Home ಅಂಕಣ ಬಿದಿರು ಮೆಳೆಯೊಳಗೆ…

ಬಿದಿರು ಮೆಳೆಯೊಳಗೆ…

0

  (ಈವರೆಗೆ…)

ಕೊನೆಗೂ ಒಲ್ಲದ ಮನಸಿನಿಂದಲೇ ಗಂಗೆಯ ಮದುವೆಗೆ ಒಪ್ಪಿಗೆ ನೀಡುತ್ತಾನೆ. ಮದುವೆಗೆ ಹಣ ಹೊಂದಿಸುವುದು ಕಷ್ಟವಾಗಿ ಮನೆಯ ಪ್ರೀತಿಯ ಹಸುವನ್ನು ಮಾರಬೇಕಾಗಿ ಬರುತ್ತದೆ. ಆಗ ಗಂಗೆಗೂ ಚಂದ್ರಹಾಸನಿಗೂ ಮಾತಿಗೆ ಮಾತು ಬೆಳೆದು ಆತ ಗಂಗೆಯ ಮೇಲೆ ಕೈ ಮಾಡುತ್ತಾನೆ. ತಕ್ಷಣವೇ ಪ್ರವೇಶಿಸಿದ ಅಮ್ಮ ಗಂಗೆಯ ಪರ ವಹಿಸಿ ಮಾತಾಡಿದಾಗ ಅಪ್ಪನ ನೆನಪುಗಳು ಲಕ್ಷ್ಮೀ ಯ ಹಿಂದಕ್ಕೋಡಿದವು. ಯಾರೀ ಲಕ್ಷ್ಮೀ ? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆ ಅಂಕಣದ ಐದನೆಯ ಕಂತು.   

ಸಾಕು ಮಗಳು “ಲಕ್ಷ್ಮೀ” ಅವ್ವನ ಮಡಿಲು ಸೇರಿದಾಗ ಮೂರು ದಿನದ ಹಸುಳೆ. ಆಗ ಅವ್ವ ಎರಡನೇ ಮಗ ಗಿರಿಧರನ ತುಂಬು ಬಸುರಿ. ಹೆರಿಗೆ ಆಗಲೋ ಈಗಲೋ ಎನ್ನುವಂತಿದ್ದಳು. ಸಾಮಾನ್ಯವಾಗಿ ಪ್ರತಿ ದಿನ ಮುಸ್ಸಂಜೆ ಆ ಬೀದಿಯ ಹೆಂಗಸರೆಲ್ಲಾ ಮಾತಾಡಿಕೊಂಡು ಒಟ್ಟಿಗೆ ಮೈಲು ದೂರದ ಹೊಳೆಗೆ ಹೋಗಿ, ಬಟ್ಟೆ ಪಾತ್ರೆಯ ಕೆಲಸ ಮುಗಿಸಿ ನೀರು ಹೊತ್ತು  ತರುತ್ತಿದ್ದುದು ವಾಡಿಕೆ. ಆ ದಿನ ಪುಟ್ಟ ಚಂದ್ರಹಾಸ ಆಟವಾಡುತ್ತಾ ನೀರಿನ ಗಡಿಗೆ ಎಳೆದು ಬೀಳಿಸಿದ್ದರಿಂದಾಗಿ ಮನೆಯಲ್ಲಿ  ಕುಡಿಯಲು ಹನಿಯೂ ನೀರಿಲ್ಲದಂತಾಯ್ತು. ಅನಿವಾರ್ಯವಾಗಿ ಅವ್ವ ಆ ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನಲ್ಲೇ ನೀರು ತರಲೆಂದು ಬಿಂದಿಗೆ ಹಿಡಿದು ಒಬ್ಬಳೇ ಹೊಳೆಯ ಕಡೆ ನಡೆದಳು.

ಅಲ್ಲಿ ನೀರ ಶಬ್ದದ ಹೊರತಾಗಿ  ಒಂದು ನರ ಪಿಳ್ಳೆಯ ಸದ್ದು ಸುಳಿವೂ ಇರಲಿಲ್ಲ. ಹಳೇ ನಾರಿಪುರದ ಜನ, ಮಧ್ಯಾಹ್ನದ ಹೊತ್ತು ಅದರಲ್ಲೂ ರಣ ಬಿಸಿಲು ರಾಚುವ ಸಮಯದಲ್ಲಿ ನೀರೊಳೆಯ ಹಾದಿಯಲ್ಲಿ ಕೆಟ್ಟ ಗಾಳಿಯ ಸುಳಿದಾಟವಿರುತ್ತದೆ ಎಂದು ಬಲವಾಗಿ ನಂಬಿದ್ದರು. ಹಾಗಾಗಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನಾಗಲಿ, ತುಂಬು ಬಸುರಿ, ಬಾಣಂತಿಯರನ್ನಾಗಲಿ ಆ ಸಮಯದಲ್ಲಿ ಹೊಳೆಯ ಕಡೆ ಸುಳಿಯದಂತೆ ನೋಡಿಕೊಳ್ಳುತ್ತಿದ್ದರು.

ಈ ಮನೆಯಲ್ಲೋ ಒಳಗಿನ ಎಲ್ಲಾ ಕೆಲಸವನ್ನು ಅವ್ವನೆ ನಿಭಾಯಿಸ ಬೇಕಿತ್ತು. ಪಕ್ಕದ ಮನೆಯಲ್ಲಿಯೇ ಅತ್ತೆ, ಮಾವ, ನಾದಿನಿ, ನಾದಿನಿಯ ಮಕ್ಕಳಿದ್ದರೂ ಕೂಡ ಅವರೊಂದಿಗಿನ ಸಂಬಂಧವೂ ಒಡೆದು ಹೋಗಿತ್ತು. ಇನ್ನು ಅಪ್ಪ ಬೆಳಿಗ್ಗೆ ರೊಟ್ಟಿ ಕಟ್ಟಿಕೊಂಡು ಹೊಲ ಹೊಕ್ಕರೆ ಬರುತ್ತಿದ್ದುದು ಸೂರ್ಯ ಮುಳುಗುವ ಹೊತ್ತಿಗೆ. ಹಾಗಾಗಿ ಅವ್ವ, ಎರಡು ವರ್ಷದ ಹಸುಳೆ ಚಂದ್ರಹಾಸನನ್ನು ಎದುರು ಮನೆಯ ತಿಮ್ಮಜ್ಜಿ ಕೈಗಿಟ್ಟು ಹೊಳೆಗೆ ಬಂದಿದ್ದಳು. ಆ ನದಿಯ ನೀರವತೆ ಅವ್ವನನ್ನು ತುಸು ಕನಲಿಸಿತಾದರು, ಬಿಸಿಲ ಬೇಗೆಯಲ್ಲಿ ನಡೆದು ಬಂದ ಅವ್ವನ ಕಾಲು ನೀರಿಗೆ ತಾಕಿದ ಕೂಡಲೇ ಅವಳಲ್ಲಿ ಹೊಸ ಜೀವ ಸಂಚಾರವಾದಂತಾಯಿತು. ನಿಧಾನವಾಗಿ ಕೈಕಾಲು ಮುಖ ತೊಳೆದು, ಬಾಯಿ ಮುಕ್ಕಳಿಸಿ ಉಗಿದು, ಎರಡು ಬೊಗಸೆ ನೀರು ಕುಡಿದು ದೇಹ ತಂಪಾಗಿಸಿ ಕೊಂಡಳು. ತಾಮ್ರದ ಬಿಂದಿಗೆಯನ್ನು ಹುಣಸೆ ಹಾಕಿ ತಿಕ್ಕಿ ತೊಳೆದು ಇನ್ನಷ್ಟು ತಳತಳಿಸುವಂತೆ ಮಾಡಿದಳು.ಇನ್ನೇನು ನೀರು ಮೊಗೆಯಬೇಕೆಂದು ಬಗ್ಗಿದಳು. ಅಷ್ಟರಲ್ಲಿ ಪಕ್ಕದ ಬಿದಿರು ಮೆಳೆಯಿಂದ ಚಿಟ್ಟನೆ ಚೀರಿದ ಹಸುಗೂಸಿನ ದನಿ ಮಿಂಚಿನಂತೆ ಅವ್ವನ ಕಿವಿಗೆ ಬಡಿಯಿತು. ಕ್ಷಣ ಅವ್ವನ ಎದೆ ಝಲ್ ಎಂದಿತ್ತು. ಸುಧಾರಿಸಿಕೊಂಡು ಸುತ್ತಲೂ ನೋಡಿದಳು. ಯಾರು ಕಾಣಲಿಲ್ಲ. ಮತ್ತೆ ಮತ್ತೆ ಉಸಿರು ಕಟ್ಟಿ ಅಳುವ ಮಗುವಿನ ದನಿ ಜೋರಾಗುತ್ತಲೇ ಇತ್ತು. ಅವ್ವ ಧೈರ್ಯ ಮಾಡಿ ಬಿಂದಿಗೆಯನ್ನು ಒಂದು ಬದಿಗೆ ಕುಕ್ಕಿ ಬಿದಿರು ಮೆಳೆ ಕಡೆಗೆ ಹೆಜ್ಜೆ ಹಾಕಿದಳು. ಅಲ್ಲಿ ಅನತಿ ದೂರದಲ್ಲಿ ತಲೆಗೆ ಮುಸುಕು ಹಾಕಿ ಕುಳಿತಿದ್ದ ಹೆಣ್ಣೊಬ್ಬಳ ಬೆನ್ನು ಕಾಣಿಸಿತು. ಅವ್ವನಿಗೆ ಒಳಗೊಳಗೆ ಅಂಜಿಕೆ. ಇದು ನಿಜಕ್ಕೂ ಹೆಂಗಸೋ ಅಥವಾ ಹೆಣ್ಣಿನ ರೂಪದ ದಯ್ಯವೋ ಎಂದು. ಅನುಮಾನಿಸುತ್ತಲೇ ಆ ಮಗುವಿನ ಅಳು  ಕೇಳಲಾರದೆ ಹತ್ತಿರ ಹೋದಳು. ಆ ಹೆಂಗಸನ್ನು ನೋಡಿ ಅವ್ವ ಕ್ಷಣ ಗರಬಡಿದವಳಂತಾದಳು. ನೋಡಲು ಕೆಂಪಗೆ ಲಕ್ಷಣವಾಗಿದ್ದ ಆ ಹೆಂಗಸು ಕಣ್ಣೀರು ಸುರಿಸುತ್ತಾ, ಆ ಎಳೇ ಹಸುಳೆಯ ಕತ್ತನ್ನು ಬಲವಾಗಿ ಹಿಸುಕ ತೊಡಗಿದ್ದಳು.

