ಹಿಂದಿನ ಮೂರು ಭಾಗಗಳಲ್ಲಿ ಕೇವಲ ಮಹಿಳೆಯರ ಅನುಭವಕ್ಕೆ ನನ್ನ ಬರಹ ಸೀಮಿತವಾಗಿತ್ತು. ಈ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ ಅಂಡಮಾನ್ ನಲ್ಲಿ ಅಭಿವೃದ್ಧಿಯ ಕಲ್ಪನೆ ರೂಪುಗೊಂಡ ಬಗ್ಗೆ ಮತ್ತು ಅದು ತಂದ ಪರಿವರ್ತನೆಯ ಬಗ್ಗೆ ಈ ದ್ವೀಪ ಯಾವೆಲ್ಲ ಪ್ರಶ್ನೆಗಳನ್ನು ನನ್ನ ಮುಂದೆ ಇಟ್ಟಿತು ಎಂಬುದನ್ನು ಹಂಚಿಕೊಳ್ಳುತ್ತಿದ್ದೇನೆ – ರಾಜಲಕ್ಷ್ಮಿ ಎನ್ ಕೆ.
ಶ್ರೀಲಂಕಾ, ಬಾಲಿ ಯಂತಹ ದ್ವೀಪಗಳ ಪ್ರವಾಸದ ಅನುಭವದ ಹಿನ್ನೆಲೆಯಲ್ಲಿ ನನಗೆ ಅಂಡಮಾನ್ ದ್ವೀಪದ ಪ್ರವಾಸದ ಬಗ್ಗೆ ಕುತೂಹಲವಿತ್ತು. ನನಗೆ ತಿಳಿದಂತೆ ಪ್ರತಿಯೊಂದು ದ್ವೀಪವು ತನ್ನದೇ ಆದ ವಿಭಿನ್ನತೆಯನ್ನು ಹೊಂದಿದ್ದುಅಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಶ್ರೀಲಂಕಾ ಪ್ರವಾಸದಲ್ಲಿ ದಕ್ಕಿದ ಎಲ್ಲ ಅನುಭವಗಳನ್ನೂ ಮೀರಿ ಕನಸುಕಂಗಳ ಸಿಪಾಯಿಗಳು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಒಂದು ಸೇತುವೆಯನ್ನು ಕಾವಲು ಕಾಯುವುದರಲ್ಲಿ ಕಳೆಯುತ್ತಿದ್ದಾರೆ ಎಂಬ ವಿಷಾದದ ಛಾಯೆ ಉಳಿದೆಲ್ಲ ಸವಿ ನೆನಪುಗಳನ್ನು ಹತ್ತಿಕ್ಕಿ ಉಳಿದುಬಿಟ್ಟಿತು. ಇಂಡೋನೇಷ್ಯಾದ ಬಾಲಿ ದ್ವೀಪವು ತನ್ನ ಹಲವು ಮಜಲುಗಳನ್ನು ತೆರೆದಿಟ್ಟು ಒಂದು ರಮ್ಯ ಕಲ್ಪನೆಯಾಗಿ ಉಳಿಯಿತು. ಅಲ್ಲಿನ ಜನರು ಎದುರಿಸುವ ಜ್ವಾಲಾಮುಖಿಯಾಗಲಿ, ಚಂಡಮಾರುತವಾಗಲಿ, ಅದರಿಂದ ಉಂಟಾಗುವ ಕಷ್ಟ ನಷ್ಟಗಳಾಗಲಿ ಕಾಣಬರದೆ ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಗಾಢತೆಯೊಂದಿಗೆ ದಕ್ಕಿದ ಅನುಭವ ಅಪೂರ್ವ. ಅಂಡಮಾನ್ ಪ್ರವಾಸದಲ್ಲಿ ಪ್ರಕೃತಿ ಸೌಂದರ್ಯ ಹಾಗೂ ರಾಜಕೀಯ ಕೈದಿಗಳು ಅನುಭವಿಸಿದ ನೋವುಗಳ ಚಿತ್ರಣ ನನ್ನ ಅನುಭವಕ್ಕೆ ಬರಬಹುದು ಎಂದು ಅಂದುಕೊಂಡಿದ್ದೆ… ಆದರೆ ಇದರೊಂದಿಗೆ ಅಲ್ಲಿನ ಮಣ್ಣು ನನಗೆ ಬೇರೊಂದು ಪ್ರಪಂಚವನ್ನೇ ತೆರೆದಿಟ್ಟಿತು. ಅಲ್ಲಿನ ಗಾಳಿ, ಮಣ್ಣು, ಕಡಲ ತೆರೆಗಳು ಸಾಕಷ್ಟು ಕಥೆಗಳನ್ನು ನನ್ನ ಮುಂದಿಟ್ಟ ಅನುಭವ. ಹಿಂದಿನ ಮೂರು ಭಾಗಗಳಲ್ಲಿ ಕೇವಲ ಮಹಿಳೆಯರ ಅನುಭವಕ್ಕೆ ಸೀಮಿತವಾಗಿತ್ತು ನನ್ನ ಬರಹ. ಈ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ ಅಂಡಮಾನ್ ನಲ್ಲಿ ಅಭಿವೃದ್ಧಿಯ ಕಲ್ಪನೆ ರೂಪುಗೊಂಡ ಬಗ್ಗೆ ಮತ್ತು ಅದು ತಂದ ಪರಿವರ್ತನೆಯ ಬಗ್ಗೆ ಈ ದ್ವೀಪ ಯಾವೆಲ್ಲ ಪ್ರಶ್ನೆಗಳನ್ನು ನನ್ನ ಮುಂದೆ ಇಟ್ಟಿತು ಎಂಬುದನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಪ್ರಕೃತಿ ಸೌಂದರ್ಯಕ್ಕೇನು ಕೊರತೆ ಇಲ್ಲ. ಆತ್ಮೀಯ ಸಂವಾದಕ್ಕೂ ಬಡತನವಿಲ್ಲ. ಪೋರ್ಟ್ ಬ್ಲೇರ್ ನ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟ ಕ್ಷಣದಿಂದ ಹಿಂತಿರುಗಿ ಬಂದ ನಂತರವೂ ನನ್ನನ್ನು ಕಾಡಿದ್ದು ಈ ಮಣ್ಣಿನ ಮಕ್ಕಳ ಮುಗ್ಧತೆ, ಸಹಜತೆ, ಜೊತೆಗೆ ಅವರ ದಣಿವರಿಯದ ಶ್ರಮಭರಿತ ಜೀವನ.
