ಹಿಂಸೆ ಎನ್ನುವುದು ಕಾಲಾತೀತವಾದುದು. ಮನುಷ್ಯ ಎಷ್ಟೇ ಹಿಂಸಾತ್ಮಕ ಕಾಲಘಟ್ಟವನ್ನು ದಾಟಿ ಬಂದರೂ ಹಿಂಸೆಯ ಕುರಿತು ಅಸಹ್ಯ ಬೆಳೆಸಿಕೊಳ್ಳಲಾರ. ಆತ ಶಾಂತಿಯನ್ನು ಆಸ್ವಾದಿಸುವಷ್ಟೇ ತೀವ್ರವಾಗಿ ಹಿಂಸೆಯನ್ನೂ ಆನಂದಿಸಬಲ್ಲ ಎನ್ನುವುದಕ್ಕೆ ಮನುಷ್ಯ ಬದುಕಿನ ಉದ್ದಕ್ಕೂ ಸಾಕ್ಷಿಗಳು ದೊರೆಯುತ್ತವೆ. ಇಂತಹ ಹಿಂಸೆಗೆ ಹೆಚ್ಚು ಬಲಿಯಾಗುವವರು ಹೆಂಗಸರು, ಮಕ್ಕಳು ಹಾಗೂ ಅಲ್ಲಿನ ಅಲ್ಪಸಂಖ್ಯಾತರು, ದುರ್ಬಲರು. ಜಗತ್ತು ಇಂದು ಅಂತಹದ್ದೇ ಒಂದು ಹಿಂಸಾ ಪ್ರವೃತ್ತಿಯ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ. ಆದರೆ ಆ ಕುರಿತು ಕೊರೋನಾ ಹೊಡೆತಕ್ಕೆ ಒಳಗಾಗಿ ಜರ್ಜರಿತಗೊಂಡಿರುವ ದೇಶಗಳಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಅವರಿಗೆ ಅವರದೇ ಬದುಕನ್ನು ಕಟ್ಟಿಕೊಂಡರೆ ಸಾಕಾಗಿದೆ.
ಆದರೆ ಇಂತಹ ಸಂದಿಗ್ಧಗಳ ನಡುವೆಯೂ ಆಶಾಕಿರಣದಂತೆ ಅಲ್ಲಲ್ಲಿ ಹಿಂಸೆಯ ನೆತ್ತರಿನ ನಡುವೆಯೇ ಪ್ರೇಮದ, ಶಾಂತಿಯ ಗುಲಾಬಿ ತೋಟವನ್ನು ಕಟ್ಟುವ ಪ್ರಯತ್ನ ನಡೆಯುತ್ತದೆ. ಅಂತಹದ್ದೊಂದು ಪ್ರಯತ್ನದ ಕುರಿತಾಗಿ ಇಸ್ಲಾಮಬಾದಿನ ದಿಯ ಹದೀದ್ ಅವರ ಬರಹವನ್ನು ನಮಗಾಗಿ ರಂಜಿತಾ ಜಿ. ಎಚ್ ಅವರು ಅನುವಾದಿಸಿ ಕೊಟ್ಟಿದ್ದಾರೆ. ನಿಮ್ಮ ಓದಿಗಾಗಿ ಆ ಬರಹವನ್ನು ಪೀಪಲ್ ಮೀಡಿಯಾ ಪ್ರಕಟಿಸಿದೆ. ಓದಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ https://www.facebook.com/PeepalMediaKannada ಈ ಪೇಜಿನ ಕಮೆಂಟ್ ಬಾಕ್ಸಿನಲ್ಲಿ ಹಂಚಿಕೊಳ್ಳಿ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರದ ವರ್ಷದಲ್ಲಿ, ಅವರು ತಮ್ಮ ಹೆಚ್ಚಿನ ಹಾಗೂ ಸಮಯವನ್ನು ಹುಡುಗಿಯರ ಕುತೂಹಲ ಮತ್ತು ಶಿಕ್ಷಣವನ್ನು ಹತ್ತಿಕ್ಕಲು ವಿನಿಯೋಗಿಸುತ್ತಿದ್ದಾರೆ. ಅಲ್ಲಿನ ಹೆಣ್ಣುಮಕ್ಕಳಿಗೆ ಹೈಸ್ಕೂಲ್ ಶಿಕ್ಷಣವನ್ನು ನಿಷೇಧಿಸಲಾಗಿದೆ, ವಸ್ತ್ರಸಂಹಿತೆಯನ್ನು ಅವರ ಮೇಲೆ ಕಠಿಣವಾಗಿ ಹೇರಲಾಗಿದೆ ಮತ್ತು ಮನೆಗಳಲ್ಲೇ ಇರುವುದನ್ನು ಅನಿವಾರ್ಯ ಮಾಡಲಾಗುತ್ತಿದೆ.
