ಬಳಿಮೇಸ್ತಿ.

0

ಕುಂದಾಪುರದ ಗುಡ್ಡಿಯಂಗಡಿಯವರಾದ ಸಂತೋಷ್‌ ನಂಜನಗೂಡಿನ ಹೆಗ್ಗಡಹಳ್ಳಿಯ ಶಾಲೆಯೊಂದರಲ್ಲಿ ನಾಟಕದ ಮೇಷ್ಟ್ರು ಕುಂದಾಪುರ ಕನ್ನಡದಲ್ಲಿ ಅದ್ಭುತವಾಗಿ ಬರೆಯಬಲ್ಲ ಇವರಿಗೆ ನಂಜನಗೂಡು ಕಡೆಯ ಕನ್ನಡವೂ ಸಲೀಸು! ಹೀಗೆ ಎರಡೆರಡು ಕಡೆಯ ಕನ್ನಡವನ್ನು ಸುಲಲಿತವಾಗಿ ಬಳಸಿಕೊಳ್ಳಬಲ್ಲ ಇವರು ಎರಡೂ ಕನ್ನಡದ ಬನಿಗಳನ್ನು ತಮ್ಮ ಕತೆಗಳಲ್ಲಿ ತಂದಿದ್ದಾರೆ. ಶಿಕ್ಷಕರಾಗಿ ಸದಾ ಕ್ರಿಯಾಶೀಲರಾಗಿ ಮಕ್ಕಳಿಂದ ಸಾಕಷ್ಟು ಸೃಜನಶೀಲ ಕೆಲಸ ಮಾಡಿಸುವ ಇವರು ʼಪೀಪಲ್‌ ಮೀಡಿಯಾʼ ಓದುಗರಿಗಾಗಿ ಕತೆಯೊಂದನ್ನು ಬರೆದುಕೊಟ್ಟಿದ್ದಾರೆ. ಓದುವ ʼಸಂತೋಷʼ ನಿಮ್ಮದಾಗಲಿ

-1-

“ನಾ ಹುಟ್ಟದ್ದ್ ದಿನುವೇ ಈ ಲೋಕ ಹುಟ್ಟದ್ದ್ ಬಲ್ಯಾ! ನನ್ನ್ ಅಪ್ಪಯ್ಯ ಅಬ್ಬಿ, ಈ ಕಾನ್ಗುಡ್ಡಿ, ಈ ಮಳಿ, ಹೊಳಿ, ಕಲ್ಲು, ಹುಲ್ಲು, ಆಕಾಶ-ಭೂಮಿ ಎಲ್ಲಾ….. ಅಂದ್ರೆ ಎಲ್ಲಾ ಹುಟ್ಟದ್ದ್ ಗುತ್ತಾಯ್ತಾ? ಗುತ್ತಾಯ್ತಾ…..?

‘………..’

‘ಅಗಾ! ಹೂಂ ಅಂಬುಕೂ ಜಡ ಈ ಸಿರಂಡಿಗೆ. ಥೂ… ನಿನ್ ಸೊಡ್ಡಿಗ್ ಅಕ್ಕಚ್ಚ್ ಹಾಕುಕೆ.”

“ನನ್ ಹೆಣ್ತಿ ಸೀತುಗೆ ಕನ್ನೆಸ್ತ್ರಿ ಮೆಟ್ಕಂಡಿತಂಬ್ರ್!! ಅದ್ನ ನಿಮಿತ್ತ ಕಂಡ್ಕ ಆ ಬಟ್ರು ಹೇಳೂದ್. ನಾನ್ ಅವ್ರ್ ಹೇಳದ್ನ ಕೇಂಡ್ಕ ‘ಹೌದಾ ದೇವ್ರೇ… ಅಯ್ಯಬ್ಯಾ ನನ್ ಹೆಣ್ತಿನ ಉಳ್ಸಿಕೊಡಿ ದೇವ್ರೆ… ನಾನ್ ಏಗಳಿಕೂ ಬುಳ್ಳ ಕುಡ್ಕ ಹಾದಿ ಮೇನ್ ಬೀಳು ಜನ…  ನನ್ ಮಕ್ಕಳಿಗ್ ಗತಿಗೋತ್ರ ಇಲ್ದಂಗಾತ್ತ್…’ ಅಂದ್ಕಂಡ್ ಕೈಮುಕ್ಕ ನಿತ್ಕಂಬದ್.”

“ಯಾರದ್ದೋ ಭೂತು ಇನ್ಯಾರನ್ನೋ ಮೆಟ್ಕಂಬದಂಬ್ರ್! ಅಶ್ಟಕ್ಕೂ ಭೂತು ಮೆಟ್ಕಂಬುದಂದ್ರೆ ಎಂತದೆ? ನಂಗಂತೂ ಗುತ್ತಿಲ್ಲ. ಹ್ವಾ ಸಿರಂಡಿ ಮಾರಾಜ ನಿಂಗ್ ಗುತಿತನಾ? ಆ ಬಟ್ರಿಗೂ ಗುತ್ತಿಪ್ಪದ್ ಕಾಣೆ. ಕವ್ಡಿ ಆಡಸರಂಬ್ರ್, ಕಪ್ಪ್ ಹಾಕರಂಬ್ರ್, ನಿಮಿತ್ತ ಕಂಡ್ರಂಬ್ರ್… ಭೂತು ಮೆಟ್ಕಂಡಂದ್ ತೋರ್ತಂಬ್ರ್ ಕಾಣ್. ಆ ಚೆಣ್ಣ್ ಪೀಂಕುಟಿ ಕವ್ಡಿಯಂಗೆ, ನಾಕ್ ಅಕ್ಕಿ ಕಾಳಾಗೆ, ಅಡ್ಕಿ ಸುಣ್ಣ ಹೊಯ್ಸಪ್ಪ್ ಹಯ್ಕ ಜಯ್ಕ ತಿಂಬ್ ಎಲಿಯಾಗೆ ಭೂತು ಪಿಸಾಚಿ ತೋರುದಾಯ್ರೆ… ಎಲಿ ಹಂಬ್ಸದ್ ಬಳ್ಳಿ ಅಡ್ಚ್ ಹ್ವಾಪ್ಕಾತ್ತಿತ್ತಾ! ನಿಮಿತ್ತ ಕಂಡೂ… ಕಂಡೂ ನಮ್ ನಸೀಬ್ ಹಾಳಾಯ್ತಶ್ಟೆ; ಅವ್ರ್ ಮಾತ್ರ ಬೆಗ್ರ್ ಸೊರ್ಸದೆ ದಡ್ಡರಾರ್. ನಾವ್ ಕುಡ್ಕ ಹಾದಿಮೇಲ್ ಬೀದ್ದೊ” ಆಟದಂಗೆ ಸ್ತ್ರೀ ವೇಶಗಳು ಬರೀ ಮದ್ದಳೆಯಲ್ಲಿ ಕುಣಿವಂಗೆ ಆಸಾಡಿ ಮಳಿ ದಗಡ್ದಿಮ್ಮಿ ಆಡ್ತಾ ಇದ್ದದ್ದು ಕಂಡ ಕುಶ್ಟಣ್ಣ ಆ ದಿನ ಸುರುವಾದಾಗ ಬಟ್ರ ಮನೆಗೆ ಬದಿಗೆ ನಿಮಿತ್ತ ಕೇಂಡ್ಕ ಬತ್ತೆ ಅಂದೇಳಿ ಕಂಬಳಿ ಕುಪ್ಪಿ ಹಯ್ಕಂಡು ಹೊಯ್ಟ. ಹುಲಿ ಕೂಗುವ ಆ ಸಹ್ಯಾದ್ರಿಯ ಕಾನು ಕಡು ಹಸುರು ಕಂಬಳಿ ಹೊದ್ಕಂಡು ಮದ್ದಾನೆಯಂತೆ ಇನ್ನು ಮನಿಕಂಡೇ ಇತ್ತು. ಮಳೆಯಿಂದಾಗಿ ನಿಟ್ಗೇಡು ಹಿಡಿದವರ ಹಾಗೆ ಮಗ್ಗಲು ಬದಲಿಸದೆ ಹಂಗೇ ಬಿದ್ದಿತ್ತು. ಆ ಕಡು ಹಸುರು ಕಂಬಳಿ ಹರಿದು ಅಲ್ಲಲ್ಲಿ ಹಂಚಿನ ನಾಕಾರು ಮನೆಗಳು ಹುಲ್ಲಿನ ಹತ್ತಾರು ಬಿಡಾರಗಳು ಆ ಮದ್ದಾನೆಗೆ ಆದ ಗಾಯದಂತೆ ಕಾಣಿಸುತ್ತಿತ್ತು.

ಅದ್ರಾಗೊಂದು ಬಿಡಾರ ಕುಶ್ಟಣ್ಣಂದು. ಅಂವ ಕಂಬಳಿ ಕುಪ್ಪೆ ಹಾಕಂಡು ಬಟ್ರ ಮನೆಗೆ ಹೋಗಿ ನಿಮಿತ್ತ ಕೇಂಡು ಸೀದಾ ಸರಾಯಿ ಅಂಗಡಿಗೆ ನೆಡ್ದಿದ್ದ. ಕುಶ್ಟಣ್ಣನ ಅಮುಲು ಏರ್ತಾ ಇದ್ದಂಗೆ ಮಳೆಗೂ ತಲೆಕೆಟ್ಟು ಚಂಡ-ಮುಂಡರು ಬಪ್ಪತಿಗೆ ಜೋಡು ಚಂಡೆ ತಕ್ಕಂಡು ಬಾರಿಸ್ತ ಹೊಡ್ತ ತಕ್ಕಂಡಿತು. ‘ಹೊಯ್ಬೇಡ ಕುಶ್ಟ ಮಳಿ ಸಲ್ಪ ಕಡ್ಮಿ ಆಯ್ಲಿ’ ಅಂದ ಸರಾಯಿ ಅಂಗ್ಡಿ ಸೇಸುವಣ್ಣನ ಮಾತಿಗೆ ‘ಇದ್ರಪ್ಪನಂಥ ಮಳಿ ಕಂಡಿದೆ ನಾ’ ಅಂದ್ಕಂಡು ಕಂಬಳಿ ಕುಪ್ಪಿ ಹಯ್ಕಂಡು ವಾಲಾಡ್ತಾ ತೇಲಾಡ್ತಾ ಹೊರಟ. ಬಿಡಾರದ ಬದಿಗೆ ಹೊರಟಂವ ಶಾಲಿ ಜೆಡ್ಡು ದಾಟಿ ಎತ್ತಿನಗಾಡಿ ಓಡಾಡುವ ದಾರಿಯ ಹತ್ರ ಬರ್ತಿದ್ದಂಗೆ ಮೈ ಒಂದು ಬದಿ ತೇಲಿ ಅತ್ತತ್ತತ್ತ ಹೋದಂವ ಸಿರಂಡಿ ಕಣಿಗೆ ಬಿದ್ದ. ಬಿದ್ದವನಿಗೆ ಸುಮಾರು ಹೊತ್ತು ದಾತ್ ಹೋದಂಗೆ ಆಗಿ ಎಶ್ಟೋ ಹೊತ್ತು ಆರ್ಮೇಲೆ ಎಚ್ಚರ್ಕಿ ಆಯ್ತು. ಇಶ್ಟಾದ್ರೂ ಅವನ ಮತ್ತು ಮಳೆಯ ಅಮಲು ಜಾಸ್ತಿ ಆಗ್ತಿತ್ತೇ ಹೊರ್ತು ಕಡ್ಮೆ ಆಗುವಂತೆ ಕಾಣ್ಲಿಲ್ಲ.

“ಭೂತು ಅಂದ್ಕ ಹೇಳೀ ಹೇಳಿ ನಮ್ಮಂತರ್ನೆಲ್ಲ ಹೆದ್ರಿಸಿ ಬೆಚ್ಚಿರ್. ಜಂಗ್ ಮೇಲೆ ಒಂದ್ ನುಗ್ಲಿನ್ ತುಂಡ್ ಇದ್ದಿರೆ ನಾನೂ ಕಾಂತಿದ್ದಿದೆ ಅದೆಂತ ಭೂತು ಅಂದೇಳಿ. ಅದ್ರ್ ವಾಲಿ ಕಳುಕೆ, ನಮ್ಮಂತ ಬಡುವರ್ನೆ ಹುಡ್ಕ ಬತತ್ತಲೆ! ಏಯ್ ಸಿರಂಡಿ ಮಾರಾಜ… ಕಾಣಾ, ಇದೆಲ್ಲ ನಂಗೆ ಕುಡ್ದಾಗಳಿಕೆ ಮಾತ್ರ ಹಂಬ್ಲಾಪದ್. ಕುಡದ್ದ್ ಹಿರೀತಾ… ತಕೊ ಅದೇ ಬಟ್ರ ಮನಿ ಹಿತ್ಲಾಗ್ ನಿತ್ಕಂತೆ. ನಾನ್ ಮನ್ಸ ಆಯಿ ಹುಟ್ಟುಕಾಗ ಇದ್ದಿತ್. ನಾಯ್ ನಾಯಿ ಆಯಿ ಹುಟ್ಕಿದ್ದಿತ್, ಏನಂತೆ? ನಾಯಿಗೆ ನಾಗನ್ ನೆಡಿಯೂ ಒಂದೆ ಮಲ್ಗಿ ಹೂಗೂ ಒಂದೆ. ಎಲ್ಲಿಗಾರೂ ಕಾಲ್ ನೆಗಿತ್, ಕಡೀಕೆ ಊರ್ಮೇಲೆ ಬಳಿತ್. ನಾವ್ ನಾಯ್ಕಿಂತ ಕಡಿ. ನಾಯ್ ಹ್ವಾದಲ್ಲೂ ಹ್ವಾಪುಕಿಲ್ಲ ನಾವ್. ಮೈಲ್ಗಿ ಆತ್ತಂಬ್ರ್. ನೀರ್ ಕಿಟ್ಟುಕಿಲ್ಲ, ಮನಿಬಾಗ್ಲಿಗ್ ಹ್ವಾಪ್ಕಿಲ್ಲ, ದೇವ್ರಮನಿಗೂ ಹ್ವಯ್ಕರಿಲ್ಲ, ಅಡ್ಚ್ ಕೂಕಂಬ್ಕಿಲ್ಲ. ಆರೆ ಅವ್ರ್ ಮನಿ ಗೆದ್ದಿಗೆ, ತ್ವಾಟಕ್ಕೆ ಮಾತ್ರ ನಮ್ ಬೆಗ್ರ್ ಸೊರಿಕ್. ಏಯ್ ಸಿರಂಡಿ ಮಾರಾಜ ಮಾತಾಡ ಮಾರಾಯ. ಒಬ್ನಿಗೆ ಮಾತಾಡಿ ಮಾತಾಡಿ ದವ್ಡಿ ಎಲ್ಲಾ ನೋಯ್ತಿತ್ತ್. ಹ್ವಾ… ಇಕಾಣ್ ನಾನೆಲ್ಲಾರೂ ನಾಯಿ ಆಯ್ರೆ ಅವ್ರ್ ನನಗ್ ಯಾವ್ದನ್ನ ಮುಟ್ಟುಕಾಗ ಅಂತಿದ್ರೋ ಅದಕ್ಕೆಲ್ಲ ಕಾಲ್ ನೆಗ್ದಿಕೆ ಬತ್ತಿದ್ದಿದೆ” ಕುಶ್ಟಣ್ಣನ ಮಾತಿಗೆ ಕುಶ್ಟಣ್ಣನಿಗೇ ನೆಗಿ ಬಂದು ಜೋರಂದ್ರೆ ಜೋರಾಗಿ ನೆಗಿ ಆಡ್ದ. ಆ ನೆಗಿ ಆಸಾಡಿ ಮಳೆಗೆ ಮತ್ತೆ ಆ ಸಿರಂಡಿ ಕಣಿಗೆ ಈ ಕುಶ್ಟ ತಮಗೇ ಹಿಲಾಲ್ ಮಾಡ್ದ ಅಂಬಗಾಯ್ತೇನೋ. ಮದ್ದಳೆಯವ್ರ ಹತ್ರ ಚಂಡೆಯವ್ರೂ ಬಂದು ಕೂಕಂಡು ಬಡುಕೆ ಸುರು ಮಾಡ್ರು. ಕುಶ್ಟಣ್ಣನ ನೆಗಿ ಸಿರಂಡಿ ಕಣಿಯನ್ನು ದಾಟಿ ಆ ಕಾನುಗುಡ್ಡೆಗೆ ಬಡಿದದ್ದೇ ಮಳಿದೇವ್ರಿಗೆ ಸಿಟ್ಟು ನೆತ್ತಿಗೇರಿ ಇಶ್ಟೊತ್ತು ಕುಡಿದ ಕುಶ್ಟಣ್ಣನ ಕಂಡಂಗೆ ವಾಲಾಡ್ತಾ ತೇಲಾಡ್ತಾ ಇದ್ದ ಮಳೆ ಚಂಡೆ ಹೊಡ್ತಕ್ಕೆ ಮಂಡ್ರಿ ಹೊಡುಕೆ ಸುರುಮಾಡಿತು. ಮಳೆಯ ಕಶ್ಟ ಕಂಡ ಆ ಗಡ ಗಡ ಗುಡುಗು ರಕ್ಕೆಸನಂತೆ ಅಬ್ಬರದ ಪ್ರವೇಶ ತಕ್ಕಂಡಿತು. ‘ಏಲವೋ ಕೂಸಾಳ ಕುಶ್ಟನೇ, ಎಂತಾ ನೀನು ಹೇಳುವುದ? ನೀನು ಶ್ವಾನ ಆದದ್ದೇ ಹೌದಾದರೆ ಮಡಿಯ ಸ್ಥಳಕ್ಕೆಲ್ಲ ಕಾಲೆತ್ತಿ ಬರುವೆಯಾ?’ ಎಂದಂತೆ ಗುಡುಗಿತು. ಆಸಾಡಿ ತಿಂಗಳ ಗುಡುಗನ್ನು ಕೇಂಡ ಕುಶ್ಟಣ್ಣನಿಗೆ ನೆಗಿ ಅಂಬುದು ಹೊಟ್ಟೆಯನ್ನೆಲ್ಲ ಗಿಮ್ಚಿಕಂಡು ಬಂತು. ಈ ಕುಡ್ಕನ ರಗ್ಳಿಯ ಇಶ್ಟೊತ್ತು ಸೈಸಿಕಂಡಿದ್ದ ಸಿರಂಡಿ ಮಾರಾಜನಿಗೆ ಸಿಟ್ಟು ಬಂದರೂ… ‘ಈ ನಮ್ನಿ ಗುಡ್ಗುವತಿಗೆ ಹೆಕತಿಂಬನ್ ನೆಗಿ ಆಡ್ತನಲೆ!’ ಅಂದೇಳಿ ಅದಕ್ಕೆ ಆಶ್ಚರ್ಯ ಆಯ್ತು. ಇನ್ನು ತಡ ಮಾಡುವುದು ಸರಿಯಲ್ಲ ಅನಿಸಿ ಸಿರಂಡಿ ಮಾರಾಜ ಕುಡ್ಕ ಕುಶ್ಟಣ್ಣನ ಮಾತಾಡ್ಸಿದನು.

