ಪರಿಚಯದ ಸಮಾಜ ಸೇವಕಿಯೊಬ್ಬರು ಸರಕಾರದ ಮದ್ಯದಂಗಡಿ ಆರಂಭದ ಕ್ರಮದ ಕುರಿತು ಹಳ್ಳಿಯ ಹೆಣ್ಣುಮಗಳೊಬ್ಬಳಲ್ಲಿ ವಿಚಾರಿಸಿದಾಗ ಅವಳು ಹಂಚಿಕೊಂಡ ಕಳಕಳಿ ಇಷ್ಟೇ- ‘ಸರಕಾರ ಕೊಡುವ ಯಾವುದಾದರೂ ಉಚಿತವನ್ನು ಹಿಂತೆಗೆದುಕೊಂಡರೂ ಪರವಾಗಿಲ್ಲ, ಮದ್ಯದಂಗಡಿ ತೆರೆದು ನಮ್ಮ ಬದುಕನ್ನು ಮಾತ್ರ ಸರಕಾರ ನಾಶ ಮಾಡದಿರಲಿ.’ – ಡಾ. ಜ್ಯೋತಿ, ಸಹಾಯಕ ಪ್ರಾಧ್ಯಾಪಕರು. ತುಮಕೂರು ವಿ.ವಿ
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಅಸಂಖ್ಯಾತ ಬಡ ಕುಟುಂಬಗಳ ಹೆಣ್ಣುಮಕ್ಕಳ ಬದುಕಿಗೆ ಹೊಸ ಭರವಸೆ ನೀಡಿ ಅವರ ಮನಗೆದ್ದ ಕರ್ನಾಟಕ ಸರಕಾರ, ಇದೀಗ ಮಹಿಳೆಯರಿಗೆ ಸಂಬಂಧಿಸಿದಂತೆ ಒಂದು ಆಘಾತಕಾರಿ ನಿರ್ಣಯವನ್ನು ಅನುಷ್ಠಾನಗೊಳಿಸುತ್ತಿದೆ. ಅದೆಂದರೆ, ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಮದ್ಯದಂಗಡಿಗಳನ್ನು ಆರಂಭಿಸಲು, ಅಬಕಾರಿ ಇಲಾಖೆ ಮುಂದಾಗಿದೆ. ಅಧಿಕ ವರಮಾನ ಸಂಗ್ರಹವಷ್ಟೇ ಗುರಿಯಾಗಿರುವ ಈ ಕ್ರಮದಲ್ಲಿ, ಇಲ್ಲಿಯವರೆಗೆ ಮದ್ಯದಂಗಡಿಗಳೇ ಇಲ್ಲದ 600ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕನಿಷ್ಠ ಒಂದಾದರೂ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡುವ ಪ್ರಸ್ತಾಪವಿದೆ. ಇದಲ್ಲದೆ, ಹೆದ್ದಾರಿಗಳು ಹಾದು ಹೋಗುವ ಪ್ರದೇಶಗಳು ಮತ್ತು ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡಲಾಗುತ್ತದೆ.
ಈ ನಿಟ್ಟಿನಲ್ಲಿ, ಮದ್ಯ ಮಾರಾಟವು ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತರಬಲ್ಲ ಉತ್ತಮ ಆರ್ಥಿಕ ಮೂಲ ಮತ್ತು ಪ್ರಸಕ್ತ ಜಾರಿಗೆ ತಂದಿರುವ ಗ್ಯಾರಂಟಿಗಳ ಸೂಕ್ತ ಅನುಷ್ಠಾನಕ್ಕಾಗಿ ಈ ಕ್ರಮ ಅಗತ್ಯವೆಂದು ಸರಕಾರವು ಹೇಳಬಹುದು. ಅಥವಾ ಕುಡಿಯುವುದನ್ನು ಅಧಿಕೃತವಾಗಿ ಮುಕ್ತವಾಗಿಸುವ ಮೂಲಕ, ರಾಜ್ಯ ಆಧುನಿಕತೆಯ ‘ಅಭಿವೃದ್ಧಿ’ ಪಥದಲ್ಲಿದೆ ಎನ್ನಲೂ ಬಹುದು. ಸಾಮಾನ್ಯವಾಗಿ, ಮದ್ಯಪಾನ ಮಾಡುವವರಲ್ಲಿ ಗಂಡಸರೇ ಹೆಚ್ಚಿದ್ದರೂ, ಅದರ ದುಷ್ಪರಿಣಾಮ ಅನುಭವಿಸುವವರಲ್ಲಿ ಹೆಂಗಸರೇ ಹೆಚ್ಚು. ಹಾಗಿದ್ದಲ್ಲಿ, ಗಂಡಸರು ಮಾಡುವ ಮದ್ಯಪಾನದಿಂದ, ಹೆಂಗಸರು ಅನುಭವಿಸುವ ಕಷ್ಟನಷ್ಟಗಳೇನು?