ಆದರೆ ಕಾಬೂಲ್‌ನ ಒಂದು ರಹಸ್ಯ ಪುಸ್ತಕ ಕ್ಲಬ್‌ನಲ್ಲಿ, ಸುಮಾರು ಹನ್ನೆರಡು ಹದಿಹರೆಯದವರು ಕಲಿಕೆಯನ್ನು ಮುಂದುವರಿಸುವ ಮೂಲಕ ತಾಲಿಬಾನಿಗಳನ್ನು ಧಿಕ್ಕರಿಸುತ್ತಿದ್ದಾರೆ. ಮತ್ತು ಈ ಸಮಯದಲ್ಲಿ ಬೇರೊಂದು ಕಾಲ ಮತ್ತು ದೇಶದ, ತಮ್ಮಂತೆಯೇ ರಹಸ್ಯ ಜೀವನ ನಡೆಸುವ ಅನಿವಾರ್ಯತೆಗೊಳಗಾದ ಹುಡುಗಿಯೊಂದಿಗೆ ನವಿರಾದ ವಿಚಿತ್ರ ಸಂಪರ್ಕವೊಂದನ್ನು ಅವರು ಸಾಧಿಸಿದ್ದಾರೆ.
ಜಹ್ರಾ ಹೇಳುತ್ತಾಳೆ “ಅವಳು ಭರವಸೆ ಹೊಂದಿದ್ದಳು, ಅವಳು ಓದುತ್ತಿದ್ದಳು, ಅವಳು ತನ್ನ ಹಣೆಬರಹದ ವಿರುದ್ಧ ಸೆಣಸಾಡುತ್ತಿದ್ದಳು, ಹೋರಾಡುತ್ತಿದ್ದಳು.” ಅವಳು ಕಾಬೂಲ್‌ನ ಹೊರವಲಯದಲ್ಲಿರುವ ಕಟ್ಟಡವೊಂದರ ನೆಲಮಾಳಿಗೆಯಲ್ಲಿದ್ದಾಳೆ, ಅಲ್ಲಿ ಈ ಪುಸ್ತಕ ಕ್ಲಬ್ ಆಗಸ್ಟ್ ತಿಂಗಳಿನ ಒಂದು ದಿನ ಇಬ್ಬರು ಯುವ ಸ್ವಯಂಸೇವಕರ ನೇತೃತ್ವದಲ್ಲಿ ಸಂವಾದವನ್ನು ನಡೆಸುತ್ತಿದೆ, ಪ್ರಶ್ನೋತ್ತರಗಳು ನಡೆಯುತ್ತಿವೆ.
ಜಹ್ರಾ ತಾನು ಅನ್ನೆ ಫ್ರಾಂಕ್ ಳ ಬಗ್ಗೆ ಮಾತನಾಡುತ್ತಿದ್ದಾಳೆ .
ಇಲ್ಲಿ ಹುಡುಗಿಯರು, ತನ್ನ 13ನೇ ವಯಸ್ಸಿನಲ್ಲಿ ಬರೆಯಲು ಪ್ರಾರಂಭಿಸಿದ ಆ ಹದಿಹರೆಯದ ಹುಡುಗಿಯ ಪ್ರಸಿದ್ಧ ಡೈರಿಯನ್ನು ಓದುತ್ತಿದ್ದಾರೆ ಮತ್ತು ಚರ್ಚಿಸುತ್ತಿದ್ದಾರೆ, ಮತ್ತು ಅವರು ತಮ್ಮ ಹಾಗೂ ಆನ್ನೇ ಫ್ರ್ಯಾಂಕ್ ಳ ಬದುಕಿಗೂ ಇರುವ ಹೋಲಿಕೆಗಳನ್ನು ನೋಡಿ ದಂಗಾಗಿದ್ದಾರೆ: ಅವರಂತೆಯೇ, ಆನ್ನೇ ಫ್ರ್ಯಾಂಕ್ ಕೂಡ ಹಿಂಸಾತ್ಮಕ, ದಬ್ಬಾಳಿಕೆಯ ಸರ್ಕಾರದ ಕಾರಣದಿಂದಾಗಿ ಅವಿತು ಜೀವನ ನಡೆಸಲು ಒತ್ತಾಯಿಸಲ್ಪಟ್ಟ – ಆಗಿನ್ನೂ ಪ್ರಪಂಚದೆಡೆಗೆ ಕಣ್ಣು ತೆರೆಯಲು ಪ್ರಾರಂಭಿಸುತ್ತಿದ್ದ ಒಬ್ಬ ಪುಟ್ಟ ಹುಡುಗಿಯಾಗಿದ್ದಳು.
ಕಳೆದ ವರ್ಷದ ಆಗಸ್ಟ್‌ನಲ್ಲಿ, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಸ್ವಲ್ಪ ಸಮಯದ ನಂತರ ಹದಿಹರೆಯದ ಹುಡುಗಿಯರಿಗಾಗಿ ನಾಲ್ಕು ಸ್ವಯಂಸೇವಕರು ಈ ಸಾಪ್ತಾಹಿಕ ಬುಕ್ ಕ್ಲಬ್ಬನ್ನು ಸ್ಥಾಪಿಸಿದರು.
