ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು
2025 ರಲ್ಲಿ ಟ್ರೆಂಡಿಂಗ್‌ಗೆ ಬಂದಿರುವ ದೇವಸ್ಥಾನ ಮತ್ತು ಜಾತ್ರೆ ಎಂದರೆ ಉತ್ತರ ಮಲಬಾರು (ಕಣ್ಣೂರಿನ) ಕೊಟ್ಟಿಯೂರು ಶಿವ ದೇವಾಲಯ ಮತ್ತು ಅಲ್ಲಿ ನಡೆಯುವ ಕೊಟ್ಟಿಯೂರು ವೈಶಾಖ ಮಹೋತ್ಸವ. ನಾನು ಸುಮಾರು ಎರಡು ಮೂರು ವರ್ಷಗಳಿಂದ ಈ ದೇವಾಲಯ ಮತ್ತು ಜಾತ್ರೆಯ ವೀಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಆ ಊರಿನಲ್ಲಿರುವ ನನ್ನ ಸ್ನೇಹಿತನ ಜೊತೆಗೆ ಮಾತನಾಡಿದ್ದೇನೆ.
ಈ ವರ್ಷ ಆ ದೇವಾಲಯ ದಡೀರನೇ ಖ್ಯಾತಿಯನ್ನು ಪಡೆಯಿತು. ವರ್ಷಕ್ಕೊಮ್ಮೆ ಅಕ್ಕರೆ ಕೊಟ್ಟಿಯೂರು (ನದಿಯ ಆ ಭಾಗದ ಕೊಟ್ಟಿಯೂರು) ಎಂಬ ಕಾಡಿನಲ್ಲಿ ನಡೆಯುವ ವೈಶಾಖ ಮಹೋತ್ಸವಕ್ಕೆ ಈ ವರ್ಷ ಸಾವಿರ ಸಾವಿರ ಜನರು ಕರ್ನಾಟಕ, ತಮಿಳುನಾಡಿನಿಂದೆಲ್ಲಾ ದಂಡು ದಂಡಾಗಿ ಹೋಗುತ್ತಿದ್ದಾರೆ.
ನನ್ನ ಅಣ್ಣನೊಬ್ಬ ತಾನು ಆ ಜಾತ್ರೆಗೆ ಹೋಗುವುದಾಗಿ, ನನ್ನನ್ನು ಬರುವಂತೆ ಕೇಳಿಕೊಂಡ. ಆತನಿಗೆ ಈ ಜಾತ್ರೆಯ ಬಗ್ಗೆ ಫೇಸ್‌ಬುಕ್‌ನಿಂದ ಗೊತ್ತಾಗಿದ್ದು. ಫೇಸ್‌ಬುಕ್, ಇನ್ಸ್ಟಾಗ್ರಾಮಿನಲ್ಲಿ ಈ ಜಾತ್ರೆಯ ವೀಡಿಯೋಗಳು ಹರಿದಾಡುತ್ತಿವೆ. ಹಿಂದೊಮ್ಮೆ ಶಬರಿಮಲೆಗೆ ಹೋದಂತೆ, ಮಲಯಾಳಿಗಳಲ್ಲದವರೂ ಈ ಜಾತ್ರೆಗೆ ಗಾಡಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೋಗಿ ಫೋಟೋ ತೆಗಿಸಿಕೊಂಡು, ವೀಡಿಯೋ ಮಾಡಿಕೊಂಡು ಅದಕ್ಕೆ ಪ್ರಚಾರವನ್ನು ನೀಡುತ್ತಿದ್ದಾರೆ. ಯೂಟ್ಯೂಬ್ ವ್ಲಾಗರ್‌ಗಳು ಕ್ಯಾಮರಾ ಹಿಡಿದುಕೊಂಡು, ಕೇಸರಿ ತೊಟ್ಟು ಜಾತ್ರೆಗೆ ಹೋಗಿ ‘ಕಂಟೆಂಟ್ʼ ಮಾಡುತ್ತಿದ್ದಾರೆ.
ಕೊಟ್ಟಿಯೂರಿನಲ್ಲಿರುವ ನನ್ನ ಸ್ನೇಹಿತ ಅನೀಶ್ ಕೊಟ್ಟಿಯೂರು ಹೇಳುವಂತೆ, “ಕೊಟ್ಟಿಯೂರಿನ ತುಂಬಾ KL ಗಾಡಿಗಳಿಗಿಂತ KA ಗಾಡಿಗಳೇ ತುಂಬಿ ಹೋಗಿವೆ.”
ಕಣ್ಣೂರಿನ ಕೊಟ್ಟಿಯೂರು ಗ್ರಾಮದಲ್ಲಿ ಎರಡು ದೇವಾಲಯಗಳಿಗೆ, ‘ಬಾವಲಿ ನದಿ’ಯ ಈ ಕಡೆಗೆ ಇರುವ ‘ಇಕ್ಕರೆ ಕೊಟ್ಟಿಯೂರಿನ’ ಶಿವನ್ ದೇವಾಲಯ ಮತ್ತು ಅ ಕಡೆ ಇರುವ ‘ಅಕ್ಕರೆ ಕೊಟ್ಟಿಯೂರುʼ ಎಂಬ ವರ್ಷಕ್ಕೊಮ್ಮೆ ವೈಶಾಖ ಮಾಸದಲ್ಲಿ ಮಾತ್ರ ಜನರ ಪ್ರವೇಶಕ್ಕೆ ಅವಕಾಶ ಇರುವ ಶಿವನ ಬನ, ಕಾಡು.

