ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಭಂಧಿಸಿದಂತೆ ಮಾಜಿ ಸಚಿವ ಹೆಚ್,ಡಿ ರೇವಣ್ಣ (HD Revanna) ಅವರಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ಈ ಕೇಸ್ಗೆ ಕುರಿತಂತೆ ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ.ಈ ಮೂಲಕ ಕೊನೆಗೂ ರೇವಣ್ಣ ಕುಟುಂಬಕ್ಕೆ ಒಂದು ಸಿಹಿಸುದ್ದಿ ಸಿಕ್ಕಿದೆ. ಸದ್ಯ ರೇವಣ್ಣ ಆರೋಪಮುಕ್ತವಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮನೆಕೆಲಸದಾಕೆ ನೀಡಿದ ದೂರಿಗೆ ಸಂಬಂಧಿಸಿದಂತೆ ಹೆಚ್ ಡಿ ರೇವಣ್ಣ ನಿರ್ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಡಿ.29) ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ :ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ ಡಿ ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 2024ರ ಏ.28ರಂದು ಪ್ರಕರಣ ದಾಖಲಿಸಲಾಗಿತ್ತು.ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್ ಪ್ರಕರಣ 354A, 354D, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್ನನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.ರೇವಣ್ಣ ಅವರು, ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತಿದ್ದರು. ಅಲ್ಲದೆ ತಮ್ಮ ಮಗಳಿಗೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ನೀಡಿದ್ದು, ಮಗಳು ಹೆದರಿ ನಂಬರ್ ಬ್ಲಾಕ್ ಮಾಡಿಕೊಂಡಿದ್ದಳು. ಇದರಿಂದ ತಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.
ಪ್ರಜ್ವಲ್ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಾಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಬ್ಬ ಮಹಿಳೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ವಿಡಿಯೋ ನೋಡಿ ಭಯವಾಗಿದ್ದು, ತನ್ನ ಗಂಡ ಕೂಡ ತನ್ನ ಶೀಲ ಶಂಕಿಸುತ್ತಿದ್ದಾರೆ. ವಿಡಿಯೋ ಬಹಿರಂಗಗೊಂಡರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಳು. ಇದರಿಂದ ಮಾನಸಿಕ ಹಿಂಸೆ ಆಗಿದೆ ಎಂದು ಅಂದು ದೂರಿನಲ್ಲಿ ಮಹಿಳೆ ವಿವರಿಸಿದ್ದರು. ಜೀವ ಭಯ ಇರುವುದರಿಂದ ತಮಗೆ ಹಾಗೂ ತಮ್ಮ ಮಗಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