ಈ ಬುಕ್ ಕ್ಲಬ್‌ನಲ್ಲಿರುವ ಹುಡುಗಿಯರು ಹೃದಯ ವಿದ್ರಾವಕ ಕಥೆಗಳುಳ್ಳ ಸಮುದಾಯಗಳಿಂದ ಬಂದವರು: ಬಹುತೇಕ ಎಲ್ಲ ಹುಡುಗಿಯರೂ ಕೆಲವು ವರ್ಷಗಳಿಂದ ಆತ್ಮಹತ್ಯಾ ಬಾಂಬ್‌ಗಳಿಂದ ಬದುಕುಳಿದಿದ್ದಾರೆ. ಕೆಲವರು ಗಾಯಗೊಂಡಿದ್ದರು; ಕೆಲವರು ಕುಟುಂಬವನ್ನು, ಸ್ನೇಹಿತರನ್ನು ಕಳೆದುಕೊಂಡವರು. ಇನ್ನುಳಿದವರು ಮಾನಸಿಕ ಹಾನಿಯನ್ನು ಅನುಭವಿಸಿದವರು. ಅವರೆಲ್ಲರೂ ಹಜಾರಾಸ್ ಎಂಬ ತುಳಿತಕ್ಕೊಳಗಾದ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ತಾಲಿಬಾನ್ ಆಳ್ವಿಕೆಯು ಅವರ ಕಷ್ಟಗಳನ್ನು ಇನ್ನೂ ಹೆಚ್ಚಿಸಿದೆ.
ವರ್ಷಗಳಿಂದ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ, ನಾಲ್ವರು(ಯುವಕರು ಮತ್ತು ಯುವತಿಯರ) ಸ್ವಯಂಸೇವಕರ ಗುಂಪಿನಿಂದ ಈ ಕ್ಲಬ್ ನಡೆಸಲ್ಪಡುತ್ತಿದೆ. ಪರ್ಷಿಯನ್ ಮತ್ತು ಪಾಶ್ಚಿಮಾತ್ಯ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಓದುವ ಮತ್ತು ಚರ್ಚಿಸುವ ಮೂಲಕ ಹುಡುಗಿಯರು ತಮ್ಮ ಜೀವನದ ಘಟನೆಗಳನ್ನು ಅರ್ಥ ಮಾಡಿಕೊಳ್ಳಲು, ಜೀರ್ಣಿಸಿಕೊಳ್ಳಲು ಸಾಧ್ಯವಾಗಬಹುದು ಎನ್ನುವುದು ಅವರ ಯೋಚನೆ, ಕೃತಿಗಳನ್ನು ಫಾರ್ಸಿಗೆ ಅನುವಾದಿಸಲಾಗಿದೆ.
“ನಾವು ಇಲ್ಲಿಗೆ ಬರುತ್ತೇವೆ, ಪುಸ್ತಕಗಳ ಬಗ್ಗೆ ಮಾತನಾಡುತ್ತೇವೆ, ಮತ್ತು ನಂತರ ನಾವು ನಮ್ಮನ್ನು, ನಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ” ಎಂದು ಯುವ ಬುಕ್ ಕ್ಲಬ್ ಸದಸ್ಯರಲ್ಲಿ ಒಬ್ಬಳಾದ ಆರ್ಜೌ ಹೇಳುತ್ತಾಳೆ. “ಇದೊಂಥರಾ ಅದ್ಭುತ ಅನಿಸುತ್ತೆ.”
ವಿಕ್ಟರ್ ಫ್ರಾಂಕ್ಲ್ ಅವರ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಮತ್ತು ಆನ್ನೇ ಫ್ರಾಂಕ್ ಳ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ನಂತಹ ಪ್ರತಿರೋಧ ಮತ್ತು ಸಂಕಟದ ವೈಯಕ್ತಿಕ ಕಥೆಗಳ ಮೂಲಕ ಇತರ ಅಲ್ಪಸಂಖ್ಯಾತರು ದಬ್ಬಾಳಿಕೆಯ ಕಾಲದಲ್ಲಿ ಹೇಗೆ ಬದುಕುಳಿದರು (ಅಥವಾ ಇಲ್ಲ) ಎಂಬುದನ್ನು ಹುಡುಗಿಯರಿಗೆ ತೋರಿಸುವುದು ಈ ಓದಿನ ಉದ್ದೇಶವಾಗಿದೆ.
ದಶಕಗಳಿಂದ ಯಾವುದೇ ಗಣನೀಯ ಯಹೂದಿ ಸಮುದಾಯಗಳಿಲ್ಲದಿರುವ, ಪ್ರದೇಶದಲ್ಲಿ ಇದು ಗಮನಾರ್ಹ ಪ್ರಯತ್ನವಾಗಿದೆ ಮತ್ತು ಮುಸ್ಲಿಂ ಧರ್ಮಗುರುಗಳಿಂದ, ‘ಮುಸ್ಲಿಂ ಸಮುದಾಯಗಳನ್ನು ಮತ್ತು ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುವ ಪ್ರಯತ್ನ’ ಎಂಬ ಪುರಾವೆಗಳಿಲ್ಲದ ನಿಂದನೆಗಳಿಗೆ ಗುರಿಯಾಗಿವೆ.
