅರ್ಥವಾಗದಿದ್ದರೂ, ನಿಮ್ಮ ಮಾತು ನಮಗೆ ಸುಲಭವಾಗಿ‌ ಅರ್ಥವಾಗುತ್ತದೆ‌ ಎಂದೆವು. ಇವೆಲ್ಲ ಅವನಿಗೆ ಅಷ್ಟು ಅರ್ಥವಾಯ್ತೋ ಇಲ್ಲವೇ ‘ಅರ್ಥ’ ಮುಖ್ಯ ಎಂದು ಸುಮ್ಮನೇ ಹ್ಞೂಂಗುಟ್ಟಿದನೋ ಕಾಣೆ. ಅಂತೂ ಮೇಷ್ಟ್ರು ಗಳೆಂದರೆ ಆಲ್ವೇಸ್ ಮೇಷ್ಟ್ರು ಗಳೇ ಸಿಕ್ಕೋರಿಗೆಲ್ಲ ಪಾಠವೇ…

ಕ್ಷೇಮವಾಗಿ ಹೋಟೆಲ್ ರೂಮು ತಲುಪಿಸಿದ ಅವನಿಗೆ ಶುಕ್ರಿಯಾ ಹೇಳಿ, ಮಾರನೇ ಮುಂಜಾನೆ ವಾಪಾಸು ಹೊರಡೋಕೆ ಸಣ್ಣ ಡ್ರಾಪ್ ಕೊಡಲು ಫಿಕ್ಸ್ ಮಾಡಿ ವಿದಾಯ ಹೇಳಿದೆವು. ಅಂದು ಸಂಡೇ. ನಿನ್ನೆ ಮಳೆಯ ಕಾರಣಕ್ಕೆ ಮೊಟಕುಗೊಳಿಸಿದ್ದ ಶಾಪಿಂಗನ್ನ ರೋಹಿಣಿ ಮೇಡಂ ಮತ್ತು ದಿನೇಶ್ ತಾರ್ಕಿಕ ಅಂತ್ಯ ಮುಟ್ಟಿಸಿದರು ಎಂದು ಅವರು ರಾತ್ರಿ ಬಿರಿಯಾನಿ ಪಾರ್ಸೆಲ್ ಹಿಡಿದು ಬಂದಾಗ ತಿಳಿಯಿತು.  ಅಂತೂ ಇಂತೂ ಬೆಂಗಳೂರಿಗೆ ದಿನೇಶ್ ತಮ್ಮ ಕಾರು ಬರುವಂತೆ ವ್ಯವಸ್ಥೆ ಮಾಡಿ, ನಮ್ಮನ್ನು ಮನೆ ಬಾಗಿಲಿಗೆ ತಲುಪಿಸೋ ಹೊತ್ತಿಗೆ ನಾವು ಮನೆ ಬಿಟ್ಟು ಬರೋಬ್ಬರಿ ಹತ್ತು ದಿನಗಳಾಗಿತ್ತು.

(ಮುಕ್ತಾಯ)

ರೋಹಿತ್‌ ಅಗಸರಹಳ್ಳಿ
ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

You cannot copy content of this page

Exit mobile version