ಚಾಮುಂಡಿ, ಮಹಿಷ, ದಸರಾ ಇತ್ಯಾದಿಗೆ ಸಂಬಂಧಿಸಿದಂತೆ ನಿಡುಗಾಲದಿಂದ ಒಂದು ಕಥನ ಚಾಲ್ತಿಯಲ್ಲಿದೆ. ಅಲ್ಲಿ ಮಹಿಷ ದುಷ್ಟ ರಾಕ್ಷಸನಾಗಿ ಬಿಂಬಿತನಾಗುತ್ತಾನೆ. ಆದರೆ ಬದಲಾದ ಚಿಂತನೆಯ ಮತ್ತು ಜಾಗೃತಿಯ ಕಾಲಘಟ್ಟದಲ್ಲಿ ಈ ಪೂರ್ವಗ್ರಹ ಪೀಡಿತ ಎನ್ನಲಾದ ಕಥನಗಳನ್ನು ಮರುಚಿಂತನೆಗೊಳಪಡಿಸುವ ಕೆಲಸ ನಡೆಯುತ್ತಿದೆ. ಇದರ ಭಾಗವಾಗಿಯೇ ಮಹಿಷ ದಸರಾ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕರ್ಮಠ ಮನಸುಗಳು ಹೊಸ ಮತ್ತು ಭಿನ್ನ ಸತ್ಯ ಸ್ವೀಕರಿಸಲು ಸಿದ್ಧರಿಲ್ಲ. ಇದೇ ಕಾರಣದಿಂದ, ಮಹಿಷ ದಸರಾ ತಪ್ಪು ಅದನ್ನು ನಡೆಯಲು ಬಿಡುವುದಿಲ್ಲ ಎಂದು ಒಂದು ವರ್ಗ ಬೆದರಿಕೆ ಹಾಕುತ್ತಿದೆ. ಈ ಬಾರಿಯ ಮಹಿಷ ದಸರಾಗೂ ಅಂಥದೇ ಸವಾಲು ಹಾಕಲಾಯಿತು. ಆದರೆ ಈ ಎಲ್ಲ ವಾದ ವಿವಾದಗಳ ನಡುವೆಯೂ ಮೈಸೂರಿನಲ್ಲಿ ಮಹಿಷ ದಸರಾ ಅರ್ಥಪೂರ್ಣವಾಗಿ ನಡೆದಿದೆ. ಈ ಹೊತ್ತು, ರಘೋತ್ತಮ ಹೊ.ಬ ಅವರು ಅಂಬೇಡ್ಕರ್ ಚಿಂತನೆಗಳ ಹಿನ್ನೆಲೆಯಲ್ಲಿ ಮಹಿಷಾಸುರನನ್ನು ಈ ಲೇಖನದಲ್ಲಿ ವಿಶೇಷವಾಗಿ ಪರಿಚಯಿಸಿದ್ದಾರೆ.
ಮಹಿಷಾಸುರ, ಮೊದಲಿಗೆ ಅಸುರ ಎಂಬ ಪದದ ಬಗ್ಗೆ ತಿಳಿಯೋಣ. “ಮಹಿಷಾಸುರ” ಪದದಲ್ಲಿ “ಅಸುರ” ಎಂಬ ಪದ ಬರುತ್ತದೆ. ಹಾಗಿದ್ದರೆ ಅಸುರ ಎಂದರೆ ಏನು? ಅದಕ್ಕು ಮೊದಲು ಇತಿಹಾಸಕ್ಕೂ ಈ ಪದಕ್ಕೂ ಇರುವ ಲಿಂಕ್ ಅನ್ನು ನಾವು ತಿಳಿದುಕೊಳ್ಳುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಡಾ.ಅಂಬೇಡ್ಕರ್ ಅವರ ಎರಡು ಹೇಳಿಕೆಗಳನ್ನು ಗಮನಿಸಬೇಕಾಗುತ್ತದೆ. ಒಂದನೆಯದು, “ಬ್ರಾಹ್ಮಣರು ಭಾರತದ ಇತಿಹಾಸವನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಕಥೆಯನ್ನಾಗಿ ಮಾಡಿದ್ದಾರೆ”. ಮತ್ತೊಂದು, “ಭಾರತದ ಇತಿಹಾಸವು ಬೌದ್ಧ ಧರ್ಮಕ್ಕೂ ಮತ್ತು ಬ್ರಾಹ್ಮಣ ಧರ್ಮಕ್ಕೂ ನಡೆದಿರುವ ಮಾರಕ ಕಾಳಗ”. ಅಂಬೇಡ್ಕರರ ಈ ಎರಡು ಹೇಳಿಕೆಗಳನ್ನು ಒಟ್ಟಿಗೆ ಇಟ್ಟು ನಾವು ಅಸುರ, ಮಹಿಷಾಸುರ, ಮತ್ತು ಚಾಮುಂಡಿ ವಿಷಯಗಳನ್ನು ಇಲ್ಲಿ ಚರ್ಚಿಸುವುದು ಅಗತ್ಯ.