“ಏಯ್ ಕುಡುಕ ಕುಶ್ಟನೇ, ಇಶ್ಟು ಭಯಂಕರವಾಗಿ ಗುಡುಗಿದಾಗ ನಾವು ಬೆಚ್ಚಿ ನಡುಗಿದ್ದೇವೆ. ನೀನ್ಯಾಕೆ ನಗುವುದು? ಆ ನಗುವಿನ ಮರ್ಮವೇನು? ಹೇಳುವಂತನಾಗು.”

“ಅಯಬ್ಯಾ… ಏ ದೇವ್ರೆ… ಇದ್ ಮ್ಯಾಳ್ದರ್ ಭೂತುವಾ ಕಾಂತ್. ಆಟದರ್ ಮಾತಾಡ್ದಂಗೇ ಮಾತಾಡತ್ತಲೆ!! ಯೇಯ್ ಯಾರ ಅದು?”

“ಎಲೈ ಕುಶ್ಟನೇ ನಮ್ಮ ಮಡಿಲಲ್ಲಿ ಆಸೀನನಾಗಿಯೂ ನಮ್ಮನ್ನು ಯಾರೆಂದು ಕೇಳುವೆಯಾ? ಮೂರ್ಖ, ನಾವು ಚರಂಡಿ ಮಹಾರಾಜರು”

“ಅಗಾ, ಸಿರಂಡಿ ಕಣಿಗೂ ಮಾತಾಡೂಕೂ ಬತತ್ತಾ! ನೀನೂ ಒಬ್ಬ ಮಾರಾಜ ನಿನ್ ಹುಲಿ ಹಿಡೂಕೆ. ‘ಆಸಾಡಿ ತಿಂಗ್ಳಾಗೆ ಭೂತು ಪಿಶಾಚಿ ಇರುದಿಲ್ಲ ಮೆರೂಕ್ ಹೋಯ್ ಇರ್ತೊ ಅವಕ್ಕೆಲ್ಲ ಕಟ್ಪಾಡಂಬ್ರ್ ಅವೆಂತ ಮಾಡುದಿಲ್ಲ ಆಸಾಡಿ ಕಳದ್ದೇ ಸ್ವಾಣಿ ತಿಂಗ್ಳು ಬತ್ತಿದ್ದಂಗೆ ಚೀಣ್ಯರ್ ಹಡ್ಗಾಗೆ ಆ ಭೂತು ಎಲ್ಲಾ ಮೆರೂಕೆ ಹ್ವಾದವ್ ವಾಪಾಸ್ ಬತ್ತೋ’ ಅಂದೇಳಿ ನನ್ ಅಬ್ಬಿ ಹೇಳ್ತಿದ್ದಳ್. ಈಗ ಕಂಡ್ರೆ ಅರ್ದ ಆಸಾಡಿ ಆಯ್ಲಿಲ್ಲ ನೀ ಬಂದಿದ್ಯಲ್ಲ ಹುಲ್ಲ್ ರಾವ್ ನಿನ್ ಮ್ಯಾಳಿ ಮೆಟ್ಲಿ. ಓಡ್ವ ಅಂದ್ರೂ ಅಟಾಪಿಲ್ಲ ನಂಗೆ”

“ಹೆದರಬೇಡ ಕುಶ್ಟ, ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟರೆ ಸಾಕು. ನಮ್ಮಿಂದ ನಿನಗೆ ಯಾವ ತೊಂದರೆಯೂ ಆಗುವುದಿಲ್ಲ. ಹೇಳು ಅಂಥ ಭಯಂಕರ ಗುಡುಗಿಗೆ ಹೆದರದೆ ನಗುವಂಥದ್ದು ಏನಾಯಿತು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ”

“ಶಾಲಿ ಜೆಡ್ಡಾಗಾದ್ದ್ ಆಟು ಕಂಡೂ ಕಂಡೂ ಒಳ್ಳೆ ಮ್ಯಾಳ್ದರ್ ಕಂಡಂಗೆ ಮಾತಾಡ್ತೆ ಸಿರಂಡಿ ಮಾರಾಜ.”

“ಏಯ್, ಹೇಳ ಹೆಕತಿಂಬನೆ ನೆಗಿ ಆಡದ್ದ್ ಎಂತಕ?”

“ಯಬಾ!! ಹೀಂಗೂ ಮಾತಾಡುಕ್ ಬತತ್ತಾ? ಹೀಂಗ್ ಮಾತಾಡ್ರೆ ಕಾಣ್ ಒಂದ್ ಗತ್ತ್. ಮನ್ಸರ್ ಒಟ್ಟಿಗೆ ಮಾತಾಡ್ದಂಗೆ ಅನ್ಸತ್ತ್. ಹೇಳುತ್ತೇನೆ ಕೇಳುವಂತವನಾಗು ಸಿರಂಡಿ ಮಾರಾಜ…”

“ಹೇಳ ಹೇಳ”

“ಆಷಾಢ ಮಾಸದಲ್ಲಿ ಗುಡುಗಿದಂತಾ ಗುಡುಗನ್ನು ಕೇಳಿದ ನಮಗೆ, ಪುಂಡ ಮಕ್ಕಳು ಹಲಸಿನ ಹಣ್ಣನ್ನು ಕದ್ದು ತಿಂದು ಕಡೆಗಾ ಬೀಜವನ್ನು ಸೈತ ಸುಟ್ಟುಕೊಂಡೋ ಬೇಯಿಸಿಕೊಂಡೋ ಹೊಟ್ಟೆ ಬಿರಿಯುವಂತೆ ತಿಂದು ಹೂಸು ಕೊಟ್ಟ ಹಾಗೆ ಭಾಸವಾಯಿತು. ಅದಕ್ಕಾಗಿ ನಾವು ಪುಸಕ್ಕನೆ ನಕ್ಕುಬಿಟ್ಟೆವು.”

“ಎದಿ ಒಡ್ದ್ ಹ್ವಾಪಂಗಿತ್ತ್ ಆ ಗುಡ್ಗ್ ನಿನಗೆ ಹೂಂಸಿ ಕೊಟ್ಟಂಗಾಯ್ತಾ! ನಿಂಗೆ ಕುಡದಿನ್ನೂ ಇಳಿಲ್ಯ ಕಾಂತ್. ಇಳಸ್ತೆ ತಡೆ” ಅಂದು ಸಿರಂಡಿ ಮಾರಾಜ ಮಳೆ ಗುಡುಗಿನ ಅಬ್ಬರಕ್ಕೆ ಸಿಡಿದು ಮಯ್ತುಂಬಾ ಕಳಕು ನೀರನ್ನು ತುಂಬಿಕೊಂಡು ಕುಮ್ಚೆಟ್ ಹೊಡೆಯುವುದಕ್ಕೆ ಸಿದ್ದನಾದನು. ಆದರೆ ಎಂತಾ ಮಾಡುವುದು, ದೊಡ್ಡ ಬಂಡೆಯಂತೆ ಅಡ್ಡ ಸಿಕ್ಕಿ ಹಾಕಂಡಿದ್ದ ಕುಡ್ಕ ಕುಶ್ಟನ ಆಚೆಗೆ ಹಾಕದೆ ಕಳಕು ನೀರಿನ ವೈಭವ ಕಳೆಗಟ್ಟುವುದಿಲ್ಲ. ಸಿರಂಡಿ ಮಾರಾಜ:

“ಆಸಾಡಿ ಮಳಿಯೇ… ನನ್ ಮೈ ಮೇಲೆ ಬಾ…

ರಕ್ಕೆಸನಂತಾ ಗುಡ್ಗೇ… ನನ್ ಹೊಕ್ಡ್ ಬಾ…”

ಅಂತ ರಾಗವಾಗಿ ದರ್ಶನ ಪಾತ್ರಿಗಳ ಹಂಗೆ ಹಾಡಿಕೊಳುತ್ತಾ ಶಕ್ತಿಯನ್ನು ತುಂಬಿಕೊಳ್ಳುತ್ತಿದ್ದನು. ಶಾಲೆ ಜೆಡ್ಡು, ಮೇಲಿನ ಗುಡ್ಡಿಯ ನೀರೆಲ್ಲ ಓಡೋಡಿ ಬಂದು ಸಿರಂಡಿ ಮಾರಾಜನನ್ನು ತುಂಬಿಕೊಳ್ಳುತ್ತಾ ಅವನ ಶಕ್ತಿ ಹೆಚ್ಚಿ ಆ ಕುಶ್ಟಣ್ಣನ ಮೇಲೆ ಮೊದಲ ಯುದ್ದಕ್ಕೆ ನಿಂತನು. ಕುಶ್ಟಣ್ಣ ಕಳಕು ನೀರಲ್ಲಿ ಮಿಂದು ಚಂಡಿ ಗೊಬ್ರ ಆದನೇ ಹೊರತು ಚೂರು ಹಂದಾಡಿಲ್ಲ. ಸಿರಂಡಿ ಮಾರಾಜ:

ಆಸಾಡಿ ವಡ್ರೇ… ನನ್ ಮೈ ಮೇಲೆ ಬಾ…

ಆಸಾಡಿ ಭೂತುವೇ… ನನ್ಮೇಲೆ ಆಳಿ ಬಾ…

ಅಂತ ಮತ್ತೊಂದು ಸಲ ಮೈ ಕೈ ತುಂಬಿಕೊಂಡು ಕುಶ್ಟಣ್ಣನ ಮೇಲೆ ಬಿದ್ದನು. ಈ ಯತ್ನದಲ್ಲಿ ಕುಶ್ಟಣ್ಣನ ಲುಂಗಿ ಮುಂಡು ನೀರಲ್ಲಿ ಬಳ್ಕಂಡು ಹೋಯ್ತು. ಕುಡಿದ ಅಮಲಿನಲ್ಲಿ ಇಶ್ಟೊತ್ತೂ ಮಂಡೆ ಮೇಲೆ ತನಗೊಂದು ಕಂಬಳಿ ಕುಪ್ಪೆ ಇತ್ತು ಅಂತ ಭಾವಿಸಿಕೊಂಡಿದ್ದ ಕುಶ್ಟಣ್ಣನಿಗೆ ಅದೊಂದು ಎಲ್ಲಿ ಉದುರಿ ಹೋಯ್ತು ಅಂದೇಳಿಯೇ ಗುತ್ತಿಲ್ಲ. ಸೇಸುವಣ್ಣನ ಅಂಗ್ಡಿ ಬಿಡುವೊತ್ತಿಗೆ ಇತ್ತು. ಆಮೇಲೆ ಎಲ್ಲಿ ಬಿತ್ತೋ ಗುತ್ತಿಲ್ಲ. ಈಗ ಲುಂಗಿ ಮುಂಡೂ ಬಳ್ಕ ಹೋಯ್ತು. ಈಗ ಅವನತ್ರ ಅಂಗಿ ತುಂಡೊಂದು ಉಳಿದಿತ್ತು.

ಆಸಾಡಿಯ ಮಳೆ ಆ ಸಹ್ಯಾದ್ರಿ ಮದ್ದಾನೆಗೇ ಚಳಿ ಹಿಡಿಸಿದ್ರೂ ಕುಶ್ಟಣ್ಣನಿಗೆ ಮಾತ್ರ ಚಳಿ ಹಿಡಿಸಲು ಆಗಲಿಲ್ಲ. ಅವನ ಕುಡಿತದ ಅಮಲು ಆ ಲುಂಗಿ ಮುಂಡಿನ ಜೊತೆಗೆ ಬಳ್ಕ ಹೋಗುವುದಕ್ಕೆ ಸುರುವಾಗಿ ‘ಹೋ… ನಾನಿನ್ನು ಮನಿಗೆ ಹ್ವಯ್ಲಿಲ್ಲ’ ಅಂಬ ದಾತು ಬಂತು. ದಡಬಡ ಏಳುವುದಕ್ಕೆ ಕಂಡ. ಚೂರು ಸಡಿಲ ಆಗಿದ್ದೇ ಸಿರಂಡಿ ಮಾರಾಜ ರೊಂಯ್ಯ ನುಗ್ಗಿ ಕುಶ್ಟಣ್ಣನ್ನ ದಡೀಲ್ಲ ಬೀಳಿಸಿಬಿಟ್ಟ. ‘ತನಗಿನ್ನು ಕುಡದ್ದ್ ಸಮಾ ಇಳಿಲ್ಲ’ ಅಂದ್ಕ ಅವನು ಕೈಗೆ ಸಿಕ್ಕ ಬುಕ್ಕಿ ಗಿಡದ ಮುಂಡು ಹಿಡ್ಕಂಡು ಎದ್ದೇ ಬಿಟ್ಟ ಅನ್ನುವ ಹೊತ್ತಿಗೆ ಇನ್ನಶ್ಟು ಕಳಕು ನೀರೊಂದಿಗೆ ಸಿರಂಡಿ ಮಾರಾಜ ದಾಳಿ ಮಾಡಿಬಿಟ್ಟ. ಹೇಳಿ ಕೇಳಿ ಬುಕ್ಕಿ ಮುಂಡು. ಅರ್ದ ಗಿಡವೇ ಕಿತ್ಕೊಂಡು ಕುಶ್ಟಣ್ಣನೊಟ್ಟಿಗೆ ಬಂದು ಬಿಟ್ಟಿತ್ತು. ‘ಹೋ… ತನಗೆ ಕುಡ್ದಿದ್ದು ಇಳ್ದಿದೆ. ಇದು ನಾನಾಯಿ ಬೀಳುದಲ್ಲ. ಈ ಕೊಳ್ಕಟಿ ಹಡ್ಬಿ ಸಿರಂಡಿ ಮಾರಾಜನದ್ದೇ ಕಿತಾಪತಿ’ ಅಂತ ಅಂದುಕೊಂಡ. ‘ಅವನೊಟ್ಟಿಗೆ ಜಗಳಕ್ಕೆ ಹ್ವಾಪುದು ಬ್ಯಾಡ. ಊರ ಹೇಲ್ ತೊಳ್ಕ ಹ್ವಾಪು ಸಿರಂಡಿ ಒಟ್ಟಿಗೆ ನಂಗೆಂತ ಮಾತ್’ ಅಂದುಕೊಂಡ ನಿದಾನ ಮಕ್ಕಳ ಕಂಡಂಗೆ ಹೊಟ್ಟೆ ಎಳಕಂಡು ರಸ್ತಿ ಮೇಲೆ ಹತ್ತಿದ.

ತನ್ನ ಎರಡು ಸಲ ಬೀಳಿಸಿದ ಸಿರಂಡಿ ಕಣಿಯ ಮೇಲೆ ಸಿಟ್ಟು ಬಂದು ಆ ಕಳ್ಕು ನೀರಿಗೆ ಥೂ ಅಂತ ಉಗಿದ. ಅದೂ ಸಾಲದೆ ಉಚ್ಚೆ ಹೊಯ್ಯುತ್ತಾ “ಏಯ್ ಸಿರಂಡಿ ಮಾರಾಜ ನೀನು ಕಳ್ಕು ದುಂಡ. ಕಾಣ್ ನನ್ ಉಚ್ಚಿ ಎಶ್ಟ್ ಹನೀ.. ಇತ್ತ್. ಇದ್ರೊಟ್ಟಿಗೆ ನೀನೇ ಬಳ್ಕ ಹೋಗ್” ಅಂತ ಮತ್ತೊಂದು ಸಲ ಉಗಿದ. ಬಿಸಿ ಉಚ್ಚೆಯ ಹನಿ ತೊಡೆ ಮೇಲೆ ಬಿದ್ದದ್ದೇ ತಡ ತನ್ನ ಲುಂಗಿ ಮುಂಡು, ಕಂಬಳಿ ಕುಪ್ಪಿ, ಬಿಡಾರ ಎಲ್ಲಾ ನೆನಪಾಯ್ತು. ಅವನಿಗೆ ಈಗ ತಾನು ಮಳೆಯಲ್ಲಿ ನೆನೆದು ಚಂಡಿ ಗೊಬ್ರ ಆಯ್ಬಿಟ್ಟೆ ಅಂತ ಮೈಮುಟ್ಟಿ ಕಂಡ. ಕುಶ್ಟಣ್ಣನಿಗೆ ಈಗ ಚಳಿ ಆಯ್ತು. ಚಳಿ ಅಂದ್ರೆ ಚಳಿನಡ್ಕು.

ಕುಡ್ದಿದ್ದು ಸಮಾ ಇಳ್ದಿತ್ತು. ಮಳೆ ಸಮಾ ಜಪ್ಪುತ್ತಿತ್ತು. ಆ ಮಳೆಗೆ ಸಹ್ಯಾದ್ರಿ ಮದ್ದಾನೆಯೆ ಮುಯ್ಟಿಕೊಂಡು ನಡುಗುವಾಗ ಒಂದು ಲುಂಗಿ ಮುಂಡೂ ಇಲ್ದಿದ್ದ ಕುಶ್ಟ ಯಾವ ಲೆಕ್ಕ? ಹೊತ್ತು ಎಶ್ಟಾಯಿತು ಎಂದು ಬಾನು ನೋಡಿದ. ನೋಡುವುದೆಂತ! ಕಪ್ಪುಕಟ್ಟಿಕೊಂಡು ಹೊಯ್ಯುತ್ತಿದ್ದ ಮಳೆ ಕಣ್ಣಿಗೆ ಹೆಟ್ಟಿತು. ಕಣ್ಮುಚ್ಚಿ ಹೋಯ್ತು. ಹೊತ್ತು ಎಶ್ಟಾಯಿತೆಂದು ತೋರಿಸುವುದೇ ಇಲ್ಲ ಅಂಬಂಗೆ ಮಳೆ ಕತ್ಲೆ ಮಾಡಿಕೊಂಡು ಆ ಸಹ್ಯಾದ್ರಿಯ ಸಾಲಿಗೆ ಬಾರಿಸುತ್ತಿತ್ತು. ಸಿರಂಡಿ ಕಣಿಯಲ್ಲಿ ಕಳಕು ನೀರಿನ ಒಯ್ಲು ಹೆಚ್ಚಾದಂತೆ ಕುಶ್ಟಣ್ಣನ ಚಳಿಯೂ ಹೆಚ್ಚಾಯಿತು.