ಆದರೆ ಈ ಬುಕ್ ಕ್ಲಬ್ಬನ್ನು ಮುನ್ನಡೆಸುವ ಹಜಾರಾ ಸ್ವಯಂಸೇವಕರು ‘ಯುರೋಪಿಯನ್ ಯಹೂದಿ ಅನುಭವ’ವನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳುತ್ತಾರೆ: ಯಹೂದಿ ಜನರನ್ನು ನಿರ್ನಾಮ ಮಾಡುವ ನಾಜಿ ಪ್ರಯತ್ನದ ಭಾಗವಾಗಿ ಒಮ್ಮೆ ಹೇಳಲಾಗದಷ್ಟು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು, ಲಕ್ಷಾಂತರ ಸಂಖ್ಯೆಯಲ್ಲಿ ಕೊಲ್ಲಲ್ಪಟ್ಟರು, ಆದರೆ ನಂತರ ಅಭಿವೃದ್ಧಿ ಹೊಂದುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಹುಡುಗಿಯರೂ ಈ ನೋಟವನ್ನು ಗ್ರಹಿಸಬಹುದು ಎಂದು ಅವರು ಭಾವಿಸುತ್ತಾರೆ.
ಸ್ವಯಂಸೇವಕರು ಜುಲೈ ಅಂತ್ಯದಲ್ಲಿ ಹುಡುಗಿಯರಿಗೆ ಫ್ರಾಂಕ್ ಡೈರಿಯನ್ನು ಓದಿಸಲು ಆಯ್ಕೆ ಮಾಡಿದರು. 70ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡ ಈ ಪುಸ್ತಕವನ್ನು ನೆದರ್ಲ್ಯಾಂಡ್ಸ್ನಲ್ಲಿ ವಾಸಿಸುವ 61 ವರ್ಷದ ಅಫ್ಘಾನ್ ನಿರಾಶ್ರಿತ ಖಲೀಲ್ ವೆದಾದ್ ಅವರು ಫಾರ್ಸಿಗೆ ಅನುವಾದಿಸಿದ್ದಾರೆ.
ಡಚ್ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತರಗತಿಯಲ್ಲಿ ತಾನು ಮೊದಲ ಬಾರಿಗೆ ಪುಸ್ತಕವನ್ನು ನೋಡಿದಾಗ, ಆನ್ನೇ ಫ್ರಾಂಕ್ ಎಂಬ ಹುಡುಗಿಯ ಅಡುಗುತಾಣದಲ್ಲಿನ ರಹಸ್ಯ ಜೀವನದ ಕಥೆಯು ದಶಕಗಳ ಯುದ್ಧದ ಮೂಲಕ ಬದುಕುತ್ತಿರುವ ಅನೇಕ ಆಫ್ಘನ್ನರ ಅನುಭವದೊಂದಿಗೆ ಹೇಗೆ ಪ್ರತಿಧ್ವನಿಸುತ್ತದೆ ಎಂಬುದು ತಮ್ಮ ಗಮನಕ್ಕೆ ಬಂದಿತು ಎಂದು ವೆದಾದ್ ಹೇಳಿದರು. ತಾನು ಪುಸ್ತಕವನ್ನು ಅನುವಾದಿಸಿದರೆ, ಅಫ್ಘಾನ್ ಹುಡುಗಿಯರು ಅವಳ ಕಥೆಯಲ್ಲಿ ತಮ್ಮನ್ನು ತಾವು ನೋಡಬಹುದು ಎಂದು ಅವರು ಆಶಿಸಿದರು.
ವೆದಾದ್ ಅವರ ಪ್ರಯತ್ನಕ್ಕೆ ಆನ್ನೇ ಫ್ರಾಂಕ್ ಹೌಸ್‌ನಿಂದ ಬೆಂಬಲ ಸಿಕ್ಕಿತು, ಅವರು ಅನುವಾದದ ಮೇಲುಸ್ತುವಾರಿ ವಹಿಸಿಕೊಂಡರು ಮತ್ತು ಸುಮಾರು 1,500 ಪ್ರತಿಗಳನ್ನು ಪ್ರಕಟಿಸಲು ಪಾವತಿಸಿದರು.
“ಶುರುವಿಗೆ ಈ ಹುಡುಗಿಯರು ಅನ್ನೆ ಫ್ರಾಂಕ್ ಳೊಂದಿಗೆ ತುಂಬಾ ಗಾಢ ಸಂಬಂಧ ಹೊಂದಿದ್ದಾರೆ ಎಂಬುದು ನಿಮಗೆ ಆಶ್ಚರ್ಯಕರವಾಗಿ ಕಾಣಿಸಬಹುದು, ಆದರೆ ತಮ್ಮ ಜೀವ ಉಳಿಸಿಕೊಳ್ಳಲು ಅಡಗಿಕೊಳ್ಳಬೇಕಾದ, ಭಯ ಮತ್ತು ಹಿಂಸೆಯನ್ನು ಅನುಭವಿಸುವ ಯುವಜನರಿಗೆ, ಅವರು ಒಬ್ಬಂಟಿಯಲ್ಲ ಎಂದು ತಿಳಿದುಕೊಳ್ಳುವುದು ಸ್ವಲ್ಪ ನೆಮ್ಮದಿ ನೀಡಬಹುದು” ಎಂದು ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಅನ್ನಿ ಫ್ರಾಂಕ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾಯ್ಲ್ ಸ್ಟೀವಿಕ್ ಹೇಳುತ್ತಾರೆ… (ಈ ಕೇಂದ್ರವು ಆಂಸ್ಟರ್‌ಡ್ಯಾಮ್‌ನಲ್ಲಿರುವ ಆನ್ನೇ ಫ್ರಾಂಕ್ ಹೌಸ್‌ನ ಅಧಿಕೃತ ಪಾಲುದಾರ ಸಂಸ್ಥೆ).