ಪ್ರತಿಯೊಂದು ಸಮಾಜವು ಕಾಲಾನುಕಾಲಕ್ಕೆ ಬದಲಾವಣೆಯನ್ನು ಕಾಣುತ್ತದೆ. ಸಮುದಾಯಗಳ ಸಾರ್ವಜನಿಕ ಬದುಕಾದ ಸಮಾಜ ಸದಾ ಚಲನಶೀಲವಾಗಿರುತ್ತದೆ. ಚಲನಶೀಲತೆಯು ಕೆಲವೊಮ್ಮೆ ತ್ವರಿತ ಕೆಲವೊಮ್ಮೆ ನಿಧಾನಗತಿಯಲ್ಲಿ ಇರುತ್ತದೆ. ಈ ಚಲನಶೀಲತೆಯ ಫಲವನ್ನು ಸಾಮಾನ್ಯವಾಗಿ ಪ್ರಗತಿಯೆಂದು, ಅಭಿವೃದ್ಧಿಯೆಂದು ಗುರುತಿಸುತ್ತೇವೆ. ಉದಾಹರಣೆಗೆ ಕಾಡಾಡಿಗಳಾಗಿದ್ದ ಜನರು ನಾಡಾಡಿಗಳಾಗಿ ಬೀಡಾಡಿಗಳಾಗಿ ಬದಲಾದದ್ದು ಮನುಕುಲದ ಚರಿತ್ರೆಯಲ್ಲಿ ಪ್ರಗತಿ ಎಂದು ಗುರುತಿಸಲ್ಪಟ್ಟಿದೆ. ಯಾವುದೇ ದೇಶದ, ಪ್ರದೇಶದ ಪ್ರಗತಿಯಲ್ಲಿ ನಾವು ಗಮನಿಸಬಹುದಾದ ಗುಣವೆಂದರೆ ಹೊಸತನ್ನು ಪಡೆಯುವಾಗ ಕೆಲವು ಹಳತನ್ನು ಕಳೆದುಕೊಳ್ಳಬೇಕಾಗುವುದು. ಇದನ್ನು ಸೃಜನಶೀಲ ವಿನಾಶವೆಂದೂ ವಿನಾಶಕಾರಿ ಸೃಜನಶೀಲತೆ ಎಂದೂ ಹೇಳಬಹುದು. ಪ್ರಗತಿ ಹಾಗೂ ಅಭಿವೃದ್ಧಿಯ ಈ ಕಲ್ಪನೆಯೊಂದಿಗೆ ಅಂಡಮಾನ್ ಪ್ರವೇಶಿಸಿದ ನನಗೆ ಅಲ್ಲಿನ ಜನತೆ ಅಭಿವೃದ್ಧಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದರು.
ಅಂಡಮಾನ್ ದ್ವೀಪದ ಮೂಲ ನಿವಾಸಿಗಳು ಮೂಲತಃ ಬೇಟೆಗಾರರು. ಬೇಟೆಯಾಡಿದ ಪ್ರಾಣಿಗಳು, ಕಾಡಿನಲ್ಲಿ ದೊರೆಯುವ ಗೆಡ್ಡೆಗೆಣಸು ಹಣ್ಣು ಹಂಪಲುಗಳನ್ನು ಆಹಾರವಾಗಿ ಸೇವಿಸುತ್ತಿದ್ದರು. ಇಲ್ಲಿನ ಮೂಲ ನಿವಾಸಿಗಳನ್ನು ನಾಲ್ಕು ಪಂಗಡಗಳಾಗಿ ಗ್ರೇಟ್ ಅಂಡಮಾನೀಸ್, ಆಂಜೆ, ಜಾರವ ಮತ್ತು ಸೆಂಟಿನಲ್ಸ್ ಎಂದು ಗುರುತಿಸಲ್ಪಟ್ಟಿರುತ್ತಾರೆ. ಇವರು ಇಂದಿಗೂ ಇಲ್ಲಿನ ಕೆಲವು ದ್ವೀಪಗಳಲ್ಲಿ ವಾಸಿಸುತ್ತಿದ್ದಾರೆ. ಈ ಮೂಲ ನಿವಾಸಿಗಳು ಸುಮಾರು 60 ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ದ್ವೀಪಗಳಿಂದ ಇಲ್ಲಿಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಗ್ರೇಟ್ ಅಂಡಾಮಾನೀಸ್ ಪಂಗಡದಲ್ಲಿ ಒಂದು ಕಾಲದಲ್ಲಿ 10 ಒಳಪಂಗಡಗಳಿದ್ದು ಆ ಎಲ್ಲಾ ಪಂಗಡದವರು ಅವರದ್ದೇ ಆದ ಭಾಷೆಯನ್ನು ಬಳಸುತ್ತಿದ್ದರು. ಆದರೆ ಇಂದು ಅವರ ಎರಡು ಒಳಪಂಗಡಗಳು ಮಾತ್ರ ಅಸ್ತಿತ್ವದಲ್ಲಿವೆ. 18ನೇ ಶತಮಾನದ ಕೊನೆಯವರೆಗೂ ಈ ಜನರು ಪ್ರಪಂಚದ ಇತರರೊಡನೆ ಸಂಪರ್ಕ ಇಟ್ಟುಕೊಳ್ಳಲು ಬಯಸಲಿಲ್ಲ. ಅವಘಡಕ್ಕೆ ಈಡಾದ ಹಡಗಿನ ಪಯಣಿಗರು ಅಕಸ್ಮಾತ್ತಾಗಿ ಇವರು ವಾಸಿಸುವ ದ್ವೀಪಕ್ಕೆ ಬಂದರೆ ಅವರನ್ನು ಶತ್ರುಗಳೆಂದೇ ಪರಿಗಣಿಸುತ್ತಿದ್ದರು. ತಮ್ಮವರಲ್ಲದವರನ್ನು ಹತ್ತಿರ ಬಿಟ್ಟು ಕೊಳ್ಳುತ್ತಿರಲಿಲ್ಲ.
