ಪಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದೀಗ ಪ್ರತಿಪಕ್ಷಗಳ ಮಹಾಘಟಬಂಧನಕ್ಕೆ (ಮಹಾ ಮೈತ್ರಿಕೂಟ) ಮತ್ತಿಬ್ಬರು ಪಕ್ಷಗಳು ಸೇರಿಕೊಂಡಿವೆ. ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಪಶುಪತಿ ಪರಾಸ್ ನೇತೃತ್ವದ ಎಲ್‌ಜೆಪಿ ಮಹಾಘಟಬಂಧನಕ್ಕೆ ಸೇರಿಕೊಂಡಿವೆ.
ಪ್ರಸ್ತುತ, ಮಹಾಘಟಬಂಧನದಲ್ಲಿ ಆರ್.ಜೆ.ಡಿ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಸಿಪಿಎಂಎಲ್ ಸೇರಿದಂತೆ 6 ಪಕ್ಷಗಳಿವೆ. ಹೊಸದಾಗಿ ಸೇರಿಕೊಂಡಿರುವ ಎರಡು ಪಕ್ಷಗಳೊಂದಿಗೆ ಒಟ್ಟು 8 ಪಕ್ಷಗಳು 243 ಸ್ಥಾನಗಳನ್ನು ಹಂಚಿಕೊಳ್ಳಬೇಕಿದೆ. ಪಶುಪತಿ ಪರಾಸ್ (ಎಲ್‌ಜೆಪಿ) ಸೇರ್ಪಡೆಯಿಂದ, ಪಾಸವಾನ್‌ಗೆ ಸೇರಿದ ಮತಗಳನ್ನು ಆಕರ್ಷಿಸಲು ಮಹಾಘಟಬಂಧನಕ್ಕೆ ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ, ಖಗಾರಿಯಾ ಪ್ರದೇಶದಲ್ಲಿ ಪರಾಸ್ ಬಣಕ್ಕೆ ಎರಡು ಅಥವಾ ಮೂರು ಸ್ಥಾನಗಳನ್ನು ಹಂಚಿಕೆ ಮಾಡುವ ಸಾಧ್ಯತೆಗಳಿವೆ.
ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಆರ್.ಜೆ.ಡಿ ಸರ್ಕಾರದಲ್ಲಿ ಪಾಲುದಾರರಾಗಿರುವ ಕಾರಣ, ಬಿಹಾರದಲ್ಲಿ ಜೆಎಂಎಂಗೆ ಕನಿಷ್ಠ ಒಂದು ಸ್ಥಾನವನ್ನಾದರೂ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಬಂಕಾ, ಮುಂಗೇರ್, ಮತ್ತು ಭಾಗಲ್ಪುರ್ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಸ್ಥಾನವನ್ನು ಜೆಎಂಎಂಗೆ ನೀಡುವ ಸಾಧ್ಯತೆ ಇದೆ.