ಹಾಸನ : ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಅನುಭವದಲ್ಲಿಲ್ಲದವರಿಗೆ ನೀಡಿರುವ ದರಕಾಸ್ತು ಮಂಜೂರಾತಿಯನ್ನು ರದ್ದುಗೊಳಿಸಿ, ಕಳೆದ 60 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿರುವ 47 ಭೂಹೀನ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ದಲಿತ ಹಕ್ಕುಗಳ ಸಮಿತಿ (ಡಿಹೆಚ್‌ಎಸ್) ಹಾಸನ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರೆಕೆರೆ ಕಾವಲು ಗ್ರಾಮದ ಸರ್ವೆ ನಂಬರ್‌ಗಳು 48, 49, 50, 78 ರಿಂದ 96, 104, 107, 108, ಗ್ರಾಮ ಸರ್ವೆ ನಂಬರ್ 11, 12 ಹಾಗೂ ಜುಂಜನಹಳ್ಳಿ ಗ್ರಾಮದ ಸರ್ವೆ ನಂಬರ್‌ಗಳು 20, 27, 28, 30 ಸೇರಿ ಒಟ್ಟು 246 ಎಕರೆ ಭೂಮಿಯನ್ನು 1966ರಲ್ಲಿ 30 ದಲಿತ ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಆದರೆ ಈ ಪೈಕಿ ಕೇವಲ 10 ಕುಟುಂಬಗಳು ಮಾತ್ರ ಸ್ಥಳದಲ್ಲೇ ವಾಸವಿದ್ದು ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿವೆ. ಉಳಿದ 20 ಕುಟುಂಬಗಳು ಇಂದಿನವರೆಗೂ ಈ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಕೃಷಿ ನಡೆಸಿಲ್ಲ ಎನ್ನಲಾಗಿದೆ ಎಂದರು.
ಇನ್ನೊಂದೆಡೆ, ಇದೇ ಭೂಮಿಯಲ್ಲಿ ಕಳೆದ ಆರು ದಶಕಗಳಿಂದ ಕಾರೆಕೆರೆ ಕಾವಲು ಗ್ರಾಮದ 47 ಭೂಹೀನ ದಲಿತ ಕುಟುಂಬಗಳು ನಿರಂತರವಾಗಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಅನುಭವದಲ್ಲಿಲ್ಲದವರ ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಉಳುಮೆ ಮಾಡುತ್ತಿರುವ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಬೇಕು ಎಂದು ತಾಲ್ಲೂಕು ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಡಿಯಲ್ಲಿ ನಮೂನೆ 50, 53 ಹಾಗೂ 57 ಅರ್ಜಿಗಳನ್ನೂ ಸಲ್ಲಿಸಲಾಗಿದೆ ಎಂದು ಸಂಘಟನೆಗಳು ತಿಳಿಸಿದವು. ಈ ಸಂಬಂಧ 6.8.2002ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಮೈಸೂರು ವಿಭಾಗೀಯ ಕಚೇರಿಗೆ ಪತ್ರ ಬರೆಯಲಾಗಿದ್ದು, ನಂತರ 3.9.2022ರಂದು ವಿಭಾಗೀಯ ಕಚೇರಿಯಿಂದ ಸ್ಪಷ್ಟೀಕರಣ ಕೇಳಿ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಸಕಾರಾತ್ಮಕ ತೀರ್ಮಾನವಾಗಿಲ್ಲ ಎಂದು ಆರೋಪಿಸಿದರು.
ಪ್ರಸ್ತುತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಲಿ ಸಾಗುವಳಿ ಮಾಡುತ್ತಿರುವ ದಲಿತರನ್ನು ಭೂಮಿಯಿಂದ ವಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೇರೆ ಆದಾಯ ಮೂಲವಿಲ್ಲದೆ ಕೃಷಿಯನ್ನೇ ಅವಲಂಬಿಸಿರುವ 47 ದಲಿತ ಕುಟುಂಬಗಳ ದೀರ್ಘಕಾಲದ ಭೂಸ್ವಾಧೀನಾನುಭವವನ್ನು ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ, ಹಾಲಿ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕೆಂದು ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದವು.ಈ ವಿಷಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ನ್ಯಾಯ ಒದಗಿಸಬೇಕೆಂದು ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಡಿಹೆಚ್‌ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಹಾಗೂ ಗ್ರಾಮ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನವೀನ್ ಕುಮಾರ್, ಪೃಥ್ವಿ, ಸ್ವಾಮಿ, ಪಾಂಡುರಂಗ, ದೇವರಾಜು, ಸುನಿಲ್, ರವಿಕುಮಾರ್, ಧರ್ಮ, ಮೀನಾಕ್ಷಿ, ಮೂರ್ತಿ, ಪ್ರಕಾಶ್, ಸುರೇಶ್, ಬಾಬು, ಶಾಂತ ಕುಮಾರ್ ಹಾಗೂ ಇತರರು ಇದ್ದರು.