ಅಸುರರು, ಎಲ್ಲರೂ ಅಸುರರು ಎಂದರೆ ಅವರು ವಿಕಾರ ಆಕಾರ ಹೊಂದಿರುತ್ತಾರೆ, ಅವರು ಬೆಟ್ಟದಷ್ಟು ಎತ್ತರ ಹೊಂದಿರುತ್ತಾರೆ, ವಿಚಿತ್ರ ರೂಪ ಹೊಂದಿರುತ್ತಾರೆ, ನಿಜ ಹೇಳಬೇಕೆಂದರೆ ಅವರು ಮನುಷ್ಯರೇ ಅಲ್ಲ (ಅಮಾನವರು) ಎಂದು ಕಲ್ಪಿಸಿಕೊಳ್ಳುತ್ತಾರೆ ಅಥವಾ ಕಲ್ಪನೆಯಾಗುತ್ತಾರೆ. ಹಾಗೆ ಬರೆಯಲಾಗಿದೆ ಕೂಡ ಪುರಾಣಗಳಲ್ಲಿ. ( ಬಾಬಾಸಾಹೇಬ್ ಅಂಬೇಡ್ಕರ್ “ಪುರಾಣಗಳನ್ನು ಅತಿಶಯೋಕ್ತಿಗೊಳಿಸಲ್ಪಟ್ಟ ಇತಿಹಾಸ” ಎನ್ನುತ್ತಾರೆ!) ಆದರೆ ಅಂಬೇಡ್ಕರರು “ಅಸುರರು ಎಂದರೆ ಅವರು ರಾಕ್ಷಸರಲ್ಲ, ಅಮಾನವರಲ್ಲ. ಅವರು ಕೂಡ ಸಾಮಾನ್ಯ ಮನುಷ್ಯರು. ಸೃಷ್ಟಿಕರ್ತ ಪ್ರಜಾಪತಿಯ ವಂಶಜರು. ಅವರು ಹೇಗೆ ಕೆಟ್ಟ ಶಕ್ತಿಯಾದರು ಎಂಬುದು ಗೊತ್ತಿಲ್ಲ. ಆದರೆ ಅವರು “ದೇವ” ಎಂಬ ಜನಾಂಗದ ವಿರುದ್ಧ ಈ ಪ್ರಪಂಚದ ಹಕ್ಕಿಗಾಗಿ ಹೋರಾಡಿದರು. ಆದರೆ ಆ “ದೇವ” ಎಂಬ ಆ ಜನಾಂಗಕ್ಕೆ ಸೋತರು” ಎನ್ನುತ್ತಾರೆ. (ಡಾ. ಅಂಬೇಡ್ಕರ್ ಬರಹಗಳು ಇಂಗ್ಲಿಷ್, ಸಂ.3, ಪು 152).
ಮುಂದುವರಿದು ಅಂಬೇಡ್ಕರರು “ವೇದಗಳಲ್ಲು ಅಸುರರ ಉಲ್ಲೇಖ ಬರುತ್ತದೆ. ಅದರಲ್ಲು ಋಗ್ವೇದದ ಶ್ಲೋಕಗಳಲ್ಲಿ ಅಸುರರ ಉಲ್ಲೇಖ ಬರುತ್ತದೆ. ಈ ನಿಟ್ಟಿನಲ್ಲಿ ಋಗ್ವೇದದ ಬಹುತೇಕ ಶ್ಲೋಕಗಳು ಆರ್ಯ ಜನಾಂಗದ ಇಂದ್ರ ಅಸುರರನ್ನು ಕೊಂದಿರುವುದಕ್ಕಾಗಿ, ಅವರ ಗ್ರಾಮಗಳನ್ನು ನಾಶಪಡಿಸಿರುವುದಕ್ಕಾಗಿ ಆತನನ್ನು ಹೊಗಳಿರುವ ಮಂತ್ರಗಳಾಗಿವೆ ಅಥವಾ ಶ್ಲೋಕಗಳಾಗಿವೆ” ಎನ್ನುತ್ತಾರೆ ಅಂಬೇಡ್ಕರ್. (ಅದೇ ಕೃತಿ, ಪು 176). ಈ ಹಿನ್ನೆಲೆಯಲ್ಲಿ ಯಾಕೆ ನಾವು ಇಲ್ಲಿ “ಅಸುರ” ಈ ವಿಷಯವನ್ನು ಚರ್ಚಿಸುತ್ತೇವೆ ಎಂದರೆ “ಮಹಿಷಾಸುರ” ಕೂಡ ಒಬ್ಬ ಅಸುರ. ಅಂದಹಾಗೆ ಆಶ್ಚರ್ಯ ಎಂದರೆ ಮಹಿಷಾಸುರನ ಈ ಚರ್ಚೆಯ ಹಿನ್ನೆಲೆಯಲ್ಲಿ ಮಹಿಷಮರ್ದಿನಿ (ಚಾಮುಂಡೇಶ್ವರಿ) ಕೂಡ ಅಂಬೇಡ್ಕರ್ ಅವರ ಬರಹಗಳಲ್ಲಿ ಕಂಡುಬರುತ್ತಾಳೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ “ರಿಡಲ್ಸ್ ಇನ್ ಹಿಂದೂಯಿಸಂ” (ಹಿಂದೂ ಧರ್ಮದ ಒಗಟುಗಳು) ಕೃತಿಯಲ್ಲಿ ಈ ಮಾಹಿತಿ ಸಿಗುತ್ತದೆ. ಅಂಬೇಡ್ಕರರ “ಹಿಂದೂ ಧರ್ಮದ ಒಗಟುಗಳು” ಕೃತಿಯಲ್ಲಿ ಸಂಬಂಧಿಸಿದ ಆ ಮಾಹಿತಿ ಸಿಗುವ ಅಧ್ಯಾಯದ ಹೆಸರು “ಬ್ರಾಹ್ಮಣರೇಕೆ ದೇವರುಗಳನ್ನು ಕೆಳಗಿಳಿಸಿದರು? ದೇವತೆಗಳನ್ನೇಕೆ ಮೇಲಕ್ಕೇರಿಸಿದರು?” ಎಂಬುದು!
ದೇವತೆಗಳು ಎಂದಾಕ್ಷಣ ಡಾ.ಅಂಬೇಡ್ಕರ್ ರವರು ತಮ್ಮ ಆ ಕೃತಿಯಲ್ಲಿ ಎರಡು ಬಗೆಯ ದೇವತೆಗಳನ್ನು ಹೇಳುತ್ತಾರೆ. 1.ವೇದಗಳ ಕಾಲದ ದೇವತೆಗಳು 2.