ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ನದಿ ನೀರು ಸ್ನಾನಕ್ಕೆ ಮತ್ತು ಯಾವುದೇ ಸ್ವಚ್ಛತೆಯ ಉಪಯೋಗಕ್ಕೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದೆ.
ಈ ನೀರಿನಲ್ಲಿ ಪ್ರಾಣಿಗಳ ಮಲದಲ್ಲಿರುವ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುನರುನ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ನೀರು ಉಪಯೋಗಕ್ಕೆ ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುವುದರಿಂದ ಈ ನದಿ ನೀರಲ್ಲಿ ಸ್ನಾನ ಮಾಡುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದ್ದು, ಅತಿ ಹೆಚ್ಚು ಜನ ಒಂದೇ ಕಡೆ ಸ್ನಾನ ಮಾಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮಂಡಳಿ ಹೇಳಿದೆ. ಜ.12 ಮತ್ತು 13ರಂದು ಸಂಗ್ರಹಿಸಿದ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಅತ್ಯಂತ ಮಾಲಿನ್ಯದಿಂದ ಕೂಡಿದೆ ಎನ್ನಲಾಗಿದೆ.
ಕೋಲಿಫಾರ್ಮ್ ಬ್ಯಾಕ್ಟೀರಿಯಾ ಚರ್ಮರೋಗಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಕಾರಣವಾಗಬಹುದು. ಮುಂದೆ ಇದು ಮಾರಣಾಂತಿಕ ಖಾಯಿಲೆಗೂ ತುತ್ತಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ನದಿ ನೀರಿನ ಬಳಕೆಯಿಂದ ದೂರ ಇರುವುದು ಒಳಿತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದೆ.