“ಗಾಜಾ ನಿವಾಸಿಗಳೇ, ನಿಮ್ಮ ವೈಯಕ್ತಿಕ ಸುರಕ್ಷತೆ ಮತ್ತು ನಿಮ್ಮ ಕುಟುಂಬಗಳಿಗಾಗಿ ದಕ್ಷಿಣಕ್ಕೆ ತೆರಳಿ. ಮಾನವ ಗುರಾಣಿಯಾಗಿ ನಿಮ್ಮನ್ನು ಬಳಸಿಕೊಳ್ಳುವ ಹಮಾಸ್ ಭಯೋತ್ಪಾದಕರಿಂದ ದೂರವಿರಿ. ಇಸ್ರೇಲ್‍ಪಡೆಗಳು ಮುಂಬರುವ ದಿನಗಳಲ್ಲಿ ಗಾಜಾ ನಗರದಲ್ಲಿ ಗಣನೀಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಬಯಸುತ್ತದೆ” ಎಂದು ಇಸ್ರೇಲಿ ರಕ್ಷಣಾ ಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆಯ ಈ ಹೇಳಿಕೆಯನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ವಿನಾಶಕಾರಿ ದಾಳಿ ನಡೆಸದಂತೆ ಮನವಿ ಮಾಡಿದೆ.
ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಸ್ಥಳೀಯರು 24 ಗಂಟೆಯೊಳಗೆ ದಕ್ಷಿಣ ನಗರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ವಿಶ್ವಸಂಸ್ಥೆ ವಿನಾಶಕಾರಿ ದಾಳಿ ನಡೆಸದಂತೆ ಇಸ್ರೇಲ್‍ಗೆ ಸೂಚನೆ ನೀಡಿದೆ.
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧವನ್ನು ವಿಪತ್ತಿನ ಪರಿಸ್ಥಿತಿಯಾಗಿ ಪರಿವರ್ತಿಸುವುದನ್ನು ತಪ್ಪಿಸಲು ಗಾಜಾ ನಿವಾಸಿಗಳ ಸಾಮೂಹಿಕ ಸ್ಥಳಾಂತರ ಆದೇಶವನ್ನು ವಾಪಸ್ ಪಡೆಯುವಂತೆ ವಿಶ್ವಸಂಸ್ಥೆ ಇಸ್ರೇಲ್ ಮಿಲಿಟರಿಗೆ ಕರೆ ನೀಡಿದೆ. ವಿನಾಶಕಾರಿ ಮಾನವೀಯ ಪರಿಣಾಮಗಳಿಲ್ಲದೆ ಅಂತಹ ಆಂದೋಲನ ನಡೆಯುವುದು ಅಸಾಧ್ಯವೆಂದು ಪರಿಗಣಿಸಲಾಗುವುದು ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ.
ಮಾರಣಾಂತಿಕ ಇಸ್ರೇಲ್ -ಹಮಾಸ್ ಯುದ್ಧವು ಇಂದಿಗೆ ಒಂದು ವಾರವನ್ನು ಪೂರ್ಣಗೊಳಿಸುತ್ತದೆ. ಯುದ್ಧವು ಶನಿವಾರ ಪ್ರಾರಂಭವಾದಾಗಿನಿಂದ ಇಸ್ರೇಲ್‍ನಲ್ಲಿ ಕನಿಷ್ಠ 1,200 ಮತ್ತು ಗಾಜಾ ಪಟ್ಟಿಯಲ್ಲಿ 1,400 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ, 1,500 ಹಮಾಸ್ ಕಾರ್ಯಕರ್ತರ ಶವಗಳು ಇಸ್ರೇಲ್ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.
ಈ ನಡುವೆ ವಾರದ ಹಿಂದೆ ಇಸ್ರೇಲಿ ಕಡೆಯಿಂದ ಅಪಹರಿಸಲ್ಪಟ್ಟ ಸುಮಾರು 150 ಜನರನ್ನು ಇನ್ನೂ ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ.
ಇಸ್ರೇಲ್ ಗಾಜಾದ ಮೇಲೆ ಸಂಪೂರ್ಣ ಮುತ್ತಿಗೆ ಹಾಕಿದೆ. ಗಾಜಾಪಟ್ಟಿಗೆ ಇಲ್ಲಿಯವವರೆಗೆ ಸರಬರಾಜು ಆಗುತ್ತಿದ್ದ ನೀರು, ಇಂಧನ ಮತ್ತು ವಿದ್ಯುತ್ ಸರಬರಾಜುಗಳನ್ನು ಸಂಪೂರ್ಣ ಕಡಿತಗೊಳಿಸಿದೆ. ಹಮಾಸ್ ಪ್ಯಾಲೆಸ್ತೇನ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ಮಾನವೀಯ ನೆರವನ್ನು ಅನುಮತಿಸುವುದಿಲ್ಲ ಎಂದು ಇಸ್ರೇಲ್ ಪ್ರತಿಜ್ಞೆ ಮಾಡಿದೆ.