ಪುರಾಣ ಕಾಲದ ದೇವತೆಗಳು. ನಮ್ಮ ಚಾಮುಂಡೇಶ್ವರಿ ಅಥವಾ ಡಾ. ಅಂಬೇಡ್ಕರ್ ಅವರು ಉಲ್ಲೇಖಿಸುವ ಮಹಿಷಾಸುರಮರ್ದಿನಿ ಎರಡನೇ ಪಟ್ಟಿಯಲ್ಲಿ ಅಂದರೆ ಪುರಾಣಗಳ ಕಾಲದ ದೇವತೆಗಳ ಪಟ್ಟಿಯಲ್ಲಿ ಬರುತ್ತಾಳೆ. ದೇವಿ, ಉಮಾ, ಚಂಡಿ, ದುರ್ಗಾ… ಹೀಗೆ ದೇವತೆಗಳ ಆ ದೀರ್ಘ ಪಟ್ಟಿಯಲ್ಲಿ ಅಂಬೇಡ್ಕರರು ಮಹಿಷಾಸುರ ಮರ್ದಿನಿ ಎಂಬ ಉಲ್ಲೇಖ ಮಾಡುತ್ತಾರೆ. ( ರಿಡಲ್ಸ್ ಇನ್ ಹಿಂದೂಯಿಸಂ, ಪು 100). ಮುಂದುವರಿದು ಚಾಮುಂಡೇಶ್ವರಿ ಅಥವಾ ಮಹಿಷಾಸುರ ಮರ್ದಿನಿ ಬಗ್ಗೆ ಅದೇ ಕೃತಿಯ ಮುಂದಿನ ಪುಟಗಳಲ್ಲಿ ಕಂಡುಬರುವ ಅಂಶ “ಓ ಜಯ, ಕೃಷ್ಣನ ಕಿರಿಯ ಸಹೋದರಿ ಮಹಿಷಾಸುರನ ರಕ್ತಕ್ಕೆ ಹಪಹಪಿಸುತ್ತಿರುವವಳು” ಎಂದು. ಈ ನಿಟ್ಟಿನಲ್ಲಿ ಮಹಿಷಾಸುರ ಮರ್ದಿನಿ ದುರ್ಗೆಯ ವಿವಿಧ ರೂಪಗಳಲ್ಲಿ ಒಂದು ಅಥವಾ ದುರ್ಗೆಯ ಅನೇಕ ಹೆಸರುಗಳಲ್ಲಿ ಅದು ಕೂಡ ಒಂದು ಎಂದು ಡಾ.ಅಂಬೇಡ್ಕರರು ಹೇಳುತ್ತಾರೆ.
ಹಾಗಿದ್ದರೆ ಮಹಿಷಾಸುರ ಮರ್ದಿನಿಗೆ (ಚಾಮುಂಡೇಶ್ವರಿ) ಯಾಕೆ ಪೂಜೆ ಸಲ್ಲುತ್ತದೆ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಉತ್ತರ, ಮೊದಲೇ ಹೇಳಿದಂಗೆ ಎರಡು ಬಗೆಯ ದೇವತೆಗಳು! ಅದರಲ್ಲೂ ವೇದಗಳ ಕಾಲದ ದೇವತೆಗಳು( ಲಕ್ಷ್ಮಿ, ಸರಸ್ವತಿ…) ಅಸುರರ ವಿರುದ್ಧ ಯುದ್ಧ ಮಾಡಿಲ್ಲ, ದೇವರುಗಳೇ ಆ ಯುದ್ಧ ಮಾಡಿದ್ದಾರೆ. ಆದರೆ ಪುರಾಣ ಕಾಲದ ದೇವತೆಗಳು ನೇರ ಅಸುರರ ವಿರುದ್ಧ ಯುದ್ಧ ಮಾಡಿವೆ. ಆ ಕಾರಣಕ್ಕೆ ಪುರಾಣದ ದೇವತೆಗಳಿಗೆ ಅದು ದುರ್ಗೆ ಇರಬಹುದು ಮಹಿಷಾಸುರ ಮರ್ದಿನಿ (ಚಾಮುಂಡೇಶ್ವರಿ) ಇರಬಹುದು ನೇರ ಪೂಜೆ ಸಲ್ಲುತ್ತದೆ.