ವೈಶಾಖ ಮಹೋತ್ಸಹ ಎನ್ನುವ ಬ್ರಾಹ್ಮಣರು ಅಕ್ಕರೆ ಕೊಟ್ಟಿಯೂರಿನಲ್ಲಿ ನಡೆಸುವ ಯಾಗ ಯಜ್ಞಾದಿಗಳನ್ನು ನಡೆಸುವ ಜಾತ್ರೆಗೆ ದಕ್ಷ ಭ್ರಹ್ಮನ ಮಗಳು, ಶಿವನ ಹೆಂಡತಿ ದಾಕ್ಷಾಯಿಣಿ ಯಾಗದ ಬೆಂಕಿಗೆ ಬೀಳುವ ಕತೆಯಾಗ ದಕ್ಷ ಯಜ್ಞದ ಕತೆಯೊಂದಿಗೆ ತಳುಕು ಹಾಕಿಕೊಂಡಿದೆ. ದಕ್ಷ ಯಜ್ಞ ನಡೆದದ್ದು ಇಲ್ಲಿಯೇ ಎಂದು ಇವರು ನಂಬುತ್ತಾರೆ. ಭಾರತದ ಅಲ್ಲಲ್ಲಿ ಈ ಕತೆಯನ್ನು ತಮ್ಮಲ್ಲೇ ನಡೆದದ್ದಾಗಿ ಹೇಳುತ್ತಾರೆ. ಉತ್ತರಾಖಂಡದ ಹರಿದ್ವಾರದ ಬಳಿ ಇರುವ ಕಂಕಾಳ್‌ನಲ್ಲಿ ದಕ್ಷ ಯಜ್ಞ ನಡೆದದ್ದು ಎಂಬುದು ತುಂಬಾ ಖ್ಯಾತವಾಗಿರುವ ನಂಬಿಕೆ. ಆದರೆ, ಸದ್ಯ ಕೊಟ್ಟಿಯೂರು ಟ್ರೆಂಡಿಂಗ್‌ನಲ್ಲಿ ಇರುವುದರಿಂದ ದಕ್ಷ ಯಜ್ಞ ನಡೆದದ್ದು ಕೊಟ್ಟಿಯೂರಿನಲ್ಲಿಯೇ ಎಂಬ ದೇವಾಲಯದ ಸ್ಥಳ ಪುರಾಣಗಳು ಹೇಳುತ್ತವೆ, ಅದನ್ನೇ ನಮ್ಮ ಯೂಟ್ಯೂಬರ್‌ಗಳೂ ಪ್ರಚಾರ ಮಾಡುತ್ತಾರೆ. ಸ್ಥಳ ಪುರಾಣಗಳು ಕಟ್ಟು ಕತೆಯಷ್ಟೇ, ಆ ಸ್ಥಳದ ಹೆಸರು, ಭೌಗೋಳಿಕತೆ, ಜನ ಸಮುದಾಯವನ್ನು, ಮೂಲ ಆರಾಧನಾ ಪದ್ದತಿಯನ್ನು ಜೋಡಿಸಿ ಹೊಸ ಕತೆಯನ್ನು ಬರೆದು, ಅದನ್ನು ಪುರಾಣದ ಜೊತೆಗೆ ಜೋಡಿಸುವುದು ಅದರಲ್ಲಿರುವ ವೈಶಿಷ್ಟ್ಯ. ಪಾಂಡವರು ವನವಾಸದಲ್ಲಿ ಎಲ್ಲಾ ಊರುಗಳಿಗೆ ಬಂದು ಶಿವಲಿಂಗ ಸ್ಥಾಪಿಸಿದಂತೆ!
ಅನೀಶ್ ಒಂದು ಕತೆಯನ್ನು ಹೇಳಿದ. ಇದೇ ಕತೆಯನ್ನು ಕೊಟ್ಟಿಯೂರು ದೇವಾಲಯದ ಸ್ಥಳ ಪುರಾಣದಲ್ಲಿ ಕೂಡ ನೀಡಲಾಗಿದೆ: ಕುರಿಚ್ಯ ಎನ್ನುವ ಕಾಡಿನ ಜನಾಂಗದ ಬೇಟೆಗಾರರು ತಮ್ಮ ಬಾಣವನ್ನು ಹರಿತ ಮಾಡಲು ಕಲ್ಲೊಂದಕ್ಕೆ ಉಜ್ಜುವಾಗ, ಆ ಕಲ್ಲಿನಿಂದ ರಕ್ತ ಬರಲು ಆರಂಭವಾಯ್ತು! ಇದನ್ನು ಅವರು ಅಲ್ಲಿನ ಬ್ರಾಹ್ಮಣ ತರವಾಡು ಪಡಿಂಗಿಟ್ಟ ನಂಬೂತಿರಿ ಇಲ್ಲಂಗೆ ಬಂದು ಹೇಳುತ್ತಾರೆ. ಅವರು ಅದನ್ನು ಮನತನ ಗ್ರಾಮದ ನಾಯರ್‌ಗಳಿಗೆ ತಿಳಿಸಲು ಆ ಬೇಡರಿಗೆ ಹೇಳುತ್ತಾರೆ. ಹೀಗೆ ಅವರು ಸ್ವಯಂಭೂ ಲಿಂಗವನ್ನು ಪತ್ತೆ ಮಾಡುತ್ತಾರೆ.
ಇದು ಸ್ಥಳ ಪುರಾಣಗಳಲ್ಲಿ ಕಾಣುವ ಸಾಮಾನ್ಯವಾದ ಕತೆ. ಇದೇ ರೀತಿಯ ಕತೆಯನ್ನು ಅನೇಕ ದೇವಾಲಯಗಳಲ್ಲಿ ನೋಡಬಹುದು. ಮದರು ಎಂಬ ದಲಿತ ಮಹಿಳೆ ಕೆಲಸ ಮಾಡುವಾಗ, ಆಕೆಯ ಕತ್ತಿಯು ಕಲ್ಲೊಂದಕ್ಕೆ ತಾಗಿ, ಅದರಿಂದ ರಕ್ತ ಬಂತು. ಆ ಮದುರುವಿನಿಂದ ಪತ್ತೆಯಾದ ಲಿಂಗವೇ ಮದೂರು ಮದನಂತೇಶ್ವರ! ದಲಿತರಿಗೆ ಶಿವಲಿಂಗ ಸಿಗುವ ಐತಿಹ್ಯವೆಂದರೆ, ಮೂಲದಲ್ಲಿದ್ದ ಸಮುದಾಯಗಳ ಆರಾಧನಾ ಕ್ಷೇತ್ರಗಳನ್ನೇ ವೈದಿಕ ಶಿವಸ್ಥಾನಗಳಾಗಿ ಪರಿವರ್ತನೆಗೊಂಡ ಕತೆ. ಇಲ್ಲವೇ, ಬ್ರಾಹ್ಮಣೇತರ ಪೂಜಾರಿಗಳು ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯಗಳು ವೈದಿಕ ಆರಾಧನೆಗೆ ಒಳಪಟ್ಟ ಸಂಗತಿಯನ್ನು ಈ ಕತೆಗಳು ಹೇಳುತ್ತವೆ.
ಕೊಟ್ಟಿಯೂರಿನ ಬಗ್ಗೆ ಬ್ರಿಟೀಷ್ ಮಾನವಶಾಸ್ತ್ರಜ್ಞ ಮತ್ತು ಪುರಾತತ್ವಶಾಸ್ತ್ರಜ್ಷ ಫ್ರೆಡ್ರಿಕ್ ಫಾಸೆಟ್ ಬರೆದಿರುವ “ದಿ ನಾಯರ್ಸ್ ಆಫ್ ಮಲಬಾರ್” ಪುಸ್ತಕದಲ್ಲಿ ಕೆಲವು ಆಸಕ್ತಿಕರ ಸಂಗತಿಗಳು ದಾಖಲಾಗಿವೆ.
“ನಿಜವಾದ ಮಲಯಾಳಿ ಜಾತ್ರೆಯೆಂದರೆ ಉತ್ತರ ಮಲಬಾರಿನ ಕೊಟ್ಟಿಯೋರ್‌ನಲ್ಲಿ ನಡೆಯುವ ಜಾತ್ರೆ. ಅದು 3,000 ರಿಂದ 5,000 ಅಡಿ ಎತ್ತರದ ವೈನಾಡ್ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡಿನಲ್ಲಿ ನಡೆಯುತ್ತದೆ. ಇದನ್ನು ಜುಲೈನಲ್ಲಿ ಮಾನ್ಸೂನ್ ಮಳೆ ಉತ್ತುಂಗದಲ್ಲಿದ್ದಾಗ ನಡೆಸಲಾಗುತ್ತದೆ. ಜುಲೈನಲ್ಲಿ ಕೊಟ್ಟಿಯೋರ್‌ನಲ್ಲಿ ಸರಾಸರಿ ಮಳೆ ಕನಿಷ್ಠ 60 ಇಂಚು ಇರಬಹುದು, ಆದ್ದರಿಂದ ಭಕ್ತರು ಇಲ್ಲಿ ಒಳ್ಳೆಯ ಮಳೆಯನ್ನು ನೋಡುತ್ತಾರೆ. ಇದು ಕೊಟ್ಟಿಯೋರ್‌ನಲ್ಲಿ ಪರಸ್ಪರ ಬರೆಯದ ಮೇಲು ಮತ್ತು ಕೀಳು ಜಾತಿಗಳ ಜಾತ್ರೆ. ಇಲ್ಲಿಗೆ ನಾಯರ್‌ಗಳು ಮೊದಲು ಹೋಗುತ್ತಾರೆ, ಕೆಲವು ದಿನಗಳ ನಂತರ ತೀಯಾಗಳು ಹೋಗುತ್ತಾರೆ, ಹೀಗೆ ಮುಂದುವರಿಯುತ್ತದೆ. ಇದರ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇದಕ್ಕೆ ಹೋಗುವ ಭಕ್ತರು ಗದ್ದಲ ಎಬ್ಬಿಸಿಕೊಂಡು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕವರನ್ನು ಪರಸ್ಪರ ಅತ್ಯಂತ ಕೆಟ್ಟ ಮತ್ತು ಕೊಳಕು ಪದಗಳಲ್ಲಿ ನಿಂದಿಸುತ್ತಾರೆ. ಅದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಬಹುಶಃ ಕೆಲವು ದಿನಗಳ ವರೆಗೆ ನಡೆಯುವ ಈ ಮೆರವಣಿಗೆಯಲ್ಲಿ, ಜನರು ಅತಿಯಾದ ಉತ್ಸಾಹದಿಂದ ಹೃದಯಕ್ಕೆ ತೃಪ್ತಿಯಾಗುವಷ್ಟು ನಿಂದಿಸುತ್ತಾರೆ. ಮಾತ್ರವಲ್ಲದೆ, ರಸ್ತೆಯ ಉದ್ದಕ್ಕೂ ಸಿಗುವ ವ್ಯಕ್ತಿ ಮತ್ತು ವಸ್ತುಗಳನ್ನು ಹಿಂಸಿಸುತ್ತಾರೆ. ಅಲ್ಲಿಂದ ಹಿಂತಿರುಗುವಾಗ ಶಾಂತವಾಗಿ ಬರುತ್ತಾರೆ.”
ಭಕ್ತರು ಈ ಪರಿಯಾಗಿ ಭಾವಾವೇಶದಿಂದ, ಹಿಂಸಾತ್ಮಕವಾಗಿ ಜಾತ್ರೆಗೆ ಹೋಗುವುದನ್ನು, ಅವರು ಬಳಸುವ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಎಫ್ ಫಾಸೆಟ್‌ಗೆ ಆಗುವುದಿಲ್ಲ. ಆತ ಕೊಟ್ಟಿಯೂರಿನಲ್ಲಿ ದೇವರನ್ನು ನೋಡಲು ಬರುವ ಭಕ್ತರು ದೇವರನ್ನೂ, ತಮ್ಮೊಂದಿಗೆ ಇರುವ ಇತರ ಭಕ್ತರನ್ನೂ ಕೆಟ್ಟದಾಗಿ ನಿಂದಿಸುವುದನ್ನು ನೋಡಿ, ಇಂತಹದ್ದೇ ಆಚರಣೆ ತಿರುಪತಿಯ ಗಂಗಮ್ಮ ಉತ್ಸವದಲ್ಲಿಯೂ ನೋಡಿರುವುದಾಗಿ ಹೇಳುತ್ತಾನೆ.
ಪ್ರತಿ ವರ್ಷ ಮೇ ತಿಂಗಳ ಮೊದಲ ಮತ್ತು ಎರಡನೇ ವಾರಗಳ ನಡುವೆ ಬರುವ ತಿರುಪತಿಯ ಗಂಗಮ್ಮ ಜಾತ್ರೆಯಲ್ಲಿಯೂ ಈ ತೆರನಾದ ಭಕ್ತಿಯನ್ನು ಜಾತ್ರೆಗೆ ಬರುವ ಭಕ್ತರು ತೋರಿಸುತ್ತಾರೆ. ಗಂಗಮ್ಮನನ್ನು ತಿರುಪತಿ ಬಾಲಾಜಿ (ವೆಂಕಟೇಶ್ವರನ) ಸಹೋದರಿ ಎಂದು ನಂಬಲಾಗುತ್ತದೆ. ಈ ಜಾತ್ರೆಯಲ್ಲಿ ದೇವಿಯನ್ನು ದೇವಿಯನ್ನು ಅಶ್ಲೀಲವೆಂದು ಪರಿಗಣಿಸಲಾಗುವ ಭಾಷೆಯಲ್ಲಿ ನಿಂದಿಸಲಾಗುತ್ತದೆ. “ಗಂಗಮ್ಮ! ನಿನ್ನದು ಬುಟ್ಟಿಯಷ್ಟು ದೊಡ್ಡದಾದ… (ಯೋನಿ)” ಎಂಬಂತ ನಿಂದಾಸ್ತುತಿಯನ್ನು ಭಕ್ತರು ಮಾಡುತ್ತಾರೆ. ಮೆರವಣಿಗೆ ದೇವಾಲಯಕ್ಕೆ ಬರುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಬೇಕು ಎಂಬಂತೆ ನಿಂದಾಸ್ತುತಿ ಮಾಡುತ್ತಾರೆ.
ಇದನ್ನು ಅವರು ಹರಕೆಯಂತೆ ಮಾಡುತ್ತಾರೆ. ಕುಣಿಯುತ್ತಾ, ಲೈಂಗಿಕ ಸನ್ನೆಗಳನ್ನು ಮಾಡುತ್ತಾ, ಆವೇಷಗೊಳ್ಳುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕೊನೆಗೆ ಪ್ರಜ್ಞೆಯನ್ನು ಕಳೆದುಕೊಂಡು ಬೀಳುತ್ತಾರೆ. ತನ್ನ ಮಗನ ಅನಾರೋಗ್ಯಕ್ಕೆ ತಾಯಿಯೂ ಇಂತಹ ಹರಕೆಯನ್ನು ಕಟ್ಟಿಕೊಳ್ಳುತ್ತಾಳೆ.
ನಾನು ನೋಡಿದ ಇಂತಹ ಒಂದು ಜಾತ್ರೆಯೆಂದರೆ, ಕೋಡಂಗಲ್ಲೂರಿನ ಭಗವತಿಯ ಭರಣಿ ಜಾತ್ರೆ. ಇದರಲ್ಲಿ ಸಾವಿರಾರು ಮಂದಿ ಮಹಿಳೆಯರು, ಪುರುಷರು, ಮಂಗಳಮುಖಿಯರು ಗುಂಪು ಗುಂಪಾಗಿ ಕೋಲಾಟವಾಡುತ್ತಾ ಭದ್ರಕಾಳಿಯನ್ನು ಲೈಂಗಿಕ ಪರಿಭಾಷೆಗಳಿಂದ ನಿಂದಿಸುತ್ತಾರೆ. ಇದಕ್ಕೆ ಭರಣಿ ಪಾಟ್ಟ್ ಎಂದು ಕರೆಯುತ್ತಾರೆ. ಇದಕ್ಕಾಗಿ ಅವರು ಹಾಡುಗಳನ್ನು ಕಟ್ಟುತ್ತಾರೆ. “ಕೋಡಂಗಲ್ಲೂರಮ್ಮನಿಗೆ……ಮಾಡಬೇಕೆಂದರೆ…..ಧ್ವಜಮರದಂತ…..” ಇಂತಹ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ರಸ್ತೆಯಲ್ಲಿ ಕಾವಲು ಕಾಯುವ ಪೋಲೀಸನ್ನೂ ಬಿಡುವುದಿಲ್ಲ. ಅನೇಕ ಬೆಳಚ್ಚಪಾಡ ಗಂಡಸರು, ಹೆಂಗಸರು ಕೈಯಲ್ಲಿ ಗಗ್ಗರ (ಚಿಲಂಬು) ಮತ್ತು ಕಡ್ಸಲೆ (ಕತ್ತಿ) ಹಿಡಿದು ರಕ್ತಸಿಕ್ತವಾಗಿ ಆವೇಷಗೊಂಡು ಕೋಡಂಗಲ್ಲೂರು ಕ್ಷೇತ್ರದ ಸುತ್ತ ಓಡುತ್ತಾರೆ.
ಈಗ ಸದ್ಯ ಟ್ರೆಂಡಿಂಗ್‌ನಲ್ಲಿ ಇರುವ ಕೊಟ್ಟಿಯೂರು ವೈಶಾಖ ಜಾತ್ರೆಯಲ್ಲಿಯೂ ಇಂತಹ ಆಚರಣೆಗಳಿದ್ದವು ಎಂದು ಫಾಸೆಟ್ ದಾಖಲಿಸಿದ್ದಾನೆ. 1894 ರಲ್ಲಿ ಫ್ರೆಡ್ರಿಕ್ ಫಾಸೆಟ್ ಕಂಡದ್ದೇನು ಎನ್ನುವುದನ್ನು ನೋಡೋಣ. ಅಲ್ಲಿ ಚೌಕಾಕಾರದ ಹುಲ್ಲಿನ ಕಟ್ಟಡ, ಮಧ್ಯದಲ್ಲಿ ದೇವಾಲಯ. ಜನರು ದೇವರನ್ನು ಪೆರುಮಾಳ್ (ಅಥವಾ ಪೆರುಮಾಳ್ ಈಶ್ವರ) ಎಂದು ಕರೆಯುತ್ತಾರೆ. (ಇದು ಇಕ್ಕರೆ ಕೊಟ್ಟಿಯೂರು ಶಿವ ದೇವಾಲಯ) ಆದರೆ ಅದರ ಒಳಗೆ ಏನಿದೆ ಎನ್ನುವುದನ್ನು ನೋಡಲು ಫಾಸೆಟ್‌ಗೆ ಅನುಮತಿ ಕೊಡಲಿಲ್ಲ. ಅವನು ಅಲ್ಲಿನ ಕೆಲವು ನಂಬೂತಿರಿ ಪುರೋಹಿತರ ಜೊತೆಗೆ ಮಾತಿಗಿಳಿದ. ಅವರು ಆ ಹಬ್ಬದ ದಿನಗಳಲ್ಲಿ ಆ ಕಡೆಯ ಕಾಡಿನಲ್ಲಿ ಒಂಟಿಯಾಗಿರಬೇಕು ಎಂದು ಹೇಳಿದರು. ಅವರು ನೀಡಿದ ಉಪಹಾರ, ಬೆಣ್ಣೆ-ಹಾಲು ಮತ್ತು ಸಕ್ಕರೆಯನ್ನು ಕೃತಜ್ಞತೆಯಿಂದ ಸ್ವೀಕರಿಸಿದ. ನಂಬೂತಿರಿಗಳು, ಬಹಳ ಅತ್ಯಾಧುನಿಕ ವ್ಯಕ್ತಿಗಳು ಮತ್ತು ಮಡಿ ಮೈಲಿಗೆ ಪಾಲಿಸುತ್ತಿದ್ದರು. ಹಾಲು ಮತ್ತು ಸಕ್ಕರೆಯನ್ನು ನೆಲದ ಮೇಲೆ ಇರಿಸಿ ಫಾಸೆಟ್‌ನನ್ನು ಆಹ್ವಾನಿಸಿದರು. ಫಾಸೆಟ್‌ನ ನಾಯಿಗೆ ತಿನ್ನಲು ಅವರು ದೊಡ್ಡ ತೆಂಗಿನಕಾಯಿಯ ತುಂಡನ್ನು ಎಸೆದರು.
ಫಾಸೆಟ್ ಅಲ್ಲಿಂದ ಅಕ್ಕರೆ ಕೊಟ್ಟಿಯೂರಿನ ಕಾಡಿನ ಕ್ಷೇತ್ರಕ್ಕೆ ಹೋಗುತ್ತಾನೆ. ಜಾತ್ರೆಯ ಸಮಯದ ಅಲ್ಲದ ಕಾರಣ, ಉಳಿದ ದಿನಗಳಲ್ಲಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ನನ್ನ ಸ್ನೇಹಿತ ಅನೀಶ್ ಹೇಳುವಂತೆ, ಅವನ ಅಜ್ಜನಿಗೆ, ಅಪ್ಪನಿಗೆ ಬೇಟೆಗೆ ಕಾಡಿಗೆ ಹೋಗುವ ಸಮಯದಲ್ಲಿ ಆ ಕಾಡಿನ ಪರಿಸರದಲ್ಲಿ ಏನೇನೋ ಕಂಡುಬಂದಿತ್ತು.
ಫಾಸೆಟ್ ಜೊತೆಗೆ ನಾಯರ್ ಮತ್ತು ಕುರಿಚ್ಚನ್ ಇದ್ದರು. ಅವರಿಗೆ ನದಿಯನ್ನು ದಾಟಿ ಆ ಕಾಡಿಗೆ ಹೋಗಲು ಭಯವಿತ್ತು. ಅಲ್ಲಿಗೆ ಉಳಿದ ದಿನಗಳಲ್ಲಿ ಹೋಗುವವರು ಸಾಯುತ್ತಾರೆ ಎಂಬ ನಂಬಿಕೆ ಇತ್ತು. “ನಾವು ಆ ಪವಿತ್ರ ಸ್ಥಳವನ್ನು ತಲುಪಲು ಮೊಣಕಾಲು ಮಳುಗುವಷ್ಟು ನೀರು ಇರುವ, ಸುಮಾರು 30 ಗಜ ಅಗಲದ ಸಣ್ಣ ನದಿಯ ಮೂಲಕ ನಡೆದೆವು. ನಮ್ಮೊಂದಿಗೆ ಇದ್ದ ನಾಯರ್ ಮತ್ತು ಕುರಿಚ್ಚನ್ ಮುಖದಲ್ಲಿ ಆತಂಕವಿತ್ತು. ಅವರು ನಮ್ಮೊಂದಿಗೆ ನದಿ ದಾಟಲು ಧೈರ್ಯ ಮಾಡಲಿಲ್ಲ,” ಎನ್ನುತ್ತಾನೆ ಫಾಸೆಟ್.
ಈ ಕಾಡಿಗೆ ಹೋಗುವ ತನ್ನ ಸಾಹಸವನ್ನು ವಿವರಿಸುತ್ತಾ “ಎವ್ರಿಡೈಸ್‌ನನ್ನು ಹುಡುಕಲು ಅಧೋಲೋಕಕ್ಕೆ ಹೋದ ಓರ್ಫಿಯಸ್, ನರಕದೊಳಗೆ ಪ್ರವೇಶಿಸಲು ಹೊರಟ ಡಾಂಟೆಯೂ” ಇಷ್ಟು ಭಯಾನಕ ಪ್ರಯಾಣವನ್ನು ಕೈಗೊಂಡಿರಲಿಲ್ಲ ಎಂದು ಹೇಳುತ್ತಾನೆ. ಪವಿತ್ರ ಸ್ಥಳವನ್ನು ತಲುಪಿದಾಗ, ಅದೊಂದು ಹುಲ್ಲು ಪ್ರದೇಶ. ಹಬ್ಬದ ಸಮಯದಲ್ಲಿ ಅದು ನೀರಿನಿಂದ ಮುಚ್ಚಿರುತ್ತದೆ. ಮಧ್ಯದಲ್ಲಿ 12 ಅಡಿ ವ್ಯಾಸದ ರಾಶಿ ಹಾಕಿದ ಕಲ್ಲುಗಳ ವೃತ್ತವಿದೆ. ಕಲ್ಲುಗಳ ರಾಶಿಯ ಮಧ್ಯದಲ್ಲಿ ಒಂದು ಒರಟಾದ ಲಿಂಗ.
ನಿಧಿಯನ್ನು ಹುಡುಕುವ ಯಾರೋ ಆ ಲಿಂಗವನ್ನು ಮುರಿದಿದ್ದರು ಎಂದು ಫಾಸೆಟ್ ಹೇಳುತ್ತಾನೆ. ಲಿಂಗದ ವೃತ್ತದಿಂದ ಪೂರ್ವ ದಿಕ್ಕಿನಲ್ಲಿ ಒಂದು ಉದ್ದವಾದ ಶೆಡ್ ಇದೆ, ಅದರ ಮಧ್ಯದಲ್ಲಿ ಇಟ್ಟಿಗೆಯ ಉದ್ದವಾದ ಎತ್ತರದ ವೇದಿಕೆ ಇದೆ. ಇದನ್ನು ಅಡುಗೆ ಮಾಡುವ ಸ್ಥಳವಾಗಿ ಬಳಸಲಾಗುತ್ತಿತ್ತು. ಹಬ್ಬದ ಸಮಯದಲ್ಲಿ ಜನರು ತಂಗಿದ್ದ ಹುಲ್ಲಿನ ಶೆಡ್‌ಗಳು ಸಹ ಇದ್ದವು. ಹುಲ್ಲು ಮತ್ತು ಕಳೆ ಗಿಡಗಳು ಎತ್ತರವಾಗಿ ಬೆಳೆದಿದ್ದವು. ಶೆಡ್‌ಗಳು ಶಿಥಿಲಗೊಂಡಿದ್ದವು, ತುಂಬಾ ವರ್ಷಗಳಿಂದ ಬಳಸದಿರುವಂತೆ ಕಾಣುತ್ತಿದ್ದವು.
ಜಾತ್ರೆಗೆ ಹೋಗುವ ಎಲ್ಲರೂ ತಮ್ಮೊಂದಿಗೆ ಕಾಣಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ. ತೀಯಾಗಳು ಎಳೆನೀರು ತೆಗೆದುಕೊಂಡು ಹೋಗುತ್ತಾರೆ. “ನಾಯರ್‌ಗಳು ಏನು ತೆಗೆದುಕೊಂಡು ಹೋಗುತ್ತಾರೆ,” ಎಂಬುದು ತಿಳಿದಿಲ್ಲ ಎಂದು ಫಾಸೆಟ್ ಹೇಳುತ್ತಾನೆ. ಜಾತ್ರೆಗೆ ಹೋದವರು ತಾಳೆ ಮರದ ಮಡಲನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ. (ಈಗ ಬಿದಿರನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ, ಅವನ್ನು ಕೊಟ್ಟಿಯೂರಿನಲ್ಲಿ ಮಾರಾಟವೂ ಮಾಡುತ್ತಾರೆ)
ಸಾಮಾನ್ಯವಾಗಿ ವೃತ್ತಾಕಾರವಾಗಿ ಕಲ್ಲುಗಳನ್ನು ಜೋಡಿಸಿ, ಅದರ ಒಳಗೆ ಒಂದು ಕಲ್ಲನ್ನು ಇಡುವುದು, ಅಥವಾ ಕಲ್ಲಿನ ಗೂಡಿನಂತಹ ರಚನೆ ಇಡುವುದು ಪ್ರಾಚೀನ ಸಮಾಧಿಗಳ ಲಕ್ಷಣ. ಕ್ರಿಸ್ತಪೂರ್ವ 800 ರ ಹಿಂದಿನ ವಿಶಿಷ್ಟ ಮೆಗಾಲಿಥಿಕ್ ಸಮಾಧಿಯೊಂದು ದಕ್ಷಿಣ ಕನ್ನಡದ ಕಡಬ ತಾಲೂಕಿನ ರಾಮಕುಂಜದಲ್ಲಿ ಪತ್ತೆಯಾಗಿತ್ತು. ಇಂತಹ ಸಮಾಧಿಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲೂ ನೋಡಿದ್ದೇನೆ.
ಇಂತಹ ಸಮಾಧಿಗಳನ್ನು ಜನರು ಆರಾಧಿಸುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಇಂತಹ ಸಮಾಧಿಗಳ ಮೇಲೆಯೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಬೌದ್ಧ ಸ್ತೂಪಗಳ ಉತ್ಖನನಗಳನ್ನು ಮಾಡುವಾಗ, ಮಣ್ಣಿನ ಅಡಿಯಲ್ಲಿ ಪ್ರಾಚೀನ ಸಮಾಧಿಗಳು ಕಂಡುಬಂದಿರುವುದನ್ನು ನಾವು ನೋಡಿದ್ದೇವೆ. ಕೊಟ್ಟಿಯೂರಿನ ಆರಾಧನೆಯೂ ಇಂತಹ ಕ್ಷೇತ್ರಗಳಲ್ಲೇ ನಡೆಯುತ್ತದೆ. ಬುಡಕಟ್ಟು ಜನರು ತಮ್ಮ ಹಿರಿಯರ ಸಮಾಧಿಗಳಲ್ಲಿ ನಡೆಸುತ್ತಿದ್ದ ಆರಾಧನೆಗಳು ವೈದಿಕ ಶೈವ ದೇವಾಲಯವಾಗಿ ಬದಲಾಗಿರಬಹುದು.
ಇದಿಷ್ಟು, ಕೊಟ್ಟಿಯೂರಿನ ಬಗ್ಗೆ.
ಕೊಟ್ಟಿಯೂರಿಗೆ ಸದ್ಯ ಜನರು ಶಬರಿಮಲೆಗೆ ಹೋದಂತೆ ಯಾತ್ರೆ ಹೋಗಲು ಆರಂಭಿಸಿದ್ದಾರೆ. 1940 ರ ದಶಕದಲ್ಲಿ, ಶಬರಿಮಲೆ ಅಯ್ಯಪ್ಪ ದೇವಾಲಯವು ಕೇರಳದ ಹೊರಗಿನ ಪ್ರದೇಶಗಳಲ್ಲಿ ವ್ಯಾಪಕವಾದ ಪ್ರಚಾರದಲ್ಲಿರಲಿಲ್ಲ. 1980 ರ ದಶಕದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಬಂದ ನಂತರ, ದೇವಾಲಯವು ಭಾರಿ ಜನಪ್ರಿಯತೆಯನ್ನು ಗಳಿಸಿತು. ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ದಂಡು ದಂಡಾಗಿ ಬರಲು ಆರಂಭಿಸಿದರು. ಸಿನೇಮಾ ನಟರು, ಸಲಬ್ರೆಟಿಗಳು ಬರಲು ಆರಂಭಿಸಿದರು. ಇದಕ್ಕೆ ಮುಖ್ಯವಾದ ಕಾರಣ, 1975 ರ ಮಲಯಾಳಂ ಚಲನಚಿತ್ರ ಸ್ವಾಮಿ ಅಯ್ಯಪ್ಪನ್. ಈ ಚಲನಚಿತ್ರದ ಜನಪ್ರಿಯತೆಯ ನಂತರ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಅಯ್ಯಪ್ಪನ ಕತೆ ಹೇಳುವ ಸಿನೇಮಾಗಳು ಬಂದವು. ಟಿವಿ ಕಾರ್ಯಕ್ರಮಗಳು, ಭಕ್ತಿಗೀತೆಗಳು ಮತ್ತು ಭಜನೆಗಳ ಮೂಲಕ ಪ್ರಚಾರ ಪಡೆಯಿತು. ಶಬರಿ ಮಲೆಯ ಜ್ಯೋತಿಯ ಬಗ್ಗೆ ಅತಿಮಾನುಷ ಪರಿಕಲ್ಪನೆಗಳು ಹುಟ್ಟಿಕೊಂಡವು, ಸದ್ಯ ಇದು ಮನುಷ್ಯರ ಕೆಲಸ ಎಂಬುದು ಸಾಬೀತಾಗಿದೆ.
ಬಾಬಾ ಬುಡನ್ ಗಿರಿ – ದತ್ತ ಪೀಠದ ವಿವಾದದ ಸಮಯದಲ್ಲಿ, ಹಿಂದುತ್ವವಾದಿ ಸಂಘಟನೆಗಳು ಮತ್ತು ಕರ್ನಾಟಕ ಬಿಜೆಪಿ ಶಬರಿಮಲೆಯ ಭಕ್ತರು ವ್ರತ ಹಿಡಿಯುವಂತೆ ‘ದತ್ತ ಮಾಲೆʼ ಎಂಬ ಮಾಲೆ ಧರಿಸಿ, ಯಾತ್ರೆ ಹೋಗುವ ಹೊಸ ಸಂಸ್ಕೃತಿಯನ್ನು ತಂದರು. ಇದರ ಜನಪ್ರಿಯತೆ ಈಗ ಕಡಿಮೆಯಾಗುತ್ತಿದೆ.
ಸದ್ಯ ಕರ್ನಾಟಕದಲ್ಲಿ ಕೊರಗಜ್ಜ ಎಂಬ ತುಳುನಾಡಿನ ದೈವ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಕೊರಗಜ್ಜನ ಹೆಸರಿನಲ್ಲಿ ಒಳ್ಳೆಯ ಸಂಪಾದನೆಯನ್ನು ಮಾಡುವ ಪ್ರವೃತ್ತಿಯೂ ಬೆಳೆದಿದ್ದು, ಇದಕ್ಕೆ ಅನೇಕ ದೈವಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೊರಗಜ್ಜ ಎಂಬ ಖ್ಯಾತವಲ್ಲದ ದೈವವು ದಿಡೀರನೇ ಖ್ಯಾತಿಯನ್ನು ಪಡೆಯಿತು. ಬೆಂಗಳೂರು, ಮೈಸೂರಿನಲ್ಲಿ ಕೊರಗಜ್ಜನ ಗುಡಿಗಳು ಎದ್ದವು. ಬೆಂಗಳೂರಿನ ಆಟೋಗಳಲ್ಲಿ ಕೊರಗಜ್ಜನ ಸ್ಟಿಕ್ಕರ್ ಅಂಟಿಸಿ, ‘ಸ್ವಾಮಿ ಕೊರಗಜ್ಜʼ ಎಂದು ಬರೆದಿರುವುದನ್ನು ನೋಡಿದ್ದೇನೆ.
ಕಾಂತಾರ ಎಂಬ ಕನ್ನಡ ಸಿನೇಮಾದ ನಂತರ ಪಂಜುರ್ಲಿ ಮತ್ತು ಗುಳಿಗ ಎಂಬೆರಡು ತುಳುನಾಡಿನ ದೈವಗಳು ಇಡೀ ಭಾರತದಲ್ಲಿ ಪ್ರಚಾರಕ್ಕೆ ಬಂದವು. ಇವುಗಳ ವೇಷ ಕಟ್ಟಿಕೊಂಡು ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಅಭಿನಯಿಸುವ, ಮೆರವಣಿಗೆ ಮಾಡುವ ಹೊಸ ಪ್ರವೃತ್ತಿಯೊಂದು ಆರಂಭ ಆಯ್ತು. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಇತರ ಭಾಷೆಗಳ ರಿಯಾಲಿಟಿ ಶೋಗಳಲ್ಲೂ ಹೋ….. ಎನ್ನುತ್ತಾ ಕುಣಿಯುವ “ಕಾಂತಾರದ ಪಂಜುರ್ಲಿ, ಗುಳಿಗ” ರನ್ನು ನೋಡಿದ್ದೇವೆ. ಆರಂಭದಲ್ಲಿ ಕಾಂತಾರವನ್ನು “ದೈವಾರಾಧನೆಯನ್ನು ಪ್ರಪಂಚಕ್ಕೆ ತಿಳಿಸಿದ ಸಿನೇಮಾ” ಎಂದು ಹೊಗಳಿದ ಭಕ್ತರು ಈಗ ಸಿನೇಮಾದ ಪ್ರಚಾರದಿಂದ ಹುಟ್ಟಿಕೊಂಡ ಈ ರೀತಿಯ ಹೊಸ ಬೆಳವಣಿಗೆಯ ಬಗ್ಗೆ ಅಸಮಧಾನವನ್ನು ಹೊಂದಿದ್ದಾರೆ.
ಜನರು ಹೊಸ ಹೊಸ ದೇವರಿಗೆ ಮೊರೆ ಹೋಗುವ, ತಮ್ಮ ಭಕ್ತಿಯನ್ನು ತೋರಿಸುವ ಪ್ರವೃತ್ತಿಗೆ ಕುತೂಹಲಕಾರಿಯಾದ ನಿದರ್ಶನವೆಂದರೆ ‘ಸಂತೋಷಿ ಮಾʼ ಎಂಬ ದೇವತೆ. 1960 ರ ದಶಕದಲ್ಲಿ ಉತ್ತರ ಪ್ರದೇಶದ ಮಹಿಳೆಯರು ಪೂಜಿಸುತ್ತಿದ್ದ ಸಂತೋಷಿ ಮಾ ಎಂಬ ದೇವತೆಯನ್ನು ‘ಜೈ ಸಂತೋಷಿ ಮಾʼ ಎಂಬ ಸಿನೇಮಾ ಇಡೀ ದೇಶಕ್ಕೆ ಪರಿಚಯಿಸಿತು. ಇದಕ್ಕೂ ಹಿಂದೆ ಪುರಾಣದ ಯಾವುದೇ ಹಿನ್ನಲೆ ಇಲ್ಲದ ಈ ದೇವತೆಗೆ ಪುರಾಣಗಳು ಹುಟ್ಟಿಕೊಂಡವು.
1975 ರಲ್ಲಿ ಶೋಲೆ ಮತ್ತು ದೀವಾರ್ ಜೊತೆಗೆ, ಅಪರಿಚಿತ ಕಲಾವಿದರನ್ನು ಹಾಕಿಕೊಂಡು ಕಡಿಮೆ ಬಜೆಟ್ ನಲ್ಲಿ ‘ಜೈ ಸಂತೋಷಿ ಮಾʼ ಸಿನೇಮಾ ಬಂತು. ಬಹುತೇಕ ನೃತ್ಯಗಾರ್ತಿಯರು, ಕಲಾವಿದೆಯರನ್ನು ವೇಶ್ಯಾಗೃಹಗಳಿಂದ ಕರೆಸಿಕೊಂಡು ಬರಲಾಗಿತ್ತು.
ಈ ಬಗ್ಗೆ ಮಿಂಟ್‌ನಲ್ಲಿ ಸಂತೋಷಿ ಮಾ ಪಾತ್ರದಾರಿ ನಟಿ ಅನಿತಾ ಗುಹಾ, ಚಿತ್ರದ ಯಶಸ್ಸನ್ನು ವಿವರಿಸುತ್ತಾ, “ಪ್ರೇಕ್ಷಕರು ಸಿನೇಮಾವನ್ನು ಮೆಚ್ಚಿ ಪರದೆಯ ಮೇಲೆ ನಾಣ್ಯಗಳು, ಹೂವು, ಅಕ್ಕಿ ಎಸೆಯುತ್ತಿದ್ದರು. ಬರಿಗಾಲಿನಲ್ಲಿ ಥಿಯೇಟರ್‌ಗೆ ಬಂದು ಸಿನೇಮಾ ನೋಡುತ್ತಿದ್ದರು. ಬಾಂದ್ರಾದಲ್ಲಿ ಥಿಯೇಟರ್ ಹೊರಗೆ ಒಂದು ಸಣ್ಣ ಗುಡಿ ಕೂಡ ಕಟ್ಟಿದ್ದರು. 50 ವಾರಗಳ ಕಾಲ ಸಿನೇಮಾ ಓಡಿತು. ಅದೊಂದು ಪವಾಡ,” ಎಂದು ಹೇಳುತ್ತಾರೆ.
ಈ ಸಿನೇಮಾದಲ್ಲಿ ಸಂತೋಷಿ ಮಾತೆಯ ವ್ರತ ಹೇಗೆ ಮಾಡೋದು, ದೈವಿಗೆ ಯಾವ ನೈವೇದ್ಯ ಇಡೋದು, ಶುಕ್ರವಾರ ಉಪವಾಸ ಮಾಡೋದು ಮೊದಲಾದ ಪ್ರಸಂಗಗಳಿಗೆ. ಈಗಲೂ ಈ ದೇವಿಯ ಭಕ್ತರು ಶುಕ್ರವಾರ ಉಪವಾಸ ಮಾಡುತ್ತಾರೆ. “ಮೈ ತೋ ಆರತಿ ಉತರು ರೇ ಸಂತೋಷಿ ಮಾತಾ ಕಿ” ಎಂಬ ಹಾಡು ತುಂಬಾ ಫೇಮಸ್ ಆಯ್ತು. ಈ ಸಿನೇಮಾ ಸದ್ಯ ಯೂಟ್ಯೂಬಿನಲ್ಲಿಯೂ ಇದೆ.
ಬಜೆಟ್ ಮತ್ತು ಸಂಪಾದನೆಗೆ ಹೋಲಿಸಿದರೆ, ಈ ಸಿನೇಮಾವು ಇದರ ಜೊತೆ ಜೊತೆಗೆ ರಿಲೀಸ್ ಆದ ಶೋಲೆ ಮತ್ತು ದೀವಾರ್‌ಗಿಂತ ಸಕ್ಸಸ್ ಕಂಡಿತು.
