ಬಳ್ಳಾರಿ : ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಬಿಗ್ ರಿಲೀಫ್ ಸಿಕ್ಕಿದೆ. ಅವರನ್ನು ಅರೆಸ್ಟ್ ಮಾಡುವಂತಿಲ್ಲ ಹಾಗೂ ಪೊಲೀಸ್ ಠಾಣೆಗೂ ಕರೆಯುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಜೊತೆಗೆ ಕಾನೂನು ಉಲ್ಲಂಘಸಿ ಪೂಲೀಸರು ನೋಟಿಸ್ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಈ ಬಗ್ಗೆ ಮಾಜಿ ಪಿಎಸ್ಐ ಗಿರೀಶ್ ಮಟ್ಟಣ್ಣನವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂ.ಡಿ. ವಿಡಿಯೋ ಮಾಡಿದ್ದರು, ಇದು ಸಾಮಾಜಿಕ ಜಾಣತಾಣಗಳಲ್ಲಿ ಸಕತ್ ವೈರಲ್ ಆಗುವ ಮೂಲಕ ಸೌಜನ್ಯ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿತ್ತು.
ಈ ಬಗ್ಗೆ ಪರ ವಿರೋಧ ಚರ್ಚೆಗಳು ಹೆಚ್ಚಾಗಿ ಸಮೀರ್ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿ ವೀಡಿಯೋ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಬುಧವಾರ ರಾತ್ರಿ ಸಮೀರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ -299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ತಡರಾತ್ರಿ 10.45 ಗಂಟೆಗೆ ಸಮೀರ್ ಎಂಡಿ ಅವರಿಗೆ ನೋಟಿಸ್ ನೀಡಿದ್ದರು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ ಸಮೀರ್ ನನಗೆ ಪೊಲೀಸ್ ನೋಟಿಸ್ ಬಂದಿದೆ ಆದರೆ ಇದರ ಬಗ್ಗೆ ನನಗೆ ಯಾವುದೇ ಭಯ ಇಲ್ಲ. ಯಾಕೆಂದರೆ ನಾನು ಮಾಡಿದಂತಹ ಸೌಜನ್ಯ ಪ್ರಕರಣದ ವೀಡಿಯೋ ಸಂಬಂಧ ಎಲ್ಲ ಆಧಾರಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ.
ಈ ವೀಡಿಯೋಗೆ ಒಂದು ಮಿಲಿಯನ್ ವ್ಯೂವ್ಸ್ ಬರುತ್ತಿದ್ದಂತಯೇ ಸಾಮಾಜಿಕ ಮಾಧ್ಯಮದಲ್ಲಿ ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸ ಲೀಕ್ ಆಯಿತು. ನಂತರ ನನಗೆ ಹಲವಾರು ಜೀವ ಬೆದರಿಕೆ ಕರೆಗಳ ಬರಲು ಪ್ರಾರಂಭವಾದವು. ಪೊಲೀಸರ ಬಳಿ ಹೋದರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ಬಳಿಕ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ಅವರು ನನಗೆ ದೈರ್ಯ ನೀಡಿ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವೀಡಿಯೊದಲ್ಲಿ ತಿಳಿಸಿದ್ದರು.
ಇದೀಗ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ಸಮೀರ್ ಅವರಿಗೆ ರಿಲೀಫ್ ನೀಡಿದ್ದು, ಅವರನ್ನು ಅರೆಸ್ಟ್ ಮಾಡುವಂತಿಲ್ಲ ಎಂದು ಪೊಲೀಸರಿಗೆ ತಾಕೀತು ಮಾಡಿದೆ. ಜೊತೆಗೆ ಕಾನೂನು ಉಲ್ಲಂಘಿಸಿ ನೋಟಿಸ್ ಕೊಟ್ಟಿರುವುದಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.