“..ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…” ಲೇಖಕ ವಿ ಆರ್ ಕಾರ್ಪೆಂಟರ್ ಅವರ ಬರಹದಲ್ಲಿ
ಇಲ್ಲಿ, ಅಂದರೆ ನಾನೀಗ ಬಂದಿರುವ ಜಾಗಲ್ಲಿ ಕೇಳಿದರು,
ನೀನ್ಯಾರು?
ಅದಕ್ಕೆ ಪುರಾವೆಯೇನು?
ನಾನು ನರಕದಿಂದ ಬಂದವರಿಗೆ
ನನ್ನ ಸ್ವರ್ಗದಂಥ ನೆಲವ ಕೊಟ್ಟವಳು
ಓಹೋ ನೀನೊಂದು ಹೆಣ್ಣು…
ನೆಲ ಹೇಗೆ ನಿನ್ನದಾಗುತ್ತದೆ?
ಹೌದು, ನೆಲ ಮತ್ತು ನೆಲೆ ನನ್ನದಾದರೂ
ನನ್ನದೆಂಬ ಅಹಂ ಬಿಟ್ಟವಳು ನಾ…
ತ್ಯಾಗದ ಮಾತು ಬೇಡ
ನಿನ್ನ ಅಸ್ಮಿತೆಯ ಕುರುಹ ರುಜುವಾತು ಮಾಡು
ಈಗಲೇ…
ಅಗೋ, ಆ ಕಡೆಯ, ಒಂದೆಜ್ಜೆ ಊರುವ
ನೆಲದಿಂದ ಪುಟಿದೆದ್ದ ಕೂಸು ನಾನು
ನನ್ನಪ್ಪ ಯಹೂದಿಗಳು ಉಸಿರಾಡಲು
ತನ್ನ ಸಂಪದ್ಭರಿತ ತೋಟ ಕೊಟ್ಟವನು!
ಓಹೋ ನೀನು ಫ್ಯೂಡಲ್ಲಾ?
ಭೂಮಿಯನ್ನೇ ಉಳುವೆನೆಂಬ
ಜಂಭ ಉಳಿಸಿಕೊಂಡ
ಬೆಳಗಿನ ಜಾವದ ಕೋಳಿಯ?
ಬರ್ಲಿನ್, ಮ್ಯೂನಿಚ್, ಕ್ರೊಯೇಷಿಯಾ,
ಗ್ರೀಸಿನ ಅಥೆನ್ಸ್ ದಾಟಿ, ಮೆಡಿಟರೇನಿಯನ್ ಸಮುದ್ರದಲ್ಲಿ
ಮುಳುಗುತ್ತಿದ್ದ ಜನರಿಗೆ ನಿರಾಳ ಗಾಳಿ ಕೊಟ್ಟದ್ದು
ನನ್ನಪ್ಪ, ಅವನಂತ ಸಾವಿರಾರು ಜನ
ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಕೂಡದು
ಅಂತ ನೀತಿಶಾಸ್ತ್ರ ಹೇಳುತ್ತದೆ...
ದಿಟ ಹೇಳು, ನೀತಿಶಾಸ್ತ್ರದ ಪ್ರಕಾರ
ನಿನ್ನ ಗುರುತೇನು?
ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…
ಈಗ ಸತ್ಯ ಹೇಳಿದೆ ನೋಡು…
ಮೊದಲೇ ನಾನೊಬ್ಬಳು ಪ್ಯಾಲೆಸ್ತೇನಿಯಳು
ಅಂದಿದ್ದರೆ ನಿನ್ನ ಗಂಟೇನು ಕರಗುತ್ತಿತ್ತು?
-ವಿ.ಆರ್.ಕಾರ್ಪೆಂಟರ್