ಈ ನಿಟ್ಟಿನಲ್ಲಿ ಇದು ದೇವತೆ ಅಥವಾ ಮಹಿಷಾಸುರ ಮರ್ದಿನಿ (ಚಾಮುಂಡೇಶ್ವರಿ) ಯ ಕತೆಯಾಯಿತು. ಆದರೆ ಮಹಿಷನ ಕಥೆ? ಅಂಬೇಡ್ಕರ ಕೃತಿಯಲ್ಲಿ ಎಲ್ಲಿ ಕಂಡು ಬರುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೌದು, ಅದು ಕೂಡ ಕಂಡುಬರುತ್ತದೆ. ಅದೇ ಕೃತಿಯ ನಂತರದ ಪುಟದಲ್ಲಿ (ಪು. 107) ಮಹಿಷನ ಮಾಹಿತಿ ಸಿಗುತ್ತದೆ. ಮಾರ್ಕಂಡೇಯ ಪುರಾಣ ಉಲ್ಲೇಖಿಸಿ ಡಾ.ಅಂಬೇಡ್ಕರರು ದಾಖಲಿಸಿರುವ ಮಹಿಷನ ಕುರಿತ ಮಾಹಿತಿಯನ್ನು ಸರಳೀಕರಿಸಿ ಹೇಳುವುದಾದರೆ “ರಾಕ್ಷಸರ ದೊರೆಯಾದ ಮಹಿಷ ಒಮ್ಮೆ ಒಂದು ಯುದ್ಧದಲ್ಲಿ ದೇವರುಗಳನ್ನು ಭೀಕರವಾಗಿ ಸೋಲಿಸುತ್ತಾನೆ. ಯಾವ ಮಟ್ಟಕ್ಕೆ ಅಥವಾ ಯಾವ ಸ್ಥಿತಿಗೆ ಎಂದರೆ ಎಲ್ಲವನ್ನು ಕಳೆದುಕೊಳ್ಳುವ ದೇವರುಗಳು ಭಿಕ್ಷುಕರ ರೀತಿ ಬೀದಿಯಲ್ಲಿ ಅಲೆಯುತ್ತಿರುತ್ತಾರೆ. ಆಗ ವಿಷ್ಣು ಬ್ರಹ್ಮನನ್ನು ಸಂಪರ್ಕಿಸುತ್ತಾನೆ. ನಂತರ ಶಿವನನ್ನು ಸಂಪರ್ಕಿಸುತ್ತಾನೆ. ಆದರೆ ಅವರ್ಯಾರು ನೇರ ನೆರವು ನೀಡಲು ಮುಂದೆ ಬರುವುದಿಲ್ಲ. ಕೊನೆಗೆ ವಿಷ್ಣುವಿನ ಕಣ್ಣ ಮುಂದೆ ಹೊಳೆಯುವ ತೇಜಸ್ಸಿನ ಹೆಣ್ಣೊಂದು ಹಾದುಹೋಗುತ್ತದೆ. ಆಕೆ ಹೆಸರು ಮಹಾಮಾಯ. ದುರ್ಗೆಯ ಮತ್ತೊಂದು ಹೆಸರು ಮಹಾಮಾಯ. ಆ ಮಹಾಮಾಯ ದೇವರುಗಳಿಂದ ಎಲ್ಲಾ ಶಕ್ತಿಗಳನ್ನು ತುಂಬಿಸಿಕೊಂಡು ಮಹಿಷನ ವಿರುದ್ಧ ಯುದ್ಧಕ್ಕೆ ತೆರಳುತ್ತಾಳೆ. ಯುದ್ಧದಲ್ಲಿ ಮಹಿಷನನ್ನು ಎದುರುಗೊಳ್ಳುವ ಮಹಾಮಾಯ ಭೀಕರವಾಗಿ ಕಿರುಚಿ, ಗಾಳಿಯಲ್ಲಿ ಹಾರಿ ರಾಕ್ಷಸ ಆ ಮಹಿಷನ ಕತ್ತು ಕತ್ತರಿಸುತ್ತಾಳೆ. ತನ್ಮೂಲಕ ದೇವರುಗಳ ನೆಮ್ಮದಿಗೆ ಕಾರಣಳಾಗುತ್ತಾಳೆ”.