ಮತ್ತೆ ಭೂತಹಕ್ಕಿ ಕೂಗಿತು. ‘ಹಂಗಾರೆ ಕಪ್ಪಾಯ್ತು’ ಅಂದ್ಕಂಡ. ಬೇಗ ಬಿಡಾರಕ್ಕೆ ಹೋಗಬೇಕು ಎಂದ ಎದ್ದ. ಕುಡ್ದಿದ್ದು ಇಳ್ದಿದ್ದರೂ ಆ ಸಿರಂಡಿ ಕಣಿಗೆ ಬಿದ್ದಾಗ ಎಡ ಮುಂಗಾಲಿಗೆ ಪೆಟ್ಟಾಗಿದ್ದು ಈಗ ನೋವಾಯ್ತು. ಜೀವ ಹೋದಂಗನಿಸ್ತು. ಕೂತ. ಆದ್ರೆ ಮಳೆ ಕೂಕಂಬಕೆ ಬಿಡ್ಲಿಲ್ಲ. ಮತ್ತೆ ಎದ್ದು ಬರಾಕಿನಿಂದ ಬಿಡಾರದ ಬದಿಗೆ ಕಾಲು ಎಳೆದ. ಆದರೆ ನೋವಿನ ಕಾಲು ಬರಾಕಿಂದ ಹ್ವಾಪುದಕ್ಕೆ ಬಿಡಲಿಲ್ಲ. ಕಾಲನ್ನ ಎಳಿತಾ ಎಳಿತಾ ದೊಡ್ದೊಂದು ಕಾಸಾನ್ ಮರದ ಕೆಳಗೆ ಕೂತ. ಈ ಕಾಸಾನ್ ಮರದಿಂದ ಬಲಬದಿಗೆ ತಿರ್ಗರೆ ಕೆರಾಡಿಗೂ, ಎಡಬದಿಗೆ ತಿರ್ಗರೆ ಬ್ಯಾಣದ ಬದಿಗೂ ಹೋಗುತ್ತಿತ್ತು. ಬ್ಯಾಣ ಹತ್ತಿ ಇಳ್ದರೆ ಕುಶ್ಟಣ್ಣನ ಬಿಡಾರ. ಅವನಿಗೆ ನ್ಯೆಡುಕೆ ಆಗ್ದಿದ್ದಶ್ಟು ಕಾಲು ನೋಯ್ತಿತ್ತು. ಮತ್ತೆ ಮುಂದಕ್ಕೆ ನ್ಯೆಡಿಲಿಲ್ಲ. ಕಾಸಾನ್ ಮರ ಕಂಡ್ರೆ ಭೂತಗಳಿಗೆ ಹೆದ್ರಿಕೆ ಅಂಬ್ರು. ಹಂಗಾಗಿ ಯಾವ ಭೂತವೂ, ಯಾವ ಭೂತಹಕ್ಕಿಯೂ ನನ್ನ ಮೆಟ್ಕಂತಿಲ್ಲ. ನನ್ನ ಮುರುದಿದ್ರೆ ಈ ಮಳಿ ಇಲ್ಲಾಂದ್ರೆ ಆ ಗಬ್ಬದ ಹುಲಿ ಮಾತ್ರ. ‘ಮಳಿ ಬಿಟ್ರೆ ಮನಿಗ್ ಹ್ವಾತೆ; ಇಲ್ದಿರೆ ಮೇಲ್ ಹ್ವಾತೆ. ಕುಂಜ್ಞಾಡಿ ಹೈಗುಳಿ ನೀನೇ ನನ್ನ ಕಾಯ್ಕ್’ ಅಂದೇಳಿ ಅಲ್ಲೆ ಕೂತ. ಮಳೆ ಬಣ್ಣದ ವೇಶ ಬಪ್ಪತಿಗೆ ಹಿಡಿಯುವ ತೆರೆ ಹಿಡಿದು ಅಟ್ಟಹಾಸದ ನಗೆ ನಗಾಡಿತು.

-2-

ಸೀತು ಕುಶ್ಟಣ್ಣನ ಹೆಣ್ತಿ. ಇವರ ಮದಿ ಆದ್ದು ರಾಮಂದಿರ-ಮಸೀದಿ ಗಲಾಟಿ ಆಗಿ ಊರೂರಾಗೆಲ್ಲ ಹೊಡ್ದಾಟ ಆಗಿತ್ತಲಾ ಆ ಸುರೀಗೆ. ಸೀತು ಕುಂದಾಪ್ರ ಪ್ಯಾಟಿ ಅಡ್ಚಿನ್ ಕುದ್ರಾಗೆ ಹುಟ್ಟಿ ಬೆಳ್ದರೂ ಅವಳ ಅಪ್ಪಯ್ಯ ಅಬ್ಬಿ ಗಟ್ಟಕ್ಕೆ ಕೆಲ್ಸಕ್ಕೆ ಹೋಗ್ತಿದ್ರು. ಹಾಂಗಾಗಿ ಪ್ಯಾಟಿಗೆ ಓಡಾಡುವುದಕ್ಕಿಂತ ಅವಳು ಹೆಚ್ಚು ಓಡಾಡಿದ್ದು ಗಟ್ಟಕ್ಕೆ. ಶಾಲೆಗೆ ಸೇರ್ಸಿದ್ರೂ ಶಾಲೆಗೆ ಹೋಗಿದ್ದು ಒಂದು ತಿಂಗ್ಳು ಮಾತ್ರ. ಅಪ್ಪ-ಅಬ್ಬಿಯ ಒಟ್ಟಿಗೆ ಗಟ್ಟಕ್ಕೆ ಹೋಗಿದ್ದರಿಂದ ಮತ್ತೆ ಶಾಲಿಗೆ ಹೋಗಿ ಸೀತು ಓದು ಬರಾ ಕಲಿಯುವುದಕ್ಕೆ ಆಗ್ಲಿಲ್ಲ. ಎರಿಯರ್ ಮಕ್ಕಳ್ ಕಂಡಂಗೆ ತಾನೂ ಶಾಲೆಗೆ ಹೋಗ್ಬೇಕು ಅಂತ ಅವಳು ಆಲೋಚಿಸುವ ಹೊತ್ತಿಗೆ ಈ ಕೊಲ್ಲೂರಿಗೆ ಹತ್ತಿರದ ಕಾನು ಮೂಲೆಯ ಗಂಡು ಕುಶ್ಟನ ಸಂಬಂಧ ಗಟ್ಟಿ ಮಾಡಿದ್ರು. ಸೀತುಗೆ ಹನ್ನೆರಡು ವರ್ಶ ತುಂಬುವುದಕ್ಕೆ ಮೊದಲೇ ಹಂಚೇಸಿ ತಿಂಗಳ ಅಕೇರಿಯ ಒಂದು ಆದಿತ್ಯವಾರ ಕುದ್ರಿನ ಶಾಲಿ ಬೆಟ್ಟಾಗೆ ಇವರ ಮದಿ.

ಊರೂರ ತುಂಬಾ ಹಿಡ್ದಾಟು ಹೊಡ್ದಾಟು ಆಗುತಿದ್ದ ಕಾಲ್ದಲ್ಲಿ ಸೀತು-ಕುಶ್ಟನ ಮದಿ. ಮೀನು ಲೋಡಿಗೆ ಹೋಗುವ ನಾಯ್ಕರ ಪೈಕಿ ಸಾವ್ಕಾರರೊಬ್ಬರ ಹಳೇಯ ಲಾರಿಯಲ್ಲಿ ಗಂಡಿನ ಕಡೆ ದಿಬ್ಬಣ ಕುದ್ರಿಗೆ ಬಂದು ತಲುಪಿತು. ದಿಬ್ಬಣ ಲಾರಿಯಿಂದ ಇಳಿದು ಕಂಡರೆ, ಗಂಡಿನ ಕಡೆಯ ಎಲ್ಲರೂ ಮೀನಿಂದೇ ಜಂಬು. ‘ಮದಿಗೆ ಸೀ ಊಟ ಅಲ್ದಾ? ಗೌಲ್ ಇಲ್ದೆ ಊಟ ಸೇರ್ದಿದ್ದರಿಗೆ ನಂಜುಕ್ ಒಳ್ಳೆ ಆಯ್ತ್ ಈ ಮೀನ್ ಜಂಬ್. ನೆಡಿನಿ ಮಕ್ಕಳೆ ಕುಶ್ಟನ್ ಹೆಣ್ತಿ ಕಾಯ್ತಿದ್ದಳ್’ ಅಂದೇಳಿ ಗಂಡಿನ ಕಡೆ ದಿಬ್ಬಣದ ಹಿರಿ ಮನ್ಸ ಕೊರ್ಗಜ್ಜ ಕುಶಾಲು ಮಾಡಿದ್ದೇ ದಿಬ್ಬಣಕ್ಕೆ ದಿಬ್ಬಣವೇ ನೆಗಿ ಆಡಿ ಆ ಮೀನ ಜಂಬನ್ನು ಲಾರಿಗೆ ಬಿಟ್ಟಿತು. ಸೀತು ಅಪ್ಪಯ್ಯ ದುಗ್ಗಣ್ಣ ಗಂಡಿನ ಮನಿಯರಿಗೆ ಕಾಲಿಗೆ ನೀರು ಕೊಟ್ಟು ಕರುಕೆ ಬಂದ್ರು. ಸೀತುಗೆ ತಮ್ಮ ಇಲ್ದೇ ಇಪ್ಪುದ್ರಿಂದ ಕಿರಿಯಬ್ಬಿ ಮಗ ಚಲುವ ಗಂಡಿನ ಕಾಲು ತೊಳೆವ ಶಾಸ್ತ್ರ ಮಾಡಿದ.

ಶಾಲಿ ಜಗುಲಿಯೇ ಮದುವೆ ಮಂಟಪ. ಆ ಜಗುಲಿಯ ಮೂಲೆಗೆ ಬಣ್ಣ ಬಣ್ಣದ ಜರಿ ಸೀರೆಗಳನ್ನು ತೂಗು ಹಾಕಿ ಪರದೆ ಮಾಡಿದ್ರು. ಕತ್ತದ ಬಳ್ಳಿಗೆ ಮಾವಿನ ಎಲೆಗಳ ಅಂದವಾಗಿ ಸುರಿದು ಮಾಲೆ ಮಾಡಿ ಆ ಜರಿ ಪರೆದೆಯ ಮೇಲಿನ ಅಂಚಿಗೆ ಕಟ್ಟಿ ಅಲ್ಲಲ್ಲಿ ಬಣ್ಣದ ಕಾಗದ ಜೋತು ಬಿಡಲಾಗಿತ್ತು. ರೀಪಿನ ಪಟ್ಟಿಯಿಂದ ದೇವರ ಮನೆಯ ಗರ್ಭಗುಡಿಯಂತೆ ಮಾಡಿ ಅದಕ್ಕೆಲ್ಲ ಚಿನ್ನದ ಬಣ್ಣದ ಬ್ಯಾಗಡೆ ಹಚ್ಚಿ ಅಲಂಕಾರ ಮಾಡಿ ಮದಿ ಮಂಟಪವನ್ನು ಚೆಂದಾಮುಡಿ ಮಾಡಿದ್ರು ಸೀತುವಿನ ಸಂಬಂದಿ ಗಂಡು ಮಕ್ಕಳು. ನಾಯ್ಕರ ಮನೆಯ ಎರಡು ಮರದ ಕುರ್ಚಿ ಬೇಡಿ ತಂದು ಅದಕ್ಕೆ ಬೆಳಿ ಬಟ್ಟೆಯ ಸುತ್ತಿ ಮದುಮಕ್ಕಳಿಗೆ ಆಸನ ಮಾಡಿ ಆ ಗರ್ಭಗುಡಿಯ ಗರ್ಭದಲ್ಲಿ ಇಟ್ಟಿದ್ರು. ಮದುಮಕ್ಕಳು ಕೂತಾಗ ತಲೆ ಮೇಲೆ ಬರುವಂತೆ ಎಲ್ಲರಿಗೂ ಕಾಂಬಂಗೆ ಸೀತಾರಾಮರ ಪೋಟೋ, ಮದುಮಕ್ಕಳ ಮುಂದಿನ ಕಳಸಕ್ಕೆ ತಾಗುವಂತೆ ಈಶ್ವರನ ಫೋಟೋ ಇಟ್ಟು ಚಂದ ಮಾಡಿದ್ದರು. ಗಂಡಿನ ಕಡೆಯವರೆಲ್ಲ ಬಂದೂ ಬಂದು ಮಂಟಪದ ಕಡೆ ನೀಕಿ ಕಂಡು ‘ದೇವ್ರ್ ಮನಿ ಕಂಡಂಗ್ ಮಾಡಿರ್ ಅಲಾ!’ ಎಂದು ಹೊಗಳುತಿದ್ರಾ, ಆ ಮಂಟಪ ಮಾಡಿದ ಮಕ್ಕಳಿಗೆ ಅದನ್ನ ಕೇಂಡು ಕುಶಿಯಾಗಿ ಇನ್ನೆಲ್ಲಾದ್ರೂ ಸುಂಗಾರ ಮಾಡಿದ್ದಕ್ಕೆ ವನಿ ಆಯ್ತಾ ಅಂದೇಳಿ ಅತ್ಲಾಗಿಂದ ನಿತ್ಕ ಕಂಡು ಇತ್ಲಾಗಿಂದ ನಿತ್ಕ ಕಂಡು ಸರಿ ಇದ್ದುದ್ದನ್ನೂ ಮತ್ತೆ ಸರಿ ಮಾಡುವುದಕ್ಕೆ ಓಡಾಡಿ ‘ನೀನೇ ಮಂಟ್ಪ ಮಾಡದ್ದಾ ಮಗಾ?’ ಅಂತ ಕೇಣ್ಲಿ ಅಂದೇಳಿಯೇ ಅಲ್ಲಿ ಓಡಾಡಿದ್ದರು.

ಕುದ್ರ್ ಅಂದ್ರೆ ಕೇಣ್ಕಾ. ಬರೀ ಹೊಂಯ್ಗಿ ರಾಶಿ. ಮಣ್ಣೇ ಅಪರೂಪ ಅಂಬಂಗೆ ಇತ್ತು. ಶಾಸ್ತ್ರಕ್ಕೆ ದಿಬ್ಬಣದಲ್ಲಿ ಬಂದ ಗಂಡು, ಗಂಡಿನ ಅಪ್ಪ, ಮಾವದಿಕ್ಕಳಿಗೆ, ಗುರಿಕಾರರಿಗೆ, ಚೆತ್ತಿಗಾರರಿಗೆ ಕಾಲಿಗೆ ನೀರು ಕೊಡುವುದು ಎಲ್ಲಾ ಮದಿಯಲ್ಲಿ ನಡೆಯುವುದು. ಆದರೆ ಇಲ್ಲಿ ಬಂದ ಎಲ್ಲರಿಗೂ ನೀರು ಕೊಡಬೇಕು ಹಾಂಗಿದೆ ಊರು. ಆರೂ ಹೆಣ್ಣಿನ್ ಕಡೆಯ ಮಕ್ಕಳು ಬೇಜಾರು ಮಾಡ್ಕಣದೆ ಎಲ್ಲರಿಗೂ ನೀರು ಕೊಟ್ಟು ಬರಮಾಡಿಕೊಂಡರು. ಶಾಲಿ ಬೆಟ್ಟಿನ ತೆಂಗಿನ ಮರದಡಿ ಗುಡ್ಯಂಗ್ಡಿ ರಾಮಣ್ಣನ ತಂಡ ಮದುವೆ ಅಡುಗೆ ಮಾಡುತ್ತಾ ಕುಶಾಲ್ ಮಾಡ್ಕಂಡು ನೆಗಿ ಆಡ್ತಾ ಆ ನೆಗಿ ಒಟ್ಟಿಗೆ ಹುಳಿ, ಪಾಯ್ಸದ ಪರಿಮಳವ ಕಳ್ಸಿ ಮದಿ ಶಾಸ್ತ್ರಕ್ಕೆ ಅರ್ಜೆಂಟು ಮಾಡಿದ್ದರು. ಬೇಂಕಂದೇಳಿಯೇ ಆಗಾಗ ರಾಮಣ್ಣ “ಕುಶ್ಟನ್ ಕಯ್ಗ್ ತಾಳಿ ಬಂತಾ ಮಕ್ಕಳೆ? ತಾಳಿ ಕಟ್ದಿರೆ ಬ್ಯಾಳಿ ಬೇಯ್ತಿಲ್ಲ” ಅಂದ್ಕಂಡು ಹಿಲಾಲು ಹಾಕ್ತಿದ್ರು. ರಾಮಣ್ಣನ ಮಾತಿಗೆ ಮದಿ ಮನಿಯೇ ನೆಗಿ ಆಡಿ ಗೌಜಾರೆ ಮದ್ಮಗ ಕುಶ್ಟ ನಾಚ್ಕಂಡು ಕೂತಿದ್ದ.

“ಮದ್ಮಕ್ಕಳನ್ನ ಮಂಟ್ಪಕ್ಕೆ ಕರ್ಕ ಬನಿ” ಅಂತ ಗಂಡಿನ ಕಡೆ ಗುರ್ಕಾರ ಗಡಿಬಿಡಿ ಮಾಡಿದಾಗ ಚಂದ ಮಾಡಿ ಸೌನಿ ಸುಂಗಾರ ಮಾಡಿದ ಗಂಡನ್ನ ಚೆತ್ತಿಗಾರ, ಹೆಣ್ಣನ್ನ ಚೆತ್ತಿಗಾರ್ತಿ ಕರ್ಕಂಡು ಮಂಟಪಕ್ಕೆ ಬಂದರು. ಮದಿ ಶಾಸ್ತ್ರ ನಿಮ್ಮೂರ ಬದಿಯಂಗೆ ಮಾಡಿ ಅಂತ ಗಂಡಿನ ಕಡೆ ಗುರ್ಕಾರ ಹೇಳಿದ್ರೆ, ಇಲ್ಲ ಮೂಡಾಯ್ನ್ ಬದಿಯರ್ ಶಾಸ್ತ್ರವೇ ಆಯ್ಲಿ ಅಂದೇಳಿ ಅಲ್ಲಿದ್ದ ಹೆರಿಮಂಡಿಗಳು ಹೇಳಿದ್ರು. ಅದೇ ಬೇಕಾಗಿತ್ತು ಗಂಡಿನ ಕಡೆಯ ಗುರ್ಕಾರರಿಗೆ. ಅವರು ಶಾಸ್ತ್ರ ಸುರು ಮಾಡಿದಾಗ “ಗಂಡಿನ್ ಮಾವ ನಾನ್, ನಂಗ್ ನೀರ್ ಕೊಡೂಕ್ ಒಂದ ಹುಳು ಇಲ್ಯಲೆ” ಎಂಬ ದೊಡ್ಡ ಗೌಜು ಕೇಂಡ ಕಡೆ ಎಲ್ಲಾ ತಿರುಗಿದರು. ದಿಬ್ಬಣದವರ ಜೊತೆಗೆ ಬಂದರೂ ಅರ್ದ ಹಾದ್ಯಾಗೆ ಇಳ್ಕಂಡು ಕಳ್ಳು ಕುಡಿಲಿಕ್ಕೆ ಹೋದ ಕುಶ್ಟನ ದೂರದ ಮಾವ ಇಡೂರಿನ ಐತ ಸ್ವಲ್ಪ ಚುಂಗ್ ಆಯಿ ಗೌಜಿಗೆ ನಿಂತಿದ್ದ. ಸೀತು ಅಪ್ಪಯ್ನಿಗೆ ಎದಿಮೇಲೆ ತೊಳ್ದಂಗಾಯ್ತ್. ಯಾವ ಗಲಾಟಿ ಗೌಜು ಇಲ್ದೆ ಮದಿ ಮಾಡಿ ಕಳ್ಸಕ್ ಅಂದೇಳಿ ಇದ್ದ ದುಗ್ಗಣ್ಣ ತಾನೇ ಓಡಿ ನೀರು ಕೊಟ್ಟ. ನೀರು ಕೊಟ್ರೂ ಐತನ ಗೌಜೇನೂ ಕಡ್ಮಿ ಆಯ್ಲಿಲ್ಲ. ಆ ಗೌಜು ಕಂಡ ಅಡುಗೆ ರಾಮಣ್ಣ “ಇದ್ಕೆ ಕಾಣ್ ಕೂಸಾಳು ಸಮ ಕುದಿಕಣ್ಣೂ ಸಮ ಅಂದೇಳಿ ಬಾಳಿಕೆರೆ ಪಾತ್ರಿಯಜ್ಜ ನಮ್ ಪೈಕಿಯರಿಗೆ ಹಿಲಾಲ್ ಮಾಡೂದ್” ಅಂತ ಆಡಿಕೊಂಡದ್ದು ಗಂಡಿನ ಕಡೆಯವರಿಗೆ ಕೇಳ್ಸಿದ್ರೂ ಸುಮ್ನೆ ಆದ್ರು.