“ನಮ್ಮ ನಡುವಿನ ವ್ಯತ್ಯಾಸಗಳು ಏನೇ ಇರಲಿ, ನಮ್ಮಲ್ಲಿನ ಸಾಮಾನ್ಯವೆನ್ನಬಹುದಾದ ಮಾನವೀಯತೆಯನ್ನು ನೆನಪಿಸಿಕೊಳ್ಳಲು ಈ ಡೈರಿ ನಮಗೆ ಸಹಾಯ ಮಾಡುತ್ತದೆ” ಎಂದು ಸ್ಟೀವಿಕ್ ಹೇಳುತ್ತಾರೆ. “ಹತಾಶೆಗೆ ಒಳಗಾಗದಿರುವಂಥ ಆನ್ನೇಯ ಬಲವಾದ ಉತ್ಸಾಹದ ನಿರ್ಣಯವು ಪ್ರಪಂಚದಾದ್ಯಂತದ ಜನರನ್ನು ಪ್ರೇರೇಪಿಸಿದೆ.”
2005 ರಲ್ಲಿ, ಪುಸ್ತಕದ ಫಾರ್ಸಿ ಆವೃತ್ತಿಯನ್ನು ಪ್ರಕಟಿಸಿದ ನಂತರ, ವೆದಾದ್ ಅವರು ಅಫ್ಘಾನಿಸ್ತಾನಕ್ಕೆ ಭೇಟಿ ಕೊಟ್ಟರು ಮತ್ತು ಪುಸ್ತಕವನ್ನು ಪರಿಚಯಿಸಲು ಪತ್ರಕರ್ತರು, ನಾಗರಿಕ ಸಮಾಜದ ಕಾರ್ಯಕರ್ತರೊಂದಿಗೆ ಸಣ್ಣ ಸಭೆಗಳನ್ನು ನಡೆಸಿದರು. ಅವರು ಆಫ್ಘನ್ ಹದಿಹರೆಯದ ಹುಡುಗಿಯರೊಂದಿಗೆ ಓದುವಿಕೆಯನ್ನು ಸಹ ನಡೆಸಿದರು.
ವೆದಾದ್ ಅವರು ಈ ಗುಪ್ತ ಪುಸ್ತಕ ಕೂಟದ ಕುರಿತು ಕೇಳಿರಲಿಲ್ಲ, ಆದರೆ ಆಫ್ಘನ್ ಹುಡುಗಿಯರು ಅನ್ನೆ ಫ್ರಾಂಕ್ ಅವರ ಕಥೆಯಲ್ಲಿ ಅರ್ಥವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಸಂತೋಷವಾಗಿದೆ ಎಂದು ಹೇಳಿದರು. “ಅವರ ಧ್ಯೇಯವು ಒಂದು ರೀತಿಯಲ್ಲಿ ನೆರವೇರಿದೆ ಎಂದು ಭಾಸವಾಗುತ್ತಿದೆ” ಎಂದು ಇಂಗ್ಲೀಷ್ ಮಾತನಾಡಲು ಬಾರದ ತನ್ನ ತಂದೆಯ ಮಾತನ್ನು ಅನುವಾದಿಸಿ ವೆದಾದ್ ಅವರ ಮಗ ಖಲೀದ್ ನಮಗೆ ಹೇಳಿದರು.
ಬುಕ್ ಕ್ಲಬ್‌ನ ಸದಸ್ಯಳಾದ ಆರ್ಜೌ ‘ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಹದಿಹರೆಯದ ಹುಡುಗಿಯ ಪ್ರತ್ಯಕ್ಷ ಅನುಭವಗಳ ಖಾತೆಯನ್ನು ಇದೇ ಮೊದಲ ಬಾರಿಗೆ ಓದಿದೆ’ ಎಂದು ಹೇಳಿದಳು. “ನನಗನ್ನಿಸುತ್ತೆ, ಆನ್ನೇ ಫ್ರ್ಯಾಂಕ್ ನನ್ನ ಗೆಳತಿ ಎಂದು…”
“ನನಗೆ ಮತ್ತು ಅನ್ನೆ ಫ್ರಾಂಕ್ ಗೆ ಏನೋ ಸಾದೃಶಗಳಿವೆ ” ಎಂದು ಆರ್ಜೌ ಹೇಳುತ್ತಾಳೆ. “ನಾವಿಬ್ಬರೂ ಯುದ್ಧದ ಬಲಿಪಶುಗಳು. ಅಂದರೆ, ಆನ್ನೇ ಫ್ರಾಂಕ್ ಯುದ್ಧದಿಂದ ಬಳಲಿದಳು, ಶಾಲೆಗೆ ಹೋಗಲು ಸಾಧ್ಯವಿರಲಿಲ್ಲ, ತುಂಬಾ ಮುಕ್ತವಾಗಿ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಮತ್ತು ನನಗೂ ಅದೇ ಪರಿಸ್ಥಿತಿ ಇದೆ.”