ಇಂದಿಗೂ, ನಮ್ಮ ದೇಶದ ಕೆಳವರ್ಗಗಳಲ್ಲಿ ಮನೆಗಳ ಆರ್ಥಿಕ ನಿರ್ವಹಣೆಯಾಗುವುದು ಹೆಣ್ಣು ಮಕ್ಕಳ ಅವಿರತ ಶ್ರಮದ ದುಡಿಮೆಯಿಂದಲೇ. ಅಂದರೆ, ಮಹಿಳೆಯರು ಹೊರಗೆ ದುಡಿದು ಮನೆ ನಿರ್ವಹಣೆ ಮತ್ತು ಮಕ್ಕಳ ಪೋಷಣೆ ನಿರ್ವಹಿಸಿದರೆ, ಅವರ ಗಂಡಂದಿರ ಆದಾಯ ಸಾಮಾನ್ಯವಾಗಿ ಕುಡಿತಕ್ಕೆ ಬಲಿಯಾಗುತ್ತದೆ. ಗಂಡಸರ ಇಂತಹ ಪ್ರವೃತ್ತಿಗೆ, ಮದ್ಯದಂಗಡಿಗಳ ಹೆಚ್ಚಳ ಇನ್ನಷ್ಟು ಪುಷ್ಟಿ ಕೊಡುತ್ತದೆ. ಇತ್ತೀಚೆಗೆ, ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತು, ಜಿಗುಪ್ಸೆಯಿಂದ ತಾವೂ ಮದ್ಯವ್ಯಸನಿಗಳಾಗುತ್ತಿರುವ ಹೆಂಗಸರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತದೆ. ಇದರಿಂದ, ಸಂಸಾರಗಳು ಬೀದಿ ಪಾಲಾಗುತ್ತಿವೆ.
ಮದ್ಯವೆನ್ನುವುದು, ಮನುಷ್ಯ ದೇಹಕ್ಕೆ ಅಗತ್ಯದ ಪಾನೀಯ ಅಲ್ಲ, ಬದಲಾಗಿ, ಅದೊಂದು ದುರ್ವ್ಯಸನ. ಆದರೆ, ಇದನ್ನು ಆಕರ್ಷಣೀಯವಾಗಿ ಜನರ ಮುಂದಿಡಲು ಆಲ್ಕೋಹಾಲ್ ತಯಾರಿಸುವ ಬೃಹತ್ ಉದ್ಯಮಗಳು ಸಾಕಷ್ಟು ಶ್ರಮ ವಹಿಸುತ್ತವೆ. ಇದರ ಫಲವಾಗಿ ಇಂದು, ಮದ್ಯಪಾನವೆನ್ನುವುದು ಶ್ರೀಮಂತಿಕೆಯ ಸಂಕೇತ, ಆಧುನಿಕತೆಯ ಪ್ರತಿಬಿಂಬ, ಮತ್ತು ವ್ಯಕಿತ್ವಕ್ಕೆ ಘನತೆ ಕೊಡುವ ಹವ್ಯಾಸವೆನ್ನುವಂತೆ ಕಂಡರೆ ಆಶ್ಚರ್ಯವಿಲ್ಲ.