ಇದು ಮಹಿಷಾಸುರ ಮತ್ತು ಮಹಿಷಮರ್ದಿನಿಯರ ಕಥೆ. ಈ ನಿಟ್ಟಿನಲ್ಲಿ ವರ್ತಮಾನ ಕಾಲಕ್ಕೆ ಬರುವುದಾದರೆ, ಪ್ರಸ್ತುತ ನಮ್ಮ ಮೈಸೂರಿನಲ್ಲಿ ಕಂಡುಬರುವ ಮಹಿಷಾಸುರ ಮಾರ್ಕಂಡೇಯ ಪುರಾಣ ಉಲ್ಲೇಖಿಸಿ ಡಾ.ಅಂಬೇಡ್ಕರ್ ಅವರು ಪ್ರಸ್ತಾಪಿಸಿರುವ ಮಹಿಷಾಸುರನೇ? ಎನ್ನುವುದಾದರೆ ಹೌದು ಎಂದು ನೂರಕ್ಕೆ ನೂರು ಹೇಳಲು ಆಗದು. ಆದರೆ ಡಾ.ಅಂಬೇಡ್ಕರರು “ಭಾರತದ ಇತಿಹಾಸ ಬ್ರಾಹ್ಮಣ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ನಡೆದಿರುವ ಮಾರಕ ಕಾಳಗ” ಎಂದು ಬರೆದಿರುವುದನ್ನು ಇಲ್ಲಿ ನಾವು ಮತ್ತೆ ನೆನಪಿಸಿಕೊಳ್ಳುವುದು ಸೂಕ್ತ.
ಯಾಕೆಂದರೆ ಭಾರತದ ಇತಿಹಾಸದ ಪ್ರಕಾರ ಸಾಮ್ರಾಟ ಅಶೋಕ ತನ್ನ ಆಡಳಿತದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಅನೇಕ ಭಿಕ್ಕುಗಳನ್ನು ದೇಶದ ಉದ್ದಗಲಕ್ಕೂ ಕಳುಹಿಸಿ ಕೊಡುತ್ತಾನೆ. ಅದರಲ್ಲಿ ಮಹದೇವ ಥೇರ ಎಂಬುವನನ್ನು ದಕ್ಷಿಣದ ಮಹಿಷಮಂಡಲಕ್ಕೆ ಕಳುಹಿಸುತ್ತಾನೆ. ಮಹದೇವ ಥೇರ ನಮ್ಮ ಮಲೈ ಮಹದೇಶ್ವರ ಎನ್ನುವುದಾದರೆ, ಆ ಮಲೈ ಮಹದೇಶ್ವರ ಬೆಟ್ಟ ಈಗಿನ ಅವಿಭಜಿತ ಮೈಸೂರು ಜಿಲ್ಲೆ ಅಥವಾ ಪುರಾಣದ ಪ್ರಕಾರದ ಮಹಿಷ ಮಂಡಲದಲ್ಲಿ ಬರುವುದರಿಂದ ಮತ್ತು ಅಲ್ಲಿ ಮಹುಷಮರ್ದಿನಿಯೂ (ಚಾಮುಂಡೇಶ್ವರಿ) ಇರುವುದರಿಂದ ಮಹಿಷಾಸುರನ ವಿಗ್ರಹವೂ ಇರುವುದರಿಂದ ಮಹಿಷಮಂಡಲದ ಅಂದಿನ ಅರಸು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಖಂಡಿತ, ಆತ ಮಹಿಷಾಸುರನೆ ಆಗುತ್ತಾನೆ. ಮುಂದುವರಿದು ಹಾಲಿ ಮಹಿಷಾಸುರನ ಕೈಯಲ್ಲಿ ನಾಗರಹಾವು ಇದೆ. ನಾಗರಹಾವು ಪುರಾಣ ಅಥವಾ ಅಂಬೇಡ್ಕರರು ಹೇಳುವಂತೆ ಅತಿಶಯೋಕ್ತಿಯಾಗಿ ಬಿಂಬಿಸಲ್ಪಟ್ಟ ಇತಿಹಾಸದ ಪ್ರಕಾರ “ನಾಗ” ಎಂಬ ಜನಾಂಗದ ಸಂಕೇತ. ಮತ್ತೊಂದೆಡೆ ಡಾ.ಅಂಬೇಡ್ಕರ್ ಅವರು “ನಾಗ ಜನರು ಏಷ್ಯಾ ಖಂಡದ ಬಹು ಭಾಗವನ್ನು ಆಳಿದವರು ಮತ್ತು ಅವರು ಬೌದ್ಧ ಧರ್ಮಕ್ಕೆ ಸೇರಿದ್ದರು” ಎಂದು ಹೇಳುತ್ತಾರೆ. ಈ ವಿಚಾರ ಮತ್ತು ಮಹಿಷ ಮಂಡಲಕ್ಕೆ ಸಾಮ್ರಾಟ ಅಶೋಕ ಭಿಕ್ಕು ಕಳುಹಿಸಿದ ಎಂಬ ವಿಚಾರ ಎರಡರ ಹಿನ್ನೆಲೆಯಲ್ಲಿ ಅಕ್ಷರಶಃ ಮಹಿಷಾಸುರ ಬೌದ್ಧ ದೊರೆಯಾಗುತ್ತಾನೆ. ಹಾಗೆಯೇ ಭಾರತದ ಇತಿಹಾಸ “ಬೌದ್ಧ ಧರ್ಮ ಮತ್ತು ಬ್ರಾಹ್ಮಣ ಧರ್ಮದ ನಡುವೆ ನಡೆದಿರುವ ಮಾರಕ ಕಾಳಗ” ಎಂಬ back drop ನಲ್ಲಿ ಮಹಿಷ ಮರ್ದಿನಿ ಬ್ರಾಹ್ಮಣ ಧರ್ಮದ ಪ್ರತಿನಿಧಿಯಾದರೆ ಮಹಿಶಾಸುರ ಬೌದ್ಧ ಧರ್ಮದ ಪ್ರತಿನಿಧಿಯಾಗಿರಬಹುದಲ್ಲ!