ಆನ್ನೇ ಫ್ರಾಂಕ್‌ಳಂತೆಯೇ, ಆರ್ಜೌ ಹೇಳುತ್ತಾಳೆ, “ನಾವೂ ಕೇವಲ ಕತ್ತಲೆಯ ಸ್ಥಳದಲ್ಲಿದ್ದೇವೆ ಮತ್ತು ಯಾವುದೇ ಬೆಳಕು ಕಾಣಿಸುತ್ತಿಲ್ಲ” ಎಂದು. “ಮತ್ತು ಇದರ ನಂತರ ಏನಾಗುತ್ತದೆ ಎಂದು ನಮಗೆ ಅರ್ಥವಾಗುತ್ತಿಲ್ಲ.” ತಾಲಿಬಾನ್ ಅಧಿಕಾರಕ್ಕೆ ಬರುವ ಮೊದಲು, ಆರ್ಜೌ ತನ್ನ ಗ್ರೇಡ್‌ಗಳು ತುಂಬಾ ಉತ್ತಮವಿದ್ದವು ಎಂದು ಹೇಳುತ್ತಾಳೆ, ಕಂಪ್ಯೂಟರ್ ವಿಜ್ಞಾನ ಅಧ್ಯಯನ ಮಾಡಲು ವಿದೇಶದಲ್ಲಿರುವ ಕಾಲೇಜುಗಳಿಗೆ ಅರ್ಜಿ ಸಲ್ಲಿಸಲು ಅವಳು ಬಯಸಿದ್ದಳು. ಆ ಕನಸು ಈಗ ಮುಗಿದಿದೆ.
ಆಕೆಗೆ ಈಗ 17 ವರ್ಷ, ಆದರೆ ಅವಳ ಹದಿಹರೆಯದ ಮುಖದ ಮೇಲಿನ ಮೊಡವೆಗಳ ವಿರುದ್ಧ ಚಕಿತಗೊಳಿಸುವಂತೆ ಅವಳ ಕೂದಲು ಆಗಲೇ ಬೂದು ಬಣ್ಣಕ್ಕೆ ತಿರುಗಿದೆ. ತಾನು ಅನುಭವಿಸಿದ ಸಂಕಟವನ್ನು ಅವಳು ಹಿಡಿದಿಟ್ಟುಕೊಂಡಿರುವುದರಿಂದ ಆ ಬೂದು ಬಣ್ಣ ಬಂದಿದೆ ಎಂದು ಅವಳು ಹೇಳುತ್ತಾಳೆ .
ಆದರೂ “ಆನ್ನೇ ಫ್ರಾಂಕ್ ಪರಿಸ್ಥಿತಿಯು ನಮಗಿಂತ ಹೆಚ್ಚು ಕಷ್ಟಕರವಾಗಿತ್ತು ಎನ್ನವುದು ನನಗೆ ತಿಳಿದಿದೆ” ಎಂದು ಆರ್ಜೌ ಹೇಳುತ್ತಾಳೆ. “ಅವರು ಹೊರಗೆ ಹೋಗಲು ಸಾಧ್ಯವಿರಲಿಲ್ಲ, ಮತ್ತು ಪ್ರತಿ ನಿಮಿಷವೂ ಅವರು ಸ್ವಾತಂತ್ರ್ಯದ ಬಗ್ಗೆ ಯೋಚಿಸುತ್ತಿದ್ದರು, ಆದರೆ ಕೊನೆಯಲ್ಲಿ, ಅವರು ಸಾಯುತ್ತಾರೆ. ಹಾಗಾಗಿ ನನ್ನ ಪರಿಸ್ಥಿತಿಯ ಬಗ್ಗೆ ನಾನು ಯೋಚಿಸಿದರೆ, ಈ ವಿಷಯದಲ್ಲಿ ಬದುಕಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಏಕೆಂದರೆ ನಾನು ನನ್ನ ಆಲೋಚನೆಗಳನ್ನು ಹಂಚಿಕೊಳ್ಳಬಲ್ಲ ಈ ಜನರನ್ನು ಹೊಂದಿದ್ದೇನೆ. ನಾವು ಒಟ್ಟಿಗೆ ಸೇರಬಹುದು ಮತ್ತು ನಮಗೆ ಬೇಕಾದುದನ್ನು ಮಾತನಾಡಬಹುದು.”
ಲ್ಯಾವೆಂಡರ್ ಹೆಡ್ ಸ್ಕಾರ್ಫ್ ಮತ್ತು ನೇರಳೆ ನಿಲುವಂಗಿಯನ್ನು ಧರಿಸಿದ ಇನ್ನೊಬ್ಬ ಹುಡುಗಿ, 17 ವರ್ಷದ ಮಸೌಮಾ, ಮಾತನಾಡಲು ಕೈ ಎತ್ತುತ್ತಾಳೆ. ‘ತಮ್ಮೊಂದಿಗೆ ಅಡುಗುತಾಣ ಹಂಚಿಕೊಂಡ ಹದಿಹರೆಯದ ಹುಡುಗನ ಮೇಲಿನ ಮೋಹ ಮತ್ತು ತನ್ನ ತಾಯಿಯೊಂದಿಗಿನ ಘರ್ಷಣೆಯನ್ನು ಒಳಗೊಂಡಂತೆ ತನ್ನ ವಿಶಿಷ್ಟವಾದ ಹದಿಹರೆಯದ ಸಮಸ್ಯೆಗಳ ಬಗ್ಗೆ ಬರೆಯುತ್ತಲೇ ತಾನು ಕೊಲೆಗೀಡಾಗಬಹುದೆಂಬ ನಿಜವಾದ ಭಯವನ್ನು ಆನ್ ಫ್ರಾಂಕ್ ಹೇಗೆ ಎದುರಿಸಿದಳು’ ಎಂಬಲ್ಲಿ ತನ್ನ ಜೀವನದ ಜೊತೆ ಹೋಲಿಕೆ ಕಂಡುಕೊಂಡದ್ದಾಗಿ ಅವಳು ಹೇಳುತ್ತಾಳೆ.
