Home ಬ್ರೇಕಿಂಗ್ ಸುದ್ದಿ ಹಾಸನ ಮಹಾನಗರ ಪಾಲಿಕೆ ವಾರ್ಡ್ ಪುನರ್ ವಿಂಗಡಣೆ – ರಾಜ್ಯ ಸರ್ಕಾರ ಕರಡು ಪ್ರಕಟ

ಹಾಸನ ಮಹಾನಗರ ಪಾಲಿಕೆ ವಾರ್ಡ್ ಪುನರ್ ವಿಂಗಡಣೆ – ರಾಜ್ಯ ಸರ್ಕಾರ ಕರಡು ಪ್ರಕಟ

ಹಾಸನ : ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಪ್ರಕಾರ, 2011 ರ ಜನಗಣತಿ ಆಧಾರದ ಮೇರೆಗೆ ಹಾಸನ ಮಹಾನಗರ ಪಾಲಿಕೆಗೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ನಿಗದಿ ಪಡಿಸಿ ರಾಜ್ಯ ಸರ್ಕಾರ ಕರಡನ್ನು ಪ್ರಕಟಿಸಿದೆ.

ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ನಗರಸಭೆ ಅವಧಿಯಲ್ಲಿ ಇದ್ದಷ್ಟೇ ಅಂದರೆ 35 ವಾರ್ಡ್‌ಗಳೇ ಈಗಲೂ ಮುಂದುವರಿದಿವೆ. ಆದರೆ ಹಾಸನ ಮಹಾನಗರ ಪಾಲಿಕೆಯಾದ ನಂತರ ಎಲ್ಲ 35 ವಾರ್ಡ್‌ಗಳ ವ್ಯಾಪ್ತಿ ಮತ್ತು ವಿಸ್ತೀರ್ಣ ಹಿಗ್ಗಿದೆ. ಇದೀಗ ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದ ಗಡಿ ವ್ಯಾಖ್ಯಾನ(ಚೆಕ್ಕುಬಂದಿ) ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಈ ಮೂಲಕ ಹಾಸನ ಮಹಾನಗರ ಪಾಲಿಕೆಯ ಕರಡು ವಾರ್ಡ್‌ವಾರು ಕ್ಷೇತ್ರ ಪುನರ್‌ವಿಂಗಡಣಾ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ೧೫ ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು, ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಹಾಸನ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕೆಂದು ಮಂಜುನಾಥ್ ಅವರು ಸೂಚಿಸಿದ್ದಾರೆ.

You cannot copy content of this page

Exit mobile version