Home ಬೆಂಗಳೂರು ಬಿಡದಿ ಟೌನ್‌ಶಿಪ್ ಯೋಜನೆ ತಕ್ಷಣ ಕೈಬಿಡಬೇಕು – ಎಚ್.ಡಿ. ದೇವೇಗೌಡ ರಾಜ್ಯ ಸರ್ಕಾರಕ್ಕೆ ಒತ್ತಾಯ

ಬಿಡದಿ ಟೌನ್‌ಶಿಪ್ ಯೋಜನೆ ತಕ್ಷಣ ಕೈಬಿಡಬೇಕು – ಎಚ್.ಡಿ. ದೇವೇಗೌಡ ರಾಜ್ಯ ಸರ್ಕಾರಕ್ಕೆ ಒತ್ತಾಯ

ರಾಮನಗರ : ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಿಡದಿ ಟೌನ್‌ಶಿಪ್ ನಿರ್ಮಿಸುವ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಡದಿಯ ಬಿಜಿಎಸ್ ವೃತ್ತದಿಂದ ಆರಂಭವಾದ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆಗಾಗಿ ಸುಮಾರು 9,600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ಎಂದು ಹೇಳುತ್ತಲೇ, ಭೂಮಿಯ ಬೆಲೆ ಹೆಚ್ಚಿಸಿ ರೈತರಿಗೆ ಆಮಿಷವೊಡ್ಡಲಾಗುತ್ತಿದೆ ಎಂದು ಅವರು ದೂರಿದರು. ಬಡ ರೈತರ ಹೊಟ್ಟೆ ಮೇಲೆ ಹೊಡೆಯುವ ಈ ಯೋಜನೆಯನ್ನು ಕೈಬಿಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೇವೇಗೌಡ ಮನವಿ ಮಾಡಿದರು. ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ನಿವೇಶನಗಳು ಹಾಗೂ ನಿರ್ಮಾಣಗೊಂಡ ಮನೆಗಳು ಖಾಲಿ ಬಿದ್ದಿವೆ. ಅವುಗಳಿಗೆ ಬೇಡಿಕೆ ಇಲ್ಲದಿರುವಾಗ ರೈತರ ಸಣ್ಣ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಯಾರ ಓಲೈಕೆಗಾಗಿ ಟೌನ್‌ಶಿಪ್ ನಿರ್ಮಿಸುತ್ತೀರಿ ಎಂದು ಪ್ರಶ್ನಿಸಿದರು. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿ ರೈತರು ನಡೆಸುತ್ತಿರುವ ಹೋರಾಟವನ್ನು ಅಭಿನಂದಿಸಿದ ದೇವೇಗೌಡ, ಕೇಂದ್ರ ಸಚಿವರಾಗಿದ್ದರೂ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ಎಂದರು.

You cannot copy content of this page

Exit mobile version