“ನಾನು ಇಡೀ ಪುಸ್ತಕವನ್ನು ಇಷ್ಟಪಟ್ಟೆ. ನನ್ನ ಸ್ನೇಹಿತೆಯೊಬ್ಬಳು ಅವಳ ನೋವು, ಅವಳ ಕಥೆಯನ್ನು ಹೇಳುತ್ತಿದ್ದಂತೆ ನನಗನಿಸಿತು. ಅವಳು ಅವಳ ಡೈರಿಯನ್ನು ಕಿಟ್ಟಿ ಎಂದು ಕರೆದಾಗ, ನನಗೆ ನಗು ಬಂದಿತು ಹಾಗೂ ನಾನೇ ಕಿಟ್ಟಿ ಎಂದು ನಾನು ಊಹಿಸಿಕೊಂಡೆ” ಎಂದು ಮಸೂಮಾ ನಗುತ್ತಾ ಹೇಳುತ್ತಾಳೆ .
ಮಸೌಮಾ ಆನ್ನೇ ಫ್ರಾಂಕ್ ಒಂದು ದೃಷ್ಟಿಕೋನವನ್ನು ಹೊಂದಲು ಪ್ರಯತ್ನಿಸುವುದನ್ನು ಮೆಚ್ಚುವುದಾಗಿ ಹೇಳುತ್ತಾಳೆ: ಫ್ರಾಂಕ್ ಕಲಿಯುವುದನ್ನು ಬಿಟ್ಟುಕೊಡಲಿಲ್ಲ. ಅವಳು ತನ್ನ ಶಿಕ್ಷಣವನ್ನು ರಹಸ್ಯವಾಗಿ ಮುಂದುವರಿಸಲು ಪ್ರಯತ್ನಿಸಿದಳು, ಪತ್ರ ವ್ಯವಹಾರದ ಮೂಲಕ ಶಾರ್ಟ್‌ಹ್ಯಾಂಡ್ ಕೋರ್ಸ್ ಅನ್ನು ಸಹ ತೆಗೆದುಕೊಂಡಳು. ಮಸೌಮಾ ಕೂಡ ತನ್ನ ಶಿಕ್ಷಣವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾಳೆ.
ಹೆಣ್ಣುಮಕ್ಕಳಿಗೆ ಮಾಧ್ಯಮಿಕ ಶಿಕ್ಷಣದ ಮೇಲೆ ತಾಲಿಬಾನ್‌ನ ಹೇರಿರುವ ನಿಷೇಧದ ಹೊರತಾಗಿಯೂ, ಮಸೌಮಾ ಮತ್ತು ಇತರ ಹುಡುಗಿಯರು ಹೈಸ್ಕೂಲ್‌ಗೆ ನುಸುಳುತ್ತಿದ್ದರು, ಹುಡುಗರಿಗೆ ಮಾತ್ರ ನಡೆಯುತ್ತಿದ್ದ ತರಗತಿಗಳಿಗೆ ಹಾಜರಾಗಲು ರಹಸ್ಯವಾಗಿ ಅವರಿಗೆ ಅವಕಾಶ ನೀಡಲಾಗಿತ್ತು. ಹುಡುಗಿಯರು ತಾವು ಯಾರ ಗಮನಕ್ಕೂ ಬೀಳದಿರಲಿ ಎಂದು ಆಶಿಸುತ್ತಾ ಸಣ್ಣ ಸಂಖ್ಯೆಯಲ್ಲಿ ಶಾಲೆಯ ಗೇಟ್ ಒಳಗೆ ನುಸುಳುತ್ತಿದ್ದರು .
“ಆದರೆ ನಾವು ಹಲವಾರು ಮಂದಿ ಹುಡುಗಿಯರಿದ್ದೆವು,” ಮಸೌಮಾ ಹೇಳುತ್ತಾರೆ. ಸ್ಥಳೀಯ ತಾಲಿಬಾನ್ ಭದ್ರತಾ ಪಡೆಗಳು ಹುಡುಗಿಯರು ಒಳಗೆ ಮತ್ತು ಹೊರಗೆ ಬರುವುದನ್ನು ಗಮನಿಸುತ್ತಾರೆ ಎಂದು ಶಾಲೆಯ ಪ್ರಾಂಶುಪಾಲರು ಹೆದರಿದ ಕಾರಣ ನಮ್ಮನ್ನು ಮರಳಿ ಮನೆಗೆ ಕಳುಹಿಸಲಾಯಿತು. “ಅಂದು ಹುಡುಗಿಯರು ಅಳುತ್ತಿದ್ದರು,” ಮಸೌಮಾ ನೆನಪಿಸಿಕೊಳ್ಳುತ್ತಾಳೆ. “ನನ್ನ ಸಹೋದರಿ ಇನ್ನೂ ಆಘಾತದಿಂದ ಹೊರಬಂದಿಲ್ಲ ಮತ್ತು ಅವಳಿಗೆ ಈಗ ಶಿಕ್ಷಣ ಪಡೆಯುವ ಆಶೆಯೂ ಇಲ್ಲ.”
