Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಪೊಲೀಸ್ ಬಂಧನವನ್ನು ಪ್ರಶ್ನಿಸಿದ ನ್ಯೂಸ್‌ಕ್ಲಿಕ್ ಮುಖ್ಯಸ್ಥರ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್

ಪೊಲೀಸ್ ಬಂಧನವನ್ನು ಪ್ರಶ್ನಿಸಿದ ನ್ಯೂಸ್‌ಕ್ಲಿಕ್ ಮುಖ್ಯಸ್ಥರ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್

0

ಬೆಂಗಳೂರು,ಅಕ್ಟೋಬರ್.‌13: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (Unlawful Activities (Prevention) Act, Live Law- UAPA) ಬಂಧನದಲ್ಲಿರುವ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ.

ಸುದ್ದಿ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ, ಅಕ್ಟೋಬರ್ 3 ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ಬಂಧಿಸಲಾಗಿತ್ತು. ಈ ಸುದ್ದಿ ಸಂಸ್ಥೆಯು ಚೀನಾದ ಬಗ್ಗೆ ಪ್ರಚಾರ ಮಾಡಲು ಹಣವನ್ನು ಪಡೆದಿದೆ ಎಂಬ ಆರೋಪಿಸಿ, ಇಬ್ಬರನ್ನೂ ನಗರ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಅಕ್ಟೋಬರ್ 6 ರಂದು, ಟ್ರಯಲ್‌ ಕೋರ್ಟ್‌ನ ರಿಮಾಂಡ್ ಆದೇಶದಲ್ಲಿ ಏನೋ ದೋಷವಿದೆ ಎಂದು ಗೆಡೆಲಾ ಹೇಳಿದ್ದರು. ಏಕೆಂದರೆ ಆರೋಪಿಗಳ ವಕೀಲರನ್ನು ಕೇಳದೆ ಅದನ್ನು ಅಂಗೀಕರಿಸಲಾಗಿತ್ತು. ರಿಮಾಂಡ್ ಆದೇಶವು ಆರೋಪಿಯು ಕೌನ್ಸಿಲ್‌ಗೆ ಅರ್ಹನೆಂದು ಹೇಳುವ ದೆಹಲಿ ಹೈಕೋರ್ಟ್ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಪುರ್ಕಾಯಸ್ಥ ಅವರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದ್ದರು. ಆದರೆ, ಆಗಾಗಲೇ ಅವರಿಗೆ ಮಧ್ಯಂತರ ಬೇಲ್ ನೀಡಲು ಹೈಕೋರ್ಟ್ ನಿರಾಕರಿಸಿತ್ತು.

ಪೊಲೀಸ್ ಬಂಧನದ ನಂತರ ಪುರಕಾಯಸ್ಥ ಮತ್ತು ಚಕ್ರವರ್ತಿಯವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಬಾರ್ ಆಂಡ್‌ ಬೆಂಚ್‌ ವರದಿಯ ಪ್ರಕಾರ, ತಮ್ಮ ವಿರುದ್ಧದ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪುರಕಾಯಸ್ಥ ಮತ್ತು ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ.

ಆಗಸ್ಟ್ 17 ರಂದು ದಾಖಲಾದ ಎಫ್‌ಐಆರ್‌ನಲ್ಲಿ, ನ್ಯೂಸ್‌ಕ್ಲಿಕ್ ಭಾರತದ ಸಾರ್ವಭೌಮತೆಗೆ ಅಡ್ಡಿಪಡಿಸಲು “ಮತ್ತೆ ಮತ್ತೆ, ಕದ್ದುಮುಚ್ಚಿ- circuitous and camouflaged manner” ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್ ಆಗಸ್ಟ್ 5 ರಂದು ಮಾಡಿದ ವರದಿಯಲ್ಲಿ ಭಾರತೀಯ ಸುದ್ದಿ ವೆಬ್‌ಸೈಟ್ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣವನ್ನು ಪಡೆದಿದೆ ಎಂದು ಉಲ್ಲೇಖಿಸಿದ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ. ಎಫ್‌ಐಆರ್ ಸಿಂಘಮ್ ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಎಂದು ಉಲ್ಲೇಖಿಸಲಾಗಿದೆ.

You cannot copy content of this page

Exit mobile version