ಹಾವೇರಿ : ಹೆಂಗಿದ್ದ ಕಾಲ ಹೆಂಗಾಯ್ತು ನೋಡಿ. ಧಾರಾವಾಹಿಗಳು (Tv Serials) ಮೊದ ಮೊದಲು ವಾರಕ್ಕೊಮ್ಮೆ ಪ್ರಸಾರ ಕಂಡು ನಂತರ ದಿನಕ್ಕೊಮ್ಮೆ ಪ್ರಸಾರ ಕಾಣತೊಡಗಿದಾಗ ಮಂದಿ ಎಡೆಬಿಡದೇ ವೀಕ್ಷಿಸತೊಡಗಿದ್ರು ಅದರಲ್ಲೂ ಧಾರಾವಾಹಿಗಳೆಂದರೆ ಮಹಿಳೆಯರು (Women) ಎಂಬಂತಾಗಿವೆ. ಮಹಿಳೆಯರಂತೂ ಕಣ್ಣು ಮಿಟುಕಿಸದೆ ಟೀವಿ ಮುಂದೆ ಪಟ್ಟಾಗಿ ಕೂರುವ ಧಾರಾವಾಹಿ ಜೀವಿಗಳೆಂಬ ಹಣೆಪಟ್ಟಿ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಹಾವೇರಿ (Haveri) ಎಸ್ ಪಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಗಂಟೆಗಳ ಕಾಲ ಮನೆಗಳಲ್ಲಿ ಹೆಣ್ಣುಮಕ್ಕಳು ಧಾರಾವಾಹಿಗಳನ್ನು ವೀಕ್ಷಿಸುತ್ತಾ ಕೂರುತ್ತಾರೆ. ಮಹಿಳೆಯರಿಗೆ ಮನೆಹಾಳ ಬುದ್ಧಿ ಕಲಿಸೋದು ಧಾರಾವಾಹಿಗಳು ಎಂದು ಹಾವೇರಿ ಜಿಲ್ಲೆಯ ಎಸ್‌ಪಿ ಯಶೋಧಾ ಹೇಳಿದ್ದಾರೆ. ಆ ಮೂಲಕ ಧಾರಾವಾಹಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಈ ಧಾರಾವಾಹಿಗಳು ಸ್ತ್ರೀಯರನ್ನೇ ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವುದು, ರಭಸ ಹಾಗೂ ಸ್ಫೋಟಕೀಯ ಬದಲಾವಣೆ ಹಾಗೂ ರಂಜನೆ ತರಲು ಸ್ತ್ರೀ ಬಳಕೆಯಾಗುತ್ತಿರುವುದು ಮಾತ್ರ ನಾಗರಿಕ ಸಮಾಜಕ್ಕೆ ಅಗೌರವ ತರುವಂಥದ್ದು ಎಂಬುದು ಸತ್ಯ. ಅದನ್ನೇ ಹಾವೇರಿ ಎಸ್ ಪಿ ಹೇಳಿದ್ದಾರೆ.
ಹಾವೇರಿ ಶ್ರೀ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿದೆ. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರನ್ನು ರಂಜಿಸಿದೆ. ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು. ಹಾವೇರಿ ಎಸ್‌ಪಿ ಯಶೋಧಾ ಅವರು ಕೂಡ ಭಾಗಿ ಆಗಿ ವೇದಿಕೆಯಲ್ಲಿ ಮಾತನಾಡಿದ್ದಾರೆ. ಮನೆಗಳಲ್ಲಿ ಹೆಣ್ಣುಮಕ್ಕಳು ಧಾರಾವಾಹಿಗಳಿಗೆ ಅಡಿಕ್ಟ್ ಆಗಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಧ್ಯ ಆದಷ್ಟು ಧಾರವಾಹಿಗಳಿಂದ ದೂರ ಉಳಿಯಲು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಹೆಣ್ಣು ಮಕ್ಕಳು ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಬಿಟ್ಟು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೀರಾ. ಈ ಜಾತ್ರೆಯ ಮಹತ್ವ ಏನು ಎನ್ನುವುದು ಗೊತ್ತಾಗುತ್ತದೆ. ಧಾರಾವಾಹಿಗಳನ್ನು ನೋಡಬೇಡಿ ಎಂದು ಹೇಳಲ್ಲ. ಈ ಕಾರ್ಯಕ್ರಮದಲ್ಲಿ ಆ ವಿಚಾರ ಬೇಡ. ಆದರೂ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸ್ ಅಧಿಕಾರಿ ಎನ್ನುವುದು ನೆನಪಾಗುತ್ತದೆ. ಧಾರಾವಾಹಿಯವರು ನನ್ನ ಬಗ್ಗೆ ಬೇಸರಗೊಂಡರೂ ಪರವಾಗಿಲ್ಲ. ಮಹಿಳೆಯರು ಧಾರಾವಾಹಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೀರಾ ಅಂದ್ರೆ, ಹಿಂದಿನ ಬಾಗಿಲಿನಿಂದ ಕಳ್ಳ ಬಂದು ಕಳ್ಳತನ ಮಾಡಿಕೊಂಡು ಹೋದ್ರು ಗೊತ್ತಾಗಲ್ಲ. ಇಂತಹ ಉದಾಹರಣೆಗಳು ಸಾಕಷ್ಟಿವೆ ಎಂದು ಎಸ್‌ಪಿ ಯಶೋಧಾ ಹೇಳಿದ್ದಾರೆ.
ಧಾರಾವಾಹಿಗಳಲ್ಲಿ ಪ್ರತಿ ಹಂತಗಳಲ್ಲೂ ಹುನ್ನಾರ ಹೊಸೆಯುತ್ತ, ಮನೆಯ ಪ್ರತಿಯೊಬ್ಬರ ಮೇಲೂ ಎಗರಾಡುವ, ಕೆಡುಕನ್ನೇ ಬಯಸುವ ಹೆಣ್ಣಿನ ಪಾತ್ರಗಳ ಸೃಷ್ಟಿ ಈ ಕಾಲದ ಬಹು ದೊಡ್ಡ ವ್ಯಂಗ್ಯ. ಸಾರ್ವಜನಿಕ ಬದುಕಿನಲ್ಲಿ ಜರುಗುವ ಘಟನೆಗಳೇ ತೆರೆಯ ಮೇಲೆ ಪುನರ್ ಸೃಷ್ಟಿಯಾಗುತ್ತವೆ ಎನ್ನುವ ಹುಸಿ ಸುಳ್ಳನ್ನೇ ತಂತ್ರವನ್ನಾಗಿಸಿಕೊಂಡು ಈ ಋಣಾತ್ಮಕ ಪರಿಣಾಮ ಬೀರುವ ಅಂಶಗಳಿಗೆ ಸ್ತ್ರೀಯರನ್ನು ದಾಳವಾಗಿಸಿಕೊಂಡು ಪರದೆಯಲ್ಲಿ ಚಿತ್ರಿಸಲಾಗುತ್ತಿದೆ. ಕ್ರೂರತೆ ಹಾಗೂ ಕುತಂತ್ರಗಳು ಸಮಾಜದಲ್ಲಿ ಘಟಿಸುತ್ತಿದ್ದರೂ ಅದಕ್ಕೆಲ್ಲಾ ಹೊಣೆ ಹೆಣ್ಣು ಮಾತ್ರ ಆಗಿರಲು ಹೇಗೆ ಸಾಧ್ಯ? ಎಂದು ಹಾವೇರಿ ಎಸ್ಪಿ ಪ್ರಶ್ನೆ ಮಾಡಿದ್ದಾರೆ.
