ಮನುಷ್ಯನ ಜ್ಞಾನ ವೃದ್ಧಿಗಾಗಿ ಅನುಭವಸ್ಥ ಹಿರಿಯರು ಹೇಳಿದ ಮಾತೊಂದಿದೆ – ಕೋಶ ಓದು ದೇಶ ಸುತ್ತು . ಪರಿರ್ವಾಜಕರಾಗಿ ದೇಶ ಸಂಚರಿಸುವ ವ್ಯಕ್ತಿಯ ಜ್ಞಾನದ ಆಳ-ಅಗಲ ನಿತ್ಯ ವಿಸ್ತರಿಸುತ್ತಲೇ ಹೋಗುತ್ತದೆ. ಪಯಣದ ಉದ್ದಕ್ಕೂ ವಿವಿಧ ಸಾಮಾಜಿಕ ಹಿನ್ನೆಲೆಯ, ವಿವಿಧ ಸ್ತರಗಳ ಜನರ ಒಡನಾಟದ ಅನುಭವ, ವಿಭಿನ್ನ ಭಾಷೆ, ಪ್ರದೇಶ, ವೃತ್ತಿ, ಜೀವನ ಶೈಲಿ ಹೊಸ ಕಲಿಕೆಯನ್ನು ಮೂಡಿಸುತ್ತದೆ. ಈ ವಾಸ್ತವ ಸತ್ಯದ ಸಾಕ್ಷಾತ್ಕಾರಕ್ಕಾಗಿಯೇ ನಾವು ಪ್ರತಿವರ್ಷ ಕಲಬುರಗಿಯಿಂದ ನಾಗಪುರದ ದೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳುವ ಬುದ್ಧನೆಡೆಗೆ ಧಮ್ಮ ಸಂಪ್ರದಾಯವನ್ನು ಆರಂಭಿಸಿದ್ದೇವೆ. ಕಳೆದ ಹಲವು ವರ್ಷಗಳಂತೆ ನಾವು ಈ ವರ್ಷವೂ ಸುಮಾರು ಅರುವತ್ತು (60) ಜನರ ಒಂದು ತಂಡವನ್ನು ಕಟ್ಟಿಕೊಂಡು ದೀಕ್ಷಾ ಭೂಮಿಯ ದರ್ಶನಕ್ಕೆ ತೆರಳಿದ್ದೆವು.
ಡಾ. ಬಿ. ಆರ್. ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ಲಕ್ಷಾಂತರ ಜನರೊಂದಿಗೆ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದ ನೆಲವೇ ದೀಕ್ಷಾ ಭೂಮಿ. ಇದೊಂದು ಚರಿತ್ರಾರ್ಹ ದಿನ ಅಗಿರುವಂತೆಯೇ ಈ ದೀಕ್ಷಾ ಭೂಮಿ ಪವಿತ್ರ ಸ್ಥಳವೂ ಆಗಿದೆ. ಅಕ್ಟೋಬರ್ 14 ದಲಿತ ಶೋಷಿತ, ತುಳಿತಕ್ಕೆ ಒಳಗಾದ ಅಳಿವಿನಂಚಿನ ಜನರ ಪಾಲಿಗೆ ಬಿಡುಗಡೆಯ ದಿನ. ಬಾಬಾ ಸಾಹೇಬರು ಜನ್ಮತಃ ಅಸ್ಪೃಶ್ಯತೆಯ ದೌರ್ಜನ್ಯಗಳಿಗೆ ತುತ್ತಾಗುತ್ತಲೇ ಬಂದವರು. ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ನೋವುಗಳನ್ನು ಸ್ವಾನುಭವದಿಂದಲೇ ಅರಿತಿದ್ದ ಬಾಬಾ ಸಾಹೇಬರು ಭಾರತದಲ್ಲಿನ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಂತಹ ಕೆಟ್ಟ ರೂಢಿ ಆಚರಣೆಗಳನ್ನು ನಿವಾರಿಸಲು ಅವಿರತ ಹೋರಾಟ ಮಾಡಿದ್ದರು. ಬಾಬಾ ಸಾಹೇಬರು ಹಿಂದು ಧರ್ಮದಲ್ಲಿನ ಕೊಳಕನ್ನೆಲ್ಲ ತೊಳೆದು ಪರಿಶುದ್ಧ ಮಾರ್ಗ ತೋರಲು ಸತತ ಪ್ರಯತ್ನ ಮಾಡಿದರು. ಸವರ್ಣೀಯ ಹಿಂದುಗಳ ಮನ ಪರಿವರ್ತನೆಗಾಗಿ ಅವಿರತವಾಗಿ ಶ್ರಮಿಸಿದರು. ಆದರೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗುಗಳು ಸಾಧಾರಣವಾದವುಗಳಲ್ಲ, ಅವು ಕ್ಯಾನ್ಸರ್ ಮತ್ತು ಏಡ್ಸ್ ಗಿಂತಲೂ ಭಯಾನಕ ವಾದವುಗಳು. ಅವುಗಳಿಗೆ ಔಷಧಿ ಕಂಡು ಹಿಡಿದು ಗುಣಪಡಿಸುವುದು ಬಹು ದೂರದ ವಿಚಾರ ಎಂದು ತಿಳಿದ ಬಾಬಾ ಸಾಹೇಬರು ಹಿಂದು ಧರ್ಮದ ಸಂಕೋಲೆಗಳಿಂದ ಬಿಡಿಸಿ ಕೊಂಡು ಬೌದ್ಧ ಧರ್ಮದಂತಹ ಸರ್ವ ಸಮಾನತೆಯ ತರ್ಕಬದ್ಧ ಮಹಾನ್ ಧಮ್ಮವನ್ನು ಅಪ್ಪಿಕೊಳ್ಳಲು ನಿರ್ಧರಿಸಿದರು. ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದು ಬಾಬಾ ಸಾಹೇಬರು ಪ್ರತಿಜ್ಞೆ ಮಾಡಿ 1956 ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಹಿಂದೂ ಧರ್ಮವನ್ನು ಧಿಕ್ಕರಿಸಿ ಬೌದ್ಧ ಧಮ್ಮ ಪಡೆದು ಕೊಂಡರು. ಅದೊಂದು ಪ್ರಪಂಚದ ಚರಿತ್ರೆಯಲ್ಲಿಯೇ ಐತಿಹಾಸಿಕ ದಿನ. ಯಾವ ಕಾಲದಲ್ಲೂ, ಯಾವ ದೇಶದಲ್ಲಿಯೂ ಅಷ್ಟೊಂದು ಜನರು ಏಕಕಾಲದಲ್ಲಿಯೇ ಒಂದು ಧರ್ಮವನ್ನು ಸ್ವೀಕರಿಸಿದ ನಿದರ್ಶನ ಮತ್ತೆಲ್ಲಿಯೂ ದೊರೆಯದು.
ಇಂತಹ ಒಂದು ಮಹತ್ವದ ದೀಕ್ಷಾ ಭೂಮಿಯನ್ನು ನೋಡುವ ಭಾಗ್ಯದಿಂದ ಯಾರೂ ವಂಚಿತರಾಗಬಾರದು ಮತ್ತು ವಿಮೋಚನೆಯ ದಾರಿ ಹಿಡಿಯಲು ದೀಕ್ಷಾ ಭೂಮಿ ನಡೆಯಿಂದ ಸಾಧ್ಯವೆಂದು ಅರಿತು ಈ ಸಲ ಅತಿ ಹೆಚ್ಚು ಮಹಿಳೆಯರು ಭಾಗಿಯಾಗಬೇಕು ಎಂದು ಮಹಿಳಾ ತಂಡಗಳನ್ನು ತಯಾರಿ ಮಾಡಿ ನಾಗಪುರಕ್ಕೆ ಪ್ರಯಾಣ ಬೆಳೆಸಿದೆವು. ಬಹಳ ನೋವಿನ ವಿಚಾರ ಏನೆಂದರೆ ನಾಗಪುರಕ್ಕೆ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ವಿಫಲವಾಗಿದ್ದು. ಅರ್ಜಿ ಹಾಕಿದ ಎಲ್ಲ ಮಹಿಳೆಯರಿಗೆ ಕೆಂಪು ಬಸ್ಸುಗಳಿಗೆ ಹೋಗಬೇಕೆಂದು ಮಾರ್ಗಸೂಚಿ ನೀಡಿ ಉಳಿದವರಿಗೆ ರಾಜಹಂಸ ಬಸ್ಸುಗಳನ್ನು ಮಾಡಿದರು. ಬುದ್ಧ ಭೂಮಿಗೆ ಹೊರಟ ಮಹಿಳೆಯರು ಬುದ್ಧ ಹೇಳಿದಂತೆ ʼಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿʼ ಎಂಬಂತೆ ನಮಗೆ ಕೆಂಪು ಬಸ್ಸಿನಲ್ಲಿ ಪ್ರಯಾಣ ಮಾಡಲು ಆಗಲ್ಲ ನಮಗೂ ರಾಜಹಂಸ ಬಸ್ಸುಗಳೆ ಬೇಕು ಎಂದು ಪಟ್ಟು ಹಿಡಿದು ಕುಳಿತು ಕೊನೆಗೆ ರಾಜಹಂಸ ಬಸ್ಸಿನಲ್ಲಿಯೇ ಪ್ರಯಾಣ ಬೆಳೆಸಿದೆವು.