18ನೇ ಶತಮಾನದ ಕೊನೆಯ ಭಾಗದಲ್ಲಿ ಪ್ರಥಮ ಬಾರಿಗೆ ಬ್ರಿಟಿಷರು ದ್ವೀಪವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿನ ಮೂಲ ನಿವಾಸಿಗಳ ಸಂಖ್ಯೆ ಸುಮಾರು 5,000 ದಿಂದ 8,000ದಷ್ಟಿತ್ತು ಎಂದು ಹೇಳಲಾಗುತ್ತದೆ. ಮೂಲ ನಿವಾಸಿಗಳು ತಮ್ಮ ಬಿಲ್ಲು ಬಾಣಗಳ ಶಕ್ತಿಯಿಂದ ಯುಕ್ತಿಯಿಂದ ಬ್ರಿಟಿಷರನ್ನು ಹೊಡೆದೋಡಿಸಿದರು. 1858ರಲ್ಲಿ ಬ್ರಿಟಿಷರು ಮರಳಿ ಯತ್ನವ ಮಾಡಿ ಪೋರ್ಟ್ ಬ್ಲೇರನ್ನು ವಶಪಡಿಸಿಕೊಳ್ಳುವಲ್ಲಿ ಫಲಪ್ರದರಾದರು. ಅಬರ್ದೀನ್ ಕಾಳಗವೆಂದು ಕರೆಯಲ್ಪಡುವ ಈ ಕದನದಲ್ಲಿ ಮೂಲ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ತಮ್ಮ ಯುವಜನರನ್ನು ಕಳೆದುಕೊಂಡರು. ಒಂದು ಗಣತಿಯ ಪ್ರಕಾರ 1901ರಲ್ಲಿ ಕೇವಲ 625 ಮಂದಿ ಮಾತ್ರ ಉಳಿದರು. ಅವರ ಭಾಷೆಗಳು ಕೂಡ ವಿನಾಶದಂಚಿಗಿಳಿದು ಈಗಿರುವ ಗ್ರೇಟ್ ಅಂಡಾಮಾನೀಸ್ ಹೆಚ್ಚಾಗಿ ಹಿಂದಿ ಭಾಷೆಯನ್ನೇ ಅವಲಂಬಿಸಿದ್ದಾರೆ. ಆಂಜೆ ಪಂಗಡದವರು ಲಿಟಲ್ ಅಂಡಮಾನ್ ನಲ್ಲಿ ವಾಸಿಸುತ್ತಾರೆ. ಬ್ರಿಟಿಷ್ ವಸಾಹತೀಕರಣದ ಸಂದರ್ಭದಲ್ಲಿ 672 ಮಂದಿ ಇದ್ದವರು 1901ಕ್ಕಾಗುವಾಗ 92ಕ್ಕೆ ಇಳಿದರು.
ಭಾರತ ಸರ್ಕಾರವು ಮೂಲ ನಿವಾಸಿಗಳ ಶ್ರೇಯೋಭಿವೃದ್ಧಿಗೆ ಸತತವಾಗಿ ಶ್ರಮಿಸುತ್ತಲೇ ಬಂದಿದೆ. ಹಲವು ಯೋಜನೆಗಳನ್ನು ಹಾಕಿಕೊಂಡು ಮೂಲ ನಿವಾಸಿಗಳ ಬದುಕನ್ನು ಸುಧಾರಿಸುವ ಪ್ರಯತ್ನವನ್ನು ಮಾಡುತ್ತಿದೆ. ಸರಕಾರ ನೀಡುವ ಕೆಲವು ಸವಲತ್ತುಗಳನ್ನು ಆಂಜೆ ಗಳು ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೃಷಿ ಹಾಗೂ ಕೋಳಿ ಸಾಗಣೆಯಲ್ಲಿ ತೊಡಗಿ ಕೊಂಡಿದ್ದಾರೆ. ಇತರರೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಿದ್ದಾರೆ. ಇವರು ಪಕ್ಕಾ ಮನೆಗಳಲ್ಲಿ ವಾಸಿಸುತ್ತಾ ಸಣ್ಣ ದೋಣಿಗಳನ್ನು ನಿರ್ಮಿಸುತ್ತಾ ಮುಖ್ಯ ವಾಹಿನಿಯೊಂದಿಗೆ ಒಂದಾಗಿದ್ದಾರೆ. ಅವರಿಗಾಗಿ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಇವರಿಗೆ ಇರುವ ದೊಡ್ಡ ದೌರ್ಬಲ್ಯವೆಂದರೆ ಸಾರಾಯಿ ಸೇವನೆ. ಇದರಿಂದ ಪ್ರಾಣ ಕಳೆದು ಕೊಂಡವರೂ ಇದ್ದಾರೆ. ಗ್ರೇಟ್ ಅಂಡಾಮನಿಸ್ ಹಾಗೂ ಆಂಜೆ ಪಂಗಡದವರಿಗೂ ಜಾರವ ಹಾಗೂ ಸೆಂಟಿನೆಲ್ಸ್ ಪಂಗಡದವರಿಗೂ ಬಹಳ ವ್ಯತ್ಯಾಸವಿದೆ. ಜಾರವರು 250 ರಿಂದ 400ರಷ್ಟು ಇದ್ದಾರೆ. ಅವರು ಹೊರಗಿನವರೊಂದಿಗೆ ಸ್ನೇಹಪರರಲ್ಲ. ಅವರು ಇಂದಿಗೂ ತಮ್ಮವರಲ್ಲದವರನ್ನು ಶತ್ರುಗಳಂತೆ ನೋಡುತ್ತಾರೆ. ಕಾಡು ಹಂದಿ, ಉಡ, ಹಣ್ಣು, ಗೆಡ್ಡೆ ಗೆಣಸು, ಜೇನು ಇವರ ಆಹಾರ. ವಸ್ತ್ರಧಾರಿಗಳಾಗದೆ ನಗ್ನರಾಗಿರುವ ಇವರು ಚಿಪ್ಪು ಹಾಗೂ ಎಲೆಗಳಿಂದ ಮಾಡಿದ ಆಭರಣಗಳನ್ನು ಧರಿಸುತ್ತಾರಾದರೂ ಅದು ನಗ್ನತೆಯನ್ನು ಮುಚ್ಚಿಕೊಳ್ಳುವ ಉದ್ದೇಶದಿಂದಲ್ಲ.