ಬಿರುಸಾಗಿಯೇ ಆ ಹೆಂಗಸಿನ ಬೆನ್ನಿಗೆ  ಗುದ್ದಿದ ಅವ್ವ ಅವಳ ಕೈಯಿಂದ ಕೆಂಪಾಗಿ ಗುಂಡು ಗುಂಡಾಗಿದ್ದ ಆ ಮೂರು ದಿನದ ಹಸುಳೆಯನ್ನು ಕಸಿದು ಕೊಂಡಳು. ಉಸಿರು ತಿರುಗಿಸಿ ಕೊಳ್ಳಲಾರದೆ ಒದ್ದಾಡುತ್ತಿದ್ದ ಆ ಹಸುಳೆಯ ನೆತ್ತಿ ಉರುಬಿ ಎದೆ, ಬೆನ್ನು, ಅಂಗಾಲುಗಳನ್ನು ಬಿರುಸಾಗಿ ಉಜ್ಜಿದಳು. ಸ್ವಲ್ಪ ಸಮಯದ ನಂತರ ಮಗು ಸುಧಾರಿಸಿಕೊಂಡಿತು. ತಲೆತಗ್ಗಿಸಿ ಕುಳಿತಿದ್ದ ಆ ಹೆಂಗಸಿನ ಕೂದಲು ಜಗ್ಗಿ ಮೇಲೆತ್ತಿದಳು. “ನಿನಗೇನ್ ಬಂದದೆ ಮುಂಡೆದೆ ದೊಡ್ರೋಗ. ಈ ಅರಿದ್ ಮಗಿನ್ ಜೀವ ತೆಗಿತಿದಿಯಲ್ಲಾ. ನೀನೇನು ಮನ್ಸೆನೋ ರಾಕ್ಷಸಿಯೋ” ಎಂದು ಜೋರು ಮಾಡಿದಳು. ಅವ್ವನ ಕಾಲಿನ ಮೇಲೆ ಬೋರಲು ಬಿದ್ದು ಗೊಳೋ ಎಂದು ಅಳತೊಡಗಿದಳು ಆ ಹೆಂಗಸು. “ಈ ಮಗಿನ್ ಎತ್ಕೊಂಡು ನಮ್ಮ ಹಟ್ಟಿಗೋದ್ರೆ, ನಮ್ಮ ಕುಲದವರು ನನ್ನ ಕೊಂದುಬಿಡ್ತಾರೆ ಕಣವ್ವ. ನಿನ್ನ ದಮ್ಮಯ್ಯ ನನ್ನ್ ಹಿಂದು ಮುಂದು ಏನು ಕೇಳ್ಬೇಡ ಎಂದು ಗೋಗರೆದುಕೊಂಡಳು. ಹೆತ್ತ ಮೂರು ದಿನದಿಂದ ಈ ಮಗಿನ ಏನು ಮಾಡಬೇಕು ಅಂತ ಗೊತ್ತಾಗದೆ ಒದ್ದಾಡಿ ಒದ್ದಾಡಿ ಇವತ್ತು ಒಂದು ನಿರ್ಧಾರಕ್ಕೆ ಬಂದು ಇಲ್ಲಿಗೆ ಬಂದೆ ಎಂದಳು. ತಿಮ್ಮಜ್ಜಿ ಬಳಿ ಮಗುವನ್ನು ಬಿಟ್ಟು ಬಂದಿದ್ದ ಅವ್ವನೂ ಮನೆ ಸೇರುವ ಧಾವಂತದಲ್ಲಿದ್ದಳು. ಹಾಗಾಗಿ ಯಾವುದನ್ನು ಕೆದಕಿ ಕೇಳುವ ಉತ್ಸಾಹವೂ ಅವಳಿಗಿರಲಿಲ್ಲ. “ಸರಿ ಈ ಮಗಿನ ಚಿಂತೆ ಬುಟ್ಟು ಎಲ್ಲಾದ್ರು  ಬದಿಕೋ ಹೋಗು. ಇದಿನ್ನು ನನ್ನ ಕೂಸು ಇನ್ಯಾವತ್ತೂ ಹುಡಿಕ್ಕೊಂಡು  ಬರಕೂಡ್ದು ಗೊತ್ತಾಯ್ತಾ” ಎಂದು ಹೇಳಿ ತಲೆಯ ಮೇಲೆ ತುಂಬಿದ ಬಿಂದಿಗೆ ಹೊತ್ತು  ಮಡಿಲಿಗೆ ಮಗುವನ್ನು ಕಟ್ಟಿಕೊಂಡು ಮನೆಯ ದಾರಿ ಹಿಡಿದಳು.