ಬಸ್ಸಿನಲ್ಲಿ ಪ್ರಾರಂಭಿಸಿದ ಭಜನಾ ಹಾಡುಗಳು ದೀಕ್ಷಾ ಭೂಮಿಯವರೆಗೂ ಮೊಳಗಿದವು. ಹಾಡುಗಾರರಾದ ಚಂದ್ರಭಾಗಮ್ಮ, ಮರೆಮ್ಮ, ಭಾಗಮ್ಮ, ಭೀಮಬಾಯಿ, ನಾಗಮ್ಮ, ರತ್ನಮ್ಮ, ಪಾರ್ವತಿ, ದೇವಮ್ಮ, ಹೀಗೆ ಅನೇಕ ಮಹಿಳೆಯರೊಂದಿಗೆ ಬುದ್ಧ-ಬಾಬಾಸಾಹೇಬರ ಹಾಡುಗಳನ್ನು ಹಾಡುತ್ತ ನಾಗಪುರ ತಲುಪಿದೆವು. ನಮೋ ಬುದ್ಧ ಭಗವಂತ ಸಂವಿಧಾನ ಪೀತಾ ಹಾಡಿನೊಂದಿಗೆ ಪ್ರಾರಂಭವಾಗಿ ಓಂ ಜೈಭೀಮ್ ದೇವರ ಜಗವೆಲ್ಲ ಉದ್ಧಾರ, ಬಾಂಬೆ ದಾದರ ಬಾಬಾನ ಮಂದಿರ ಜೈ ಭೀಮಾ ದೇವರ.. ನಮ್ ದೇವರ ಜೈ ಭೀಮಾ ದೇವರ. ನಾಗಪುರಕ್ಕ ನಡಿಯಿರಿ ಧಮ್ಮದೀಕ್ಷಾ ಪಡೆಯರಿ ಜೈ ಭೀಮಾ ದೇವರ ನಮ್ ದೇವರ ಜೈ ಭೀಮಾ ದೇವರ. ನಾಗಪುರಕ್ಕೆ ಹೋಗಿ ದೀಕ್ಷಾ ಪಡೆಯಬೇಕು ಬೌದ್ಧ ಧಮ್ಮವನ್ನು ಸ್ವೀಕರಿಸಿ ಬಾಬಾಸಾಹೇಬರ ದಾರಿಯಲ್ಲಿ ಸಾಗೋಣ ಎಂಬ ಪ್ರಬುದ್ಧತೆಯ ಹಾಡು ಇದಾಗಿತ್ತು. ಇನ್ನೊಂದು ಹಾಡು ಬಹಳ ಮಹತ್ವದ ಸಂದೇಶ ಸಾರುವ ಹಾಡು ನಾರಿ ಅದಾಲತೆ. ಹೆಣ್ಣಾ ಹುಟ್ಟಿದರೇನು ಗಂಡಾ ಹುಟ್ಟಿದರೇನು ಹೆರಗಿಗೊಂಬತ್ತ ತಿಂಗಳರೆವ್ವ ನಾರಿ ಅದಾಲತೆ…. ಸರಿಯಾಗಿ ನಡ್ಸ ನಾರಿ ಭಾರತ ದೇಸ. ಈ ಹಾಡಿನಲ್ಲಿ ಸಮಾನತೆಯನ್ನು ಸಾರುವ ಸಂದೇಶವಿದೆ. ಭಾರತ ದೇಶವನ್ನು ನಡೆಸುವವರು ನಾರಿಯರು. ಬಾಬಾಸಾಹೇಬರು ಈ ದೇಶವನ್ನು ನಡೆಸುವ ಕಾನೂನನ್ನು ನಾರಿಯರ ಕೈಯೊಳಗೆ ಕೊಟ್ಟಿದ್ದಾರೆ ಎಂಬ ಅರ್ಥಪೂರ್ಣ ಹಾಡುಗಳನ್ನು ಹಾಡುತ್ತ ಮೆಲ್ಲಗ ಮೆಲ್ಲಗ ನಡಿ ಬಾಯಲಿ ಜೈ ಭೀಮ ಜೈ ಭೀಮ ನುಡಿ ಎಂದು ನಾಗಪುರದ ದೀಕ್ಷಾ ಭೂಮಿಗೆ ಬಂದು ತಲುಪಿದೆವು.