6,000 ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದವರು ಬಂದಾಗ ಹೇಗಿದ್ದರೋ ಇಂದಿಗೂ ಅದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸೆಂಟಿನೆಲರು ಕೂಡ ಸ್ನೇಹಪರರಲ್ಲ. ಅವರು ಯಾರನ್ನು ಕೂಡ ತಮ್ಮ ಬಳಿ ಬಿಟ್ಟುಕೊಳ್ಳುವುದಿಲ್ಲ. ಸೆಂಟೇನಲ್ ದ್ವೀಪವಾಸಿಗಳಾದ ಇವರು ನೋಡಲು ಹೇಗಿದ್ದಾರೆ? ಒಟ್ಟು ಜನಸಂಖ್ಯೆ ಎಷ್ಟಿರಬಹುದು ? ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸರಕಾರವು ಹಲವು ಬಾರಿ ಅವರಿಗೆ ಸಹಾಯ ನೀಡುವ ಪ್ರಯತ್ನ ನಡೆಸಿದರೂ ವಿಫಲವಾಗಿದೆ. ತಮ್ಮ ದ್ವೀಪದ ಸುತ್ತ ಯಾರನ್ನೇ ಕಂಡರೂ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾರೆ. 2006ರಲ್ಲಿ ಇಬ್ಬರು ಮೀನುಗಾರರು ಇವರ ಬಾಣದ ಸುಳಿಗೆ ಸಿಕ್ಕಿ ಹತರಾದರು. ಹೀಗೆ ಹತರಾದವರ ದೇಹ ಕೂಡ ಪಡೆಯಲು ಸಾಧ್ಯವಾಗಲಿಲ್ಲ.
ನಮಗೆಲ್ಲ ತಿಳಿದಿರುವಂತೆ ಮೂಲ ನಿವಾಸಿಗಳು ವಾಸವಿದ್ದ ಈ ಭೂ ಪ್ರದೇಶದಲ್ಲಿ ವಿವಿಧ ಕಾರಣಗಳಿಗಾಗಿ ವಿವಿಧ ಕಾಲಘಟ್ಟಗಳಲ್ಲಿ ಸ್ಥಳಾಂತರಗೊಂಡು ಬಂದ ಜನರು ಇಂದು ಅಂಡಮಾನ್ ಸ್ಥಳೀಯರು ಎಂದು ಗುರುತಿಸಲ್ಪಟ್ಟಿದ್ದಾರೆ. ಕೈದಿಗಳಾಗಿ ಬಂದವರು, ಉದ್ಯೋಗ ನಿಮಿತ್ತ ಬಂದವರು, ಬಾಂಗ್ಲಾದೇಶಿ ನಿರಾಶ್ರಿತರು ಹೀಗೆ ವಿಭಿನ್ನ ಉದ್ದೇಶ ಹಾಗೂ ಸಂಸ್ಕೃತಿಗಳಿಂದ ಬಂದು ಇಲ್ಲಿ ಒಟ್ಟಾಗಿ ಜೀವನ ನಡೆಸುತ್ತಿರುವ ಸಮೂಹ ಇದು.