ಈ ನಡುವೆ, ಮದ್ಯಪಾನದಿಂದಾಗಿ ಅಸಂಖ್ಯಾತ ಬಡ ಸಂಸಾರಗಳು ಬೀದಿಗೆ ಬಂದಿರುವುದರಿಂದ, ಮಹಿಳೆಯರೇ ಜೊತೆಗೂಡಿ ಸಾಮೂಹಿಕ ಹೋರಾಟದ ಮೂಲಕ ಮದ್ಯದಂಗಡಿಗಳನ್ನು ಮುಚ್ಚಿಸಿದ ಘಟನೆಗಳು ನಮ್ಮ ಮುಂದೆ ಸಾಕಷ್ಟಿವೆ. ಹಾಗಾಗಿ, ಮದ್ಯದಂಗಡಿಗಳು ಇಲ್ಲದ ಊರುಗಳೆಂದರೆ ಆದರ್ಶ ಗ್ರಾಮಗಳೆನ್ನಬಹುದು. ಇಂತಹುದರಲ್ಲಿ, ಮದ್ಯದಂಗಡಿಗಳೇ ಇಲ್ಲದ 600 ಗ್ರಾಮಗಳಲ್ಲಿ ಹೊಸದಾಗಿ ಸ್ಥಾಪಿಸುವುದರ ಮೂಲಕ ಕುಡಿತ ಶ್ರೇಷ್ಠ, ಇದನ್ನು ಕರ್ನಾಟಕದಲ್ಲಿ ಜನಪ್ರಿಯ ಉದ್ಯಮವಾಗಿಸುವ ಅಗತ್ಯವಿದೆ ಎನ್ನುವ ಸಂದೇಶ ನೀಡುವ ಮೂಲಕ ಘನ ಸರಕಾರ ಕರುನಾಡನ್ನು ಕುಡುಕರ ನಾಡನ್ನಾಗಿಸುವ ಪ್ರಯತ್ನದಲ್ಲಿದೆಯೇ?
ಹಾಗೆಯೆ, ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವುದರಿಂದ, ಕುಡಿದ ಅಮಲಲ್ಲಿ ವಾಹನ ಚಲಾಯಿಸಿ ಆಗುವ ಅಪಘಾತಗಳು ಹೆಚ್ಚಾಗಲಿದವೆ. ಇದರಿಂದಾಗಿ, ಕುಡಿದ ವಾಹನ ಚಾಲಕರು ಮಾತ್ರವಲ್ಲ, ಕುಡಿದು ವಾಹನ ಚಲಾಯಿಸುವವರೊಂದಿಗೆ ಪಯಣಿಸುವವರು ಮತ್ತು ಎದುರಿಗೆ ಸಿಗುವ ಅಮಾಯಕ ದಾರಿಹೋಕರು ಮತ್ತು ಅನ್ಯ ವಾಹನಗಳಲ್ಲಿ ಪಯಣಿಸುವವರು, ಹೀಗೆ ಎಲ್ಲರ ಜೀವಕ್ಕೆ ಸಂಚಕಾರವಾಗುತ್ತದೆ.
ಹೀಗೆ, ಮದ್ಯ ಸೇವನೆಯಿಂದಾಗಿ ಗಂಡನ ಸಂಪಾದನೆ ಕೌಟುಂಬಿಕ ಜೀವನ ನಿರ್ವಹಣೆಗೆ ಸಿಗದಿರುವುದು ಮಾತ್ರವಲ್ಲ, ಹೆಂಗಸರು ನಾನಾ ರೀತಿಯ ಲೈಂಗಿಕ ದೌರ್ಜನ್ಯಕ್ಕೂ ತುತ್ತಾಗುತ್ತಾರೆ. ಸಾಮಾನ್ಯ ಅನಿಸಿಕೆಯಂತೆ, ಮದ್ಯ ಸೇವನೆ ಮತ್ತು ಕಾಮೋದ್ರೇಕ ಒಂದಕ್ಕೊಂದು ಪೂರಕವಾಗಿರುವುದರಿಂದ, ನಶೆಯ ಅಮಲಲ್ಲಿ, ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಹೆಣ್ಣುಮಕ್ಕಳಿಗೆ ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಲೈಂಗಿಕ ಶೋಷಣೆಗಳು ಹೆಚ್ಚಾಗಲಿವೆ.