ಮಸೌಮಾ ಮತ್ತು ಇತರ ಹುಡುಗಿಯರು ಆನ್ನೇ ಫ್ರಾಂಕ್ ಡೈರಿಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ, ಅದು ಹೇಗೆ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದರೂ ಸಹ. ಅವರ ಕುಟುಂಬ ದ್ರೋಹಕ್ಕೆ ಗುರಿಯಾಗಿ, ಅವರ ಅಡಗುತಾಣ ಬಹಿರಂಗವಾದ ನಂತರ ಆನ್ನೇ ಫ್ರಾಂಕ್ 1945ರಲ್ಲಿ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಟೈಫಸ್‌ನಿಂದ ನಿಧನಳಾದಳು. ಆಕೆಗೆ ಆಗ 16 ವರ್ಷ.
ಆನ್ನೇ ಫ್ರಾಂಕ್ ತನ್ನ ವಿಧಿಯ ವಿರುದ್ಧ ಹೋರಾಡಿದಳು ಎಂದು ವಿವರಿಸಿದ ಯುವತಿ ಜಹ್ರಾ, ಅಂತ್ಯವನ್ನು ತಿಳಿದುಕೊಂಡದ್ದು ಅವಳನ್ನು ಖಿನ್ನತೆಗೆ ಒಳಪಡಿಸಲಿಲ್ಲ ಎಂದು ಹೇಳುತ್ತಾರೆ. “ನಾನು ಎಷ್ಟು ದಿನ ಬದುಕುತ್ತೇನೆ, ಯಾವಾಗ ಸಾಯುತ್ತೇನೆ ಎಂದು ಯಾರಿಗೂ ತಿಳಿದಿಲ್ಲ, ನೀವು ಮಾಡಬಹುದಾದ ಏಕೈಕ ವಿಷಯವೆಂದರೆ ನಿಮ್ಮ ಜೀವನಕ್ಕೆ ಅರ್ಥವನ್ನು ನೀಡುವ ಏನನ್ನಾದರೂ ಜಗತ್ತಿಗೆ ಬಿಟ್ಟುಹೋಗುವುದು.”
(1947ರಲ್ಲಿ ಪ್ರಕಟವಾದ) ತನ್ನ ಡೈರಿಯನ್ನು ಬಿಟ್ಟುಹೋದ ಆನ್ನೇ ಫ್ರಾಂಕ್‌ಳಂತೆ.
“ಇದೀಗ, ತಾಲಿಬಾನ್ ಅಧಿಕಾರದಲ್ಲಿದೆ,” ಜಹ್ರಾ ಹೇಳುತ್ತಾರೆ. “ಒಂದು ದಿನ, ಅವರೂ ಕೂಡ ಹೋಗುತ್ತಾರೆ, ಆಗ ಬಹುಶಃ ಜನರು ನನ್ನಂತಹ ಹುಡುಗಿಯರಿಗೆ ತಾಲಿಬಾನ್ ಏನು ಮಾಡಿತು ಎಂಬುದನ್ನು ಮರೆತುಬಿಡುತ್ತಾರೆ.”
ಆನ್ನೇ ಫ್ರಾಂಕ್‌ಳಂತೆ ತಾನೂ ಒಂದು ಪುಸ್ತಕವನ್ನು ಬರೆಯಲು ಬಯಸುತ್ತೇನೆ, ಈ ಪುಸ್ತಕದ ಮೂಲಕ ಅಫ್ಘಾನಿಸ್ತಾನದ ಹದಿಹರೆಯದ ಹುಡುಗಿಯರ ಬಗ್ಗೆ ಜಗತ್ತು ತಿಳಿಯುತ್ತದೆ ಎಂದು ಅವಳು ಹೇಳುತ್ತಾಳೆ.
(ಹುಡುಗಿಯರ ಹೆಸರುಗಳನ್ನು ಗೌಪ್ಯತೆಯ ಕಾರಣಕ್ಕಾಗಿ ಬದಲಾಯಿಸಲಾಗಿದೆ, ಇದು ನವೆಂಬರ್ ತಿಂಗಳಿನಲ್ಲಿ ಪ್ರಕಟವಾದ ಸಂದರ್ಶನವಾಗಿದ್ದು ಸದ್ಯ ಪುಸ್ತಕ ಕೂಟದ ಸ್ವಯಂ ಸೇವಕರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ)
– ದಿಯ ಹದೀದ್, ಇಸ್ಲಾಮಾಬಾದ್
ಅನು: ರಂಜಿತಾ ಜಿ. ಎಚ್