ಸದ್ಯ ಕೋಳಿಯ ಮೇಲೆ ಕೂತಿರುವ ಸಂತೋಷಿ ಮಾತೆಯ ಪೋಟೋವನ್ನು ಲೈಂಗಿಕ ಅಲ್ಪಸಂಖ್ಯಾತರ ಮನೆಗಳಲ್ಲಿ, ವೃಶ್ಯಾಗೃಹಗಳಲ್ಲಿ ನೋಡಬಹುದು. ಬೆಂಗಳೂರಿನ ಬಿನ್ನಿಮಿಲ್ ರೋಡಿನಲ್ಲಿ ಕಾರವಾರದಲ್ಲಿ ಈ ಸಂತೋಷಿ ಮಾತೆಯ ದೇವಾಲಯಗಳಿವೆ.
ಕಾಲಕಾಲಕ್ಕೆ ಹೊಸ ದೇವರು ಹುಟ್ಟುತ್ತವೆ, ಯಾರಿಗೂ ತಿಳಿಯದ ದೇವರೊಂದು ದಿಡೀರ್ ಖ್ಯಾತಿಯನ್ನು ಪಡೆಯುತ್ತದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಸಿನೇಮಾಗಳ ನಂತರ ಮಂತ್ರಾಲಯಕ್ಕೆ ಬೇಟಿ ಕೊಡುವ ಭಕ್ತರ ಸಂಖ್ಯೆ ದಡೀರ್ ಹೆಚ್ಚಾಯಿತು.
ಒಂದೊಮ್ಮೆ ನಾನು ಬಾಲ್ಯದಲ್ಲಿ ಹೋಗುತ್ತಿದ್ದ, ಜನಜಂಗುಳಿಯಿಂದ ತುಂಬಿದ್ದ ಕಾಸರಗೋಡಿನ ಮಲ್ಲ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈಗ ಭಕ್ತರ ಸಂಖ್ಯೆ ಎರಡಂಕೆಗೆ ಇಳಿದಿದೆ. ಹಿಂದಿನಂತೆ ದಿನಂಪ್ರತಿ ನೂರಾರು ಭಕ್ತರು ಬರುತ್ತಿಲ್ಲ.
ದಕ್ಷಿಣ ಕನ್ನಡದ ಬೆಳಾಲ್ ಎಂಬ ಗ್ರಾಮದಲ್ಲಿ ಮರದಡಿಯಲ್ಲಿ ಇದ್ದ ದೇವಿಗೆ ಅರಿಕೋಡಿ ಚಾಮುಂಡೇಶ್ವರಿ ಎಂದು ದೇವಾಲಯ ಕಟ್ಟಿಸಲಾಗಿದೆ. ಇಲ್ಲಿಗೆ ಹೆಚ್ಚು ಪ್ರಚಾರವನ್ನು ಕೊಟ್ಟಿದ್ದು ಕೆಲವು ಯೂಟ್ಯೂಬರ್‌ಗಳು. ಈಗ ಅಲ್ಲೊಬ್ಬರು ಸ್ವಯಂಘೋಷಿತ ಧರ್ಮದರ್ಶಿ ಇದ್ದಾರೆ. ಅವರನ್ನು ಬೇಟಿ ಮಾಡಲು ಟೋಕನ್ ತೆಗೆದುಕೊಳ್ಳಬೇಕು. ಈ ದೇವಾಲಯದ ಪೇಸ್‌ಬುಕ್ ಪೇಜ್‌ನಲ್ಲಿ, “ಮಾತು ಬಾರದವರಿಗೆ ಮಾತು ಬಂತು, ಮಕ್ಕಳಾಗದವರಿಗೆ ಮಕ್ಕಳಾಯಿತು,” ಎಂಬ ಅವೈಜ್ಞಾನಿಕ ನಂಬಿಕೆಗಳನ್ನು ಹರಡಲಾಗುತ್ತಿದೆ. ದೈವಾರಾಧನೆಯ ಪಾರಂಪರಿಕ ಶೈಲಿಗೆ ಭಿನ್ನವಾಗಿ ವೈಭವೋಪೇತ ರೀತಿಯಲ್ಲಿ ಮೈಯಲ್ಲಿ ಆವಾಹಿಸಿಕೊಂಡು, ತ್ರಿಶೂಲ ಹಿಡಿದು ದೇವಿ ಮಹಾತ್ಮೆ ಯಕ್ಷಗಾನದ ದೇವಿ ಪಾತ್ರದಾರಿಯಂತೆ ಕುಣಿಯುವ ಹೊಸ ಪದ್ಧತಿ ಬಂದಿದೆ. ಈ ದೇವಾಲಯಕ್ಕೆ ಈಗ ಸಾವಿರಾರು ಭಕ್ತರಿದ್ದಾರೆ.
ಇಂತಹ ಇನ್ನೊಂದು ಹೊಸ ದೇವಾಲಯ ತ್ರಿಶೂರಿನ ವಿಷ್ಣುಮಾಯ ದೇವಾಲಯ. ಇದು ತನ್ನ ವೆಬ್‌ಸೈಟಿನಲ್ಲಿ ತ್ರಿಶೂರ್‌ನಲ್ಲಿರುವ ಏಕೈಕ ಅಧಿಕೃತ ಪೆರಿಂಗೊಟ್ಟುಕರ ದೇವಸ್ಥಾನ ವಿಷ್ಣುಮಾಯ ದೇವಾಲಯ ನಮ್ಮದು. ಪ್ರಾಚೀನ ಮತ್ತು ದೊಡ್ಡ ದೇವಾಲಯ” ಎಂದು ಬರೆದುಕೊಂಡಿದೆ. ಇದಕ್ಕೊಬ್ಬ ಧರ್ಮದರ್ಶಿ ಇದ್ದಾನೆ. ಈ ದೇವಾಲಯವನ್ನು ಪ್ರಚಾರ ಮಾಡಲು ಹಿರಿಯ ನಟಿ ಅಂಬಿಕಾ ಸೇರಿದಂತೆ ಯೂಟ್ಯೂಬರ್‌ಗಳನ್ನೆಲ್ಲಾ ಬಳಸಲಾಗುತ್ತಿದೆ.
ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು. ಹೊಸ ದೇವರು, ದೇವಾಲಯ ಇನ್ಸ್ಟಾಗ್ರಾಮ್, ಫೇಸ್‌ಬುಕ್ ರೀಲ್‌ಗಳಲ್ಲಿ ಬಂದರೆ ಸಾಕಷ್ಟೇ! ಹಿಂದೆ ಶಬರಿಮಲೆಗೆ ಹೋಗುತ್ತಿದ್ದ ಭಕ್ತರು, ಈಗ ಕೊಟ್ಟಿಯೂರನ್ನು ನೋಡಿದ್ದಾರೆ, ನಾಳೆ ಇನ್ನೊಂದು ದೇವಾಲಯ-ಅಚರಣೆಯ ರೀಲ್ಸ್ ಬಂದರೆ ಆ ಕಡೆಗೆ ಹೋಗುತ್ತಾರೆ.
ಭಕ್ತಿಯೆಂಬುದು ತೋರುಂಬ ಲಾಭ – ಅಲ್ಲಮ ಪ್ರಭು
ಲೇಖನ: ಚರಣ್ ಐವರ್ನಾಡು