ಸ್ಥಳೀಯ ನಿವಾಸಿಗಳು ಮೂಲ ನಿವಾಸಿಗಳ ಬಗ್ಗೆ ಪ್ರೀತಿ ಹಾಗೂ ಗೌರವದಿಂದ ಮಾತನಾಡುತ್ತಾರೆ. ನಮ್ಮೊಡನೆ ಮಾತಿಗಿಳಿದ ಟ್ಯಾಕ್ಸಿ ಚಾಲಕನೊಬ್ಬ ಅವನಿಗೆ ತಿಳಿದ ಕೆಲವು ಮಾಹಿತಿಗಳನ್ನು ಹಂಚಿಕೊಂಡ. ಅದರಲ್ಲಿ ಒಂದು ವಿದೇಶಿ ಸಂಶೋಧನಾಕಾರನ ದುರಂತ. ಈ ಸಂಶೋಧನಾಕಾರ ಬಹುಶಃ ಮಾನವ ಶಾಸ್ತ್ರ ಸಂಶೋಧನಾಕಾರನಿರಬಹುದು. ಆತನಿಗೆ ಸೆಂಟಿನೆಲ್ ಪಂಗಡದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ. ಹಾಗಾಗಿ ಹಲವು ಬಾರಿ ತನ್ನ ದೇಶದಿಂದ ಅಂಡಮಾನ್ ಗೆ ಬರುತ್ತಿದ್ದ. ಸೆಂಟಿನೆಲ್ ದ್ವೀಪದ ಸುತ್ತ ದೋಣಿ ನಡೆಸುವುದು ನಿಶಿದ್ಧ ಹಾಗೂ ಅಪಾಯಕಾರಿ ಎಂದು ಆತನಿಗೆ ತಿಳಿದಿದ್ದರೂ ಆತ ದೋಣಿಯಲ್ಲಿ ತೆರಳಿ ಆಹಾರದ ಪೊಟ್ಟಣಗಳನ್ನು ದ್ವೀಪದ ತೀರದೆಡೆಗೆ ಎಸೆದು ದೂರದಿಂದಲೇ ಅವರ ಚಲನವಲನಗಳನ್ನು ಗಮನಿಸುವ ಪ್ರಯತ್ನ ನಡೆಸಿದನಂತೆ. ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದರಿಂದ ತನಗೇನೂ ಅಪಾಯವಿಲ್ಲವೆಂದು ಭಾವಿಸಿ ದ್ವೀಪ ತೀರದವರೆಗೂ ದೋಣಿ ಚಲಾಯಿಸುವ ಅಪಾಯಕಾರಿ ಪ್ರಯತ್ನವನ್ನು ಮಾಡಿದನಂತೆ. ಸೆಂಟಿನೆಲರ ಕೈವಶನಾಗಿ ಮೃತನಾದನಂತೆ. ಆತ ವಿದೇಶಿಯನಾದದ್ದರಿಂದ ಆತನ ದೇಹವನ್ನು ಪಡೆಯುವ ಮತ್ತು ಆತನ ದೇಶಕ್ಕೆ ರವಾನಿಸುವ ಅವಶ್ಯಕತೆ ಇತ್ತಾದರೂ ಆತನ ದೇಹವನ್ನು ಪಡೆಯಲು ಸಾಧ್ಯವಾಗಲೇ ಇಲ್ಲ.
ಈ ಘಟನೆಯನ್ನು ನಮಗೆ ನಿರೂಪಿಸುವಾಗ ಟ್ಯಾಕ್ಸಿ ಚಾಲಕನ ದನಿಯಲ್ಲಿ ವಿದೇಶಿಯನ ಬಗ್ಗೆ ಅನುಕಂಪವಿತ್ತಾದರೂ ಅದಕ್ಕಿಂತ ಹೆಚ್ಚಾಗಿ ಅಸಮಾಧಾನವೇ ತುಂಬಿತ್ತು. ಅವರನ್ನು ಅವರಿಚ್ಛೆಗನುಗುಣವಾಗಿ ಬದುಕಲು ಬಿಡಬೇಕು ಮತ್ತು ಅವರ ಜೀವನದಲ್ಲಿ ಅತಿಕ್ರಮ ಪ್ರವೇಶ ತಪ್ಪು ಎಂಬ ಭಾವ ಸ್ಪಷ್ಟವಾಗಿತ್ತು. ಮೂಲ ನಿವಾಸಿಗಳು ಹಾಗೂ ಮುಖ್ಯವಾಹಿನಿಯ ಭಾಗವಾಗಿರುವ ಸ್ಥಳೀಯ ನಿವಾಸಿಗಳು ಕಟ್ಟಿಕೊಂಡ ಬದುಕಿನಲ್ಲಿ ಭಿನ್ನತೆ ಇದ್ದರೂ ಅವರೆಲ್ಲರೂ ಸರ್ಕಾರದ ದೃಷ್ಟಿಯಲ್ಲಿ ಭಾರತದ ಪ್ರಜೆಗಳು ಅಂತೆಯೇ ಸರ್ಕಾರದ ಇಷ್ಟಾನಿಷ್ಟಗಳನ್ನು ಒಪ್ಪಿಕೊಂಡವರ ಬದುಕು ಬದಲಾದದ್ದಂತೂ ನಿಜ.
ಕಾಡಿನ ವಾಸಿಗಳಾದ ಮೂಲ ನಿವಾಸಿಗಳು ಹಾಗೂ ನಾಡಿನ ವಾಸಿಗಳಾದ ಸ್ಥಳೀಯರು, ಇಬ್ಬರ ಬದುಕು ನೋಡಲು ಸಿಗುವ ಒಂದು ಅಪರೂಪದ ಪ್ರದೇಶ ಇದು. ಇವರಿಬ್ಬರ ನಡುವೆ ನಾಗರೀಕತೆ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಶತಮಾನಗಳ ಅಂತರವಿದೆ. ಇದೊಂದು ರೀತಿಯಲ್ಲಿ ಬೆಳವಣಿಗೆಯ ವಿವಿಧ ಹಂತಗಳಾಗಿ ಕಂಡರೂ ಪೂರ್ವ ಪಶ್ಚಿಮದ ಸಂಗಮವಾಗಿಯೂ ಕಾಣುತ್ತದೆ. ಇಲ್ಲಿನ ಸ್ಥಳೀಯರು ತಮ್ಮ ಬೆಳವಣಿಗೆಯನ್ನು ಪ್ರಗತಿಯನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲಿ ನಾವು ಕಾಣಬಹುದು.
ಸುಮಾರು 60-65 ವಯಸ್ಸಿನವನಿರಬಹುದಾದ ಸ್ವರಾಜ್ ದ್ವೀಪದಲ್ಲಿನ ಕರಕುಶಲ ವಸ್ತುಗಳ ಮಳಿಗೆಯ ಮಾಲೀಕ. ಬಹಳ ಉತ್ಸಾಹದಿಂದ ತನ್ನ ಬಗ್ಗೆ ತನ್ನ ಕುಟುಂಬದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ. ಆತ ಮೂಲತಃ ಬಾಂಗ್ಲಾದೇಶದವನು. 1970ರ ದಶಕದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ನಡುವೆ ಯುದ್ಧವಾದಾಗ ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಭಾರತದ ಆಶ್ರಯ ಬಯಸಿ ಬಂದವರಲ್ಲಿ ಆತನ ತಂದೆಯು ಒಬ್ಬರು. ಭಾರತದ ಆಗಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಒಂದಷ್ಟು ವಲಸಿಗರಿಗೆ ಅಂಡಮಾನ್ ನಲ್ಲಿ ಆಶ್ರಯ ಒದಗಿಸಿದರು. ಈತನ ತಂದೆಯಂತೆಯೇ ಹಲವು ನಿರಾಶ್ರಿತರು ಅಂಡಮಾನ್ ನಲ್ಲಿ ಆಶ್ರಯವನ್ನು ಪಡೆದುಕೊಂಡರು. ಒಂದೇ ಪ್ರದೇಶದಿಂದ ಬಂದವರಾಗಿದ್ದ ಅವರೆಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ತಮ್ಮ ಜೀವನವನ್ನು ಪ್ರಾರಂಭಿಸಿದರು. ಅವರಿಗೆ ಕೃಷಿ ಮಾಡಲು ಕಾಡನ್ನು ಸವರುವ ಅನುಮತಿ ಇತ್ತು. ಹೀಗೆ ಕಾಡನ್ನು ಸವರಿ ತಮ್ಮ ತಾತ್ಕಾಲಿಕ ವಸತಿಯನ್ನು ಮಾಡಿಕೊಂಡರು. ಅಂತೆಯೇ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡರು. ಅವರಲ್ಲೊಬ್ಬ ಭತ್ತ ಬೆಳೆದರೆ, ಮತ್ತೊಬ್ಬ ಸಾಸಿವೆ, ಮಗದೊಬ್ಬ ತೊಗರಿ ಹೀಗೆ ತಮ್ಮ ದಿನನಿತ್ಯದ ದವಸ ಧಾನ್ಯದ ಅವಶ್ಯಕತೆಯಂತೆ ಒಬ್ಬೊಬ್ಬರು ಒಂದೊಂದು ಬೆಳೆಯುತ್ತಿದ್ದರು.ತಮ್ಮ ಶಕ್ತಿಗನುಸಾರವಾಗಿ ತಮ್ಮ ಬೇಸಾಯ ಹಾಗೂ ವಸತಿಗೆ ಭೂಮಿಯನ್ನು ಉಪಯೋಗಿಸಿ ಕೊಂಡರು. ಅವರು ಎಷ್ಟು ಭೂಮಿಯನ್ನು ತಮ್ಮ ಅವಶ್ಯಕತೆಗೆ ಉಪಯೋಗಿಸಿಕೊಂಡರೋ ಅಷ್ಟು ಭೂಮಿಯನ್ನು ಸರಕಾರ ಅವರ ಹೆಸರಿಗೆ ಊರ್ಜಿತಗೊಳಿಸಿತು. ಆತ ಹೇಳಿದಂತೆ ಅವರಲ್ಲಿ ಜಾತಿ ಮತ ಭೇದವಿರಲಿಲ್ಲ. ಪರಸ್ಪರ ಹೊಂದಾಣಿಕೆ ಸೌಹಾರ್ದ ಸಮನ್ವಯತೆ ಇತ್ತು .ಅವರೆಲ್ಲರೂ ಜಾತಿ ಮತ ಭೇದವಿಲ್ಲದೆ ಒಂದೇ ಕುಟುಂಬದಂತೆ ಜೀವಿಸುತ್ತಿದ್ದರು. ಸುಳ್ಳು ಹಾಗೂ ಕಪಟದ ಅವಶ್ಯಕತೆಯೇ ಅವರಿಗಿರಲಿಲ್ಲ.
