Home ರಾಜ್ಯ ಒಳಮೀಸಲಾತಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಹೆಚ್.ಸಿ. ಮಹದೇವಪ್ಪ ಅವರನ್ನು ಒತ್ತಾಯಿಸಿದ ಹೋರಾಟಗಾರರು

ಒಳಮೀಸಲಾತಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಹೆಚ್.ಸಿ. ಮಹದೇವಪ್ಪ ಅವರನ್ನು ಒತ್ತಾಯಿಸಿದ ಹೋರಾಟಗಾರರು

0

ಒಳಮೀಸಲಾತಿ ಕುರಿತಂತೆ ಹೋರಾಟಗಾರರು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಡಾ. ಹೆಚ್. ಸಿ ಮಹದೇವಪ್ಪರನ್ನು ಭೇಟಿ‌ ಮಾಡಿ ಒಳಮೀಸಲಾತಿ ಕುರಿತು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯಿಸಿದರು. 

ಆಗಸ್ಟ್ 1 ರಂದು ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾದ ತೀರ್ಪು ನೀಡಿ, ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು. 

ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ‌ಮಾಡುವಂತೆ ಕರ್ನಾಟಕ ಸರ್ಕಾರವನ್ನು ಒಳಮೀಸಲಾತಿ ಹೋರಾಟಗಾರರು ನಿರಂತರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಾನ್ಯ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರ ಏಕ‌ ಸದಸ್ಯ ಆಯೋಗವನ್ನು ರಚಿಸಿ 3 ತಿಂಗಳ ಕಾಲಾವಕಾಶ ನೀಡಿತ್ತು. 

ಇದೀಗ ಆಯೋಗದ ಅವಧಿ ಮುಗಿಯುತ್ತಿರುವ‌ ಹಿನ್ನೆಲೆಯಲ್ಲಿ ಆಯೋಗದಿಂದ ಮಧ್ಯಂತರ ವರದಿಯನ್ನು ಸರ್ಕಾರ ಪಡೆದುಕೊಳ್ಳಬೇಕು, ಪ್ರಸ್ತುತ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವನ್ನು ಮಾಡಬೇಕು ಹಾಗೂ ಶಾಶ್ವತ ಜಾರಿಗಾಗಿ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಬೇಕೆಂದು ಸಚಿವರನ್ನು ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಒಳಮೀಸಲಾತಿ ಜಾರಿಯಾಗುವವರೆಗೂ ಯಾವ ಕಾರಣಕ್ಕೂ ಭರ್ತಿ‌ಮಾಡಲು ಮುಂದಾಗಬಾರದೆಂದು ಮನವಿ ಮಾಡಿಕೊಂಡರು. 

ಇದಕ್ಕೆ ಸ್ಫಂದಿಸಿದ ಸಚಿವರು ಒಳಮೀಸಲಾತಿ ಜಾರಿಯಾಗುವವರೆಗೂ ಬ್ಯಾಕ್ ಹುದ್ದೆಗಳು ಸೇರಿದಂತೆ, ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು, ಅಲ್ಲದೆ  ಒಳಮೀಸಲಾತಿ‌ ಕುರಿತಂತೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಈ ವೇಳೆ ಒಳಮೀಸಲಾತಿ ಪರ ಹೋರಾಟಗಾರರಾದ ಬಸವರಾಜ್ ಕೌತಾಳ್, ಚಂದ್ರು ತರಹುಣಿಸೆ, ರಘು ಕಾಮಾಕ್ಷಿಪಾಳ್ಯ, ಮಂಜುನಾಥ್ ಮತ್ತಿತರರು ಹಾಜರಿದ್ದರು.

You cannot copy content of this page

Exit mobile version