ಐತನ ಮಣ ಮಣ ನೆಡಿತಾ ಇದ್ದಂಗೆ ಇತ್ಲಾಗೆ ಎರಡೂ ಕಡೆ ಗುರ್ಕಾರರೂ ಶಾಸ್ತ್ರ ಮಾಡಿ ಕುಶ್ಟನ ಕಯ್ಗೆ ಕರಿಮಣಿ ಕೊಟ್ಟು ‘ಕಟ್ಟ’ ಅಂದ್ರು. ಕುಶ್ಟ ಕರಿಮಣಿ ಕಟ್ವತಿಗೆ ಈ ಮಕ್ಕಳ್ ಮರಿ, ಜಳ್ಳ್ ಬುಳ್ಳ್, ಬಲ್ಲದರ್ ಎಲ್ಲರೂ ಮದ್ಮಕ್ಕಳ್ ಮೇಲೆ ಸ್ಯಾಸಕ್ಕಿ ಹಾಕ್ರ್. ದುಗ್ಗಣ್ಣ ಮುತ್ತಕ್ಕ ಮಗಳನ್ನ ಧಾರಿ ಎರೆದು ಕೊಡ್ವತಿಕೆ ಕಣ್ಣೀರು ಬ್ಯಾಡ ಅಂದ್ರೂ ಬಂದು ಮೂಗು ಒರೆಸಿಕೊಂಡ್ರು. ಐದ್ ಜನ ಮುತ್ತೈದೆಯರ್ ಬಂದು ಮದ್ಮಕ್ಕಳಿಗೆ ಆರತಿ ಬೆಳಗಿದರು.

“ಧಾರಿ ಆಯ್ತಲೆ. ಹೊತ್ತ್ ನೆತ್ತಿಗ್ ಬಂತ್. ಬನಿ ಮೊದಲ್ನೆ ಪಂತಿಗ್ ಕೂಕಣಿ” ಅಂತ ರಾಮಣ್ಣ ಕೂಗಿ ಹೇಳದ್ದೇ ಅತ್ಲಾಗೆ ಇತ್ಲಾಗೆ ಓಡಾಡ್ತಿದ್ದ ಮಕ್ಕಳು ಮರಿಯಲ್ಲಾ ಒಂದು ಪಂತಿಯಾಗಿಬಿಟ್ರು. ಶಾಲೆ ಜಗುಲಿ ಅಕ್ಶರ ಕಲುವ ಜಾಗ. ಅಂತಾ ಜಾಗದಲ್ಲಿ ಎಂಜಲು ಮಾಡಬಾರದು ಅಂತ ದುಗ್ಗಣ್ಣ ಆ ತೆಂಗಿನ ಮರದ ಅಡಿ ಸಾಪ್ ಮಾಡಿ ಒಡ್ಗಿ ಶೆಂಗ್ಣಿ ಹಾಕಿ ಸಾರ್ಸಿದ್ದ. ಅಲ್ಲಿ ಮದಿ ಊಟಕ್ಕೆ ಕೂರ್ಸಿದ್ದರು. ಬಾಳಿ ಎಲೆ, ಎಲೆಗೆ ನೀರು, ಉಪ್ಪು, ತೊಂಡೆಕಾಯಿ ತಾಳ್ಳು, ಅನ್ನ ಹುಳಿ ಒಂದೊಂದೇ ಬಂದು ಊಟದ ಸಂಭ್ರಮ ಹೆಚ್ಚಿತ್ತು.

ಅಶ್ಟೊತ್ತಿಗೆ ಅದೆಲ್ಲಿದ್ರೋ… ಪೊಲೀಸ್ರ ಹಿಂಡು ಮದಿಮನಿ ಮೇಲೆ ಮುರ್ಕಂಡು ಬಿದ್ರು. ‘ಜನ ಗುಂಪು ಗುಂಪಾಗಿ ಎಲ್ಲೂ ಸೇರುಕಾಗ ಅಂತ ಆದೇಶ ಇದ್ರೂ… ಇಶ್ಟು ಜನ ಸೇರಿ ಗಮ್ಮತ್ ಮಾಡ್ತಾ ಇದ್ರಿಯಾ?’ ಎಂದು ಸಿಕ್ಕ ಸಿಕ್ಕವರಿಗೆಲ್ಲ ಬಡಿದ್ರು. ಉಂಬುಕೆ ಕೂತ ಮಕ್ಕಳು ಹೆಂಗಸ್ರು ಎಲಿ ಬಿಟ್ಟಿಕೆ ಅನ್ನ ಸಾರು ಎಲ್ಲಾ ಮೆಟ್ಕಂಡು ಓಡೂಕೆ ಸುರು ಮಾಡ್ರು. ಅನ್ನ ತುಂಬಿಟ್ಟ ಹೆಡಿಗೆಗೆ ಒಬ್ರು ಪೊಲೀಸ್ರು ಜಾಡ್ಸಿ ತೊಳ್ದಾಗ ಆ ಹೊಂಯ್ಗಿ ಮೇಲೆಲ್ಲಾ ಮಲ್ಗಿ ಮಿಶ್ಟಿ ಕಂಡಂಗೆ ಅನ್ನ ಚಲ್ಲಾಡಿತ್ತು. ಎಲ್ಲಾ ಓಡ್ರೂ ಬೆನ್ನು ಬಾಗಿ ಏಳೂಕೆ ಆಯ್ದಿದ್ದ ಮದುಮಗಳ ಅಪ್ಪನ ಅಬ್ಬಿ ಕರ್ಕು ಅಜ್ಜಿ ಪಂತಿಯಲ್ಲೇ ಕೂಕ “ಅನ್ನು ತೊಳಿಬ್ಯಾಡಿ ಒಡಿನೆ. ಒಂದೊಂದ್ ದಗಳೂ ದೇವ್ರ್. ದೇವ್ರನ್ನ ತೊಳಿಬ್ಯಾಡಿ ಒಡಿನೆ” ಅಂತ ಕಾಲು ಹಿಡಿದು ಗೋಳಾಡಿ ಮರ್ಕಿದಳು. ಪೊಲೀಸ್ರು ಕಾಲು ಜಾಡ್ಸಿದರು ಅಶ್ಟೆ. ಕರ್ಕು ಅಜ್ಜಿ ಆ ಊಟದ ಎಲೆಯ ಮೇಲೆ ಬಿದ್ದಳು. ಶಾಲೆಯ ಅಡ್ಡ ಮಗಳನ್ನೂ ಅಳಿಯನ್ನೂ ಕೂರ್ಸಿಕೆ ಅಬ್ಬಿ ಕರ್ಕ ಹ್ವಾಪುಕೆ ಓಡಿ ಬಂದ ದುಗ್ಗಣ್ಣನಿಗೆ ಎಂಜ್ಲು ಎಲಿ ಮೇಲೆ ಬಿದ್ದ ಅಬ್ಬಿಯ ಕಂಡು ಎದಿಗ್ ಚೂರಿ ಹಾಕ್ದಂಗೆ ಆಯ್ತ್. ದುಗ್ಗಣ್ಣನಿಗೂ ಹಿಡ್ಕಂಡು ಬಡಿದ್ರು. ಆರೂ ಅಂವ ಅಬ್ಬಿಯ ಬಿಡ್ಲಿಲ್ಲ; ಅಬ್ಬಿ ಮಾತ್ರ ಅಲ್ಲೇ ಜೀವ ಬಿಟ್ಟಿದ್ದಳು. ಆ ತೆಂಗಿನ ಮರಗಳ ನೆರಳಲ್ಲಿ ಅನ್ನ ಸಾರು ಪಾಯಸ ಚೆಲ್ಲಿ ಮರಗಳು ವಾಂತಿ ಮಾಡಿದ ಹಾಗೆ ಕಾಣಿಸುತ್ತಿತ್ತು. ಕಾಲು ಗಟ್ಟಿ ಇದ್ದವರು ದೂರಕ್ಕೆ ಓಡಿದ್ರೆ, ಪೆಟ್ಟು ಬಿದ್ದವರು ಕಾಲ ಎಳಿತಾ, ಮರ್ಕತಾ ಸಿಕ್ಕ ಸಿಕ್ಕಲ್ಲಿ ಅಂಡ್ಕಂಡ್ರು. ಶಾಲಿ ಬೆಟ್ಟಿನ ಆಚಿಗೆ ಇದ್ದ ಎರಿಯರ್ ಪೈಕಿಯವರು ಈ ಕೂಸಾಳು ಪೆಟ್ಟಿಗೆ ಹೆದ್ರಿ ಓಡಿ ನಮ್ಮನಿಗೆಲ್ಲಾರೂ ಬಂದ್ಬಿಟ್ಟೋ… ಅಂದ್ಕಂಡು ಬಾಗ್ಲು ಹಾಕಂಡು ಅವ್ವು ಓಡಾಡುವುದು ಮರ್ಕುವುದನ್ನು ಕಂಡು ನೆಗಿ ಆಡಿದ್ರು. ದುಗ್ಗಣ್ಣ ಕೆಲಸ ಮಾಡುವ ನಾಯ್ಕರ ಮನೆಯ ಹೆಂಗಸ್ರು ಬಂದು ಪೊಲೀಸ್ರಿಗೆ “ಹೊಡಿಬ್ಯಾಡಿ, ಹೊಡಿಬ್ಯಾಡಿ ಅವ್ರೆಲ್ಲ ಯಾವ್ ಗಲಾಟಿಯೂ ಮಾಡಿಲ್ಲ. ಮದಿ ಮನೆಯ ಹಾಳ್ ಮಾಡಿ ಬಿಟ್ರಿಯಲೆ” ಅಂತ ಎದುರು ಮಾತಾಡಿದ ಮೇಲೆ ಪೆಟ್ಟುಗಳು ನಿಂತವು. ಆದರೆ ಅಶ್ಟೊತ್ತಿಗೆ ಮದಿಮನಿ ಮಸಣ ಆಗಿತ್ತು.

ಮದಿ ದಿಬ್ಬಣ ಗಂಡಿನ ಮನೆಗೆ ಹೋಗ್ವತಿಗೆ ಗಂಡು ಹೆಣ್ಣು, ಕುಶ್ಟನ ಅಪ್ಪ ಅಬ್ಬಿ ಮಾತ್ರ. ಉಳ್ದರೆಲ್ಲ ದಿಕ್ಕಾಪಾಲಾಗಿ ಓಡಿ, ನೆಡ್ದು ಊರು ಸೇರುವಾಗ ಎರಡು ಮೂರು ದಿನ ಆಗಿತ್ತು.

-3-

ಆ ಮಳೆಯ ಒಡ್ಡೋಲಗದಲ್ಲೇ ಮತ್ತೆ ಭೂತಹಕ್ಕಿ ಕೂಗ್ತು. ಅದು ಹಕ್ಕಿಯೇ ಕೂಗದ್ದಾ ಇಲ್ಲಾ ತನ್ ಹೆಣ್ತಿ ಕೂಗದ್ದಾ ಅಂದ್ಕಂಡು ಕುಶ್ಟಣ್ಣನಿಗೆ ಆ ಗುಡ್ಗು ಮಳೆಯ ಗಲಾಟೆಯಲ್ಲಿ ಅಂದಾಜು ಮಾಡೋಕೆ ಆಯ್ಲಿಲ್ಲ. ಆ ಭೂತಹಕ್ಕಿಯೇ ಹೆದ್ರಿ ಸಾಯ್ಕ್ ಹಾಂಗೆ ಕೂಗುವುದನ್ನು ಸೀತು ಕಲಿತಿದ್ದಳು. ಭೂತಹಕ್ಕಿ ಕೂಗಿದಂಗೆ ಕೂಗಿದ್ರೆ ಆ ಹಕ್ಕಿ ಬಂದು ಕೂಗಿದವ್ರನ್ನ ಕೊಂದು ಹೋಗತ್ತಂತೆ ಅಂತ ಹೆರಿಯರ್ ಹೇಳಿದ್ದನ್ನು ಕೇಂಡಿದ್ದ ಕುಶ್ಟಣ್ಣನಿಗೆ ‘ಈ ಹೆಕತಿಂಬಳ್ ಎಂತಾರೂ ನಂಬ್ರ ಮಾಡ್ತಳ್’ ಅಂದೇಳಿ ಅವನಿಗೆ ಹೆದರಿಕೆ ಶುರುವಾಗಿತ್ತು. ಸೀತುಗೆ ಎಂತಾರೂ ದೆಯ್ಯ ಭೂತದ ಉಪದ್ರ ಇತ್ತಾ ಅಂದೇಳಿ ನಿಮಿತ್ತ ಕೇಂಬ್ಕೆ ಹೋದ ಕುಶ್ಟಣ್ಣ ಅವನ ಸಾರಾಯಿ ತಲ್ಬಿಂದ ಮತ್ತೆ ಈ ಆಸಾಡಿ ಮಳೆಯಿಂದ ಕಪ್ಪಾರೂ ಬಿಡಾರ ಸೇರಲಿಲ್ಲ.

ಹೀಂಗೆ ಆಗಳಿಕೆ ಒಂದ್ಸಲ ಕುಶ್ಟನ ಅಪ್ಪಯ್ಯ ಬಡಿಯಣ್ಣ ಇವನ ಮದಿ ಸಮಯದಲ್ಲಿ ಗಳಿಗೆ ಕೇಂಬುಕೆ ಹೋದಾಗ ‘ಆ ಹೆಣ್ಣಿನ ಕಾಲ್ಗುಣ ಒಳ್ಳೇದಿಲ್ಲ. ಪ್ಯಾಟಿ ಬದಿ ಹೆಣ್ಣ ತಕ ಬರ್ಬೇಡ. ಇಲ್ಲೇ ಎಲ್ಲಾರೂ ಕಾಣ್. ನಿನ್ ಮನಿಗೆ ಆ ಬಳ್ಮೇಸ್ತಿ ಬಂದ್ರೆ ನಿನ್ ಮನಿ ಬಳ್ಕ ಹ್ವಾತ್ತ್. ಅವ್ಳ್ ಈ ಊರಿಗೆ ಬಂದ್ರೆ ಊರ್ ಲಗಾಡಿ ತೆಗಿತಳ್’ ಅಂದೇಳಿ ಬಟ್ರು ಹೇಳಿರಂಬ್ರ್. ಅದಕ್ಕೆ ಅಪ್ಪಯ್ಯ ಈ ಸಂಬಂಧ ಬ್ಯಾಡ ಅಂದ್ಕ ಕೈಬಿಟ್ರೂ ಅಬ್ಬಿ ‘ನಮ್ಮಿಂದ ಒಂದ್ ಹೆಣ್ಮಗಿನ ಬಾಳ್ ಮಾಡೂಕಾಗ. ಮಾತ್ ಕೊಟ್ಟಾಯ್ತು ಮದಿ ಆಯ್ಕಶ್ಟೆ’ ಅಂದೇಳಿ ಹೇಳಿದಾಗ ಬಡಿಯಣ್ಣ ಮದಿಗೆ ಒಪ್ಪಿದ್ದು. ಆರೆ ಮದಿ ಮನಿಯಾಗೆ ಪೊಲೀಸ್ರ್ ಬಂದ್ ಆನಮ್ನಿ ಆದಮೇಲೆ ಬಟ್ರು ಹೇಳದ್ದ್ ಮಾತನ್ನ ತಾನ್ ಕೇಣ್ಕಿದ್ದಿತ್ತ್ ಅಂದೇಳಿ ಬಡಿಯಣ್ಣ ಬೇಜಾರ್ ಮಾಡ್ಕಂಡಿದ್ರೂ ಸೊಸಿ ಬಂದಮೇಲೆ ಅವನಿಗೇನೂ ಕೆಟ್ಟದ್ದು ಆಯ್ಲಿಲ್ಲ. ತನ್ನ ಮಾತ ಮೀರಿಯೂ ಅದೇ ಹೆಣ್ಣನ್ನ ತಂದ ಬಡಿಯನ ಮೇಲೆ ಬಟ್ರಿಗೆ ಕಂಡಿಗಟ್ಲೆ ಸಿಟ್ಟು ಬಂದು ‘ಮಾಡ್ದನ್ ಉಂತ ಮನಿಯಂತ ಕಡ್ಬ್’ ಅಂತ ಥೂ ಅಂತ ಉಗಿದಿದ್ರು.