ಆತ ಹೇಳಿದ “ಸತ್ಯ ಹೇಳುತ್ತೇನೆ.. ಕಾಲ ಈಗ ಬದಲಾಗಿದೆ ನಾವೀಗ ಸುಳ್ಳು ಹೇಳುತ್ತೇವೆ . ನಾವು ಸುಳ್ಳು ಹೇಳುವುದನ್ನು ಹಾಗೂ ಮೋಸ ಮಾಡುವುದನ್ನು ಕಲಿತಿದ್ದೇವೆ”. “ಸುಳ್ಳು ಹೇಳುತ್ತೇವೆ” ಎಂಬ ವಿಷಯವನ್ನು ಆತ ಪುನಃ ಪುನಃ ಹೇಳಿದ ಹಾಗೂ ಹಾಗೆ ಹೇಳುವಾಗ ನಗುತ್ತಿದ್ದ . ನಾನು ಕೇಳಿದೆ “ನೀವು ಬದಲಾಗುವುದಕ್ಕೆ ಕಾರಣವೇನು?” ಅವನ ಉತ್ತರ ” ನಮಗೀಗ ಹೊರ ಜಗತ್ತಿನ ಪರಿಚಯ , ಸಂಪರ್ಕ ಜಾಸ್ತಿಯಾಗಿದೆ” ಆತ ಪುನಃ ನಕ್ಕ. ಆತನ ಮಕ್ಕಳು ಮುಖ್ಯ ಭೂಮಿಗೆ ಆಗಾಗ ವ್ಯವಹಾರ ನಿಮಿತ್ತ ಹೋಗುತ್ತಾರೆ. ಒಳ್ಳೆಯ ವಿದ್ಯಾಭ್ಯಾಸವಿದೆ. ಆದರೆ ಆತನ ಮಗನಿಗೆ ವಿವಾಹವಾಗಲು ಬಂಗಾಳಿ ಹೆಣ್ಣು ಮಗಳು ಸಿಕ್ಕುತ್ತಿಲ್ಲ. ಕಾರಣವೇನೆಂದರೆ ವಿದ್ಯಾವಂತ ಬಂಗಾಳಿ ಹೆಣ್ಣು ಮಕ್ಕಳು ದ್ವೀಪಕ್ಕೆ ಬಂದು ಜೀವನ ನಡೆಸಲು ಇಚ್ಚಿಸುವುದಿಲ್ಲ. ಆತನಲ್ಲಿ ದುಡ್ಡಿಗೇನೂ ಕೊರತೆ ಇಲ್ಲ. ಆದರೂ ಹೆಣ್ಣು ಸಿಕ್ಕುತಿಲ್ಲ”. ನಮಗೀಗ ಸಿರಿವಂತಿಕೆ ಇದೆ ಆದರೆ ಇಲ್ಲಿನ ಮೌಲ್ಯಗಳು, ನೈತಿಕತೆ, ನಿಧಾನವಾಗಿ ಬದಲಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ” . ಆತ ಹೇಳಿದ “ನಾವೀಗ ಸುಳ್ಳು ಹೇಳುತ್ತೇವೆ” . ನಿರಾಶ್ರಿತರಾಗಿ ಇಲ್ಲಿಗೆ ಬಂದ ಜನ ಇಂದು ಸಿರಿವಂತರಾಗಿದ್ದಾರೆ. ಆದರೆ ಮದುವೆಯಾಗಲು ಹೆಣ್ಣು ಸಿಕ್ಕುತ್ತಿಲ್ಲ, ಮೌಲ್ಯಗಳು ಬದಲಾಗಿವೆ .
ಆನಂತರ ನಮಗೆ ಮಾತಿಗೆ ಸಿಕ್ಕಿದವನು ಟ್ಯಾಕ್ಸಿ ಚಾಲಕ. ಆತ ಉತ್ತರ ಪ್ರದೇಶದವನು. ಆತನ ಅಜ್ಜ ದ್ವೀಪಕ್ಕೆ ಬಂದು ಕೃಷಿಯಲ್ಲಿ ತೊಡಗಿ ಕೊಂಡಾಗ ಬಡತನವನ್ನೇ ಮೈಮೇಲೆ ಹೊದ್ದುಕೊಂಡಿದ್ದ. ಆದರೆ ಸಮನ್ವಯದ, ಸಮಾನತೆಯ ಬದುಕು ಅವರದಾಗಿತ್ತು. ಜಾತಿ ಮತ ಭೇದ ಅವರಲ್ಲಿರಲಿಲ್ಲ. ಕರಕುಶಲ ಮಳಿಗೆಯ ಮಾಲೀಕ
ಹೇಳಿದ್ದಕ್ಕೂ ಈತ ಹೇಳಿದ್ದಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ನಮ್ಮಲ್ಲಿ ಬಾಂಧವ್ಯ, ಒಗ್ಗಟ್ಟು ದೃಢವಾಗಿತ್ತು. ಆದರೆ ನಿಧಾನವಾಗಿ ಅದು ಕರಗಿ ಹೋಗುತ್ತಿದೆ ಎಂದು ಹೇಳುವಾಗ ಆ ಯುವಕನ ಸ್ವರದಲ್ಲಿ ವಿಷಾದವಿತ್ತು . ಆತ ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯ ವಿಷಾದದೊಡನೆ ಇನ್ನೊಂದಷ್ಟು
ವಿಷಯಗಳನ್ನು ಅರಿತುಕೊಂಡಿದ್ದ . ಆತ ಹೇಳಿದ “ನಾವು ಇನ್ನೂ ಬಹಳ ಮುಂದುವರಿಯಬೇಕಿದೆ. ಕನಿಷ್ಠ ನಿಮಗಿಂತ ನಾವು 50 ವರ್ಷವಾದರೂ ಹಿಂದಿದ್ದೇವೆ. ಇಲ್ಲಿ ಸಾಕಷ್ಟು ಶಾಲೆಗಳಿವೆ. ಕಾಲೇಜುಗಳಿಲ್ಲ. ವೈದ್ಯಕೀಯ ವ್ಯವಸ್ಥೆ ಇಲ್ಲ… ಸ್ವರಾಜ್ ದ್ವೀಪದ ಮಹಿಳೆ ಒಬ್ಬಳು ತನ್ನ ಮಗುವಿಗೆ ಜನ್ಮ ನೀಡಬೇಕಿದ್ದರೆ ತಕ್ಕನಾದ ಆಸ್ಪತ್ರೆಯೇ ಇಲ್ಲ. ಇಲ್ಲಿನ ಎಲ್ಲಾ ಮಹಿಳೆಯರು ಹೆರಿಗೆ ಸಂಬಂಧವಾಗಿ ಪೋರ್ಟ್ ಬ್ಲೇರ್ ಗೆ ಹೋಗುತ್ತಾರೆ. ಸ್ವರಾಜ್ ದ್ವೀಪದಿಂದ ಪೋರ್ಟ್ ಬ್ಲೇರ್ ಗೆ ದೋಣಿಯಲ್ಲಿ ಒಂದೂವರೆ ಗಂಟೆಯ ಪ್ರಯಾಣ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧ ನೀಡುವ ವೈದ್ಯರಿದ್ದಾರಾದರೂ ತುರ್ತು ಸಂದರ್ಭಗಳಲ್ಲಿ ಇಲ್ಲಿ ಯಾವುದೇ ವೈದ್ಯಕೀಯ ನೆರವು, ಆಸ್ಪತ್ರೆ ಲಭ್ಯವಿಲ್ಲ. ನಮಗೆ ಅಭಿವೃದ್ಧಿಯ ಅವಶ್ಯಕತೆ ಇದೆ. ಅಭಿವೃದ್ಧಿ ಆಗಬೇಕಿದ್ದರೆ ಉಳಿದೆಲ್ಲ ಬದಲಾವಣೆಗಳನ್ನು ಒಪ್ಪಲೇಬೇಕಾಗುತ್ತದೆ.”