ರಾತ್ರಿ ದೀಕ್ಷಾ ಭೂಮಿಯಲ್ಲಿ ಮಲಗಿದ್ದ ಲಕ್ಷಾಂತರ ಜನರನ್ನು ನೋಡಿ ಮೈ ರೋಮಾಂಚನವಾಯಿತು. ಇಲ್ಲಿ ಯಾರು ಕುರಿ, ಕೋಳಿ ಕೊಯ್ದಿಲ್ಲ, ಹರಕೆ ಹೊತ್ತಿಲ್ಲ, ಒಂದು ಗಿಡಗಳಿಗೂ ನಿಂಬೆಹಣ್ಣು ಚಿಂದಿ ಬಟ್ಟೆ ಕಟ್ಟಿಲ್ಲ, ಕಾಯಿ ಇಲ್ಲ ಕರ್ಪೂರ ಇಲ್ಲ ಆದ್ರೂ ಲಕ್ಷಾಂತರ ಜನ ಕೊರೆವ ಛಳಿಯಲ್ಲಿ ದೀಕ್ಷಾ ಭೂಮಿಯ ಮೈದಾನದಲ್ಲಿ ಹಾಸಿಗೆಗಳಿಲ್ಲದೆ ನೆಲದ ಮೇಲೆ ಮಲಗಿದ್ದರು. ನಾನು ನಮ್ಮ ಮಹಿಳೆಯರಿಗೆ ಕೇಳಿದೆ- ಬೌದ್ಧ ಅನುಯಾಯಿಗಳು ನಿಮಗೆ ಇರಲು ನಿವಾಸಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ರಾತ್ರಿ ಮಲಗಿ ಬೆಳಿಗ್ಗೆ ಬಂದು ದರ್ಶನ ಪಡೆಯ ಬಹುದಿತ್ತಲ್ಲ? ಎಂದು. ದಿನಾ ರಾತ್ರಿ ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ ಆದರೆ ಇಂದು ನಮ್ಮ ಜೀವನದ ಸಾರ್ಥಕತೆಯ ದಿನ. ಈ ನೆಲ ಬಾಬಾ ಸಾಹೇಬರು ಸ್ಪರ್ಶ ಮಾಡಿದ ನೆಲ. ಬಾಬಾರ ಪಾದದ ಧೂಳು ನಮ್ಮನ್ನು ಸ್ಪರ್ಶಿಸಿ ನಮ್ಮ ಬದುಕು ಸಾರ್ಥಕವಾಗಲೆಂದು ನಾವು ನೆಲದ ಮೇಲೆ ಮಲಗಿದ್ದೇವೆ ಎಂದರು ಅವರು. ಮಡಿ ಮೈಲಿಗೆ ಇಲ್ಲದ ಮನಸ್ಸನ್ನು ಶುದ್ಧಗೊಳಿಸುವ ಬುದ್ಧನ ತಾಣದಲ್ಲಿ ಎಲ್ಲರೂ ಸಮಾನವಾಗಿ ಸಾಲಿನಲ್ಲಿ ನಡೆದು ದೀಕ್ಷಾಭೂಮಿಯ ದರ್ಶನ ಪಡೆದರು. ಇಷ್ಟು ದಿನ ಗುಡಿಗುಂಡಾರಗಳನ್ನೆ ಓಡಾಡಿದ ಮಹಿಳೆಯರು ಮೊದಲ ಬಾರಿ ಬುದ್ಧನ ಈ ಐತಿಹಾಸಿಕ ಸ್ಥಳ ನೋಡಿ ಬೆರಗಾದರು ಮತ್ತು ಮನಸ್ಸಿನೊಳಗೆ ಆನಂದ ಪಟ್ಟರು. ನಮ್ಮ ಪರಂಪರೆಯು ಇಷ್ಟೊಂದು ಮಹತ್ತರವಾಗಿದೆ. ಬಂದವರೆಲ್ಲ ಬುದ್ಧನ ಮೂರ್ತಿಗಳನ್ನು ಖರೀದಿಸಿ ಕೂಸಿನಂತೆ ಕಂಕುಳಲ್ಲಿ ಇಟ್ಟುಕೊಂಡು ಬಸ್ಸು ಹತ್ತಿದರು. ಅದಕ್ಕೆ ಹಿರಿಯರು ಹೇಳಿದ್ದು ಕೋಶ ಓದು ದೇಶ ಸುತ್ತು ಎಂದು.
ಅಶ್ವಿನಿ ಮದನಕರ, ಕಲಬುರಗಿ
ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆ
ಮೊ. 7090565419
ಇದನ್ನೂ ಓದಿ-ಅಂಬೇಡ್ಕರರ ಚಿಂತನೆಗಳ ಹಿನ್ನೆಲೆಯಲ್ಲಿ ಮಹಿಷಾಸುರ ಮತ್ತು ಮಹಿಷಮರ್ದಿನಿ