ಕುಡಿತದ ಚಟ, ವ್ಯಕ್ತಿಯನ್ನು ಇನ್ನಷ್ಟು ಕುಡಿಯುವಂತೆ ಪ್ರೇರೇಪಿಸುತ್ತದೆ. ಇದರಿಂದಾಗುವ ಆರ್ಥಿಕ ದಾರಿದ್ರ್ಯದಿಂದಾಗಿ, ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಮತ್ತು ಮನೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯವೂ ಹೆಚ್ಚುತ್ತವೆ.
2018ರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಪ್ರತಿವರ್ಷ ಭಾರತದಲ್ಲಿ ಸುಮಾರು 2.6 ಲಕ್ಷ ಜನರು ಮದ್ಯಸೇವನೆಯಿಂದ ಆಗುವ ರಸ್ತೆ ಅಪಘಾತಗಳು ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುತ್ತಿದ್ದಾರೆ.
ಅಂತೂ, ಸರಕಾರ ರಾಜ್ಯವನ್ನು ಕುಡುಕರ ಸಾಮ್ರಾಜ್ಯವಾಗಿಸುವ ಗ್ಯಾರಂಟಿ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡದೆಯೇ ಜಾರಿಗೆ ತರುತ್ತಿದೆ. ಸರಕಾರದ ಜನಪರ ಯೋಜನೆಗಳಿಗೆ, ವಿವಿಧ ಆರ್ಥಿಕ ಮೂಲಗಳ ಹುಡುಕಾಟ ಅನಿವಾರ್ಯ ನಿಜ. ಆದರೆ, ಅದು ಜನರನ್ನು ಮದ್ಯವ್ಯಸನಿಗಳಾಗಿಸುವುದರ ಮೂಲಕ ಅಲ್ಲ. ಯಾಕೆಂದರೆ, ಸಾವಿರಾರು ಮದ್ಯದಂಗಡಿಗಳನ್ನು ತೆರೆಯುತ್ತಿರುವುದು ವರಮಾನ ಸಂಗ್ರಹಕ್ಕೆಂದಾದರೆ, ಒಂದು ವೇಳೆ ಜನರು ಜಾಗ್ರತರಾಗಿ ಮದ್ಯಸೇವನೆ ಹೆಚ್ಚಿಸಿಕೊಳ್ಳದಿದ್ದರೆ, ಆಗ ಸರಕಾರ, ಅವರನ್ನು ಮದ್ಯದಂಗಡಿ ಪ್ರವೇಶಿಸುವಂತೆ ಹೊಸ ಆಕರ್ಷಣೀಯ ಮಾರ್ಗಸೂಚಿಗಳನ್ನು ಅಳವಡಿಸಲಿದೆಯೇ? ಒಂದು ಕೈಯಲ್ಲಿ ಸ್ವಲ್ಪ ಸೌಲಭ್ಯ ಹಂಚಿ, ಇನ್ನೊಂದು ಕೈಯ್ಯಲ್ಲಿ ಮದ್ಯದಂಗಡಿಯ ಮೂಲಕ ಅದಕ್ಕಿಂತ ಹೆಚ್ಚಿನ ಆದಾಯ ಕಿತ್ತುಕೊಳ್ಳುವುದಲ್ಲದೆ, ಜನರ ಆರೋಗ್ಯ ಮತ್ತು ಕೌಟುಂಬಿಕ ಜೀವನದೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ, ಎನ್ನುವುದಂತೂ ಸತ್ಯ.
ಡಾ. ಜ್ಯೋತಿ
ಇಂಗ್ಲಿಷ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿರುವ ಇವರು ಪ್ರಸಕ್ತ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೈಚಾರಿಕ ಲೇಖನಗಳು, ಸಣ್ಣ ಕಥೆಗಳು, ವಿಮರ್ಶಾ ಬರಹಗಳು ಮತ್ತು ಅನುವಾದಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.