ಶಾಲಿಗೆ ಹೋಗಿದ್ದ ಒಂದು ತಿಂಗಳಲ್ಲಿ ಸೀತು ಓದು ಬರಹ ಕಲಿದಿದ್ರೂ ತಮ್ ಜಾತಿಯವ್ರು ಹೀಂಗೆ ಇಪ್ಪುಕಾಗ ಅಂತ ಕಲಿತಿದ್ದಳು. ಸೀತು ಮದಿ ಆಗಿ ಎರಡು ವರ್ಶ ಆದಮೇಲೆ ಜವ್ವನ್ತಿ ಆದಳು. ಮಗಳು ಜವ್ವನ್ತಿ ಆದಾಗ ಬಂದ ಅಬ್ಬಿ ನಾಯ್ಕರ ಹೆಂಗ್ಸರು ಹಾಕುವಂತ ಎರಡು ಬಾಡಿಯ ತಂದುಕೊಟ್ಟು ಹೋಗಿದ್ದಳು. ‘ಬಳ್ಮೇಸ್ತಿಯರ್ ಬಾಯ್ಕಟ್ಕ್ ಬಚ್ಚಿಯಕ್ಕ ಇಲ್ದಿರೆ ಅವ್ರ್ ಮನಿ ಹೆಂಗಸ್ರನ್ನ ಮೂಲಿಗ್ ಹಾಕಿ ಯಜಮಾನ್ಕಿ ಮಾಡ್ತ್ರ್’ ಅಂತ ಕುಶ್ಟನ ಅಬ್ಬಿಗೆ ಊರಿನ ಹೆಂಗ್ಸರು ಹೇಳಿದ್ರೂ ಬಚ್ಚಿಯಕ್ಕ ಆ ಮಾತನ್ನ ಕೆಮಿ ಮೇಲೆ ಹಯ್ಕಣ್ಲಿಲ್ಲ. “ನಾನೇನ್ ಇಲ್ಲೇ ಹುಟ್ಟಿ ಬೆಳ್ದಳಾ… ನಾನೂ ನೀವೂ ಎಲ್ಲರೂ ಬಳ್ಮೇಸ್ತಿಯರೆ. ಹಾಂಗ್ ಕಂಡ್ರೆ ಲೋಕ್ದಾಗಿದ್ದ ಎಲ್ಲಾ ಹೆಂಗಸ್ರೂ ಬಳ್ಮೇಸ್ತಿಯರೆ” ಅಂತ ಸೊಸಿಯ ಬಗ್ಗೆ ಮಾತಾಡುವುದಕ್ಕೆ ಬಂದವರಿಗೆಲ್ಲ ಮುಖಕ್ಕೆ ಹೊಡ್ದಂಗೆ ಮಾತಾಡಿದ್ದಳು. ಆರೂ ನನ್ ಸೊಸಿ ಚೂರು ಗಟ್ಗಿತ್ತಿಯೆ. ಎಂತಾ ಆರೂ ಪ್ಯಾಟಿ ಕಂಡ ಮಕ್ಕಳಲ್ದಾ! ಅಂತ ಅವಳಿಗೆ ಅವಳೇ ಸಮಾಧಾನ ಮಾಡಿಕೊಂಡಿದ್ದಳು.

ಜವ್ವನ್ತಿ ಆದ ಮೇಲೆ ಸೀತುಗೆ ತಾನು ಹೆಂಗ್ಸು ಅಂತ ಅನ್ಸುಕೆ ಸುರುವಾಯ್ತು. ಮಾಯಿ ಇಲ್ದಿದ್ದ ಹೊತ್ತಲ್ಲಿ ಅಬ್ಬಿ ತಂದುಕೊಟ್ಟ ಬಾಡಿಯ ಹಾಕಿ ಕಂಡಳು. ನಾಚಿಕಿ ಆಗಿ ಮತ್ತೆ ಪೆಟ್ಗಿಗೆ ಹಾಕಿಟ್ಟಿದ್ದಳು. ಒಂದಿನ ಹಾಕಿ ಕಾಂಬ ಹೊತ್ತಿಗೆ ಮಾಯಿ ಬಂದ್ಬಿಟ್ರು. ಸೀತುಗೆ ಎಂತ ಮಾಡೋದು ಗೊತ್ತಾಗದೆ ಮಯ್ಗೆಲ್ಲ ಸೀರಿಯ ಸುತ್ತಿ ಕೂಕಂಡಳು. ಸೊಸಿ ಹೈಯ್ಲಾದ್ದು ಕಂಡು ಮಾಯಿಯ ನೆಗಿ ಮಡ್ಕಿ ಒಡ್ದು ಹೋಯ್ತು. ಕಡೀಕೆ ತಾನು ಈ ನಮ್ನಿ ನೆಗಿ ಆಡ್ರೆ ಆ ಮಗಿನ್ ಮನ್ಸಿಗೆ ನೋವಾಪ್ಗ್ ಅಂದೇಳಿ ಬಚ್ಚಿ “ಹಯ್ಕೋ ಮಗಾ. ಅಡ್ಡಿಲ್ಲ ನಾನ್ ಎಂತ ಹೇಳೂದಿಲ್ಲ. ಕಾಂಬ ಬಾಡಿ ಹ್ಯಾಂಗಿತ್ತ್?” ಅಂದೇಳಿ ಸೋಸಿಗೆ ಆದ ಬೇಜಾರನ್ನು ಬಾಡಿಯ ಕಾಣುವ ಅಚ್ಚರಿಯಲ್ಲಿ ಮರೆಸಿಬಿಟ್ಟಳು. ಅದ್ರ ಲಾಡಿ, ಹುಕ್ಸು ಎಲ್ಲಾ ಕಂಡು ಬಚ್ಚಿ ಬೆರಗಾದಳು. ‘ತನ್ನ ಅಬ್ಬಿ, ಹೆರಿಯಬ್ಬಿ, ಅಜ್ಜಿದಿಕ್ಕಳೆಲ್ಲ ರವ್ಕಿಗಿ ಹಯ್ಕಂಡರೇ ಅಲ್ಲ ಅಂಬ್ರೆ’ ಅಂದು ತಾನು ಮದಿ ಆಗುವ ಕಾಲದಲ್ಲಿ ನಮ್ ಪೈಕಿಯರೊಳಗೆ ಹೊಸ ರವ್ಕಿಗಿ ಹಾಕ್ದಳ್ ತಾನೆ ಎಂಬ ಬೆರಗಿನ ಕತೆಯನ್ನು ಸೊಸಿಗೆ ಹೇಳಿದಳು. ತನ್ನ ಕರ್ಕು ಅಜ್ಜಿ ರವ್ಕಿ ಹಾಕದ್ದೇ ನಾ ಕಾಣ್ಲಿಲ್ಲ ಮಾಯ, ಸೀರಿ ಸೆರ್ಗೇ ಎದಿ ಮೇಲ್ ಹಯ್ಕಂತಿದ್ದಳ್. ತನ್ನ ಮದಿ ದಿನ ಉಂಬುಕೆ ಕೂಕಂಡ ಅಜ್ಜಿ ಚಿತ್ರ ಸೀತು ಕಣ್ಮುಂದೆ ಬಂದು ಕಣ್ಣಾಗೆ ನೀರು ಬಂತು. ಬಚ್ಚಿ ಸೊಸಿಯನ್ನು ಸಮಾಧಾನ ಮಾಡಿ “ನಾನ್ ಮದಿ ಆರ್ಮೇಲೆ ರವ್ಕಿಗಿ ಹಾಕ್ದೆ ನನ್ ಸೊಸಿ ಮದಿ ಆರ್ಮೇಲೆ ರವ್ಕಿಗಿ ಒಳ್ಗೆ ಬಾಡಿ ಹಾಕ್ದಳ್ ಕಾಣ್” ಅಂದಳು. ಆ ಮಾತಿಗೆ ಇಬ್ರಿಗೂ ನೆಗಿ ಬಂತು. “ನಿಂಗ್ ಮನ್ಸಿಗ್ ಬಂದದ್ದ್ ಮಾಡ್ ಮಗಾ ನಾನೆಂತ ಅಂತಿಲ್ಲ” ಅಂದುಕೊಂಡು ಬಚ್ಚಿ ಸೊಸೆಯ ಬೆನ್ತಟ್ಟಿದಳು.

‘ಬಚ್ಚಿಯ ಸೊಸೆ ಬಾಡಿ ಹಾಕ್ತಾಳಂಬ್ರು’ ಅನ್ನುವುದು ಈಗ ಹುಲಿ ಕೂಗುವ ಕಾನಿನ ಒಳಗೆಲ್ಲ ಹಬ್ಬಿ ಹೋಯ್ತು. ಬಾಡಿ ಅಂದ್ರೆ ಹ್ಯಾಂಗಿಪ್ಗು? ಅಂದೇಳಿ ಸುಳ್ ಸುಳ್ಳೇ ಹೆಳಿ ಹಿಡ್ಕಂಡು ಕಾನಿಗೆ ಕಾನೇ ಬಚ್ಚಿಯ ಬಿಡಾರದ ಬದಿಗೆ ಬಂದು ಹೋಗುವುದಕ್ಕೆ ಸುರು ಮಾಡಿತು. ಬಚ್ಚಿಯ ಬಿಡಾರದ ಹೊಕ್ಡೇ ಒಂದು ದೊಡ್ಡಭೂತ ಬಾಗಾಳ್ ಮರ. ಸೀತು ಮದಿ ಆಗಿ ಬಂದು ಹತ್ ಹತ್ರ ಮೂರು ವರ್ಶ ಆಗ್ತಾ ಬಂದ್ರೂ ಆ ಮರದ ಬಾಗಾಳ್ ಹೂಗ ಹೆಕ್ಕುವುದಾಕಾಗ್ಲಿ, ಬಾಗಾಳ್ ಹಣ್ಣ ಹೆಕ್ಕಿ ತಿಂಬುವುದಕ್ಕಾಗ್ಲಿ ಯಾರೂ ಬಂದದ್ದನ್ನ ಅವಳು ಕಾಣ್ಲಿಲ್ಲ. ಅದ್ಕಾಗಿ ಆ ದೊಡ್ಡ ತಂಪ್ಲಿನ ಕೆಳಗಿದ್ದ ಬೋಗಿ ಗಿಡದ ಒಂದು ಎಗೆಗೂ ಬಿಡಾರದ ಕೊಗಳಿನ ಒಂದು ದಬ್ಬಿಗೂ ಬಳ್ಳಿ ಕಟ್ಟಿ ನ್ಯಾಲೆ ಮಾಡಿ ವಸ್ತ್ರ ಒಣಗಿಸುವುದಕ್ಕೆ ಹಾದಿ ಮಾಡಿಕೊಂಡಿದ್ದಳು. ಒಂದಿನ ಆ ಬಾಗಾಳ್ ಮರದ ಕೆಳಗೆ ನಾಗನ ನೆಡಿ ಇತ್ತು ಅಂದ್ಕಂಡು ನಿಮಿತ್ತ ಕಾಂಬ ಬಟ್ರು ಬಂದು ನಿಂತ್ಕಂಡಾಗಳಿಕೆ ಬಚ್ಚಿಗೆ ಎದಿ ಜಲ್ಲ್ ಅಂತು. ಬಡಗುಟ್ಕ ಓಡಿ ಅಲ್ಲಿ ಒಣ್ಸಿದ್ದ ವಸ್ತ್ರುನೆಲ್ಲ ಬಾಚಿಕೊಂಡು ಓಡಿ ಬಪ್ಪಾಗ ಸೀತು ಬಾಡಿ ಅಲ್ಲೇ ಉಳ್ಕಂತು. ಬಟ್ರು ನ್ಯಾಲಿನೇ ಕಾಂತ ಇದ್ರು. ಸೀತು ಹೋಗಿ ಅದನ್ನ ತಕ್ಕಂಡು ಬಂದಳು. ಅವಳ ನ್ಯಾಲೆ ಬಾಗಾಳ್ ಮರದ ತಂಪ್ಲಿಂದ ಬಿಡಾರದ ಎದ್ರಿನ ಬಿಸ್ಲಿಗೆ ಬಂತು.

ಬಾಗಾಳ್ ಮರದ ಕೆಳಗೆ ನಾಗನ್ ನೆಡಿ ಇತ್ತೋ ಇಲ್ಯೋ ಗುತ್ತಿಲ್ಲ. ಆರೆ ಎರಿಯರ್ ಪೈಕಿ ಹೆಂಗಸ್ರು ಸೀತು ವಸ್ತ್ರ ಒಣ ಹಾಕುವ ಹೊತ್ತಿಗೆ ಪೂಜೆಯ ಹೆಳಿ ಮಾಡಿಕೊಂಡು ಆಗಾಗ ಬಂದವರು ನ್ಯಾಲಿಯನ್ನು ದಾತ್ ಹೋದವರಂಗೆ ಕಾಂಬುದು ಬಚ್ಚಿಗೆ ಕಾಣಿಸ್ತು; ಸೀತುವೂ ಕಂಡಳು. ಹಂಗಾರೆ ಈ ಕಾನ್ ಸೆರ್ಗಿನಾಗೆ ಯಾವ್ ಹೆಂಗಸ್ರೂ ಬಾಡಿ ಹಾಕುವುದಿಲ್ಲ, ಬಾಡಿಯ ಕಂಡರೂ ಇಲ್ಲ ಅಂಬುದು ತೆಳಿತು. ಒಣ ಹಾಕಿದ ಬಾಡಿಯ ಕಾಂಬುಕೆ ಬಾಗಾಳ್ ಮರ ಮತ್ತೆ ನಾಗನ್ ನೆಡಿ ಒಂದು ಹೆಳಿ ಅಂದೇಳಿ ಗುತ್ತಾರ್ಮೇಲೆ ಸೀತುಗೆ ಅವ್ರೆಲ್ಲ ಬಪ್ಪುದು ನ್ಯಾಲಿ ಕಾಂಬುದು ಒಂದು ಕುಶಾಲಿನಂತೆ ತೋರಿತು.

ಜವ್ವನ್ತಿ ಆರೂ ಸೀತು ಬಸುರಿ ಆಯ್ಲಿಲ್ಲ. ಮಾಯಿ ಆಗಲಿ ಮಾವ ಆಗಲಿ ಅದನ್ನ ಕೇಳೂ ಇಲ್ಲ. ಒಂದ್ಸಲ ಬಸ್ರು ನಿಲ್ದೆ ಇದ್ದಾಗ ಆಚೀಚೆ ಹೆಂಗಸ್ರು ಏನೇನೋ ಮಾತಾಡಿಕೊಂಡರೂ ಬಚ್ಚಿಯಕ್ಕ ‘ಇದ್ ನಿಲ್ದಿರೆ ಇನ್ನೊಂದ್ ನಿಲ್ಲತ್. ಹಂದಿ ಹೆತ್ತಂಗ್ ಹತ್ ಹೆರ್ವಶ್ಟ್ ಗಟ್ಟಿ ಇದ್ದಳ್ ನನ್ ಸೊಸಿ’ ಅಂದಳು. ಸೊಸಿಯ ಕರ್ಕಂಡು ನಟ್ಟಿ ನಡುಕೆ, ಕಳಿ ಕೀಳುಕೆ, ಕೊಯ್ಲಿಗೆ ಹೋಗುವುದಕ್ಕೆ ಸುರು ಮಾಡಿದಳು. ಗೆದ್ದಿ ಕೆಲ್ಸ, ತ್ವಾಟದ ಕೆಲ್ಸ ಕೈಸಬ್ಬಿ ಆದ್ಮೇಲೆ ಮಾಯಿನ್ನ ಮನಿಯಲ್ಲೆ ಉಳಿಸಿ ತಾನು ಮಾತ್ರ ಕೆಲಸಕ್ಕೆ ಹೋಗುವುದು ಅಬ್ಯಾಸ ಮಾಡಿಕೊಂಡ್ಳು. ಗಂಡ, ಮಗ, ಸೊಸಿ ಎಲ್ಲಾ ದುಡುವಂಗೆ ಆದ್ದಕ್ಕೆ ಬಚ್ಚಿ ಕುಶಿಯಾದಳು. ಬಿಡಾರದಂಗೆ ಉಳ್ಕಂಡು ಗೆಣ್ಗು, ಗುಂಬಳ್ ಬಳ್ಳಿ ನೆಟ್ಟಳು. ಕಾನ್ ಹಂದಿ ಬಂದು ಗೆಣ್ಗಿನ ಬುಡು ಹಯ್ಡುಕೆ ಸುರು ಮಾಡ್ದೊ. ಗೆಣ್ಗ್ ಬಿಟ್ಟು ತೊಂಡಿ ಚಪ್ರ ಮಾಡಿದಳು. ಸುಮ್ನೆ ಅಂತೂ ಕೂಕಣಿಲ್ಲ.

ಸೀತು ಮದಿ ಆಗಿ ಬಂದು ಮಳಗಾಲದ ಮೇಲೆ ಮಳಗಾಲ ಅಂದೇಳಿ ಮೂರ್ ಮಳಗಾಲ ಕಳೆದು ಮತ್ತೆ ಮಳಗಾಲ ಬಂತು. ಈ ಸಲ ನಟ್ಟಿ ನಡುಕೆ ಹೋದಾಗ ಬಚ್ಚಿಯಕ್ಕ ಇಲ್ದಿದ್ದು ಕಂಡು ಹೆಂಗ್ಸರ್ ಸೀತುವಿನ ಬಾಡಿಯ ಬಗ್ಗೆ ಕೇಂಡರು.

“ಅಲ್ಲ ಸೀತ್ವ ಆ ನಮ್ನಿ ಬಳ್ಳಿ ಹಯ್ಕ ಬಿಕ್ಕಂಡ್ರೆ ಉಸ್ರ್ ಸಿಕ್ಕ್ ಹಯ್ಕ ಸತ್ತ್ ಗಿತ್ತ್ ಹ್ವಾರೆ?” ಅಂತ ಒಬ್ಳು ಆತಂಕ ಹೇಳಿಕೊಂಡ್ರೆ ಉಳಿದವರು ‘ಹೌದಪ’ ಅಂದ್ರು.

“ನೀ ಬಿಕ್ಕಂಡದ್ದ್ ಕಂಡ್ ನಂಗೇ ಉಸ್ರ್ ಸಿಕ್ಕ್ ಹಾಕಂಡಂಗಿತ್ತಪ” ಅಂದಳು ಇನ್ನೊಬ್ಳು.

“ಜಂಗ್ ಮೇಲೆ ಎಯ್ಡ್ ಬಳ್ಳಿ, ಎದಿಗೆಯ್ಡ್ ಗೆಯ್ಟಿ ಚಿಪ್ಪಿ, ಹಿಂದ್ ಹುಕ್ಸಾ?” ಅಂತ ಇನ್ನೊಬ್ಳು ಅಂದಳಾ… ಗೆಯ್ಟಿ ಚಿಪ್ಪಿ ಅಂದದ್ಕೆ ಸೀತು ಜೊತೆಗೆ ಅಲ್ಲಿದ್ದ ಹೆಂಗ್ಸರೆಲ್ಲ ನೆಗಿ ಆಡಿದ್ರು.