ಆದ್ದರಿಂದ ಡಾ.ಅಂಬೇಡ್ಕರರ ಭಾರತದ ಇತಿಹಾಸದ ಬೌದ್ಧ ಧರ್ಮ ವರ್ಸಸ್ ಬ್ರಾಹ್ಮಣ ಧರ್ಮ ಪರಿಕಲ್ಪನೆ ಜೊತೆಗೆ ಅವರೇ ಬಿಡಿಸಲು ಯತ್ನಿಸಿರುವ “ಹಿಂದೂ ಧರ್ಮದ ಒಗಟುಗಳು” ಕೃತಿ ಎರಡರ ಹಿನ್ನೆಲೆಯಲ್ಲಿ ಮಹಿಷಾಸುರ ಬೌದ್ಧ ದೊರೆಯಾಗಿರುವ ಸಾಧ್ಯತೆ ಇದೆ. ಅಂದಹಾಗೆ ಈ ಎರಡು ಧರ್ಮಗಳ ಅಥವಾ ತತ್ವಗಳ ನಡುವೆ ಇತಿಹಾಸದಲ್ಲಿ ನಡೆದಿರುವ ಸಂಘರ್ಷ ವರ್ತಮಾನದಲ್ಲೂ ಪುನರಾವರ್ತನೆಯಾಗುತ್ತಿದೆಯಾ? ಯಾಕೆಂದರೆ ಬಾಬಾಸಾಹೇಬ್ ಅಂಬೇಡ್ಕರರು ಬೌದ್ಧ ಧರ್ಮವನ್ನು ಕ್ರಾಂತಿ ಎಂದರೆ ಬ್ರಾಹ್ಮಣ ಧರ್ಮವನ್ನು ಪ್ರತಿಕ್ರಾಂತಿ ಎನ್ನುತ್ತಾರೆ. ಖಂಡಿತ, ವರ್ತಮಾನದ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘರ್ಷವನ್ನು ಕೂಲಂಕಶವಾಗಿ ಗಮನಿಸಿದರೆ ಅಂತಹ ಕ್ರಾಂತಿ ಮತ್ತು ಪ್ರತಿಕ್ರಾಂತಿ ಹಾಗೇ ಮುಂದುವರಿದಿದೆ ಎನ್ನಬಹುದು. ಇತಿಹಾಸ ಪುನರಾವರ್ತನೆಯಾಗುತ್ತಿದೆ History repeats ಎಂದು ನಿಸ್ಸಂಶಯವಾಗಿ ಹೇಳಬಹುದು.
ರಘೋತ್ತಮ ಹೋ.ಬ
ಹೊಸತಲೆಮಾರಿನ ಪ್ರಮುಖ ಬರಹಗಾರರು
ಇದನ್ನೂ ಓದಿ-ಮಹಿಷ ದಸರ ವಿರೋಧಿಸಿದ ಸಂಸದ ಪ್ರತಾಪ್ ಸಿಮ್ಮ ಅವರಿಗೆ ಧನ್ಯವಾದಗಳು…!!!?