ಹಿಂದಿನ ತಲೆಮಾರಿನವರಿಗೆ ಮೌಲ್ಯಗಳ ನಷ್ಟ ವಿಶಾದವನ್ನುಂಟು ಮಾಡಿದರೆ ಇಂದಿನ ತಲೆಮಾರಿನವರಿಗೆ ಅದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಹಾಗೂ ಮುನ್ನಡೆಯುವ ತವಕ ಮತ್ತು ಮುಖ್ಯವಾಹಿನಿಯ ಅಭಿವೃದ್ಧಿಯ ಕಲ್ಪನೆಯಲ್ಲಿ ಒಂದಾಗುವ ನಿರೀಕ್ಷೆ ಕಂಡು ಬಂತು. ಹಿಂದಿನ ತಲೆಮಾರಿನವರಿಗೆ ತಾವು ಮೌಲ್ಯಗಳನ್ನು ಕಳೆದುಕೊಂಡು ಹಿನ್ನಡೆಯುತ್ತಿದ್ದೇವೆ ಎನಿಸಿದರೆ ಇಂದಿನ ತಲೆಮಾರಿಗೆ ಮುಖ್ಯ ಭೂಮಿಯಂತೆಯೇ ದ್ವೀಪವನ್ನು ಬೆಳೆಸಬೇಕೆಂಬ ಹಂಬಲ. ನಾಗರಿಕ ಸಮಾಜದ ಅಭಿವೃದ್ಧಿಯ ವ್ಯಾಖ್ಯಾನ, ಕಲ್ಪನೆಗಳನ್ನು ಪ್ರಶ್ನಾರ್ಥಕವಾಗಿಸುವುದರೊಂದಿಗೆ ಈ ದ್ವೀಪವು ಸಮನ್ವಯತೆ , ಮಾನವತೆ ಎಂಬ ಮೌಲ್ಯಗಳ ರೂಪಕವಾಗಿದ್ದ ಸಮುದಾಯದ ಹುಟ್ಟು ಹಾಗೂ ಬೆಳವಣಿಗೆಯನ್ನು ಕಂಡುಕೊಳ್ಳುವಂತೆ ಮಾಡಿತು. ಹಲವು ದೃಷ್ಟಿಕೋನಗಳಿಂದ ದ್ವೀಪಸಮಾಜವನ್ನು ನಾವು ಗ್ರಹಿಸಬಹುದು. ನಾನು ಹೇಳಿರುವುದು ಆಂಶಿಕ ಹಾಗೂ ಅಲ್ಪ. ಮನುಕುಲವನ್ನು ಅರ್ಥೈಸಿಕೊಳ್ಳಬೇಕೆನಿಸುವವರಿಗೆ ಬೇರೆ ಬೇರೆ ಕೋನಗಳಿಂದ ಅಧ್ಯಯನ ಮಾಡಲು ಇಲ್ಲಿ ಸಾಕಷ್ಟು ಅವಕಾಶವಿದೆ. ಇಲ್ಲಿನ ಪ್ರಕೃತಿ ಎಷ್ಟು ಆಹ್ಲಾದಕರವೋ ಇಲ್ಲಿನ ಜನರು ಅಷ್ಟೇ ಆತ್ಮೀಯರು. ಬಹುಶಃ ಪ್ರವಾಸಿಗರಾದ ನಮ್ಮ ಕರ್ತವ್ಯ ಇನ್ನಷ್ಟು ಕುಟಿಲತೆ, ಸುಳ್ಳು ಹೇಳುವ ಕಲೆಯನ್ನು ಅವರಿಗೆ ಕಲಿಸದಿರುವುದು . ಅವರ ಸ್ವಾಭಾವಿಕ ಬೆಳವಣಿಗೆಯನ್ನ ಮೆಚ್ಚಿಕೊಳ್ಳುವುದು. ಕಾಡುಜನರೆಂಬ ಅಸ್ಮಿತೆ ಹೊತ್ತ ಮೂಲ ನಿವಾಸಿಗಳು, ಬದಲಾವಣೆ ಅಭಿವೃದ್ಧಿಯನ್ನು ಬಯಸುವ ಹೊಸ ತಲೆಮಾರಿನವರು ಮೂಡಿಸಿದ ಪ್ರಶ್ನೆ- ಅಭಿವೃದ್ಧಿ ಆನ್ನುವುದು ಆರ್ಥಿಕ ಬೆಳವಣಿಗೆ ಹಾಗೂ ಮೌಲ್ಯ ಪಥನವೇ ಆಗಿರುತ್ತದೆಯೇ?
ರಾಜಲಕ್ಷ್ಮಿ ಎನ್ ಕೆ.
ನಿವೃತ್ತ ಉಪನ್ಯಾಸಕಿ
ಓದಿ :
ಅಂಡಮಾನ್ ಡೈರಿ -1 ಉಸುಕಿನಲ್ಲಿ ಊರಿದ ಹೆಜ್ಜೆಗಳು
ಅಂಡಮಾನ್ ಡೈರಿ –2 ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು
ಅಂಡಮಾನ್ ಡೈರಿ – 3 – ಅಂಡಮಾನ್ ಡೈರಿ 3 | ಇಬ್ಬದಿಯ ಕೀಲು ಇಂತಿಪ್ಪ ಬಾಳು