“ಅಲ್ಲಾ ಮರತಿ, ಬೆನ್ನಂಗೆ ಹುಕ್ಸಿತ್ತ್ ಅದ್ನ ಹ್ಯಾಂಗ್ ಹಯ್ಕಂತೆ ಕಾಂಬ ತೋರ್ಸ್” ಅಂತ ಕೇಂಡಿದ್ಕೆ ಸೀತು

“ಈ ಗೆದ್ದಿ ಬಯ್ಲಾಗ್ ಬಿಚ್ಕ ಕೂಕಂಬ್ದಾ ಅಕ್ನೆ? ಒಂದಿನು ನಮ್ಮನಿಗ್ ಬನಿ ತೋರಸ್ತೆ. ಬೆನ್ನಾಗ್ ಹುಕ್ಸಿದ್ರೂ ಹಯ್ಕಂಬ್ಕೆ ಆತ್ತ್. ಹುಕ್ಸ್ ಎಲ್ಲೇ ಇರ್ಲಿ ನೀವೆಲ್ಲ ಬಾಡಿ ಹಯ್ಕಂಬ್ದ್ ಕಲೀಕ್ ಅಕಾ?

“ನಮ್ಮನಿ ಗಣ್ಸರ್ ಬಯ್ಯುಕಿದ್ರ್ ಮರತಿ”

“ಎರಿಯರ್ ಮನಿ ಹೆಂಗಸ್ರೇ ಹಯ್ಕಂತಿಲ್ಲ. ನಿಂಗ್ ಬಾಡಿಯಾ? ನಿಂಗೆಂತ ಮಂಡಿ ಕೆಟ್ಟಿತಾ ಅಂಬುಕಿದ್ರ್”

“ಎರಿಯರ್ ಮನಿ ಹೆಂಗಸ್ರು ಹಯ್ಕಂತಿಲ್ಲ ಅಂದೇಳಿ ಕಾಂಬ್ಕೆ ನಿಮ್ಮನಿ ಗಣ್ಸರ್ ಹೋಯ್ರಾ? ಇಕಾಣಿ ನೀವ್ ಹೀಂಗೆ ಪಳ್ಸಾರ್ ರವ್ಕಿಗಿ ಹಯ್ಕಂಡ್ ಬಗ್ಗಿ ನಡ್ತಿದ್ರೆ ಹೂಂಟಿ ಮಾಡು ಗಣ್ಸ್ ಎತ್ತಿನ್ ತೈಡ್ ಕಾಂಬದ್ ಬಿಟ್ಟ್ ನಿಮ್ ಮಲಿ ಕಾಂತ ಕೂಕಂತ. ಇಕಾಣಿ ಯಾರೂ ಬೈತಿಲ್ಲ. ಬರು ಸಲ ಮಾರನ್ಕಟ್ಟಿ ಹಬ್ಬದಂಗೆ ನೀವೆಲ್ಲ ಬಾಡಿ ತಕಣ್ಕೆ” ಸೀತು ಎಲ್ಲರಿಗೂ ಹುಕುಂ ಮಾಡ್ದಳ್. ಆ ಹೆಂಗಸ್ರಿಗೆ ಅವಳ ಮಾತು ಅಡ್ಡಿಲ್ಲ ಅನ್ಸಿದ್ರೂ  ‘ನಮ್ಮನಿ ಗಣ್ಸರಿಗೆ ಎರಿಯರ್ ಹೆಂಗ್ಸರ್ ಬಾಡಿ ಹಯ್ಕಂತಿಲ್ಲ ಅಂದೇಳಿ ಗುತಾತ್ತಾ!’ ಅಂದೇಳಿ ಮಂಡಿ ಕೆಡ್ತು.

ಕಡಿಕೂ ಸೀತುಗೆ ಬಸ್ರು ನಿಂತಿತು. ನಾಕು ಮಳಗಾಲ ಕಳದು ಐದ್ನೇ ಮಳಗಾಲ ಸುರು ಆಪತಿಗೆ ಸೀತು ಹೆಣ್ಮಗಿನ ಹೆತ್ತಳು. ಅದಾದ ಮಾರ್ನೇ ವರ್ಶ ಗಂಡಾಯ್ತು. ಬಡಿಯಣ್ಣ ಬಚ್ಚಿಯಕ್ಕ ಮಮ್ಮಕ್ಕಳನ್ನ ಆಡಿಸ್ತಾ ಆ ಕಾನ್ಗುಡ್ಡಿ ಎಲ್ಲಾ ಕುಶಿ ಆಪಂಗೆ ನೆಗಿ ಆಡ್ತಾ ಇದ್ದ ಒಂದಿನ ಕಪ್ಪಿಗೆ ಆ ಬಾಗಾಳ್ ಮರದಂಗೆ ಭೂತಹಕ್ಕಿ ಕೂಗ್ತು.

ಕೆಲಸ ಅಂದ್ರೆ ಕುಶ್ಟಂದು ಅಂಬಂಗೆ ಇದ್ದ ಕುಶ್ಟ ಅಪ್ಪಯ್ಯ ಅಬ್ಬಿ ಹೋದಮೇಲೆ ಬುಳ್ಳ ಕುಡಿಯುವುದನ್ನ ಕಲಿತ. ಹೀಂಗಾಗಿ ಯಾರೂ ಅವನನ್ನು ಕೆಲಸಕ್ಕೆ ಕರೆಯುವುದಿಲ್ಲ. ಹೆಣ್ತಿ ಹತ್ರ ಬೇಡಿದಾಗ ಕೊಟ್ರೆ ಕುಡಿದ. ಕೊಡದಿದ್ದಾಗ ಆಯಾಯ ಕಾಲಕ್ಕೆ ಆಗುವ ಗೇರು ಬೀಜ ಹೆಕ್ಕಿದ, ಕಾನಿನ ಮಾವಿನ್ಕಾಯಿ ಕೊಯ್ದ, ಮಳಗಾಲದಲ್ಲಿ ಆಣ್ಬು ಹೆಕ್ಕಿ ಹೀಂಗೆ ಕುಡಿಯುವುದಕ್ಕೆ ಏನಾದ್ರೂ ಒಂದು ದಾರಿ ಮಾಡಿಕೊಂಡ.  ಮಗಳನ್ನು ಶಾಲೆಗೆ ಸೇರಿಸುವಾಗ ಮಾಸ್ಟ್ರು ಹೇಳಿದ ಹಾಗೆ ‘ಅಬ್ಬಿ ಮಗಳು ಒಂದೇ ಕ್ಲಾಸು’ ಅಂದುಕೊಂಡು ಸೀತು ಮಗಳೊಟ್ಟಿಗೆ ಬೈಯಾಪತಿಗೆ ಕೂಕಂಡು ಕಲಿಯತೊಡಗಿದಳು. ಇದು ಕುಶ್ಟನಿಗೆ ಇಶ್ಟ ಆಗದಿದ್ರೂ ಹೆಣ್ತಿ ಎದ್ರಿಗೆ ಮಾತಾಡುವ ಅಟಾಪಿಲ್ಲದೆ ಸುಮ್ನೆ ಕೂಕಂಡ. ಸುಮ್ನೆ ಕೂಕಂಬುಕೆ ಆಗದೇ ಇದ್ದಾಗ ಸರಾಯಿ ಅಂಗಡಿಗೆ ಹೋಗಿ ಕುಡಿದ ಮತ್ತಲ್ಲಿ ಮನಿ ಸುದ್ದಿ ಊರಿಗೆಲ್ಲ ಹೇಳ್ಕಂತ ಬಂದ. ಕೆಲವು ದಿನ ಬರ್ದೆ ಅಲ್ಲೆಲ್ಲೋ ಸಿರಂಡಿಗೆ ಬಿದ್ದು ಬೆಳ್ಗಾರ್ಮೇಲೆ ಎದ್ದು ಬಿಡಾರಕ್ಕೆ ಬಪ್ಪುಕೆ ಸುರು ಮಾಡಿದ. ಸೀತು ಮಗಳಾದ ಮೇಲೆ ಮಗನನ್ನೂ ಶಾಲೆಗೆ ಸೇರ್ಸಿದಳು. ಮಕ್ಕಳು ಒಂದೊಂದೇ ಕ್ಲಾಸು ಮುಂದಕ್ಕೆ ಹೋಗಿ ಕುಶ್ಟ ಇದ್ದವನು ಕುಶ್ಟಣ್ಣ ಆದ. ಕೆಲವರ ಬಾಯಲ್ಲಿ ಕುಡ್ಚಣ್ಣ ಆಗಿ ನೆಗಿ ಆಡೂಕೆ ಒಂದು ಹೆಳಿ ಆದ. ಸೀತುಗೆ ಗಂಡನ ಕುಡ್ತ ಬಿಡ್ಸುಕೆ ಆಗ್ಲೇ ಇಲ್ಲ. ಎಂತೆಲ್ಲ ಮಾಡಿ ಕಂಡ್ರೂ ಅಂವ ಕುಡಿಯುವುದನ್ನು ಬಿಡ್ಲೇ ಇಲ್ಲ. ಸರಾಯಿ ಅಂಗಡಿ ಸೇಸು “ಕುಡೂದ್ ಬಿಡ್ತ್ಯಾ ಇಲ್ಲ ಹೆಣ್ತಿ ಬಿಡ್ತ್ಯಾ?” ಅಂದೇಳಿ ಕುಶಾಲು ಮಾಡಿದ್ರೆ “ಹೆಣ್ತಿ ಬಿಡ್ತ್ನೇ ಹೊರ್ತೂ ಕುಡುದ್ ಬಿಡುದಿಲ್ಲ ಸೇಸುವಣ್ಣ” ಅಂತ ಕಡಾಕಂಡಿತ ಹೇಳ್ತಿದ್ದ.

ಮಕ್ಕಳೊಟ್ಟಿಗೆ ಕೂಕಂಡು ಓದು ಬರಾ ಕಲಿಯುತ್ತಿದ್ದ ಸೀತುಗೆ ತಾನು ತನ್ ಜಾತಿಯರ್ ಹೀಂಗ್ ಬದ್ಕುಕಾಗ ಅಂಬುದು ಮತ್ತೆ ಮನ್ಸಿಗೆ ಹೆಟ್ಟಿತು. ಆ ಬಾಡಿ ಹಾಕುಕೆ ಕಲಿತ ಹೆಂಗಸ್ರನೆಲ್ಲ ಒಟ್ಟು ಹಾಕಿ ಬೈಯಾಪತಿಗೆ ಓದು ಬರಾ ಕಲ್ಸುಕೆ ಸುರು ಮಾಡಿದಳ್. ಅವರ ಮನಿ ಮಕ್ಕಳನೆಲ್ಲ ಒತ್ತನ್ಕಿ ಮಾಡಿ ಶಾಲೆಗೆ ಸೇರಿಸಿದಳು. ಇದು ಅವರ ಮನೆಗಳ ಗಣ್ಸರಿಗೆ ಸಿಟ್ಟು ತರಿಸಿತು. “ಇಕಾಣಿ ನೀವೆಲ್ಲ ಆ ಸೀತು ಮಾತ್ ಕೇಂಬುದಾರೆ ಅವ್ಳ್ ಮನಿಯಾಗೇ ಅಯ್ಕಣಿ. ನಮ್ ಮಾತ್ ಕೇಂಬ್ದಾರೆ ಮನಿಗ್ ಬನಿ. ಅವ್ಳ್ ಗಂಡ ಕುಡ್ಕ ಹಾದಿ ಮೇಲೆ ಬೀಳ್ತ. ಮೊದ್ಲ್ ಗಂಡನಿಗೆ ಬುದ್ದಿ ಹೇಳೂಕೆ ಹೇಳಿ” ಅಂದು ಮನಿ ಗಣ್ಸರು ಬಯ್ಯೂಕೆ ಸುರು ಮಾಡದ್ದೇ ಎಲ್ಲಾ ಹೆಂಗಸ್ರು “ನೀವ್ ಸರಾಯಿ ಅಂಗ್ಡಿ ಬಿಡಿ, ನಾವ್ ಓದುದ್ ಬಿಡ್ತೋ. ಆ ಕುಶ್ಟಣ್ಣನಿಗೆ ಹೇಳೂದೆಲ್ಲಾ ಹೇಳಿ ಆಯ್ತ್. ಆರೂ ಅಂವ ಕುಡುದ್ ಬಿಡ್ಲಿಲ್ಲ. ಹೀಂಗೆ ಕುಡಿತಾ ಇದ್ರೆ ನೀವೂ ಒಂದಿನ ಅವ್ನ್ ಕಂಡಂಗೆ ಕಣಿಯಾಗ್ ಬೀಳ್ತ್ರಿ. ನಿಮಗ್ ಸರಾಯ್ ಬಿಡುಕಾತ್ತಾ ನೀವ್ ಹೇಳ್ದಂಗೆ ಕೇಂತೊ. ಎಡಿತ್ತಾ?!” ಅಂದ್ರಾ ಗಣ್ಸರ್ ಪುಂಗಿ ಬಂದಾಯ್ತು. ತಮ್ಮನಿ ಹೆಂಗಸ್ರ್ ಮೇಲಿದ್ದ ಸಿಟ್ಟೆಲ್ಲಾ ಸೀತು ಮೇಲೆ ತಿರಿಕಂತು. ಈ ಗಂಡ ಹೆಣ್ತಿಯರ್ ಸಿಟ್ಟು ಆಗಾಗ ಹೊಗೆಯಾಡಿ ಆ ಹುಲಿ ಕೂಗುವ ಸಹ್ಯಾದ್ರಿ ಕಾನು ಗುಡ್ಡಿಯ ಕಡು ಹಸುರು ಹಾಸಿನ ಮೇಲೆ ಕಿಡಿ ಆಗಿ ಎರಿಯರ್ ಮನೆಗಳಿಗೂ ತೋರಿತು. ಅಂತಾ ಒಂದು ಬೈಯಾಪ ಹೊತ್ತಿಗೆ ಭೂತಹಕ್ಕಿ ಮತ್ತೆ ಕೂಗಿತು. ಎಲ್ಲಾ ಹೆಂಗಸ್ರೂ ಆ ಬದಿಗೆ ತಿರ್ಗಿ ಕಂಡ್ರು. ಸೀತು ಆ ಹಕ್ಕಿ ಕೂಗ್ದಂಗೆ ಮೂರು ಸಲ ಕೂಗಿದಳು. ಸೀತು ಕೂಗಿದ್ದು ಕಂಡು ಆ ಹೆಂಗಸ್ರು ತಮ್ ತಮ್ಮ ಬಿಡಾರಕ್ಕೆ ಓಡಿಬಿಟ್ರು.

ಹೆಣ್ತಿ ಭೂತಹಕ್ಕಿ ಕಂಡಂಗೆ ಕೂಗೂದನ್ನ ಕಲಿತ ಮೇಲೆ ಕುಶ್ಟಣ್ಣನ ಕುಡಿತವೂ ತುಂಬಿ ಮರಿಲಿಕ್ಕೆ ಸುರುವಾಗಿತ್ತು. ಆರೂ…’ಭೂತಹಕ್ಕಿ ಕೂಗ್ದಂಗೆ ಕೂಗ್ರೆ ಮ್ಯಾಳಿ ಮೆಟ್ಕ ಹ್ವಾತ್ತ್ ಅಂತಿದ್ರಲ್ಲ, ಇವ್ಳಿಗೆಂತದೂ ಆಯ್ಲಿಲ್ಯಲೆ!! ಹಂಗಾರೆ ಅದ್ ಭೂತ ಅಲ್ದಾ? ಮಾಮೂಲಿ ಹಕ್ಕಿಯಾ?’ ಅಂತ ಆ ಗೋರ್ಕಪ್ಪಿನಂಗೆ ಕಾಸಾನ್ ಮರದ ಕೆಳಗೆ ಮಂಡಿ ಕೆಡಿಸ್ಕಂಡು ಕೂತಿದ್ದ ಕುಶ್ಟಣ್ಣ. ಕಾಸಾನ್ ಮರದ ಎಲಿ ರಾಶಿ ಮೇಲೆ ಬಿದ್ದ ಮಳಿ ಜಾಗ ಮಾಡ್ಕಂಡು ಇಳ್ದು ಕುಶ್ಟಣ್ಣನ ನೆತ್ತಿ ಮೇಲೆ ದಸಿದಸಿ ಬೀಳ್ವತಿಗೆ ಅವನ ಭೂತಹಕ್ಕಿ ಮಂಡಿ ಒಳಗಿಂದ ಹಾರಿ ಹೋಯ್ತು. ಅದೇ ಹೊತ್ತಿಗೆ ಮಳಿ ಗುಡ್ಗು ಮಿಂಚು ಎಲ್ಲಾ ಸೇರ್ಕಂಡು ದೊಡ್ಡ ಬೆಂಕಿ ಉಂಡೆ ಆಗಿ ಆ ಕಾಸಾನ್ ಮರದ ಮೇಲೆ ಎರಗಿದವು. ಅಂತಾ ಮಳಿಯಾಗೂ ಆ ಬೆಂಕಿ ಉಂಡೆ ಕಾಸಾನ್ ಮರವನ್ನೂ ಅದರ ಕೆಳಗಿದ್ದ ಒಂದು ದರ್ಕನ್ನೂ ಬಿಡದೆ ಕೈಟ್ಸಿ ಮಸಿಗೆಂಡ ಮಾಡಿದ್ದವು.

-4-

ಗಂಡ ಹೋದ ಮೇಲೆ ಸೀತು ಇನ್ನಶ್ಟು ಗಟ್ಟಿ ಆದಳು. ಸೀತು ಇಂದಾಗಿ ಮಕ್ಕಳೆಲ್ಲ ಶಾಲೆಗೆ ಹೋಗಿ ಗದ್ದೆ, ತ್ವಾಟದ ಕೆಲಸ ಹಳಿ ಜಬ್ಬ್ ಆಳುಗಳಿಂದ ಕೆಲಸ ಮಾಡಿಸುವುದಕ್ಕೆ ಕಶ್ಟ ಆಗಿದ್ದೇ ಒಡಿಯರ್ ಮನೆಗಳಿಗೆಲ್ಲ ಸಿಟ್ಟೇರ್ತು. ಅದೆಲ್ಲಾ ಗೊತ್ತಾದ್ರೂ ಸೀತು ಮಂಡೆಗೆ ಹಾಕಣದೆ ಬೈಯಾಪತಿಗೆ ಓದು ಬರಾ ಕಲಿತಿದ್ದಳು; ಕಲಿಸುತ್ತಿದ್ದಳು.