ತಮ್ಮ ತಮ್ಮ ಮನೆಯ ಬಾಗಿಲಲ್ಲಿ ಕುಳಿತು, ನಿಂತು, ಅವರಿವರ ಸುದ್ದಿ ಸಮಾಚಾರಗಳಲ್ಲಿ ಮುಳುಗಿ ಹೋಗಿದ್ದ ಹೆಂಗಸರು ತಲೆಯ ಮೇಲೆ ತುಂಬಿದ್ದ ಬಿಂದಿಗೆ, ಮಡಿಲಲ್ಲಿ ರಚ್ಚೆ ಹಿಡಿದು ಅಳುತ್ತಿರುವ ಹಸು ಗೂಸು, ತುಂಬಿ ನಿಂತಿದ್ದ ಬಸುರು ಹೊತ್ತು  ನಿಧಾನವಾಗಿ ನಡೆದು ಬರುತ್ತಿದ್ದ ಅವ್ವನನ್ನು ಕಂಡು ದಂಗು ಬಡಿದಂತಾದರು. ದಂಡುಗಟ್ಟಿ ಅವ್ವನ ಬಳಿ ಓಡಿ ಬಂದರು. ಹೆರಿಗೆ ಆಗೋಯ್ತ, ಎಲ್ಲಾಯಿತು, ಹೇಗಾಯ್ತು, ಜೊತೆಗೆ ಯಾರಿದ್ರು, ಹೊಟ್ಟೆ ಯಾಕಿಳ್ದಿಲ್ಲ, ಅದು ತುಂಬಿದ ಬಿಂದಿಗೆ ಹೊತ್ಕೊಂಡು ಹ್ಯೆಂಗ್ ನಡಿತಿದ್ದಿ…?   ಹೀಗೆ ಒಂದರ ಮೇಲೊಂದು ಪ್ರಶ್ನೆಯ ಸುರಿ ಮಳೆಯನ್ನೇ ಗರೆದರು. ಏದುಸಿರು ಬಿಡುತ್ತಿದ್ದ ಅವ್ವ ಅವರೊಂದಿಗೆ ಮನೆ ಸೇರಿ ನಡೆದ ಘಟನೆಯನ್ನೆಲ್ಲಾ ಸವಿಸ್ತಾರವಾಗಿ ಹೇಳಿದಳು. ಇಡೀ ಕತೆಯನ್ನು ಮೈ ಎಲ್ಲಾ ಕಿವಿಯಾಗಿ  ಕೇಳಿಸಿಕೊಂಡ ಆ ಹೆಂಗಸರು  ಇನ್ನಷ್ಟು ದಿನ ಬಾಯಾಡಲು ಹೊಸ ಸುದ್ದಿ ಸಿಕ್ಕ ಸಂಭ್ರಮದಲ್ಲಿ ತಮ್ಮ ತಮ್ಮ ಮನೆ ಕಡೆ ನಡೆದರು.

(ಮುಂದುವರೆಯುವುದು..)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

You cannot copy content of this page

Exit mobile version