ಕಾನಾಗೆ ಹೆಣ್ಣು ಹುಲಿಯೊಂದು ಮರಿ ಹಾಕಿತು. ಅದೇ ಕಾರಣ ಸಿಕ್ಕಿ ಸೀತು ಬಿಡಾರದ ಸುತ್ಲೂ ಅತ್ಲಾಗೆ ಅರ್ದ ಹಾಡಿ ಇತ್ಲಾಗೆ ಅರ್ದ ಬ್ಯಾಣಕ್ಕೆ ಬೇಲಿ ಹಾಕಿಬಿಟ್ಟಳು. ಆ ಬೇಲಿಗೆ ಊರಿದ ಕಾರಿ ಮುಳ್ಳು ಎರಿಯರ್ ಬಗಿಯರಿಗೆಲ್ಲ ಹೆಟ್ಟಿ ಮುಳ್ಳ್ ತೆಗೆಯಲು ಬ್ಯಾಣದ ಹತ್ರ ಬಂದ್ರು. ಬಂದು ಕಂಡ್ರೆ ಕಾಂಬುದೆಂತ! ಎಲ್ಲಾ ಬಿಡಾರದವ್ರು ಬೇಲಿ ಹಾಕ್ತಾ ಇದ್ರು. “ಈ ಹಡ್ಬಿ ರಂಡಿನ್ನ ಕುಶ್ಟನಿಗೆ ಮದಿ ಮಾಡ್ಕ ಬರ್ಬ್ಯಾಡ, ಅವ್ಳ್ ಕಾಲ್ ಹಾಕ್ರೆ ಊರ್ ಲಗಾಡಿ ಎದ್ದ್ ಹ್ವಾತ್ತ್ ಅಂದೇಳಿ ಆಗಳಿಕೆ ಬಟ್ರು ಹೇಳಿರಂಬ್ರ. ಆರೂ ಆ ಬಡಿಯ ಕೂದಿ ಸೊಕ್ಕಂಡ್ ಮದಿ ಮಾಡ್ಕ ಬಂದ. ಬಂದದ್ದೇ ಮಾವ ಮಾಯಿ ಗಂಡ ಎಲ್ಲರನ್ನೂ ನುಂಕಂಡಳ್. ಈಗ ಊರ್ ಹಾಳ್ ಮಾಡೂಕ್ ಹೊಯ್ಟಿದಳ್” ಆ ಗುಂಪಿಂದ ಸಿಟ್ಟುಗಳು ಮಾತಾಗಿ ಸಿಡಿತಿದ್ವು. “ಹಾಡಿ ಹಕ್ಲಿಗೆಲ್ಲ ಬೇಲಿ ಹಾಕಿರಿಯಲೆ, ನಿಮ್ ಅಪ್ಪಂದಾ ಹಾಡಿ ಹಕ್ಲ್? ಬೇಲಿ ತೆಗಿತ್ರಿಯಾ ಇಲ್ಲಾ ಬಿಡಾರಕ್ಕೆ ಬೆಂಕಿ ಕೊಡುದಾ?” ಗುಂಪು ಹೆಜ್ಜೆ ಮುಂದಿಟ್ಟಿತ್ತು. “ಎಡ್ದರೆ ಬೆಂಕಿ ಕೊಡಿನಿ ಕಾಂಬ?” ಅಂದೇಳಿ ಬಿಡಾರದ ಹೆಂಗ್ಸರೆಲ್ಲ ತಿರ್ಗಿ ನಿತ್ಕಂಡ್ರು. ಹೆಣ್ಮಕ್ಕಳು ತಿರ್ಗಿದ ರಾಪಿಗೆ ಆ ಗುಂಪಿನ ಹೆಜ್ಜೆ ಹಿಂದ್ಕೇ ಹೋಯ್ತು. ಸೀತುಗೆ ಬೇಕಾದ್ದೂ ಇದೆ. ತನ್ ಪೈಕಿಯರ್ ಒಟ್ಟಿಗೆ ನಿತ್ಕಂತ್ರಾ ಕಾಣ್ಕಿದ್ದಿತ್. ಊರ ಹೆಂಗಸ್ರು ಬಳ್ಮೇಸ್ತಿ ಬೆನ್ನಿಗೆ ನಿತ್ಕಂಡ್ರು. ಎಲ್ಲಾ ಬಿಡಾರಗಳ ಸುತ್ತೂ ಗಡತ್ರ್ ಬೇಲಿ ಆಯ್ತು. ಹುಲಿ ಅಲ್ಲ ಎರು ನುಗ್ಗುಕೂ ಆಗ್ದಿದ್ದಂತ ಬೇಲಿ. ಈಗ ಹಿಂದಕ್ಕೆ ಹ್ವಾರೂ ಅವ್ವು ಸುಮ್ನೆ ಕೂಕಂತಿಲ್ಲ ಅಂದೇಳಿ ಸೀತುಗೆ ಗೊತ್ತಿತ್ತು. ಅದು ಹಾಂಗೆ ಆಯ್ತು.

ಎರಡು ದಿನ ಆಗಿಲ್ಲ ಬಿಡಾರಗಳ ಎದುರು ಫಾರೆಸ್ಟರು ಬಂದ್ರು. “ಈಗಿಂದೀಗಳೆ ಬೇಲಿ ತೆಗ್ದರೆ ಸರಿ ಇಲ್ಲಾಂದ್ರೆ ಕೇಸ್ ಮಾಡಿ ಒಬ್ಬೊಬ್ರನ್ನೂ ಬಲಿ ಹಾಕ್ತೆ ಕಾಂತ್ರ್ಯಾ”ಅಂತ ಗಟ್ಟಿ ನಿಂತ್ರು. ಈಗಳೂ ಬಿಡಾರದ ಹೆಂಗ್ಸರೇ ಬಂದ್ರು. ಗಣ್ಸರ್ ಬಂದಿದ್ರೆ ಎಲ್ಲರಿಗೂ ಸಮಾ ನಾಕು ಜಪ್ಪಿ ಕೈಕಾಲು ಮುರ್ದು ಬಿಡಬೇಕು ಅಂದ್ಕಂಡಿದ್ದ ಫಾರೆಸ್ಟ್ರ ಹಿಂದೆ ನಿತ್ಕಂಡು ಕೈ ಬಾಯಿ ಗಿಂಡ್ಕಂತಿದ್ದ ಗುಂಪಿಗೆ ಕಶ್ಟ ಆಯ್ತು. ಈ ಫಾರೆಸ್ಟ್ರು ಹೆಂಗಸ್ರಿಗೆ ಬಡುದಿಲ್ಲ. ನಾವು ಬಡದ್ರೆ ದೊಡ್ಡ ನಂಬ್ರ ಆತ್ತ್. ಫಾರೆಸ್ಟ್ರು ಎಂತಾ ಮಾಡ್ತ್ರು ಅಂದ್ಕ ಕಾದ್ರು. ಸೀತು ಬಂದಳು. ಸೀತು ಅಶ್ಟೇ ಅಲ್ಲ ಅವಳ ಕಯ್ಯಾಗೆ ಮತ್ತೆ ಬಿಡಾರಗಳ ಎಲ್ಲಾ ಹೆಂಗಸರ ಕಯ್ಯಾಗೂ ಅಂಬೇಡ್ಕರರು ಬಂದು ಮುಂದೆ ನಿಂತರು. ‘ಹೋ ಇವ್ವು ಸಾಮಾನ್ಯದವಲ್ಲ!’ ಎನ್ನುವುದು ಫಾರೆಸ್ಟರಿಗೆ ಗುತ್ತಾಗಿ ಕೇಸು ಹಾಕುವ ಅವರ ಗಟ್ಟಿಗತನದ ಮಾತಿನ ಬುಡ ಅಲ್ಲಾಡಿ ಹೋಯ್ತು.

ಸೀತು ಒಂದು ತಿಂಗಳು ಶಾಲೆಗೆ ಹೋಗ್ತಾ ಇದ್ದಾಗ ಗೋಡೆ ಮೇಲೆ ನೇತ್ಹಾಕಿದ್ದ ಒಂದು ಫೋಟೊ ಮನ್ಸಲ್ಲಿ ಅಚ್ಚಾಗಿ ಕೂತಿತ್ತು. ಕಡೆಗೆ ಗಟ್ಟ, ಮದಿ, ನಟ್ಟಿ ನಡುವುದು, ಕಳಿ ಕೀಳುವುದು ಇದ್ರಲ್ಲೇ ಮುಳುಗಿ ಹೋದಾಗ ಆ ಫೋಟೊ ನೆನಪೇ ಹೋಗಿತ್ತು. ತನ್ನ ಮಗಳನ್ನ ಶಾಲೆಗೆ ಸೇರ್ಸುವುದಕ್ಕೆ ಹೋದಾಗ ಅದೇ ಫೋಟೊ ಇತ್ತು. ಮಗಳನ್ನ ಸೇರ್ಸಿ ಆದ್ಮೇಲೆ,

“ಸರ್, ಆ ಪಟದಾಗಿದ್ರಲೆ ಅವ್ರ್ ಯಾರ್? ನಾ ಚೆಣ್ಕಿಪ್ಪಗೆ ಒಂದ್ ತಿಂಗ್ಳ್ ಶಾಲಿಗೆ ಹೊಯ್ದೆ. ಆ ಶಾಲಿಯಾಗೂ ಇದ್ದಿತ್. ಯಾರಂದೇಳಿ ಗುತ್ತಿಲ್ಲ ಅದ್ಕೆ ಕೇಂಡೆ”

“ಅದಾ? ಅದ್ ಯಾರಂದೇಳಿ ಗುತ್ತಿಲ್ಯ? ಅಂಬೇಡ್ಕರ್. ನಿಮ್ ಪೈಕಿಯರಿಗೆಲ್ಲ ಗುತ್ತಿಲ್ಲ ಅಂದ್ರೆ ನಂಬುಕಾತ್ತಿಲ್ಲ. ಅವ್ರೆ ಸಂವಿಧಾನ ಬರದ್ದ್.”

“ಅವ್ರ್ ಬಗ್ಗ ನಂಗ್ ದೇವ್ರಾಣೆ ಗುತ್ತಿಲ್ಲ ಸರ್. ಎಂತಾರು ಪುಸ್ತಕ ಇದ್ರೆ ಕೊಡಿ. ಓದುಕ್ ಬಪ್ಪರ್ ಹತ್ರ ಓದ್ಸಿ ಕೇಂತೆ”

“ಓದುಕ್ ಬಪ್ಪರ್ ಹತ್ರ ಅಂದ್ರೆ? ನಿಂಗ್ ಓದುಕಾತಿಲ್ಯ. ನಿನ್ ಮಗು ಒಂದ್ನೇ ಕ್ಲಾಸ್ ಅಲ್ದಾ. ಮನಿಯಾಗ್ ದಿನಾ ಆ ಮಗಿಗೆ ಕೇಣ್ ಎಂತ ಕಲ್ತಿದೆ ಅಂದೇಳಿ. ಅಬ್ಬೆ ಮಗಳ್ ಇಬ್ರೂ ಒಂದ್ನೆ ಕ್ಲಾಸ್ ಅಕಾ” ಹೀಂಗೆ ಶಾಲಿ ಮಾಸ್ಟ್ರು ಹೇಳಿದ ಮೇಲೆ ಸೀತು ದಿನಾ ಬೈಯಾಪತಿಗೆ ಮಗಿನ್ ಒಟ್ಟಿಗೆ ಕೂಕ ಓದುಕೆ ಸುರು ಮಾಡ್ದಳ್. ಹಾಂಗೆ ಓದುವುದಕ್ಕೆ ಸುರು ಮಾಡಿದ ಸೀತು ಮಾಸ್ಟ್ರು ಕೊಟ್ಟ ಅಂಬೇಡ್ಕರ್ ಅವರ ಜೀವನದ ಕುರಿತು ಓದಿದಳು. ಮಾರಣಕಟ್ಟೆ ಜಾತ್ರೆಯಲ್ಲಿ ಫೋಟೋ ಮಾರುವವರ ಹತ್ರ ಅಂಬೇಡ್ಕರ್ ಫೋಟೋ ಕೇಂಡಳು. ಇರಲಿಲ್ಲ. ಬರು ಸಲ ನಂಗೆ ಇಪ್ಪತ್ತೈದು ಫೋಟೊ ತಂದುಕೊಡಲು ಹೇಳಿದಳು. ಮತ್ತೆ ಜಾತ್ರೆ ಬಂದಾಗ ಫೋಟೋ ಕೇಳಿದಳು. ಅವನಿಗೆ ಸೀತು ಕೇಳಿದ್ದು ಹಂಬ್ಲೇ ಇರಲಿಲ್ಲ. ಒಂದು ತಿಂಗಳು ನಡೆಯುವ ಮಾರಣಕಟ್ಟೆ ಜಾತ್ರೆಯ ಕೊನೇ ದಿನ ಬರಲಿಕ್ಕೆ ಹೇಳಿದ. ಹಾಗೆ ಅಂಬೇಡ್ಕರರ ಫೋಟೊ ಸೀತು ಬಿಡಾರ ಸೇರಿತು. ಆ ಫೋಟೊ ಬಿಡಾರದೊಳಗೆ ಬರುವ ಹೊತ್ತಿಗೆ ಅವಳ ಮಗನೂ ಶಾಲೆಗೆ ಹೋಗಿ ಬಂದು “ಇದ್ ಅಂಬೇಡ್ಕರ್ ಅಲ್ದಾ ಅಬಾ?” ಅಂತ ಕೇಳಿದ್ದ. ‘ಸೀತುವಿಗೆ ತನ್ ಜಾತಿಯರ್ ಹೀಂಗ್ ಬದ್ಕುಕಾಗ’ ಅಂಬಂತ ಆಲೋಚನೆಯೆ ಓದಲಿಕ್ಕೆ ಕಾರಣವಾಯಿತು. ‘ಹೀಂಗ್ ಅಲ್ದಿರೆ ಹ್ಯಾಂಗ್ ಬದ್ಕಕ್?’ ಎನ್ನುವ ಪ್ರಶ್ನೆಯೇ ಅಂಬೇಡ್ಕರ್ ಆ ಕಾನಿನ ಒಳಗೆ ಬರುವುದಕ್ಕೆ ಸಾಧ್ಯವಾಯಿತು.

“ಇಕಾಣಿ, ನೀವೆಲ್ಲ ಹಾಡಿಗೆ ಬ್ಯಾಣಕ್ಕೆ ಬೇಲಿ ಹಯ್ಕಂಡದ್ದು ತಪ್ಪು. ಅದು ಗೌರ್ಮೆಂಟಿನ್ ಜಾಗ.” ಅಂದ್ರು. ಸೀತು ದರದರ ಬಂದು ಫಾರೆಸ್ಟರ್ ಮುಂದೆ ನಿತ್ಕಂಡಳು. ಅಂಬೇಡ್ಕರರು ಸೀತುಗಿಂತ ಮುಂದೆ ಇದ್ದರು. ಅವರಿಬ್ಬರು ಬರಾಕಿಂದ ಬಂದಾಗ ಬೀಸಿದ ಗಾಳಿಗೆ ಫಾರೆಸ್ಟ್ರು ಮತ್ತೆ ಆ ಗುಂಪು ಅಲ್ಲಾಡಿ ಹಿಂದಕ್ಕೆ ಹೋಯ್ತು.

“ಫಾರೆಸ್ಟ್ರೆ, ಅಲ್ ಕಾಣಿ ನಮ್ಮನಿ ಬಾಗಾಳ್ ಮರದ ಬುಡಕ್ಕೆ ಬಂದ್ಕಾಣಿ ಹುಲಿ ಹೆಜ್ಜಿ ತೋರಸ್ತೆ. ದಿನಾ ರಾತ್ರಿಗೆ ಹುಲಿ ತಿರ್ಗತ್ತ್. ಅದೂ ಮರಿ ಹಾಕದ್ದ್ ಹೆಣ್ಣುಲಿ. ಮಕ್ಕಳ್ ಮರಿ ಕಟ್ಕಂಡು ನಾವಿಲ್ಲ್ ಅಯ್ಕಣ್ಕ ಬ್ಯಾಡ್ದಾ? ಹೇಳಿ ಕಾಂಬ. ಬೇಲಿ ಹಾಕದ್ದ್ ಆಸ್ತಿ ಮಾಡೂಕಲ್ಲ. ನಮ್ ಮಕ್ಕಳ್ ಮರಿನ ಉಳಸ್ಕಂಬುಕೆ. ಇಡೀ ಗುಡ್ಡಿ ಗುಡ್ಡಿಗೇ ಬೇಲಿ ಹಾಕದ್ದ್ ನಿಮ್ ಕಣ್ಣಿಗ್ ತೋರುದಿಲ್ಲ. ಇಲ್ಲ್ ನಾವ್ ಮನಿ ಸುತ್ತ ಬೇಲಿ ಹಯ್ಕಂಡ್ರೆ ನಿಮ್ ಕಣ್ಣಿಗ್ ಹೆಟ್ಟತ್ತ್ ಅಲ್ದಾ? ಬನಿ ಕಾಣಿ ಹುಲಿ ಹೆಜ್ಜಿ. ಬಪ್ರಿಯಲೆ” ಸೀತು ಮಾತಾಡಿದ್ದು ಆ ಕಡು ಹಸುರು ಕಾನಿನ ಸಾಲಿಗೆ ಬಡ್ದು ಫಾರೆಸ್ಟ್ರ ಕೆಮಿಗೆ ಬಡ್ದಿತ್ತು. ಅದು ಹುಲಿಗೂ ಕೇಳ್ತು. ಆ ಕಡುಹಸುರು ಕಾನಿಂದ ಹುಲಿ ಕೂಗುವುದು ಅಲ್ಲಿದ್ದ ಎಲ್ಲರಿಗೂ ಕೇಳಿಸ್ತು. ಹುಲಿ ಸಾಕ್ಷಿ ಹೇಳುತ್ತೆ ಅಂದೇಳಿ ಫಾರೆಸ್ಟ್ರಿಗೆ, ಆ ಗುಂಪಿಗೆ ಅಂದಾಜೇ ಇರ್ಲಿಲ್ಲ. ಅಲ್ಲಿ ಓಡಾಡುವ ಹುಲಿ ಫಾರೆಸ್ಟ್ರಿಗೂ ಎದುರಾಗಿದ್ದಿದೆ. ಎಂತಾರೂ ಹೇಳಿ ಮಾತು ತೇಲಿಸುವುದಕ್ಕೂ ಆಗ್ಲಿಲ್ಲ. ಸೀತು ಮತ್ತೆ ಆ ಹೆಂಗಸ್ರ ಒಟ್ಟಿಗೆ ಹೋಗಿ ಹುಲಿ ಹೆಜ್ಜೆ ಕಂಡರು. ಬೇಲಿ ತೆಗೆದು ಬಿಡಿ ಅಂತ ಹೇಳುವುದಕ್ಕೆ ಅವರಿಗೆ ಬೇರೆ ಹೆಳಿ ಯಾವ್ದೂ ಸಿಕ್ಕಿಲ್ಲ. ಆ ಗುಂಪಿಗೆ ಇದೂ ಬುರ್ನಾಸ್ ಕೇಸ್ ಅಂದೇಳಿ ಗುತ್ತಾದ್ದೇ ಬ್ಯಾಣ ಇಳ್ದು ಹೋಗಿಬಿಟ್ಟರು. ಸೀತುಗೆ ಪೈಕಿಯರೆಲ್ಲ ತನ್ನೊಟ್ಟಿಗೆ ನಿತ್ಕಂತ್ರು ಅನ್ನುವುದು ಗೊತ್ತಾಯಿತು. ಆ ಗುಂಪಿನವು ನಮ್ಮನ್ನ ಸುಮ್ನೆ ಬಿಡುದಿಲ್ಲ ಅಂಬೂದು ಅವಳಿಗೆ ಗೊತ್ತಿತ್ತು. ಅವಳು ಮತ್ತೂ ಓದಿದಳು. ಆ ಎಲ್ಲಾ ಬಿಡಾರದೊಳಗೆ ಅಂಬೇಡ್ಕರರು ನೆಲೆಯಾದ್ರು.

ಈ ಸಲ ಪಂಜಾಯ್ತಿ ಓಟಿಗೆ ಸೀತು ನಿತ್ಕಂತಳು ಅಂಬ ಮಾತು ಆ ಕಾನಿನ ಹುಚ್ಚು ಕೆರಳಿಸಿತು. ಯಾವುದೋ ಊರಿಂದ ಬಂದ ಬಳ್ಮೇಸ್ತಿ ನಮ್ಮೂರಲ್ಲಿ ಅದಿಕಾರ ಮಾಡೂಕೆ ಬಿಡುಕೇ ಆತಿಲ್ಲ ಮತ್ತೆ ಬಿಡುಕೂ ಆಗ ಅಂದುಕೊಂಡು ಅವ್ವು ಊರಿನ ಜನ್ರ ಕೆಮಿ ಕಚ್ಚಿದವು.

‘ಅವಳಿಗೆ ತಾಳಿ ಕಟ್ಟದ್ ಜಾಗುವೆ ಮಸಣ ಆಯ್ತಂಬ್ರು’

‘ಊರಿಗೆ ಕಾಲ್ ಹಾಕದ್ದೇ ಮಾವನ್ನೂ ಮಾಯನ್ನೂ ನುಂಕಂಡಳ್’

‘ದೇವ್ರಂತ ಗಂಡನ್ನ ಕುಡ್ಚನ್ ಮಾಡ್ಸಿ ಕೊಂದಳ್’

‘ಅವ್ಳ್ ಕಾಲ್ ಹಾಕ್ದಲ್ಲಿ ಸಾವ್’.

ಇಂಥಾ ಹೆಮ್ಮಾರಿ ನಮ್ ಊರಾಗ್ ಓಟಿಗೆ ನಿಲ್ಲುಕೆ ನಾವು ಬಿಡಬಾರದು ಅಂಬಂತ ಮಾತುಗಳು ಆ ಕಾನುಗುಡ್ಡಿಯನೆಲ್ಲ ಸುತ್ತಿ ಸೀತು ಬಿಡಾರಕ್ಕೂ ಬಂತು. ಆದರೆ ಅವಳ ಪೈಕಿಯರೆಲ್ಲ ‘ಸೀತ್ವಕ್ಕ ನೀ ನಿತ್ಕೊ ನಾವಿದ್ದೊ’ ಅಂದ್ರು. ಅವಳು ನಿಲ್ಲುತ್ತಾಳೆ ಎಂಬುದೂ ಅವುಕ್ಕೆ ಗೊತ್ತಿತ್ತು. ನಿಂತರೂ ಗೆಲ್ಲುಕೆ ಬಿಡುಕಾಗ ಅಂದೇಳಿ ತಮ್ ತಮ್ ತ್ವಾಟದ ಕೆಲಸಕ್ಕೆ ಬರುವ ಆಳುಗಳಿಗೆ ಬಿಗಿ ಮಾಡಿದರು. ‘ಸೀತುಗೆ ಓಟ್ ಹಾಕ್ರೆ ಇನ್ನ್ ಏಗಳಿಕೂ ಕೆಲ್ಸಕ್ಕೆ ಬಪ್ಪದ್ ಬ್ಯಾಡ’ ಎಂದೂ ಹೆದರಿಸಿದರು. ಯಾರಿಗೇ ಹೆದರಿಸಿದ್ರೂ ಸೀತು ಓಟಿಗೆ ನಿತ್ತೇ ಬಿಟ್ಟಳು. ತನ್ನ ಪೈಕಿ ಹೆಂಗಸ್ರ ಹಿಂಡು ಮಾಡ್ಕಂಡು ಓಡಾಡಿ ಓಟು ಕೇಂಡಳು. ಎರಿಯರ್ ಪೈಕಿ ಹೆಂಗಸ್ರ ಹತ್ರ ಹೋಗಿ ಓಟು ಕೇಂಡಳು. “ಇಕಾಣಿ ಶೆಡ್ತಿಯರೆ, ಇಕಾಣಿ ಪೂಜಾರ್ತಿಯರೆ, ಇಕಾಣಿ ಆಚಾರ್ತಿಯರೆ… ಇಕಾಣಿ ಗಾಣ್ತಿಯರೆ… ಎಂದು ಹೆಸರು ಹಿಡಿದು ಕರೆದು ಓದು ಬರಾ ಯಾಕೆ ಕಲಿಬೇಕು ಅಂದೇಳಿ ಮಾತಾಡ್ಸಿದಳು. ಎರಿಯರ್ ಬಗಿಯರನ್ನ ಹೆಸ್ರು ಹೇಳಿ ಮಾತಾಡ್ಸುವ ಸೀತು ಕಂಡು ಅವಳ ಪೈಕಿಯರದ್ದೂ, ಆ ಹೆಂಗಸ್ರಿಂದೂ ಬೆಟ್ಟು ಮೂಗಿನ ಮೇಲೆ ಹೋಯ್ತು. ಆರೂ ಅವಳಿಗೆ ಇಶ್ಟಕ ಧೈರ್ಯ ಕೊಟ್ಟ ಓದು ಬರಾ ಬಗ್ಗೆ ಅವರಿಗೆಲ್ಲ ಕುಶಿಯೂ ಆಯ್ತು. ಬಳಿಮೇಸ್ತಿ ಹೆಂಗ್ಸಿನ ಬಗಲ್ ಮುರಿಕ್ ಅಂತ ಕಾಯ್ಕಂಡಿದ್ದ ಗಣ್ಸರ ಮನಿ ಹೆಂಗಸ್ರಿಗೇ “ನೀವೂ ಬಳಿಮೇಸ್ತಿಯರೆ ಅಲ್ದಾ?” ಅಂದೇಳಿ ಕೇಂಡಳು. ಸೀತು ಓಟು ಕೇಂಬುಕೆ ಹೋದಲ್ಲೆಲ್ಲ ಹೆಂಗಸ್ರ ಬಗ್ಗೆ ಮಾತಾಡಿದಳು. ಎಲ್ಲಾ ಹೆಂಗಸ್ರೂ “ಹೌದೌದು ಸೀತು ಹೇಳದ್ ಬದ್ದು” ಅಂದೇಳಿ ತಲೆ ಆಡಿಸುವಂಗೆ ಮಾತಾಡಿದಳು. ಕೆಲಸ ಕೊಡುವುದಿಲ್ಲ, ತ್ವಾಟಕ್ಕೆ ಬಪ್ಪುದು ಬ್ಯಾಡ ಎಂಬಂತ ಬೆದರಿಕೆಯೆಲ್ಲ ತಮ್ ಶ್ಯಾಂಟಕ್ಕೆ ಸಮ ಅಂದ್ರು ಜನ.

ಸೀತು ಗೆದ್ದಳು. ಒಂದಿನ ಅವಳು ಪಂಚಾಯ್ತಿ ಅಧ್ಯಕ್ಷರ ಕುರ್ಚಿ ಮೇಲೂ ಕೂಕಂಬುವ ಯೋಗ ಬಂದಿತು. ಆಗ ಸೀತು ಗೆಲ್ಲುಕಾಗ ಅಂದೇಳಿ ಆ ಸಹ್ಯಾದ್ರಿ ಕಾನಿನ ಎರು ಎಂಬತ್ಕೋಟಿ ಕೆಮಿಗೂ ಬ್ಯಾಡ್ದಿದ್ದನ್ನ ಹೇಳಿದ ಗುಂಪಿಗೆ ಮುಕ್ಳಿ ಸುಟ್ಟ ಬೆಕ್ಕಿನಂಗೆ ಆಗಿ ಕೂತಲ್ಲಿ ಕೂಕಣ್ಲಿಲ್ಲ. ಆ ರಾತ್ರಿ ಸೀತು ಬಿಡಾರದ ಸುತ್ತ ಹಾಕಿದ್ದ ಬೇಲಿಗೆ ಬೆಂಕಿ ಬಿತ್ತು. ಆ ಬೆಂಕಿ ಬೇಲಿ ದಾಟಿ ಬ್ಯಾಣಕ್ಕೆ, ಹಸಿ ಮರಕ್ಕೆ ಹಿಡ್ದು ಕಾನ್ಗುಡ್ಡಿಗೆ ಹಂಬತಾ ಹೋಯ್ತು. ಫಾರೆಸ್ಟರಿಗೆ ಬೆಂಕಿ ನಿಂಗ್ಸುದಲ್ಲ, ಅದು ಇಡೀ ಸಹ್ಯಾದ್ರಿ ಸಾಲಿಗೆ ಹಂಬ್ದೇ ಇದ್ದಂಗೆ ತಡೆಯುವುದೇ ಹ್ಯಾಂಗೆ ಎಂಬ ಚಿಂತೆ ಆಗಿತ್ತು. ಬಿಡಾರದ ಜನವೆಲ್ಲ ಫಾರೆಸ್ಟರೊಟ್ಟಿಗೆ ಸೇರ್ಕಂಡು ಬೆಂಕಿ ತಡ್ದ್ರೂ ಗಳಗಳ ಉರಿತಾ ಇಪ್ಪ ಹಸಿ ಮರಗಳಿಂದ ಕಿಡಿ ಹಾರಿ ಹೊಸ ಕಿಡಿ ಹತ್ಕಂಡ್ರೆ ನಿಂಗ್ಸುಕೆ ಅಂತ ಕಾಯ್ತಾ ಕೂಕಂಡ್ರು.

“ಬಿಡಾರದವೆ ಬೇಕಂದೇಳಿ ಬೆಂಕಿ ಹಾಕದ್ದ್. ಅವ್ರ್ ಮೇಲೆ ಕೇಸ್ ಹಾಕಿ” ಅಂದೇಳಿ ಕೂಗ್ತಾ ಬಂದೋ ಅವ್ವು. ಆರೆ ಫಾರೆಸ್ಟ್ರಿಗೆ ಅವ್ ಮಾತ್ಕೇಂಬು ಪುರ್ಸೋತ್ತು ಇರ್ಲಿಲ್ಲ. ‘ಆ ಹಡ್ಬಿ ರಂಡಿ ಕಾಲ್ ಹಾಕ್ದಲ್ಲ್ ಕೇಡ್’ ಅಂದೇಳಿ ಸೀತುಗೆ ಬಯ್ದರು. ಆರೂ ಆ ಬೆಂಕಿ ಬಿಡಾರ ಸುಡದೆ ಕಾನ್ ಸುಡ್ತಲೆ ಅಂತ ಸಿಟ್ಟಲ್ಲಿ ಹೋದರು.

ಏನೇ ಅತಂಕು ಮಾಡ್ರೂ ಸೀತು ಅಧ್ಯಕ್ಷೆ ಆಪುದನ್ನ ಅವುಕ್ಕೆ ತೆಗ್ದು ಹಾಕುವುದಕ್ಕೆ ಆಯ್ಲೇ ಇಲ್ಲ. ಅಧ್ಯಕ್ಷರಿಗೆ ಒಂದ್ ಹಳ್ತ್ ಕುರ್ಚಿ ಇಟ್ಟಿರ್. ಹಳ್ತೋ ಹೊಸ್ತೋ ಕುರ್ಚಿ ಅಧ್ಯಕ್ಷರದ್ದು ಅಂದೇಳಿ ಸೀತು ಕೂತಳು. ಸೀತು ಕುರ್ಚಿಯಲ್ಲಿ ಕೂತಾಗ ದೇಶ ಆಳ್ತಿದ್ದ ದಿನಾ ತಲಿಗೆ ಟೋಪಿ ಕಟ್ತಿದ್ದ ಟೋಪಿ ಪ್ರದಾನಿ ಕುರ್ಚಿ ಬಿಟ್ಟು ಇಳ್ದು ಹೋದ್ರು. ಬಳ್ಮೇಸ್ತಿ ಅದಿಕಾರ ಮಾಡುದನ್ನ ತಪ್ಸುಕೆ ಮಾಡಿದ ಪ್ರಯತ್ನಗಳು ಸಹ್ಯಾದ್ರಿ ಮಡಿಲಲ್ಲಿ ಗೊಬ್ಬರವಾಯ್ತು.

ತಮ್ಮನಿ ಆಳು ನಮ್ಮನ್ನ ಆಳುವಂಗೆ ಆದಳಲೆ!! ಅಂಬುದು ಅವುಕೆ ಸೈಸ್ಕಂಬ್ಕೆ ಆಗ್ಲೇ ಇಲ್ಲ. ಎಂತಾರೂ ಮಾಡ್ಕ್ ಅಂದೇಳಿ ದಾರಿ ಹುಡುಕುತ್ತಾ ಇದ್ರು. ಸಹ್ಯಾದ್ರಿ ಕಾನಿನ ಗಾಯಗಳು ಹೆಚ್ಚಾಗಿ ಹುಣ್ಣಾಪುಕೆ ಸುರು ಆಯ್ತು. ಬೆಂಕಿ ಬಿದ್ದೂ ಬಿದ್ದು ಹಸಿ ಮರಗಳೆಲ್ಲ ಸುಟ್ಟು ಕಮಟು ಜಂಬು ಊರ ಮೇಲೆ ಹಬ್ಬಿತು. ಕಡು ಹಸುರು ಬೋಳಾಗಿ ಹುಲಿ ಕೂಗು ಕೇಣ್ದಿದ್ದಂಗೆ ಆಯ್ತು.  

ಸೀತು ಎತ್ತಿನಗಾಡಿ ಓಡಾಡುವ ರಸ್ತಿಯ ಬಸ್ಸು ಓಡಾಡುವ ರಸ್ತಿ ಆಗಿಸಿದಳು. ಅಂತೂ ಊರಿಗೆ ಬಸ್ಸು ಬರುವಂತಾಯ್ತು. ಯಾರು ಊರನ್ನ ಲಗಾಡಿ ತೆಗಿತಾಳೆ ಅಂತ ಬಾಯಿ ಬಡ್ಕಂಡಿದ್ರೋ ಅವ್ರೆಲ್ಲ ಅದೇ ರಸ್ತಿ ಮೇಲೆ ಬಂದ ಬಸ್ಸಲ್ಲಿ ಪರವೂರಿಗೆ ಓಡಾಡಿದರು. ಆ ಕಾಸಾನ್ ಮರ ಸುಟ್ಟ ಜಾಗದಲ್ಲಿ ಒಂದು ಬಸ್ ಸ್ಟ್ಯಾಂಡ್ ಕಟ್ಸಿದಳು. ಜನ ಬಂದು ಹೋಯಿ ಮಾಡ್ತಿದ್ದದ್ದು ಕಂಡ್ಕ ಸಂಜ್ವವಣ್ಣ ಹೋಟ್ಲು ಮಾಡ್ರು. ಅದ್ರ ಹೊಕ್ಡೆ ಒಂದ್ ಅಂಗಡಿ ಆಯ್ತು. ಆ ಬಸ್ಸಲ್ಲೇ ಬಿಡಾರದ ಮಕ್ಕಳೂ ಕಾಲೇಜಿಗೆ ಹೊರಟರು. ಸುಟ್ಟ ಬೇಲಿ ಮತ್ತೆ ಚಿಗುರಿತು. ಆ ಬೇಲಿ ಒಳಗಿನ ಜಾಗಕ್ಕೆ ಹಟಾ ಕಟ್ಟಿ ಹಕ್ಕುಪತ್ರ ಮಾಡ್ಸಿ ಬಿಡಾರದ ಜನರಿಗೆಲ್ಲ ಇದು ನಮ್ಮ ಭೂಮಿ ಅಂಬಂತ ಒಂದು ಹೆಮ್ಮೆಯ ತರಿಸಿಕೊಟ್ಟದ್ದು ಸೀತುವಿನ ಓದು. ಆದರೂ ತಮ್ ಪೈಕಿಯರ್ ಹೀಂಗ್ ಇಪ್ಕಾಗ ಅಂಬುವುದು ಅವಳಿಗೆ ಮನಸಲ್ಲಿ ಹೆಗ್ಗುಳ ಕೊರದಂಗೆ ಕೊರಿತಾ ಇತ್ತು. ಸರ್ಕಾರದ ಇಂದಿರಾ ಆವಾಸ್ ಮನೆಗಳ ಆ ಕಾನಿನ ಬ್ಯಾಣಕ್ಕೆ ಹೊತ್ತು ತಂದಳು. ತಮ್ ಪೈಕಿಯರ್ ಹುಲ್ಲಿನ್ ಬಿಡಾರ ಇದ್ದಲ್ಲಿ ಹಂಚಿನ ಮನೆ ಕಟ್ಟಲು ತಳಗಟ್ಟು ಹಾಕ್ಸಿದ್ದಳು. ತಾನೂ ತನ್ನ ಬಿಡಾರದ ಬದಿಯಲ್ಲೇ ತಳಗಟ್ಟು ಹಾಕಿ ಹೊಸ ಹಂಚಿನ ಮನೆ ಕನಸು ಕಂಡಳು. ಒಂದಿನ ಕಾಲೇಜಿಂದ ಬಪ್ಪತಿಗೆ ಬಿಡಾರದ ಕೆಲವು ಮಕ್ಕಳು ಕುತ್ಗಿ ಸುತ್ತ ಶಾಲು ಹಯ್ಕಂಡು ಬಂದು ಹೊಸ ಮನೆಗಳ ತಳಗಟ್ಟಿನ ಮೇಲೆ ನಿತ್ಕಂಡರು. ಪಡುವಾಯ್ ಹೊತ್ತು ಮುಳುಗಿ ಕಪ್ಪು ಆ ಬಿಡಾರಗಳ ಮೇಲೆ ಕವುಚಿಕೊಳ್ಳುವ ಅಶ್ಟೊತ್ತಿಗೆ ಆ ಸಹ್ಯಾದ್ರಿಯ ಕಡುಹಸುರು ಕಾನೊಳಗೆ ಭೂತಹಕ್ಕಿ ಕೂಗಿತು.

ಸಂತೋಷ ಗುಡ್ಡಿಯಂಗಡಿ

ಶಿಕ್ಷಕರು, ಕತೆಗಾರರು

You cannot copy content of this page

Exit mobile version